ಐಪಿಎಲ್ನಲ್ಲಿ ಅನ್ಸೋಲ್ಡ್, ಭಾರತ ತಂಡದಿಂದಲೂ ಔಟ್; ರಣಜಿಯಲ್ಲಿ ಫೀನಿಕ್ಸ್ನಂತೆ ಲಯಕ್ಕೆ ಮರಳಿದ ಶಾರ್ದೂಲ್ ಠಾಕೂರ್
Shardul Thakur: ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ 6 ವಿಕೆಟ್ ಕಬಳಿಸಿ ಮಿಂಚಿನ ಪ್ರದರ್ಶನ ನೀಡಿದ್ದಾರೆ. ಇದೀಗ ಭಾರತ ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದಿಂದಲೂ ಹೊರಬಿದ್ದಿರುವ ಹಾಗೂ 2025ರ ಐಪಿಎಲ್ ಮೆಗಾ ಹರಾಜಿನಲ್ಲೂ ಯಾವುದೇ ತಂಡಕ್ಕೆ ಬೇಡವಾಗಿ ಅನ್ಸೋಲ್ಡ್ ಆಗಿರುವ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಈಗ ಸತತ ಅದ್ಭುತ ಪ್ರದರ್ಶನಗಳೊಂದಿಗೆ ಬಿಸಿಸಿಐ ಸೆಲೆಕ್ಟರ್ಸ್ಗೆ ಸಂದೇಶವೊಂದನ್ನು ರವಾನಿಸಿದ್ದಾರೆ. ಐಪಿಎಲ್ 2025 ನಂತರ ಜೂನ್ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುವ 5 ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆಯಾಗುವ ವಿಶ್ವಾಸದಲ್ಲಿರುವ ಶಾರ್ದೂಲ್, ರಣಜಿ ಟೂರ್ನಿಯಲ್ಲಿ ಪಂದ್ಯದಿಂದ ಪಂದ್ಯಕ್ಕೆ ಅಸಾಧಾರಣ ಪ್ರದರ್ಶನ ನೀಡುವ ಮೂಲಕ ಆಯ್ಕೆದಾರರ ಗಮನ ಸೆಳೆದಿದ್ದಾರೆ.
ಶಾರ್ದೂಲ್ ಠಾಕೂರ್ ಅವರು ಹರಿಯಾಣ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆರು ವಿಕೆಟ್ ಪಡೆಯುವ ಮೂಲಕ ರಣಜಿ ಟ್ರೋಫಿಯಲ್ಲಿ ತಮ್ಮ ಅಮೋಘ ಪ್ರದರ್ಶನ ಮುಂದುವರಿಸಿದ್ದಾರೆ. ಭಾರತ ತಂಡದಿಂದ ಹೊರಗುಳಿದಿರುವ ವೇಗದ ಬೌಲಿಂಗ್ ಆಲ್ರೌಂಡರ್, ಮುಂದಿನ ಸರಣಿಗೆ ರೆಡ್-ಬಾಲ್ ತಂಡಕ್ಕೆ ಮರಳಲು ಅಬ್ಬರಿಸುತ್ತಿರುವ ಅವರು ಫೀನಿಕ್ಸ್ ಪಕ್ಷಿಯಂತೆ ಕಳಪೆ ಫಾರ್ಮ್ನಿಂದ ಲಯ ಕಂಡುಕೊಂಡಿದ್ದಾರೆ. ಇತ್ತೀಚಿನ ರಣಜಿ ಟ್ರೋಫಿ ಪಂದ್ಯಗಳಲ್ಲಿ ಮುಂಬೈ ಪರ ಬ್ಯಾಟ್, ಬಾಲ್ ಎರಡರಲ್ಲೂ ಉತ್ತಮ ಸ್ಥಿರತೆಯನ್ನು ಪ್ರದರ್ಶಿಸುತ್ತಿದ್ದು, ರಾಷ್ಟ್ರೀಯ ತಂಡದಲ್ಲಿ ತಾನು ಕಲೆದುಕೊಂಡ ಸ್ಥಾನವನ್ನು ಮರಳಿ ಪಡೆಯಲು ಹೋರಾಟ ನಡೆಸುತ್ತಿದ್ದಾರೆ.
