ಕನ್ನಡ ಸುದ್ದಿ  /  Cricket  /  Tushar Deshpande And Tanush Kotian Slam Centuries Batting In No 10 And 11 For Mumbai Vs Baroda 232 Run Partnership Jra

Ranji Trophy: 10, 11ನೇ ಕ್ರಮಾಂಕದ ಬ್ಯಾಟರ್‌ಗಳ ಶತಕ ವೈಭವ; ಕೊನೆಯ ವಿಕೆಟ್‌ಗೆ ತುಷಾರ್-ತನುಷ್ ದಾಖಲೆಯ 232 ರನ್ ಜೊತೆಯಾಟ

ಮುಂಬೈ ತಂಡದ ಕೆಳ ಕ್ರಮಾಂಕದ ಬ್ಯಾಟರ್‌ಗಳಾದ ತುಷಾರ್ ದೇಶಪಾಂಡೆ ಮತ್ತು ತನುಷ್ ಕೋಟ್ಯಾನ್ ತಲಾ ಶತಕ ಸಿಡಿಸಿದ್ದಾರೆ. ಬರೋಡಾ ವಿರುದ್ಧದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕೊನೆಯ ವಿಕೆಟ್‌ಗೆ ಬರೋಬ್ಬರಿ 232 ರನ್ ಗಳಿಸಿ ಅಚ್ಚರಿ ಮೂಡಿಸಿದ್ದಾರೆ. ಮುಂಬೈ ತಂಡ ರಣಜಿ ಟ್ರೋಫಿ ಸೆಮಿಫೈನಲ್‌ ಪ್ರವೇಶಿಸಿದೆ.

ಕೊನೆಯ ವಿಕೆಟ್‌ಗೆ ತುಷಾರ್-ತನುಷ್ ದಾಖಲೆಯ 232 ರನ್ ಜೊತೆಯಾಟ
ಕೊನೆಯ ವಿಕೆಟ್‌ಗೆ ತುಷಾರ್-ತನುಷ್ ದಾಖಲೆಯ 232 ರನ್ ಜೊತೆಯಾಟ (Jio Cinema)

ಕ್ರಿಕೆಟ್‌ನಲ್ಲಿ ಕೆಲವೊಮ್ಮೆ ನಂಬಲಸಾಧ್ಯವಾದ ದಾಖಲೆಗಳು ನಿರ್ಮಾಣವಾಗುತ್ತವೆ. ಹೊಸ ಹೊಸ ಆಟಗಾರರು ರೆಕಾರ್ಡ್‌ ಪಟ್ಟಿಗೆ ಸೇರ್ಪಡೆಯಾಗುತ್ತಾರೆ. ಸುದೀರ್ಘ ಇತಿಹಾಸವಿರುವ ರಣಜಿ ಕ್ರಿಕೆಟ್‌ನಲ್ಲಿಯೂ ಇದೀಗ ಹೊಸ ದಾಖಲೆ ನಿರ್ಮಾಣವಾಗಿದೆ. ಬರೋಡಾ ವಿರುದ್ಧದ (Mumbai vs Baroda) ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮುಂಬೈ ತಂಡದ ಕೆಳ ಕ್ರಮಾಂಕದ ಬ್ಯಾಟರ್‌ಗಳು ಇತಿಹಾಸ ನಿರ್ಮಿಸಿದ್ದಾರೆ.

ಮುಂಬೈ ಪರ 10 ಮತ್ತು 11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ ತುಷಾರ್ ದೇಶಪಾಂಡೆ ಮತ್ತು ತನುಷ್ ಕೋಟ್ಯಾನ್ (Tushar Deshpande and Tanush Kotian) ಅವರು, ರಣಜಿ ಟ್ರೋಫಿ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ 10 ಮತ್ತು 11ನೇ ಕ್ರಮಾಂಕದ ಮೊದಲ ಜೋಡಿ ಎಂಬ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ | IND vs ENG 4th Test: ರಾಂಚಿ ಟೆಸ್ಟ್‌ನ ಈ 5 ಫೋಟೋ ನೋಡಿ ನೀವು ರೋಮಾಂಚನಗೊಳ್ಳುವುದು ಖಚಿತ

ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಬರೋಡಾ ವಿರುದ್ಧ ಮುಂಬೈ ತಂಡದ ಕೊನೆಯ ಬ್ಯಾಟರ್‌ಗಳಾಗಿ ಕಣಕ್ಕಿಳಿದ ದೇಶಪಾಂಡೆ ಮತ್ತು ಕೋಟ್ಯಾನ್, ಕೊನೆಯ ವಿಕೆಟ್‌ಗೆ ಬರೋಬ್ಬರಿ 232 ರನ್ ಗಳಿಸಿ ಅಚ್ಚರಿ ಮೂಡಿಸಿದ್ದಾರೆ.

