NZ vs UAE: ಟೆಸ್ಟ್​ಗೆ ಮಾನ್ಯತೆ ಪಡೆಯದ ಯುಎಇ ವಿರುದ್ಧ ಸೋತ ನ್ಯೂಜಿಲೆಂಡ್; ಕಿವೀಸ್ ಕಿವಿ ಹಿಂಡಿ ದಾಖಲೆ ಬರೆದ ಯುನೈಟೆಡ್​ ಅರಬ್​ ಎಮಿರೇಟ್ಸ್
ಕನ್ನಡ ಸುದ್ದಿ  /  ಕ್ರಿಕೆಟ್  /  Nz Vs Uae: ಟೆಸ್ಟ್​ಗೆ ಮಾನ್ಯತೆ ಪಡೆಯದ ಯುಎಇ ವಿರುದ್ಧ ಸೋತ ನ್ಯೂಜಿಲೆಂಡ್; ಕಿವೀಸ್ ಕಿವಿ ಹಿಂಡಿ ದಾಖಲೆ ಬರೆದ ಯುನೈಟೆಡ್​ ಅರಬ್​ ಎಮಿರೇಟ್ಸ್

NZ vs UAE: ಟೆಸ್ಟ್​ಗೆ ಮಾನ್ಯತೆ ಪಡೆಯದ ಯುಎಇ ವಿರುದ್ಧ ಸೋತ ನ್ಯೂಜಿಲೆಂಡ್; ಕಿವೀಸ್ ಕಿವಿ ಹಿಂಡಿ ದಾಖಲೆ ಬರೆದ ಯುನೈಟೆಡ್​ ಅರಬ್​ ಎಮಿರೇಟ್ಸ್

NZ vs UAE: ನ್ಯೂಜಿಲೆಂಡ್​ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಯುನೈಟೆಡ್​ ಅರಬ್​ ಎಮಿರೇಟ್ಸ್​ ತಂಡವು ಐತಿಹಾಸಿಕ ಜಯ ಸಾಧಿಸಿದೆ. 8 ವಿಕೆಟ್​ಗಳ ಗೆಲುವು ದಾಖಲಿಸಿ ಸರಣಿ ಸಲಬಲಗೊಳಿಸಿದೆ.

ಟೆಸ್ಟ್​ಗೆ ಮಾನ್ಯತೆ ಪಡೆಯದ ಯುಎಇ ವಿರುದ್ಧ ಸೋತ ನ್ಯೂಜಿಲೆಂಡ್​ ತಂಡ.
ಟೆಸ್ಟ್​ಗೆ ಮಾನ್ಯತೆ ಪಡೆಯದ ಯುಎಇ ವಿರುದ್ಧ ಸೋತ ನ್ಯೂಜಿಲೆಂಡ್​ ತಂಡ.

ಕ್ರಿಕೆಟ್​​ನಲ್ಲಿ ಮತ್ತೊಂದು ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಬಲಿಷ್ಠ ನ್ಯೂಜಿಲೆಂಡ್​ ತಂಡವನ್ನು ಟೆಸ್ಟ್​​ ಕ್ರಿಕೆಟ್​​ಗೆ ಅರ್ಹತೆ ಪಡೆಯದ ಯುಎಇ (United Arab Emirates) ತಂಡವು ಸೋಲಿಸಿ ಐತಿಹಾಸಿಕ ಜಯ ಸಾಧಿಸಿದೆ. ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್​​ ಹೀನಾಯ ಸೋಲು ಕಂಡು ಕಳಪೆ ದಾಖಲೆಗೆ ಪಾತ್ರವಾಗಿದೆ. ಮತ್ತೊಂದೆಡೆ ಅಮೋಘ ಗೆಲುವು ದಾಖಲಿಸಿದ ಯುನೈಟೆಡ್​ ಅರಬ್​ ಎಮಿರೇಟ್ಸ್​ ತಂಡವು (United Arab Emirates) ಸಂಭ್ರಮದ ಅಲೆಯಲ್ಲಿ ತೇಲುತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಯುಎಇ ತಂಡವು ಹೊಸ ಅಧ್ಯಾಯ ಪುಟವನ್ನು ತೆರೆದಿದೆ.

2ನೇ ಚುಟುಕು ಪಂದ್ಯದಲ್ಲಿ ಟೆಸ್ಟ್​​ ಗೆದ್ದ ಯುಎಇ ತಂಡವು ಚೇಸಿಂಗ್​ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ನ್ಯೂಜಿಲೆಂಡ್​​ ಮೊದಲು ಬ್ಯಾಟಿಂಗ್​ ನಡೆಸಿತು. ಆದರೆ, ನಿರೀಕ್ಷಿತ ಆರಂಭ ಪಡೆಯಲಿಲ್ಲ. ನಿಧಾನಗತಿಯ ಓಪನಿಂಗ್ ಪಡೆದುಕೊಂಡ ಕಿವೀಸ್​, ಬ್ಯಾಕ್​​ ಟು ಬ್ಯಾಕ್​ ವಿಕೆಟ್​​ ಕಳೆದುಕೊಂಡಿತು. ಆರಂಭಿಕರಾದ ಚಾಡ್ ಬೋವ್ಸ್ 21 ರನ್ ​ಗಳಿಸಿದರೆ, ಟಿಮ್ ಸೀಫರ್ಟ್ 7 ರನ್ ಗಳಿಸಿ ಔಟಾದರು. ಇವರ ನಂತರ ಕಣಕ್ಕಿಳಿದ ಮಿಚೆಲ್ ಸ್ಯಾಂಟ್ನರ್ (1)​, ಡೇನ್ ಕ್ಲೀವರ್ (0) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು.

