ವನಿತೆಯರ ಅಂಡರ್-19 ಟಿ20 ವಿಶ್ವಕಪ್: ಇಂದು ಭಾರತ vs ವೆಸ್ಟ್ ಇಂಡೀಸ್ ಪಂದ್ಯ, ತಂಡ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ
U19 Women's T20 World Cup: ಭಾರತ ಹಾಗೂ ವೆಸ್ಟ್ ಇಂಡೀಸ್ ಅಂಡರ್ 19 ವನಿತೆಯರ ಟಿ20 ವಿಶ್ವಕಪ್ ಪಂದ್ಯವು ಇಂದು (ಜ.19) ನಡೆಯುತ್ತಿದೆ. ಭಾರತ ಮಹಿಳಾ ತಂಡ ಇಂದು ಅಭಿಯಾನ ಆರಂಭಿಸುತ್ತಿದ್ದು, ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಹೀರಾಡಲಿದೆ.

ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಭಾನುವಾರ (ಜನವರಿ 19) ತನ್ನ ಅಭಿಯಾನ ಆರಂಭಿಸುತ್ತಿದೆ. ಭಾರತ ವನಿತೆಯರ ತಂಡವನ್ನು ನಿಕ್ಕಿ ಪ್ರಸಾದ್ ಮುನ್ನಡೆಸಲಿದ್ದಾರೆ. ಹಾಲಿ ಚಾಂಪಿಯನ್ ಭಾರತಕ್ಕೆ ಸಮರಾ ರಾಮನಾಥ್ ನೇತೃತ್ವದ ವೆಸ್ಟ್ ಇಂಡೀಸ್ ಮೊದಲ ಎದುರಾಳಿಯಾಗಿದ್ದು, ಗೆಲುವಿನ ಆರಂಭದ ನಿರೀಕ್ಷೆಯಲ್ಲಿದೆ. ಚೊಚ್ಚಲ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಗೆದ್ದಿದ್ದ ಭಾರತ ತಂಡವು ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಫೈನಲ್‌ನಲ್ಲಿ ಶಫಾಲಿ ವರ್ಮಾ ಪಡೆ ಇಂಗ್ಲೆಂಡ್ ತಂಡವನ್ನು ಮಣಿಸಿತ್ತು.
ಇತ್ತೀಚೆಗೆ ನಡೆದ ಅಂಡರ್-19 ಮಹಿಳಾ ಏಷ್ಯಾಕಪ್ ಫೈನಲ್‌ನಲ್ಲಿಯೂ ಭಾರತ ತಂಡ ಬಾಂಗ್ಲಾದೇಶವನ್ನು 41 ರನ್‌ಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಹರಾಜಿನಲ್ಲಿ ಬೆಳಕಿಗೆ ಬಂದ ಭಾರತದ ಆರಂಭಿಕ ಬ್ಯಾಟರ್ ಜಿ ಕಮಲಿನಿ, ತಂಡದಲ್ಲಿದ್ದಾರೆ. ಶಬ್ನಮ್ ಶಕೀಲ್ ಭಾರತದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ.
ಅಂಡರ್ 19 ವಿಶ್ವಕಪ್‌ನಲ್ಲಿ 'ಎ' ಗುಂಪಿನಲ್ಲಿ ಭಾರತ ಸ್ಥಾನ ಪಡೆದಿದ್ದು, ಮಲೇಷ್ಯಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಕೂಡಾ ಇವೆ.
ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಪಂದ್ಯ ಯಾವಾಗ ನಡೆಯಲಿದೆ?
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಪಂದ್ಯವು ಜನವರಿ 19ರ ಭಾನುವಾರ ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ.
ಅಂಡರ್ 19 ಮಹಿಳಾ ಟಿ 20 ವಿಶ್ವಕಪ್‌ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಪಂದ್ಯ ಎಲ್ಲಿ ನಡೆಯಲಿದೆ?
ಮಲೇಷ್ಯಾದ ಕೌಲಾಲಂಪುರದ ಬಯುಮಾಸ್ ಓವಲ್‌ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಅಂಡರ್ 19 ಮಹಿಳಾ ಟಿ20 ಪಂದ್ಯ ನಡೆಯಲಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಪಂದ್ಯದ ನೇರಪ್ರಸಾರ ವೀಕ್ಷಿಸುವುದು ಹೇಗೆ?
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಇದೇ ವೇಳೆ ಪಂದ್ಯವು ಡಿಸ್ನಿ + ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.
ಭಾರತ ತಂಡ
ನಿಕ್ಕಿ ಪ್ರಸಾದ್ (ನಾಯಕಿ), ಸಾನಿಕಾ ಚಾಲ್ಕೆ, ಜಿ ತ್ರಿಷಾ, ಕಮಲಿನಿ ಜಿ, ಭಾವಿಕಾ ಅಹಿರ್, ಈಶ್ವರಿ ಅವಸಾರೆ, ಮಿಥಿಲಾ ವಿನೋದ್, ಜೋಶಿತಾ ವಿಜೆ, ಸೋನಮ್ ಯಾದವ್, ಪರುನಿಕಾ ಸಿಸೋಡಿಯಾ, ಕೇಸರಿ ದೃಷ್ಟಿ, ಆಯುಷಿ ಶುಕ್ಲಾ, ಆನಂದಿತಾ ಕಿಶೋರ್, ಎಂಡಿ ಶಬ್ನಮ್, ವೈಷ್ಣವಿ ಎಸ್.
ವೆಸ್ಟ್ ಇಂಡೀಸ್ ತಂಡ
ಸಮರಾ ರಾಮನಾಥ್ (ನಾಯಕಿ), ಅಸಾಬಿ ಕ್ಯಾಲೆಂಡರ್, ಅಬಿಗೈಲ್ ಬ್ರೈಸ್, ಕೆನಿಕಾ ಕ್ಯಾಸರ್, ಜಹ್ಜಾರಾ ಕ್ಲಾಕ್ಸ್ಟನ್, ಡೆನೆಲ್ಲಾ ಕ್ರೀಸ್, ನೈಜಾನಿ ಕಂಬರ್ಬ್ಯಾಚ್, ಎರಿನ್ ಡೀನ್, ಅಮಿಯಾ ಗಿಲ್ಬರ್ಟ್, ತ್ರಿಶಾ ಹರ್ದತ್, ಬ್ರಿಯಾನ್ನಾ ಹರಿಚರಣ್, ಅಮೃತಾ ರಾಮ್ತಹಲ್, ಸೆಲೆನಾ ರಾಸ್, ಕ್ರಿಸ್ಟನ್ ಸದರ್ಲ್ಯಾಂಡ್, ಆಲಿಯಾ ವೀಕ್ಸ್.
