ಸೋತ ಯುಪಿ ವಾರಿಯರ್ಸ್ಗೆ ಮತ್ತೊಂದು ಹೊಡೆತ; ಹರಾಜಿನಲ್ಲಿ 1.3 ಕೋಟಿ ಪಡೆದಿದ್ದ ಕನ್ನಡತಿ ಟೂರ್ನಿಯಿಂದಲೇ ಹೊರಕ್ಕೆ
Vrinda Dinesh : ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಭುಜದ ಗಾಯದ ಸಮಸ್ಯೆಗೆ ಸಿಲುಕಿದ ವೃಂದಾ ದಿನೇಶ್ ಅವರು 2ನೇ ಆವೃತ್ತಿಯ ಡಬ್ಲ್ಯುಪಿಎಲ್ ಮಧ್ಯದಲ್ಲೇ ಹೊರಬಿದ್ದಿದ್ದಾರೆ.
ಡಬ್ಲ್ಯುಪಿಎಲ್ 2024 ಹರಾಜಿನಲ್ಲಿ ಯುಪಿ ವಾರಿಯರ್ಸ್ ತಂಡದ ಅತ್ಯಂತ ದುಬಾರಿ ಆಟಗಾರ್ತಿ ಹಾಗೂ ಕನ್ನಡತಿ ವೃಂದಾ ದಿನೇಶ್ ಪಂದ್ಯಾವಳಿಯ ಉಳಿದ ಭಾಗದಿಂದ ಹೊರ ಬಿದ್ದಿದ್ದಾರೆ. ಇದರಿಂದ ಯುಪಿ ವಾರಿಯರ್ಸ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಭುಜದ ಗಾಯದ ಸಮಸ್ಯೆಗೆ ಸಿಲುಕಿದ ವೃಂದಾ 2ನೇ ಆವೃತ್ತಿಯ ಮಧ್ಯದಲ್ಲೇ ಹೊರಗುಳಿದಿದ್ದಾರೆ.
ವೃಂದಾ ದಿನೇಶ್ ಬದಲಿಗೆ ಯುಪಿ ತಂಡವು ವಿಕೆಟ್ ಕೀಪರ್ ಬ್ಯಾಟರ್ ಉಮಾ ಚೆಟ್ರಿ ಅವರನ್ನು ಬದಲಿಯಾಗಿ ನೇಮಿಸಿದೆ. ಮಾರ್ಚ್ 4ರಂದು ಸೋಮವಾರ ಯುಪಿ ವಾರಿಯರ್ಸ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಮಾಹಿತಿಯನ್ನು ದೃಢಪಡಿಸಿದೆ. ಯುಪಿ ತಂಡದ ವೃಂದಾ ದಿನೇಶ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಭುಜದ ಗಾಯಕ್ಕೆ ಒಳಗಾಗಿದ್ದು ಡಬ್ಲ್ಯುಪಿಎಲ್ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ತಿಳಿಸಿದೆ.
ಯುಪಿ ವಾರಿಯರ್ಸ್ ಮೂಲ ಬೆಲೆ 10 ಲಕ್ಷ ರೂಪಾಯಿ ಹೊಂದಿದ್ದ ವಿಕೆಟ್ ಕೀಪರ್ ಬ್ಯಾಟರ್ ಉಮಾ ಚೆಟ್ರಿ ಅವರನ್ನು ಬದಲಿಯಾಗಿ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇತ್ತೀಚೆಗೆ ಇಂಗ್ಲೆಂಡ್ ಎ ವಿರುದ್ಧ ಭಾರತ ಎ ಪರ ಆಡಿದ್ದ ಉಮಾ, ಎಸಿಸಿ ಎಮರ್ಜಿಂಗ್ ವುಮೆನ್ಸ್ ಏಷ್ಯಾ ಕಪ್ 2023 ಗೆದ್ದ ವಿಜಯಶಾಲಿ ಭಾರತ ಎ ಉದಯೋನ್ಮುಖ ತಂಡದ ಭಾಗವಾಗಿದ್ದರು ಎಂದು ಯುಪಿ ಆಡಳಿತ ಮಂಡಳಿ ಸೇರಿಸಿದೆ.