ಹರಿಯಾಣ ವಿರುದ್ಧ ಆಕ್ರಮಣಕಾರಿ ಪ್ರದರ್ಶನ ತೋರಿದ ಸ್ಟಾರ್, 18.5 ಓವರ್ಗಳೊಂದಿಗೆ 58 ರನ್ ಬಿಟ್ಟುಕೊಟ್ಟ 6 ವಿಕೆಟ್ ಕಿತ್ತಿದ್ದಾರೆ. ಇದು ಮುಂಬೈ 14 ರನ್ಗಳ ಮುನ್ನಡೆ ಸಾಧಿಸಲು ನೆರವಾಯಿತು. ಪಂದ್ಯದಲ್ಲಿ ಲಕ್ಷ್ಯ ದಲಾಲ್, ಹಿಮಾಂಶ್ ರಾಣಾ, ರೋಹಿತ್ ಪ್ರಮೋದ್ ಶರ್ಮಾ, ಅನೂಜ್ ತಕ್ರಾಲ್, ಜಯಂತ್ ಯಾದವ್, ಅನ್ಶೂಲ್ ಕಾಂಬೋಜ್, ಅಜಿತ್ ಚಹಲ್ ಅವರನ್ನು ಔಟ್ ಮಾಡಿದರು. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ 315 ರನ್ ಪೇರಿಸಿತು. ಇದಕ್ಕೆ ಉತ್ತರವಾಗಿ ಹರಿಯಾಣ 301 ರನ್ ಕಲೆ ಹಾಕಿತು. 14 ರನ್ಗಳ ಮುನ್ನಡೆ ಪಡೆದ ಮುಂಬೈ 2ನೇ ಇನ್ನಿಂಗ್ಸ್ನಲ್ಲಿ 4 ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿ (10 ವಿಕೆಟ್) ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ (15 ವಿಕೆಟ್) ವೈಟ್ ಬಾಲ್ ಋತುವಿನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಶಾರ್ದೂಲ್ ರಣಜಿಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ದರ್ಬಾರ್ ಮಾಡುತ್ತಿದ್ದಾರೆ. ಆಡಿರುವ 8 ಪಂದ್ಯಗಳ 15 ಇನ್ನಿಂಗ್ಸ್ಗಳಲ್ಲಿ 30 ವಿಕೆಟ್ ಕಿತ್ತಿರುವ ಶಾರ್ದೂಲ್, ಬ್ಯಾಟಿಂಗ್ನಲ್ಲಿ 3 ಅರ್ಧಶತಕ, 1 ಶತಕ ಸಹಿತ 396 ರನ್ ಗಳಿಸಿದ್ದಾರೆ. ಇವರ ಸಾಧನೆ ಬಂದಿರುವುದೆಲ್ಲವೂ ಸಂಕಷ್ಟ ಸಮಯದಲ್ಲೇ ಎಂಬುದು ವಿಶೇಷ. ರಣಜಿ ಪುನರಾರಂಭ ಬಳಿಕ ಶಾರ್ದೂಲ್ ಕೆಂಪು ಚೆಂಡಿನೊಂದಿಗೆ ಅದ್ಭುತ ಫಾರ್ಮ್ನಲ್ಲಿದ್ದಾರೆ. ಮೇಘಾಲಯ ವಿರುದ್ಧದ ಮೊದಲ ಇನ್ನಿಂಗ್ಸ್ನಲ್ಲಿ ಹ್ಯಾಟ್ರಿಕ್ ಪಡೆದಿದ್ದರು. ಈ ಪಂದ್ಯಕ್ಕೂ ಮುನ್ನ ಕೊನೆ ಪಂದ್ಯದಲ್ಲಿ 8 ವಿಕೆಟ್ ಕಿತ್ತಿದ್ದರು.
ಇಂಗ್ಲೆಂಡ್ ಸರಣಿಗೆ ಆಯ್ಕೆ ಸಾಧ್ಯತೆ?
2023ರ ಡಿಸೆಂಬರ್ 26ರಂದು ಸೌತ್ ಆಫ್ರಿಕಾ ವಿರುದ್ಧ ಭಾರತದ ಪರ ಕೊನೆಯದಾಗಿ ಟೆಸ್ಟ್ ಆಡಿದ್ದ ಶಾರ್ದೂಲ್ ನಂತರ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದರು. ಇದೀಗ ಭರವಸೆ ಮೂಡಿಸಿರುವ ಆಲ್ರೌಂಡರ್, ಐಪಿಎಲ್ ಬಳಿಕ ಶುರುವಾಗುವ 4ನೇ ಆವೃತ್ತಿಯ ಡಬ್ಲ್ಯುಟಿಸಿಗೆ ಚಾಲನೆ ನೀಡುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗುವ ನಿರೀಕ್ಷೆ ಇದೆ. ಈ ಸರಣಿಯು ಜೂನ್ 20ರಿಂದ ಆರಂಭವಾಗಲಿದೆ. ಭಾರತ ತಂಡದ ಪರ ಅವರು 11 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 31 ವಿಕೆಟ್ ಕಬಳಿಸಿದ್ದಾರೆ. ಬ್ಯಾಟಿಂಗ್ನಲ್ಲಿ 4 ಅರ್ಧಶತಕ ಸಹಿತ 331 ರನ್ ಕೊಡುಗೆ ನೀಡಿದ್ದಾರೆ. ಐಪಿಎಲ್ ಮೆಗಾ ಹರಾಜಿನಲ್ಲಿ 2 ಕೋಟಿ ಮೂಲ ಬೆಲೆ ಹೊಂದಿದ್ದ ಶಾರ್ದೂಲ್ರನ್ನು ಖರೀದಿಸಲು ಯಾವ ತಂಡವೂ ಮುಂದಾಗಲಿಲ್ಲ.
