ಬಾಂಗ್ಲಾದೇಶ ಮಣಿಸಿ ಐತಿಹಾಸಿಕ ಟಿ20 ಸರಣಿ ಗೆದ್ದ ಯುಎಸ್‌ಎ; ಕ್ರಿಕೆಟ್ ಇತಿಹಾಸದಲ್ಲಿ ಕರಾಳ ದಿನ ಎಂದ ಫ್ಯಾನ್ಸ್
ಕನ್ನಡ ಸುದ್ದಿ  /  ಕ್ರಿಕೆಟ್  /  ಬಾಂಗ್ಲಾದೇಶ ಮಣಿಸಿ ಐತಿಹಾಸಿಕ ಟಿ20 ಸರಣಿ ಗೆದ್ದ ಯುಎಸ್‌ಎ; ಕ್ರಿಕೆಟ್ ಇತಿಹಾಸದಲ್ಲಿ ಕರಾಳ ದಿನ ಎಂದ ಫ್ಯಾನ್ಸ್

ಬಾಂಗ್ಲಾದೇಶ ಮಣಿಸಿ ಐತಿಹಾಸಿಕ ಟಿ20 ಸರಣಿ ಗೆದ್ದ ಯುಎಸ್‌ಎ; ಕ್ರಿಕೆಟ್ ಇತಿಹಾಸದಲ್ಲಿ ಕರಾಳ ದಿನ ಎಂದ ಫ್ಯಾನ್ಸ್

USA vs BAN: ಬಾಂಗ್ಲಾದೇಶ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿಯೂ ಯುಎಸ್ಎ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ಸರಣಿ ಗೆಲುವು ಒಲಿಸಿಕೊಂಡಿದೆ. ಅತ್ತ ಬಾಂಗ್ಲಾದೇಶದ ಸೋಲನ್ನು ಅರಗಿಸಿಕೊಳ್ಳಲಾಗದ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.

ಬಾಂಗ್ಲಾದೇಶ ಮಣಿಸಿ ಐತಿಹಾಸಿಕ ಟಿ20 ಸರಣಿ ಗೆದ್ದ ಯುಎಸ್‌ಎ
ಬಾಂಗ್ಲಾದೇಶ ಮಣಿಸಿ ಐತಿಹಾಸಿಕ ಟಿ20 ಸರಣಿ ಗೆದ್ದ ಯುಎಸ್‌ಎ

ಯುಎಸ್‌ಎ ಕ್ರಿಕೆಟ್‌ ತಂಡವು ಬಾಂಗ್ಲಾದೇಶಕ್ಕೆ (United States vs Bangladesh) ಸತತ ಶಾಕ್‌ ಕೊಟ್ಟಿದೆ. ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದ್ದ ಅಮೆರಿಕ, ಇದೀಗ ಎರಡನೇ ಟಿ20 ಪಂದ್ಯದಲ್ಲೂ 6 ರನ್‌ಗಳ ರೋಚಕ ಜಯ ಸಾಧಿಸಿ ಸರಣಿ ಒಲಿಸಿಕೊಂಡಿದೆ. ಆ ಮೂಲಕ ತನಗಿಂತ ಉನ್ನತ ಶ್ರೇಯಾಂಕ ಹೊಂದಿರುವ ಪೂರ್ಣ ಸದಸ್ಯತ್ವ ಹೊಂದಿರುವ ಬಾಂಗ್ಲಾದೇಶಕ್ಕೆ ಆಘಾತ ನೀಡಿದೆ. ಜೂನ್‌ 2ರಿಂದ ಆರಂಭವಾಗುತ್ತಿರುವ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಸಹ ಆತಿಥೇಯ ದೇಶವಾಗಿರುವ ಯುಎಸ್‌ಎ, ಟೂರ್ನಿಗೆ ಯಶಸ್ವಿ ತಯಾರಿ ನಡೆಸುತ್ತಿದೆ. 

ಟೆಕ್ಸಾಸ್‌ನ ಪ್ರೈರಿ ವ್ಯೂ ಕ್ರಿಕೆಟ್ ಕಾಂಪ್ಲೆಕ್ಸ್‌ನಲ್ಲಿ ಮೇ 23ರ ಗುರುವಾರ ನಡೆದ ಪಂದ್ಯದಲ್ಲಿ ಗೆಲ್ಲುವ ಮೂಲಕ ಯುಎಸ್ಎ 2-0 ಅಂತರದಿಂದ ಸರಣಿ ಗೆದ್ದುಕೊಂಡಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಯುಎಸ್‌ಎ 144 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಆದರೆ, ಸುಲಭವಾಗಿ ಗುರಿ ಬೆನ್ನಟ್ಟಿ ಗೆಲ್ಲುವ ನಿರೀಕ್ಷೆ ಮೂಡಿಸಿದ್ದ ಬಾಂಗ್ಲಾದೇಶ, 19.3 ಓವರ್‌ಗಳಲ್ಲಿ 138 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಯುಎಸ್‌ಎ ಐತಿಹಾಸಿಕ ಸರಣಿ ಜಯಿಸಿತು.