ಅಲಿಸ್ಸಾ ಹೀಲಿಗಿಂತಲೂ ದುಬಾರಿ ಆಟಗಾರ್ತಿ ವೃಂದಾ
ಡಬ್ಲ್ಯುಪಿಎಲ್ ಮಿನಿ ಹರಾಜಿನಲ್ಲಿ ವೃಂದಾ ಯುಪಿ ವಾರಿಯರ್ಜ್‌ನ ಅತ್ಯಂತ ದುಬಾರಿ ಖರೀದಿಯಾಗಿದ್ದರು. ಅವರು 1.3 ಕೋಟಿ ರೂಪಾಯಿ ಪಡೆದು ಯುಪಿ ಪಾಲಾಗಿದ್ದರು. ಅವರ ತಂಡದ ನಾಯಕಿ ಅಲಿಸ್ಸಾ ಹೀಲಿ ಒಂದು ಸೀಸನ್‌ಗೆ ತೆಗೆದುಕೊಳ್ಳುವ ಸಂಭಾವನೆಗಿಂತ ಹೆಚ್ಚು. ಅಲ್ಲದೆ, ಈ ಮಿನಿ ಹರಾಜಿನಲ್ಲಿ 2ನೇ ಅತ್ಯಂತ ದುಬಾರಿ ಆಟಗಾರ್ತಿ ಎನಿಸಿದ್ದರು. ಕಾಶ್ವೀ ಗೌತಮ್ ಮತ್ತು ಅನ್ನಾಬೆಲ್ ಸದರ್ಲ್ಯಾಂಡ್ ಜೋಡಿ ತಲಾ 2 ಕೋಟಿ ಪಡೆದಿದ್ದಾರೆ.
ವೃಂದಾ ಅವರು ಟೂರ್ನಿಯ ನಡೆಯುತ್ತಿರುವ ಋತುವಿನಲ್ಲಿ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 18 ರನ್ ಮಾತ್ರ ಕಲೆ ಹಾಕಿದರು. ಫೆಬ್ರವರಿ 24 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ತಮ್ಮ ಆರಂಭಿಕ ಘರ್ಷಣೆಯಲ್ಲಿ ಅಲಿಸ್ಸಾ ಹೀಲಿ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ವೇಳೆ ಅವರು 18 ರನ್ ಗಳಿಸಿದ್ದರು. ನಂತರ ಡೆಲ್ಲಿ ವಿರುದ್ಧ ಡಕೌಟ್ ಆಗಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡರು. ಅವರು ಕಣಕ್ಕಿಳಿಯುವ ಮೊದಲೇ ಪಂದ್ಯವನ್ನು ಯುಪಿ ಗೆದ್ದಿತ್ತು.
ಯುಪಿ ವಾರಿಯರ್ಸ್ ತಂಡ
ಅಲಿಸ್ಸಾ ಹೀಲಿ (ನಾಯಕಿ), ಅಂಜಲಿ ಸರ್ವಾಣಿ, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಕಿರಣ್ ನವಗಿರೆ, ಲಾರೆನ್ ಬೆಲ್, ಲಕ್ಷ್ಮಿ ಯಾದವ್, ಪಾರ್ಶವಿ ಚೋಪ್ರಾ, ರಾಜೇಶ್ವರಿ ಗಾಯಕ್ವಾಡ್, ಎಸ್.ಯಶಶ್ರೀ, ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೊಸ್ಟನ್, ತಾಲಿಯಾ ಮೆಗ್ರಾಥ್, ಡೇನಿಯಲ್ ವ್ಯಾಟ್, ಉಮಾ ಚೆಟ್ರಿ, ಪೂನಂ ಖೇಮ್ನಾರ್, ಸೈಮಾ ಠಾಕೋರ್, ಗೌಹರ್ ಸುಲ್ತಾನಾ.