ಮತ್ತೆ ಲಾಂಗ್ ಹಿಡಿದು 'ಹೌ ಲಾಂಗ್ ದಿಸ್ ಲಾಂಗ್' ಎಂದ ಶಿವಣ್ಣ; ರೊಚ್ಚಿಗೆದ್ದ ಶಿವರಾಜ್​ಕುಮಾರ್ ಅರ್ಥ ಆಯ್ತಾ ಎಂದು ಹೇಳಿದ್ದೇಕೆ?
ಕನ್ನಡ ಸುದ್ದಿ  /  ಕ್ರಿಕೆಟ್  /  ಮತ್ತೆ ಲಾಂಗ್ ಹಿಡಿದು 'ಹೌ ಲಾಂಗ್ ದಿಸ್ ಲಾಂಗ್' ಎಂದ ಶಿವಣ್ಣ; ರೊಚ್ಚಿಗೆದ್ದ ಶಿವರಾಜ್​ಕುಮಾರ್ ಅರ್ಥ ಆಯ್ತಾ ಎಂದು ಹೇಳಿದ್ದೇಕೆ?

ಮತ್ತೆ ಲಾಂಗ್ ಹಿಡಿದು 'ಹೌ ಲಾಂಗ್ ದಿಸ್ ಲಾಂಗ್' ಎಂದ ಶಿವಣ್ಣ; ರೊಚ್ಚಿಗೆದ್ದ ಶಿವರಾಜ್​ಕುಮಾರ್ ಅರ್ಥ ಆಯ್ತಾ ಎಂದು ಹೇಳಿದ್ದೇಕೆ?

Shiva Rajkumar : ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರನ್ನು ಇಂಗ್ಲೀಷ್​ನಲ್ಲಿ ಬದಲಾವಣೆ ಸುಳಿವು ನೀಡುವ ಪ್ರೋಮೋದಲ್ಲಿ ರಿಷಬ್ ಶೆಟ್ಟಿ, ಅಶ್ವಿನ್ ಪುನೀತ್ ರಾಜ್​ಕುಮಾರ್ ನಂತರ ಅರ್ಥ ಆಯ್ತಾ ಅಂತ ಅಖಾಡಕ್ಕೆ ಶಿವರಾಜ್​ಕುಮಾರ್​ ಎಂಟ್ರಿಕೊಟ್ಟಿದ್ದಾರೆ.

ಮತ್ತೆ ಲಾಂಗ್ ಹಿಡಿದು 'ಹೌ ಲಾಂಗ್ ದಿಸ್ ಲಾಂಗ್' ಎಂದ ಶಿವಣ್ಣ
ಮತ್ತೆ ಲಾಂಗ್ ಹಿಡಿದು 'ಹೌ ಲಾಂಗ್ ದಿಸ್ ಲಾಂಗ್' ಎಂದ ಶಿವಣ್ಣ

ನಟ ಶಿವರಾಜ್​ಕುಮಾರ್ (Dr Shiva Rajkumar) ಯಾಕೋ ರೊಚ್ಚಿಗೆದ್ದಿದ್ದಾರೆ. ಮತ್ತೆ ಲಾಂಗ್ ಹಿಡಿದು ಸದ್ದು ಮಾಡುತ್ತಿದ್ದಾರೆ. ಮತ್ತೆ ಮಫ್ತಿ ಸ್ಟೈಲ್​ನಲ್ಲಿ ಮಿಂಚಿರುವ ಶಿವಣ್ಣ, ರಾಜಗಾಂಭೀರ್ಯ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದು ಯಾವುದೋ ಸಿನಿಮಾ ಪ್ರೋಮೋ ಅಂದುಕೊಂಡರೇ? ಅಲ್ಲ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರು ಬದಲಾವಣೆ ಕುರಿತು ಸುಳಿವು ನೀಡುವ ಪ್ರೋಮೋ ಇದಾಗಿದೆ.

ರಿಷಬ್ ಶೆಟ್ಟಿ, ಅಶ್ವಿನ್ ಪುನೀತ್ ರಾಜ್​ಕುಮಾರ್ ನಂತರ ಅರ್ಥ ಆಯ್ತಾ ಅಂತ ಅಖಾಡಕ್ಕೆ ಶಿವಣ್ಣ ಎಂಟ್ರಿಕೊಟ್ಟಿದ್ದಾರೆ. ಆರ್​ಸಿಬಿ ಈ ಪ್ರೋಮೋ ಬಿಡಲು ಕಾರಣ ಏನೆಂಬುದು ಈಗಾಗಲೇ ಬಹುತೇಕರಿಗೆ ಅರ್ಥವಾಗಿದೆ. ಬೆಂಗಳೂರು ಎಂದು ಕನ್ನಡದಲ್ಲಿಯೇ ನಾವು ಹೇಳುತ್ತೇವೆ. ಇಂಗ್ಲೀಷ್​​ನಲ್ಲಿ Bangalore ಬದಲಿಗೆ Bengaluru ಎಂದು ಬದಲಾವಣೆಯಾಗಿದೆ. ಆದರೆ ಆರ್​​ಸಿಬಿ ಹೆಸರಿನಲ್ಲಿ Bangalore ಎಂತಲೇ ಇದೆ.