ಅಮೆರಿಕ ಪರ ಸೌರಭ್ ನೇತ್ರವಾಲ್ಕರ್ ಮತ್ತು ಶಾಡ್ಲಿ ವ್ಯಾನ್ ಶಾಲ್ಕ್ವಿಕ್ ತಲಾ ಎರಡು ವಿಕೆಟ್ ಪಡೆದರು. ನಜ್ಮುಲ್ ಹುಸೇನ್ ಶಾಂಟೊ 34 ಎಸೆತಗಳಲ್ಲಿ 36 ರನ್ ಸಿಡಿಸಿ, ಬಾಂಗ್ಲಾ ಪರ ಉತ್ತಮ ರನ್‌ ಗಳಿಸಿದ ಆಟಗಾರನಾದರು.

ಮೊದಲ ಪಂದ್ಯದಲ್ಲೂ ಸೋತಿದ್ದ ಬಾಂಗ್ಲಾದೇಶ, ಎರಡನೇ ಪಂದ್ಯದಲ್ಲಿ ಕಂಬ್ಯಾಕ್‌ ಮಾಡುವ ಗುರಿ ಹೊಂದಿತ್ತು. ಬ್ಯಾಟಿಂಗ್‌ನಲ್ಲಿ ದಿಟ್ಟ ಪ್ರದರ್ಶನ ನೀಡುವುದು ಮಾತ್ರವಲ್ಲದೆ, ಸ್ಪರ್ಧಾತ್ಮಕ ಗುರಿಯನ್ನು ಡಿಫೆಂಡ್‌ ಮಾಡಿಕೊಂಡಿತು. ಆದರೆ, ಯುಎಸ್‌ಎ ಅದಕ್ಕೆ ಅವಕಾಶ ಕೊಡಲಿಲ್ಲ. ತನ್ನದೇ ತವರಿನಲ್ಲಿ ಮುಂದಿನ ತಿಂಗಳು ನಡೆಯುತ್ತಿರುವ ಮಹತ್ವದ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ತಾನೊಬ್ಬ ಬಲಿಷ್ಠ ಸ್ಪರ್ಧಿ ಎಂಬುದನ್ನು ಸಾಬೀತುಪಡಿಸಿತು.

ಇದನ್ನೂ ಓದಿ | ಟ್ರೋಫಿ ಗೆಲ್ಲಲು ವಿರಾಟ್ ಕೊಹ್ಲಿ ಆರ್​ಸಿಬಿ ತೊರೆದು ಈ ತಂಡ ಸೇರಬೇಕು; ರೊನಾಲ್ಡೊ, ಮೆಸ್ಸಿ ಉಲ್ಲೇಖಿಸಿದ ಕೆವಿನ್ ಪೀಟರ್ಸನ್

ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಸಾಮರ್ಥ್ಯ ಮತ್ತು ಇತಿಹಾಸವನ್ನು ಪರಿಗಣಿಸಿ, ಈ ಫಲಿತಾಂಶವು ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ಆಘಾತ ಉಂಟುಮಾಡಿದೆ.

ಬಾಂಗ್ಲಾದೇಶ ಅಭಿಮಾನಿಗಳ ಆಕ್ರೋಶ

ಯುಎಸ್ಎ ಸರಣಿ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, ಇದು ಬಾಂಗ್ಲಾದೇಶ ಕ್ರಿಕೆಟ್ ಇತಿಹಾಸದಲ್ಲಿ ಕರಾಳ ದಿನ ಎಂದು ಹೇಳಿಕೊಂಡಿದ್ದಾರೆ.

ಪಂದ್ಯದ ನಂತರ ಮಾತನಾಡಿದ ಪಂದ್ಯಶ್ರೇಷ್ಠ ಆಟಗಾರ ಅಲಿ ಖಾನ್, “ಇದು ಕಡಿಮೆ ಸ್ಕೋರಿಂಗ್ ಪಂದ್ಯ ಎಂದು ನಾನು ಭಾವಿಸುತ್ತೇನೆ. ಎರಡನೇ ಇನ್ನಿಂಗ್ಸ್‌ ವೇಳೆ ವಿಕೆಟ್ ನಿಧಾನಗತಿ ಪಡೆಯಿತು. ಗೆಲುವಿನ ಶ್ರೇಯಸ್ಸು ವಿಕೆಟ್ ಪಡೆದ ಬೌಲರ್‌ಗಳಿಗೆ ಸಲ್ಲುತ್ತದೆ” ಎಂದು ಹೇಳಿದ್ದಾರೆ.

ಮೇ 25ರ ಶನಿವಾರ ಉಭಯ ತಂಡಗಳ ನಡುವಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ನಡೆಯಲಿದೆ. ಕ್ಲೀನ್‌ ಸ್ವೀಪ್‌ ಸಾಧನೆಗೆ ಅಮೆರಿಕ ಎದುರು ನೋಡಿದರೆ, ವೈಟ್‌ವಾಶ್‌ ಮುಖಭಂಗದಿಂದ ತಪ್ಪಿಸಿಕೊಳ್ಳಲು ಬಾಂಗ್ಲಾ ಪುಟಿದೇಳುವ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ | ಮಿತ್ರನಿಂದ ದ್ರೋಹ, ಮೊದಲ ಪತ್ನಿಯಿಂದ ಡಿವೋರ್ಸ್; ಸಾವು-ನೋವು ಗೆದ್ದ ದಿನೇಶ್ ಕಾರ್ತಿಕ್ ಎದ್ದು ನಿಂತಿದ್ದೇ ರೋಚಕ!

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner