Marlon Samuels: ವಿಂಡೀಸ್ಗೆ 2 ವಿಶ್ವಕಪ್ ಗೆದ್ದುಕೊಟ್ಟ ಸ್ಯಾಮ್ಯುಯೆಲ್ಸ್ಗೆ ಸಂಕಷ್ಟ; 4 ಭ್ರಷ್ಟಾಚಾರ ಪ್ರಕರಣದಲ್ಲಿ ತಪ್ಪಿತಸ್ಥರು
Marlon Samuels: ತನ್ನ ಮೇಲಿದ್ದ ನಾಲ್ಕು ಭ್ರಷ್ಟಾಚಾರ ಆರೋಪ ಪ್ರಕರಣಗಳಲ್ಲಿ ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಮಾರ್ಲನ್ ಸ್ಯಾಮುಯೆಲ್ಸ್ ತಪ್ಪಿತಸ್ಥರೆಂದು ನ್ಯಾಯಾಲಯ ತಿಳಿಸಿದೆ. ಶೀಘ್ರವೇ ಶಿಕ್ಷೆಯನ್ನು ಪ್ರಕಟಿಸುವುದಾಗಿ ಹೇಳಿದೆ.
ವೆಸ್ಟ್ ಇಂಡೀಸ್ ತಂಡಕ್ಕೆ (West Indies) ಎರಡು ಟಿ20 ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಾಜಿ ಸ್ಪೋಟಕ ಬ್ಯಾಟ್ಸ್ಮನ್ ಮಾರ್ಲನ್ ಸ್ಯಾಮ್ಯುಯೆಲ್ಸ್ (Marlon Samuels) ಮೇಲೆ ದಾಖಲಾಗಿದ್ದ ನಾಲ್ಕು ಭ್ರಷ್ಟಚಾರ ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಇದೀಗ ಬಂಧನದ ಭೀತಿಯ ಜೊತೆಗೆ ಭಾರಿ ದಂಡದ ಪ್ರಮಾಣಕ್ಕೆ ಗುರಿಯಾಗಲಿದ್ದಾರೆ ಎನ್ನಲಾಗಿದೆ.
ಸ್ವತಂತ್ರ ಭ್ರಷ್ಟಾಚಾರ ವಿರೋಧಿ ನ್ಯಾಯಮಂಡಳಿ ನಡೆಸಿದ ವಿಚಾರಣೆ ನಂತರ ಸ್ಯಾಮುಯೆಲ್ಸ್, ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಭ್ರಷ್ಟಾಚಾರ ನಿಗ್ರಹ ಸಂಹಿತೆಯ ಅಡಿಯಲ್ಲಿ ನಾಲ್ಕು ಅಪರಾಧಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. 2019ರ ಟಿ10 ಲೀಗ್‌ನಲ್ಲಿ ಭ್ರಷ್ಟಾಚಾರ-ವಿರೋಧಿ ನೀತಿ ಸಂಹಿತೆಯಡಿ ಲಂಚ ಪಡೆದಿರುವ ಸೇರಿದಂತೆ 4 ಅಪರಾಧ ಪ್ರಕರಣಗಳಲ್ಲಿ ಸ್ಯಾಮ್ಯುಯೆಲ್ಸ್ ಭಾಗಿಯಾಗಿದ್ದರು.
ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ 2021ರ ಸೆಪ್ಟೆಂಬರ್ನಲ್ಲಿ ಐಸಿಸಿ ಅಧಿಕಾರಿ (ಇಸಿಬಿ ನೀತಿ ಸಂಹಿತೆಯ ಅಡಿಯಲ್ಲಿ ಗೊತ್ತುಪಡಿಸಿದ ಭ್ರಷ್ಟಾಚಾರ-ವಿರೋಧಿ ಅಧಿಕಾರಿ), ಸ್ಯಾಮ್ಯುಯೆಲ್ಸ್ ವಿರುದ್ಧ ಆರೋಪ ಹೊರಿಸಿದ್ದರು. ಸದ್ಯ ಎರಡು ಕಡೆ ಪರ ವಾದ-ವಿವಾದ ಪರಿಶೀಲಿಸಿ ಶಿಕ್ಷೆ ಪ್ರಕಟಿಸಲಾಗುವುದು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಅವರ ಬಂಧನವಾಗುವುದು ಖಚಿತ ಎಂದು ಹೇಳಲಾಗಿದೆ.
