ಸಪ್ತಸಾಗರದಾಚೆ ಚುಟುಕು ವಿಶ್ವಸಮರಕ್ಕೆ ಚಾಲನೆ; ಟಿ20 ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಯುಎಸ್‌ಎ vs ಕೆನಡಾ ಹಣಾಹಣಿ
ಕ್ರಿಕೆಟ್‌ನ ಅತ್ಯಂತ ಹಳೆಯ ಎದುರಾಳಿ ತಂಡಗಳ ನಡುವೆ 2024ರ ಟಿ20 ವಿಶ್ವಕಪ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯ ನಡೆಯುತ್ತಿದೆ. ಆಧುನಿಕ ಜಗತ್ತಿನಲ್ಲಿ ಇವೆರಡೂ ಕ್ರಿಕೆಟ್ ಶಿಶುಗಳಾದರೂ, ಶತಮಾನದ ಹಿಂದೆ ಮೊದಲ ಬಾರಿಗೆ ಎದುರಾದ ತಂಡಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿವೆ.
ಸಪ್ತಸಾಗರದಾಚೆ ಕ್ರಿಕೆಟ್ ಕಲರವ ಆರಂಭವಾಗುತ್ತಿದೆ. ಬಹುನಿರೀಕ್ಷಿತ ಟಿ20 ವಿಶ್ವಕಪ್ ಪಂದ್ಯಾವಳಿಗೆ ಜೂನ್ 2ರಂದು ಚಾಲನೆ ಸಿಗುತ್ತಿದೆ. ಬರೋಬ್ಬರಿ 180 ವರ್ಷಗಳ ಹಿಂದೆ ಪರಸ್ಪರ ಕಾದಾಡಿದ್ದ ಕ್ರಿಕೆಟ್‌ನ ಅತ್ಯಂತ ಹಳೆಯ ತಂಡಗಳೆರಡು ಈ ಬಾರಿ 2024ರ ಅದ್ಧೂರಿ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ವಿಶೇಷವೆಂದರೆ, ಉಭಯ ತಂಡಗಳಿಗೆ ಇದು ಮೊದಲ ಟಿ20 ವಿಶ್ವಕಪ್ ಪಂದ್ಯಾವಳಿಯಾಗಿದೆ. 1844ರಲ್ಲಿಯೇ ಯುಎಸ್‌ಎ ಹಾಗೂ ಕೆನಡಾ ಮೂರು ದಿನಗಳ ಕ್ರಿಕೆಟ್ ಪಂದ್ಯವನ್ನು ಆಡಿದ್ದವು. ನ್ಯೂಯಾರ್ಕ್‌ನಲ್ಲಿ ನಡೆದ ಆ ಪಂದ್ಯದಲ್ಲಿ ಕೆನಡಾ 23 ರನ್‌ಗಳಿಂದ ಗೆದ್ದಿತ್ತು. ಇದೀಗ ನೂರಾರು ವರ್ಷಗಳ ನಂತರ ಅಮೆರಿಕ ನೆಲದಲ್ಲಿ ಉಭಯ ತಂಡಗಳು ಮಹತ್ವದ ಐಸಿಸಿ ಟೂರ್ನಿ ಗೆಲ್ಲುವ ವಿಶ್ವಾಸದಲ್ಲಿದೆ.
ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧ ಸರಣಿ ಗೆದ್ದು ಅಚ್ಚರಿ ಮೂಡಿಸಿದ್ದ ಯುಎಸ್ ತಂಡವು, ಸಹ-ಆತಿಥೇಯ ದೇಶವಾಗಿ ಟೂರ್ನಿಗೆ ಅರ್ಹತೆ ಪಡೆಯಿತು. ಅತ್ತ ಕೆನಡಾ ತಂಡವು ಅಮೆರಿಕದ ಅರ್ಹತಾ ಪಂದ್ಯವನ್ನು ಗೆಲ್ಲುವ ಮೂಲಕ ಟೂರ್ನಿಗೆ ಎಂಟ್ರಿ ಕೊಟ್ಟಿತು. ಜೂನ್ 2ರ ಶನಿವಾರ ಟಿ20 ವಿಶ್ವಕಪ್‌ಗೆ ಚಾಲನೆ ಸಿಗುತ್ತಿದ್ದು, ಮೊದಲ ಪಂದ್ಯದಲ್ಲಿ ಈ ತಂಡಗಳೆರಡು ಕಾದಾಡುತ್ತಿವೆ. ಅಮೆರಿಕದ ಡಲ್ಲಾಸ್‌ನಲ್ಲಿರುವ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊಟ್ಟಮೊದಲ ಟಿ20 ಕದನಕ್ಕೆ ಕೆನಡಾ ಹಾಗೂ ಯುಎಸ್‌ಎ ಸಾಕ್ಷಿಯಾಗುತ್ತಿವೆ.
ಹವಾಮಾನ ಹೇಗಿದೆ?