ಹಾಗಾಗಿ ಅದನ್ನು ಬದಲಿಸಬೇಕೆಂಬುದು ಹಲವರ ಒತ್ತಾಯವಾಗಿತ್ತು. ಹಲವು ವರ್ಷಗಳ ಕೂಗಿಗೆ ಇದೀಗ ಅದಕ್ಕೆ ಕಾಲ ಕೂಡಿ ಬಂದಿದೆ. Royal Challengers Bangalore ಎಂಬುದು Royal Challengers Bengaluru ಎಂದು ಮರು ನಾಮಕರಣ ಮಾಡಲು ಫ್ರಾಂಚೈಸಿ ನಿರ್ಧರಿಸಿದೆ. ಈ ಬಗ್ಗೆ ಶಿವಣ್ಣ ಸಹ ಪ್ರೋಮೋದಲ್ಲಿ ಸುಳಿವು ಕೊಟ್ಟಿದ್ದಾರೆ.

ಮಾರ್ಚ್ 19ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಆರ್​ಸಿಬಿ ಅನ್​ಬಾಕ್ಸ್ ಈವೆಂಟ್ ನಡೆಯಲಿದ್ದು, ಇದೇ ಕಾರ್ಯಕ್ರಮದಲ್ಲಿ ಹೆಸರು ಬದಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪ್ರೋಮೋದಲ್ಲಿ ಶಿವಣ್ಣ ಯಾವ ರೀತಿ ಸುಳಿವು ಕೊಟ್ಟಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.

ರಗಡ್​ ಲುಕ್​ನಲ್ಲಿ ಎಂಟ್ರಿ ಕೊಟ್ಟ ಶಿವಣ್ಣ ಅವರ ಎದುರಿಗೆ ಮೂರು ಲಾಂಗ್​​​ಗಳಲ್ಲಿ​ ಇರಲಿವೆ. ಮೂರರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಒಂದೊಂದು ಪದವನ್ನು ಬರೆಯಲಾಗಿರುತ್ತದೆ. ಇಲ್ಲಿ Bangalore ಎಂದಿರುವ ಲಾಂಗ್​ ಅನ್ನು ಮುಟ್ಟದ ಶಿವಣ್ಣ, ಹೌ ಲಾಂಗ್ ದಿಸ್ ಲಾಂಗ್, ಅರ್ಥ ಆಯ್ತಾ ಎಂದು ಹೆಸರು ಬದಲಾವಣೆ ಕುರಿತು ಪರೋಕ್ಷ ಸುಳಿವು ಕೊಟ್ಟಿದ್ದಾರೆ.

ಇತ್ತೀಚೆಗೆ ಶಿವಣ್ಣ ಅವರ ನಟನೆಯ 'ಕರಟಕ ದಮನಕ' ಸಿನಿಮಾ ಬಿಡುಗಡೆಯಾಗಿದ್ದು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಯೋಗರಾಜ್ ಭಟ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮತ್ತೊಂದೆಡೆ ಶಿವ ರಾಜ್​ಕುಮಾರ್ ಜತೆಗೆ ಪ್ರಭುದೇವ ಸಹ ನಟಿಸಿದ್ದಾರೆ. ಇನ್ನು ಶಿವಣ್ಣ ಅವರ ಮತ್ತೊಂದು ಬಹುನಿರೀಕ್ಷಿತ ‘ಭೈರತಿ ರಣಗಲ್‘ ಸಿನಿಮಾ ಇದೇ ವರ್ಷ ಆಗಸ್ಟ್ 15ರಂದು ಬಿಡುಗಡೆ ಆಗುತ್ತಿದೆ.

ಆರ್​ಸಿಬಿ ಮಹಿಳಾ ತಂಡ ಫೈನಲ್​ಗೆ ಲಗ್ಗೆ

ಪ್ರಸ್ತುತ ನಡೆಯುತ್ತಿರುವ ವುಮೆನ್ಸ್ ಪ್ರೀಮಿಯರ್ ಲೀಗ್​​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವು ಮೊದಲ ಬಾರಿಗೆ ಫೈನಲ್​ಗೆ ಪ್ರವೇಶಿಸಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಮಣಿಸಿ ಫೈನಲ್ ಟಿಕೆಟ್ ಪಡೆಯಿತು. ಇನ್ನು ಪ್ರಶಸ್ತಿ ಸುತ್ತಿನ ಫೈಟ್​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆರ್​ಸಿಬಿ ಎದುರಿಸಲಿದೆ.

ಮಾರ್ಚ್ 22ರಿಂದ ಐಪಿಎಲ್ ಆರಂಭ

17ನೇ ಆವೃತ್ತಿಯ ಐಪಿಎಲ್ ಮಾರ್ಚ್​ 22ರಿಂದ ಆರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್​ ಕಿಂಗ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಚೆನ್ನೈನ ಎಂ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಸದ್ಯ ಐಪಿಎಲ್​ನ ಮೊದಲ ಹಂತದ ವೇಳಾಪಟ್ಟಿ ಪ್ರಕಟಿಸಲಾಗಿದೆ. ಲೋಕಸಭಾ ಚುನಾವಣೆ ದಿನಾಂಕ ಪ್ರಕಟಿಸಿದ ಬಳಿಕ ಎರಡನೇ ಹಂತದ ವೇಳಾಪಟ್ಟಿ ಪ್ರಕಟವಾಗಲಿದೆ.

Whats_app_banner