ಸ್ಯಾಮುಯೆಲ್ಸ್ ಮೇಲಿರುವ ಪ್ರಕರಣಗಳು
- ಆರ್ಟಿಕಲ್ 2.4.2 (ಬಹುಮತದ ನಿರ್ಧಾರದಿಂದ) ಪ್ರಕಾರ, ಯಾವುದೇ ಉಡುಗೊರೆ, ಪಾವತಿ, ಆತಿಥ್ಯ ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆಯುವುದು ತಪ್ಪು. ಅಲ್ಲದೆ, ಈ ಕುರಿತು ಗೊತ್ತುಪಡಿಸಿದ ಭ್ರಷ್ಟಾಚಾರ-ವಿರೋಧಿ ಅಧಿಕಾರಿಗೆ ತಿಳಿಸಬೇಕು. ಆದರೆ ಈ ಬಗ್ಗೆ ಮಾರ್ಲನ್ ಸ್ಯಾಮ್ಯುಯೆಲ್ಸ್ ಮರೆ ಮಾಚಿದ್ದರು.
- ಆರ್ಟಿಕಲ್2.4.3 (ಅವಿರೋಧ ನಿರ್ಧಾರ)- 750 ಅಮೆರಿಕನ್ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದೊಂದಿಗೆ ಆತಿಥ್ಯ ಪಡೆದಿರುವ ಕುರಿತಂತೆ ಬಹಿರಂಗಪಡಿಸಲು ವಿಫಲ.
- ಆರ್ಟಿಕಲ್ 2.4.6 (ಅವಿರೋಧ ನಿರ್ಧಾರ) - ಗೊತ್ತುಪಡಿಸಿದ ಭ್ರಷ್ಟಾಚಾರ-ವಿರೋಧಿ ಅಧಿಕಾರಿಯ ತನಿಖೆಯೊಂದಿಗೆ ಸಹಕರಿಸಲು ವಿಫಲವಾಗಿದೆ.
- ಆರ್ಟಿಕಲ್ 2.4.7 (ಅವಿರೋಧ ನಿರ್ಣಯ) - ತನಿಖೆಗೆ ಸಂಬಂಧಿಸಿದ ಮಾಹಿತಿ ಮರೆಮಾಚುವ ಮೂಲಕ ಗೊತ್ತುಪಡಿಸಿದ ಭ್ರಷ್ಟಾಚಾರ-ವಿರೋಧಿ ಅಧಿಕಾರಿಯ ತನಿಖೆಗೆ ಅಡ್ಡಿಪಡಿಸುವುದು.
ಎರಡು ವರ್ಷ ಬ್ಯಾನ್ ಆಗಿದ್ದರು
ಸ್ಯಾಮ್ಯುಯೆಲ್ಸ್ ಹಣ ಪಡೆದು ಕ್ರಿಕೆಟ್ ಆಟಕ್ಕೆ ಕಳಂಕ ತರುವ ಕೆಲಸದಲ್ಲಿ ತೊಡಗಿದ್ದು, ಇದೇ ಮೊದಲಲ್ಲ. 2008ರಲ್ಲೂ ಹಣ ಅಥವಾ ಬಹುಮಾನ ಪಡೆದಿರುವ ಕುರಿತು ತಪ್ಪಿತಸ್ಥರೆಂದು ಸಾಬೀತಾಗಿತ್ತು. ಆಗ ಎರಡು ವರ್ಷಗಳ ನಿಷೇಧಕ್ಕೆ ಒಳಗಾಗಿದ್ದರು. ವಿವಾದಗಳ ಹೊರತಾಗಿಯೂ ಸ್ಯಾಮ್ಯುಯೆಲ್ಸ್ ಯಶಸ್ವಿ ವೃತ್ತಿಜೀವನವನ್ನು ಹೊಂದಿದ್ದರು. ಎರಡು ಬಾರಿ ಟಿ20 ವಿಶ್ವಕಪ್ ವಿಜೇತ ವೆಸ್ಟ್ ಇಂಡೀಸ್ ತಂಡದ ಸದಸ್ಯರಾಗಿದ್ದರು.
ಸ್ಯಾಮ್ಯುಯೆಲ್ಸ್ 2020ರಲ್ಲಿ ನಿವೃತ್ತಿ ಘೋಷಿಸಿದರು. ಅಂತಾರಾಷ್ಟ್ರೀಯ ವೃತ್ತಿಜೀವನದ ಉದ್ದಕ್ಕೂ, ಅವರು 71 ಟೆಸ್ಟ್, 207 ಏಕದಿನ ಮತ್ತು 67 ಟಿ20 ಪಂದ್ಯಗಳನ್ನಾಡಿದ್ದಾರೆ. ಒಟ್ಟು 11,134 ರನ್ಗಳ ಗಳಿಸಿರುವ ಅವರು 152 ವಿಕೆಟ್ ಪಡೆಯುವಲ್ಲೂ ಯಶಸ್ವಿಯಾಗಿದ್ದಾರೆ. ಇದೀಗ ಲಂಚ ಸ್ವೀಕರಿಸಿರುವ ಕುರಿತಂತೆ ನ್ಯಾಯಧೀಶರು, ಪೂರ್ವಾಪರ ಪರಿಶೀಲನೆ ನಡೆಸಿ ಶಿಕ್ಷೆ ಪ್ರಕಟಿಸಲು ನಿರ್ಧರಿಸಿದೆ.