ದೇಶಪಾಂಡೆ 129 ಎಸೆತಗಳಲ್ಲಿ 123 ರನ್ ಗಳಿಸಿ ಔಟಾಗುವುದರೊಂದಿಗೆ ಈ ಜೊತೆಯಾಟ ಅಂತ್ಯವಾಯ್ತು. ಅತ್ತ ಕೋಟ್ಯಾನ್ 129 ಎಸೆತಗಳಲ್ಲಿ ಅಜೇಯ 120 ರನ್ ಸಿಡಿಸಿ ಅಜೇಯರಾದರು. ಈ ಜೋಡಿ ಬ್ಯಾಟಿಂಗ್‌ಗೆ ಬರುವ ವೇಳೆ ಮುಂಬೈ ತಂಡವು 9 ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿತ್ತು. ಆದರೆ, ಈ ಜೋಡಿಯ ಬ್ಯಾಟಿಂಗ್‌ ಆರ್ಭಟಕ್ಕೆ ಮುಂಬೈ ತಂಡ ಅಂತಿಮವಾಗಿ 569 ರನ್ ಗಳಿಸಿತು.

ಮುಂಬೈಗೆ ಗೆಲುವು, ಸೆಮಿಫೈನಲ್‌ ಪ್ರವೇಶ

ಪಂದ್ಯದಲ್ಲಿ 606 ರನ್‌ಗಳ ಬೃಹತ್‌ ಗುರಿ ಪಡೆದ ಬರೋಡಾ ತಂಡವು 3 ವಿಕೆಟ್‌ ಕಳೆದುಕೊಂಡು 121 ರನ್‌ ಗಳಿಸಿದ ಕಾರಣದಿಂದ ಪಂದ್ಯ ಡ್ರಾಗೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಮುಂಬೈ ತಂಡ ಮುನ್ನಡೆ ಸಾಧಿಸಿದ್ದ ಹಿನ್ನೆಲೆಯಲ್ಲಿ ನೇರವಾಗಿ ಸೆಮಿಫೈನಲ್‌ ಪ್ರವೇಶಿಸಿತು.

ಇದನ್ನೂ ಓದಿ | ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾದ ಮೊಹಮ್ಮದ್ ಶಮಿ, ಚೇತರಿಕೆಗೆ ಬೇಕು ಸಮಯ; ಐಪಿಎಲ್‌, ವಿಶ್ವಕಪ್‌ ಆಡೋದು ಡೌಟ್

ಕೋಟ್ಯಾನ್ 115 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ ಶತಕ ಸಿಡಿಸಿದರು. ಅತ್ತ ದೇಶಪಾಂಡೆ 112 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್‌ ಸಹಿತ ಮೂರಂಕಿ ತಲುಪಿದರು. ಉಭಯ ಬ್ಯಾಟರ್‌ಗಳು ತಮ್ಮ ಮೊದಲ ಪ್ರಥಮ ದರ್ಜೆ ಶತಕ ಗಳಿಸಿ ಮಿಂಚಿದರು.

ಪ್ರಥಮ ದರ್ಜೆ ಇನ್ನಿಂಗ್ಸ್‌ನಲ್ಲಿ ಈ ಹಿಂದೆ ಇಂತಹದೇ ಸಾಧನೆ ಮಾಡಿದ ಮೊದಲ ಜೋಡಿ ಕೂಡ ಭಾರತೀಯರೇ. 1946ರಲ್ಲಿ ಸರ್ರೆ ವಿರುದ್ಧ ಆಡುವಾಗ ಚಂದು ಸರ್ವಟೆ ಮತ್ತು ಶುಟೆ ಬ್ಯಾನರ್ಜಿ 10 ಮತ್ತು 11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಶತಕ ಬಾರಿಸಿದ್ದರು.

ಕೊನೆಯ ವಿಕೆಟ್‌ಗೆ ಭಾರತದ ಜೋಡಿ 200ಕ್ಕೂ ಹೆಚ್ಚು ರನ್ ಕಲೆಹಾಕಿರುವುದು ಇದು ಮೂರನೇ ಬಾರಿ. ಅಲ್ಲದೆ, ದೇಶಪಾಂಡೆ ಅವರ 123 ರನ್ ಭಾರತದ ಆಟಗಾರನೊಬ್ಬ 11ನೇ ಕ್ರಮಾಂಕದಲ್ಲಿ ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ.

ಇದನ್ನೂ ಓದಿ | WPL 2024: ಆರ್‌ಸಿಬಿ vs ಗುಜರಾತ್‌ ಜೈಂಟ್ಸ್‌ ಮುಖಾಮುಖಿ ದಾಖಲೆ; ಲೈವ್‌ ಸ್ಟ್ರೀಮಿಂಗ್‌ ವಿವರ

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point