ಕೇವಲ 7000 ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಈ ಕ್ರೀಡಾಂಗಣದಲ್ಲಿ ರೋಚಕ ಪಂದ್ಯದ ನಿರೀಕ್ಷೆ ಇದೆ. ಆದರೆ ಪಂದ್ಯದ ಸಮಯದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಶೇ. 40ರಷ್ಟಿದೆ.
ಈ ಪಂದ್ಯದಲ್ಲಿ ಆತಿಥೇಯ ಯುಎಸ್‌ಎ ಗೆಲ್ಲುವ ಫೇವರೆಟ್ ತಂಡ. ಈಗಾಗಲೇ ಕೆನಡಾ ವಿರುದ್ಧದ ಸರಣಿಯನ್ನು 4-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿರುವ ತಂಡವು, ಇತ್ತೀಚೆಗೆ ಬಲಿಷ್ಠ ಬಾಂಗ್ಲಾದೇಶವನ್ನು 2-1 ಅಂತರದಿಂದ ಸೋಲಿಸಿತ್ತು. ತವರಿನಲ್ಲಿ ತಂಡಕ್ಕೆ ಭಾರಿ ಬೆಂಬಲವೂ ಸಿಗಲಿದೆ.
ಯುಎಸ್‌ಎ ತಂಡದಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚಿದೆ. ಈ ಹಿಂದೆ ನ್ಯೂಜಿಲ್ಯಾಂಡ್ ಪರ ಆಡುತ್ತಿದ್ದ ಮಾಜಿ ಆಲ್‌ರೌಂಡರ್ ಕೋರಿ ಆಂಡರ್ಸನ್, ಯುಎಸ್‌ಎ ಪರ ಆಡುತ್ತಿದ್ದಾರೆ. ಭಾರತದ ಅಂಡರ್ 19 ವಿಶ್ವಕಪ್ ವಿಜೇತ ತಂಡದ ಮಾಜಿ ಆಟಗಾರ ಹರ್ಮೀತ್ ಸಿಂಗ್, ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಬಲ್ಲ ಆಟಗಾರ.
ಡಲ್ಲಾಸ್ ಪಿಚ್ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ನೆರವಾಗಲಿದೆ. ಪಂದ್ಯವು ಭಾರತದಲ್ಲಿ ಬೆಳಗ್ಗಿನ ಸಮಯ ಪ್ರಸಾರವಾಗುತ್ತಿದ್ದರೂ, ಅಮೆರಿಕದಲ್ಲಿ ಆಗ ಸಂಜೆ 7.30 ಗಂಟೆ. ಹೊನಲು ಬೆಳಕಿನಲ್ಲಿ ಚೆಂಡು ಸ್ವಲ್ಪ ಮಟ್ಟಿಗೆ ತಿರುಗುತ್ತದೆ. ಪಂದ್ಯಕ್ಕೂ ಮುನ್ನ ಮಳೆಯಾದರೆ ಪಂದ್ಯದ ಸ್ವರೂಪ ತುಸು ಬದಲಾಗಬಹುದು. ಇತ್ತೀಚೆಗೆ ಇದೇ ಮೈದಾನದಲ್ಲಿ ನಡೆದ ಒಂದು ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕೆನಡಾ 7 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ನೇಪಾಳ 120ಕ್ಕೆ ಆಲೌಟ್ ಆಯ್ತು. ಹೀಗಾಗಿ ಕೆನಡಾ ಕೂಡಾ ಆತ್ಮವಿಶ್ವಾಸದಿಂದ ಕಣಕ್ಕಿಳಿಯಲಿದೆ.
ಯುಎಸ್‌ಎ ಸಂಭಾವ್ಯ ತಂಡ
ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ನಾಯಕ ಮತ್ತು ವಿಕೆಟ್ ಕೀಪರ್), ಆಂಡ್ರೀಸ್ ಗೌಸ್, ಆರನ್ ಜೋನ್ಸ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಜಸ್ದೀಪ್ ಸಿಂಗ್ , ಅಲಿ ಖಾನ್, ಸೌರಭ್ ನೇತ್ರವಲ್ಕರ್.
ಕೆನಡಾ ಸಂಭಾವ್ಯ ತಂಡ
ಆರನ್ ಜಾನ್ಸನ್, ನವನೀತ್ ಧಲಿವಾಲ್, ರಯಾನ್ ಪಠಾಣ್, ನಿಕೋಲಸ್ ಕಿರ್ಟನ್, ಪರ್ಗತ್ ಸಿಂಗ್, ಶ್ರೇಯಸ್ ಮೊವ್ವಾ (ವಿಕೆಟ್ ಕೀಪರ್), ಸಾದ್ ಬಿನ್ ಜಾಫರ್ (ನಾಯಕ), ನಿಖಿಲ್ ದತ್ತಾ, ದಿಲೋನ್ ಹೇಲಿಗರ್, ಜೆರೆಮಿ ಗಾರ್ಡನ್, ಕಲೀಮ್ ಸನಾ.