ಒಂದೆಡೆ ವಿಕೆಟ್​ ಪತನ, ಮತ್ತೊಂದೆಡೆ ಚಾಪ್​ಮನ್ ಹೋರಾಟ

ಮೆಕಾಂಚಿಯ ಕೇವಲ 9 ರನ್, ಜೇಮ್ಸ್ ನಿಶಾಮ್ 21 ರನ್, ರಾಚಿನ್ ರವೀಂದ್ರ 2 ಹೀಗೆ ಬಂದವರೆಲ್ಲಾ ವಿಕೆಟ್​ ಒಪ್ಪಿಸಿದರು. ಆದರೆ ಮಾರ್ಕ್ ಚಾಪ್​​ಮನ್​ ಹೋರಾಟ ನಡೆಸಿದರು. ಯುಎಇ ಮಾರಕ ಬೌಲಿಂಗ್​ ದಾಳಿಯ ನಡುವೆ ಅಬ್ಬರದ ಅರ್ಧಶತಕ ಸಿಡಿಸಿದರು. ಅಲ್ಲದೆ, ಅಲ್ಪ ಮೊತ್ತಕ್ಕೆ ಕುಸಿಯಬೇಕಿದ್ದ ತಂಡವನ್ನು ರಕ್ಷಿಸಿದರು. 46 ಎಸೆತಗಳಲ್ಲಿ ತಲಾ 3 ಬೌಂಡರಿ, ಸಿಕ್ಸರ್​ ನೆರವಿನಿಂದ 63 ರನ್ ಗಳಿಸಿದರು. ಇದರೊಂದಿಗೆ ಕಿವೀಸ್​ 20 ಓವರ್​​ಗಳಲ್ಲಿ 8 ವಿಕೆಟ್ ಕಳೆದುಕೊಂಡು 142 ರನ್ ಗಳಿಸಲಷ್ಟೇ ಶಕ್ತವಾಯಿತು.

ಐತಿಹಾಸಿಕ ದಾಖಲೆ ಬರೆದ ಯುಎಇ

143 ರನ್​ಗಳ ಸುಲಭ ಗುರಿ ಹಿಂಬಾಲಿಸಿದ ಯುಎಇ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಓಪನರ್​​ ಆರ್ಯನ್ಶ್ ಶರ್ಮಾ (0) ಮೊದಲ ಓವರ್​ನಲ್ಲೇ ಟಿಮ್ ಸೌಥಿ ಬೌಲಿಂಗ್​​ನಲ್ಲಿ ಔಟಾಗಿ ನಿರಾಸೆ ಮೂಡಿಸಿದರು. ಆದರೆ ನಾಯಕ ಮುಹಮ್ಮದ್ ವಾಸೀಂ ಅಬ್ಬರದ ಬ್ಯಾಟಿಂಗ್ ನಡೆಸಿದರು. ಅವರಿಗೆ ವೃತ್ಯ ಅರವಿಂದ್ (25 ರನ್)​ ಸಖತ್ ಸಾಥ್​ ನೀಡಿದರು. ಕಿವೀಸ್​ ಬೌಲರ್​ಗಳಿಗೆ ಬೆಂಡೆತ್ತಿದ ವಾಸೀಂ 29 ಎಸೆತಗಳಲ್ಲಿ 4 ಬೌಂಡರಿ, 3 ಭರ್ಜರಿ ಸಿಕ್ಸ್​ಗಳ ಸಹಿತ 55 ರನ್​ ಸಿಡಿಸಿದರು.

ವಾಸೀಂ ಔಟಾಗುವಾಗ ಪಂದ್ಯದ ಸಂಪೂರ್ಣ ಹಿಡಿತ ಸಾಧಿಸುವಂತೆ ಮಾಡಿದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಸಿಫ್ ಖಾನ್ ಕೂಡ ಆರ್ಭಟಿಸಿದರು. 29 ಎಸೆತಗಳಲ್ಲಿ ಅಜೇಯ 48 ರನ್​ ಚಚ್ಚಿದರೆ, ಬಾಸಿಲ್ ಹಮೀದ್ ಅಜೇಯ 12 ರನ್​ ಕಲೆ ಹಾಕುವ ಮೂಲಕ ತಂಡಕ್ಕೆ 15.4 ಓವರ್​ಗಳಲ್ಲಿ ಗೆಲುವು ತಂದುಕೊಟ್ಟರು. ಕಿವೀಸ್ ಬೌಲರ್​​ಗಳ ಕಿವಿ ಹಿಂಡಿದ ಯುಎಇ 8 ವಿಕೆಟ್​ಗಳ ಅದ್ಭುತ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ನ್ಯೂಜಿಲೆಂಡ್​​ ಇದೇ ಮೊದಲ ಬಾರಿಗೆ ಯುಎಇ ಜಯ ಸಾಧಿಸಿ ಚರಿತ್ರೆ ಬರೆದಿದೆ. ಸೋತ ಕಿವೀಸ್ ಭಾರಿ ಮುಖಭಂಗಕ್ಕೆ ಒಳಗಾಗಿದೆ. ಸದ್ಯ 3 ಪಂದ್ಯಗಳ ಟಿ20 ಸರಣಿ 1-1 ಸಮಬಲಗೊಂಡಿದೆ. 3ನೇ ಪಂದ್ಯವು ಇಂದು ನಡೆಯಲಿದೆ.

Whats_app_banner