ಡಿಸೆಂಬರ್ 22ರಂದು ಹಸೆಮಣೆ ಏರಲಿದ್ದಾರೆ ಎರಡು ಬಾರಿಯ ಒಲಿಂಪಿಕ್ ವಿಜೇತೆ ಪಿವಿ ಸಿಂಧು; ಭಾವಿ ಪತಿ ಯಾರು?
PV Sindhu: ಭಾರತದ ಷಟ್ಲರ್ ಪಿವಿ ಸಿಂಧು ಅವರು ಡಿಸೆಂಬರ್ 22 ರಂದು ಪೊಸಿಡೆಕ್ಸ್ ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟ ದತ್ತ ಸಾಯಿ ಅವರನ್ನು ಮದುವೆಯಾಗಲಿದ್ದಾರೆ.
ಹೈದರಾಬಾದ್: ಭಾರತದ ಸ್ಟಾರ್ ಷಟ್ಲರ್ ಮತ್ತು 2 ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು (PV Sindhu) ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಡಿಸೆಂಬರ್ 22 ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ಬಗ್ಗೆ ಸ್ವತಃ ಸಿಂಧು ಅವರೇ ಖಚಿತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ನಿಜ. ನಾನು ಇದೇ 22ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದೇನೆ ಎಂದು ಸಿಂಧು ಹೇಳಿದ್ದಾರೆ. ಸಿಂಧು ಅವರು ಪೊಸಿಡೆಕ್ಸ್ (Posidex) ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟ ದತ್ತ ಸಾಯಿ (Venkata Datta Sai) ಅವರನ್ನು ವರಿಸುತ್ತಿದ್ದಾರೆ.
ಇತ್ತೀಚೆಗೆ, ಲಕ್ನೋದಲ್ಲಿ ನಡೆದ ಸೈಯದ್ ಮೋದಿ ಇಂಡಿಯಾ ಇಂಟರ್‌ನ್ಯಾಶನಲ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ಚೀನಾದ ವು ಲುವೊ ಯು ಅವರನ್ನು ಸೋಲಿಸುವ ಮೂಲಕ ಸಿಂಧು 8 ವರ್ಷಗಳ ನಂತರ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (BWF) ವರ್ಲ್ಡ್ ಟೂರ್ ಗೆದ್ದರು. 47 ನಿಮಿಷಗಳ ಕಾಲ ನಡೆದ ಪ್ರಶಸ್ತಿ ಹಣಾಹಣಿಯಲ್ಲಿ ಸಿಂಧು ಲುವೊ ಯು ವಿರುದ್ಧ 21-14, 21-16, ಎರಡು ನೇರ ಗೇಮ್‌ಗಳಲ್ಲಿ ಗೆದ್ದಿದ್ದರು.
ಜುಲೈ 2022ರಲ್ಲಿ ಸಿಂಗಾಪುರ್ ಓಪನ್ ಪ್ರಶಸ್ತಿಯ ನಂತರ, ಇದು ಸಿಂಧು ಅವರ ಮೊದಲ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಪ್ರಶಸ್ತಿಯಾಗಿದೆ. 2023 ಮತ್ತು ಈ ವರ್ಷ ಸಿಂಧು ಸ್ಪೇನ್ ಮಾಸ್ಟರ್ಸ್ ಮತ್ತು ಮಲೇಷ್ಯಾ ಮಾಸ್ಟರ್ಸ್‌ನ ಫೈನಲ್‌ಗೆ ತಲುಪಿದ್ದರು. ಆದರೆ ಪ್ರಶಸ್ತಿ ಗೆಲ್ಲಲು ವಿಫಲರಾಗಿದ್ದರು. ತನ್ನ ಸುಪ್ರಸಿದ್ಧ ವೃತ್ತಿಜೀವನದುದ್ದಕ್ಕೂ ಸಿಂಧು ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 5 ಪದಕಗಳನ್ನು ಗೆದ್ದಿದ್ದಾರೆ.
ಈ ಸಾಧನೆಗೈದ ಇಬ್ಬರು ಮಹಿಳೆಯರಲ್ಲಿ ಒಬ್ಬರು ಚೀನಾದ ಜಾಂಗ್ ನಿಂಗ್. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಸ್ಪೇನ್‌ನ ಕ್ಯಾರೊಲಿನಾ ಮರಿನ್ ವಿರುದ್ಧ ಸೋಲಿನ ನಂತರ ಬೆಳ್ಳಿ ಪದಕ (Olympic medalist) ಗೆದ್ದಿದ್ದ ಸಿಂಧು, ಒಲಿಂಪಿಕ್ ಫೈನಲ್‌ಗೆ ತಲುಪಿದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2020 ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಪದಕ ಗೆದ್ದರು. ಕಂಚಿನ ಪದಕ ಸಿಂಧು, 2 ಒಲಿಂಪಿಕ್ ಪದಕಗಳಿಗೆ ಮುತ್ತಿಕ್ಕಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.
ವೆಂಕಟ ದತ್ತ ಸಾಯಿ ಯಾರು?
ಹೈದರಾಬಾದ್ ಮೂಲದ ಕಾರ್ಯನಿರ್ವಾಹಕ ವೆಂಕಟ ದತ್ತ ಸಾಯಿ ಅವರು ಟೆಕ್ ಉದ್ಯಮದಲ್ಲಿ ಪ್ರಭಾವಶಾಲಿ ಶೈಕ್ಷಣಿಕ ಮತ್ತು ವೃತ್ತಿಪರ ಹಿನ್ನೆಲೆಯನ್ನು ಹೊಂದಿದ್ದಾರೆ. Posidex ಟೆಕ್ನಾಲಜೀಸ್ ಲಿಂಕ್ಡ್‌ಇನ್ ಪುಟದ ಪ್ರಕಾರ, ದತ್ತಾ ಅವರ ಶೈಕ್ಷಣಿಕ ಹಿನ್ನೆಲೆಯು ಹಣಕಾಸು ಮತ್ತು ಅರ್ಥಶಾಸ್ತ್ರದ ಪದವಿ ಪಡೆದಿದ್ದಾರೆ. ಅವರಿಗೆ ಫುಟ್ಬಾಲ್ ಮತ್ತು ಬ್ಯಾಡ್ಮಿಂಟನ್ ಕ್ರೀಡೆಗಳೆಂದರೆ ತುಂಬಾ ಇಷ್ಟ. ಫೌಂಡೇಶನ್ ಆಫ್ ಲಿಬರಲ್ ಅಂಡ್ ಮ್ಯಾನೇಜ್‌ಮೆಂಟ್ ಎಜುಕೇಶನ್‌ನಿಂದ ಲಿಬರಲ್ ಆರ್ಟ್ಸ್ ಅಂಡ್ ಸೈನ್ಸಸ್‌ನಲ್ಲಿ ಡಿಪ್ಲೊಮಾ ಪಡೆದಿದ್ದಾರೆ.
2018ರಲ್ಲಿ ಫ್ಲೇಮ್ ವಿಶ್ವವಿದ್ಯಾನಿಲಯದಿಂದ ಅಕೌಂಟಿಂಗ್ ಮತ್ತು ಫೈನಾನ್ಸ್‌ನಲ್ಲಿ ತಮ್ಮ ಬಿಬಿಎ ಪೂರ್ಣಗೊಳಿಸಿದ್ದಾರೆ. ನಂತರ ಬೆಂಗಳೂರಿನ ಇಂಟರ್ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯಿಂದ ಡೇಟಾ ಸೈನ್ಸ್ ಮತ್ತು ಮೆಷಿನ್ ಲರ್ನಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.