ಕನ್ನಡ ಸುದ್ದಿ  /  Cricket  /  Up Warriorz Won By 7 Wickets Against Mumbai Indians In Wpl 2024 Womens Premier League Miw Vs Upw Kiran Navgire Prs

ಸತತ ಗೆಲುವುಗಳ ನಂತರ ಮುಗ್ಗರಿಸಿದ ಮುಂಬೈ ಇಂಡಿಯನ್ಸ್​; ಎರಡು ಸೋಲುಗಳ ಬಳಿಕ ಗೆದ್ದ ಯುಪಿ ವಾರಿಯರ್ಸ್

MIW vs UPW : ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ಬಲಿಷ್ಠ ಮುಂಬೈ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್​​ಗಳ ಭರ್ಜರಿ ಗೆಲುವು ಸಾಧಿಸಿದ ಯುಪಿ ವಾರಿಯರ್ಸ್ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ.

ಎರಡು ಸೋಲುಗಳ ಬಳಿಕ ಗೆದ್ದ ಯುಪಿ ವಾರಿಯರ್ಸ್
ಎರಡು ಸೋಲುಗಳ ಬಳಿಕ ಗೆದ್ದ ಯುಪಿ ವಾರಿಯರ್ಸ್ (PTI)

ಬೌಲಿಂಗ್ ಮತ್ತು ಬ್ಯಾಟಿಂಗ್​ನಲ್ಲಿ ಅತ್ಯುದ್ಭುತ ಪ್ರದರ್ಶನ ತೋರಿದ ಯುಪಿ ವಾರಿಯರ್ಸ್ ತಂಡವು 2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್​ 2024ರ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಫೆಬ್ರವರಿ 28ರಂದು ಬುಧವಾರ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್ (Mumbai Indians vs UP Warriorz)​ ತಂಡವನ್ನು ಏಳು ವಿಕೆಟ್​​ಗಳಿಂದ ಸೋಲಿಸಿ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಿತು. ಆ ಬಳಿಕ ದಿಢೀರ್​​ ಕುಸಿತ ಕಂಡು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 161 ರನ್​ ಕಲೆ ಹಾಕಿತು. ಈ ಗುರಿ ಹಿಂಬಾಲಿಸಿದ ಯುಪಿ ವಾರಿಯರ್ಸ್ ಕೇವಲ 16.3​ ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 163 ರನ್​ ಬಾರಿಸಿ ಜಯದ ನಗೆ ಬೀರಿತು. ಈ ಪಂದ್ಯಕ್ಕೂ ಮುನ್ನ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿತ್ತು.

ಅಲಿಸ್ಸಾ-ಕಿರಣ್​ ಸಖತ್ ಜೊತೆಯಾಟ

162 ರನ್​ಗಳ ಗುರಿ ಬೆನ್ನಟ್ಟಿದ ಯುಪಿ ಭರ್ಜರಿ ಆರಂಭ ಪಡೆಯಿತು. ನಾಯಕಿ ಅಲಿಸ್ಸಾ ಹೀಲಿ ಮತ್ತು ಕಿರಣ್ ನವ್​ಗಿರೆ ಅವರು ಉತ್ತಮ ಜೊತೆಯಾಟವಾಡಿದರು. ಈ ಜೋಡಿ ಪ್ರಥಮ ವಿಕೆಟ್​​ಗೆ 94 ರನ್​​ಗಳ ಪಾಲುದಾರಿಕೆ ನೀಡಿದರು. ಅದರಲ್ಲೂ ಕಿರಣ್ ಬೆಂಕಿ-ಬಿರುಗಾಳಿ ಆಟವಾಡಿದರು. 31 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್​ ಸಹಿತ 183.87ರ ಸ್ಟ್ರೈಕ್​ರೇಟ್​​​ನಲ್ಲಿ 57 ರನ್​ ಚಚ್ಚಿದರು. ಆದರೆ ಅಮೆಲಿಯಾ ಕೇರ್​​ಗೆ ವಿಕೆಟ್ ಒಪ್ಪಿಸಿದರು.

ನವ್​ಗಿರೆ ಔಟಾದ ಬಳಿಕ 3 ರನ್​ ಕಲೆ ಹಾಕುವಷ್ಟರಲ್ಲಿ ಅಲಿಸ್ಸಾ ಹೀಲಿ ವಿಕೆಟ್​ ಕೂಡ ಔಟಾದರು. ನಾಯಕಿ 33 ರನ್​ಗಳ ಆಟವಾಡಿದರು. ಬಳಿಕ ಕಣಕ್ಕಿಳಿದ ಗ್ರೇಸ್ ಹ್ಯಾರಿಸ್ ಅಜೇಯ 17 ಎಸೆತಗಳಿಂದ 6 ಬೌಂಡರಿ, 1 ಸಿಕ್ಸರ್​​ 38 ರನ್ ಚಚ್ಚಿದರು. ದೀಪ್ತಿ ಶರ್ಮಾ 20 ಎಸೆತಗಳಲ್ಲಿ ಅಜೇಯ 27 ರನ್ ಗಳಿಸಿ ಜವಾಬ್ದಾರಿಯುತ ಬ್ಯಾಟಿಂಗ್​ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಮುಂಬೈ ಪರ ಇಸ್ಸಿ ವಾಂಗ್ 2 ವಿಕೆಟ್​ ಪಡೆದರು.

ಮ್ಯಾಥ್ಯೂಸ್ ಹೋರಾಟ ವ್ಯರ್ಥ

ಮೊದಲು ಬ್ಯಾಟಿಂಗ್​ ನಡೆಸಿದ ಮುಂಬೈ ಇಂಡಿಯನ್ಸ್​​ಗೆ ವೆಸ್ಟ್​ ಇಂಡೀಸ್ ತಂಡದ ಆಲ್​ರೌಂಡರ್​ ಹೀಲಿ ಮ್ಯಾಥ್ಯೂಸ್​ ಭರ್ಜರಿ ಹಾಫ್ ಸೆಂಚುರಿ ಬಾರಿಸಿ ಆಸರೆಯಾದರು. 47 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ 55 ರನ್​ ಬಾರಿಸಿದ್ದಾರೆ. ಮತ್ತೊಬ್ಬ ಆಟಗಾರ್ತಿ ಯಾಸ್ತಿಕಾ ಭಾಟಿಯಾ ಅವರು 26 ರನ್​ ಪೇರಿಸಿದರು.

ಹರ್ಮನ್ ಪ್ರೀತ್​ ಕೌರ್​ ಬದಲಿಗೆ ನಾಯಕಿಯಾಗಿ ಕಣಕ್ಕಿಳಿದ ನಟಾಲಿ ಸೀವರ್, ನಿರೀಕ್ಷಿತ ಮಟ್ಟದ ಆಟ ಪ್ರದರ್ಶಿಸುವಲ್ಲಿ ವಿಫಲರಾದರು. 2 ಬೌಂಡರಿ ಸಹಿತ 19 ರನ್​ಗಳಿಗೆ ಸೀಮಿತಗೊಂಡರು. ಬಳಿಕ ಬಂದ ಅಮೆಲಿಯಾ ಕೇರ್ 23, ಪೂಜಾ ವಸ್ತ್ರಾಕರ್ 18, ಇಸ್ಸಿ ವಾಂಗ್ 15 ರನ್ ಕಲೆ ಹಾಕಿದರು. ಯುಪಿ ವಾರಿಯರ್ಸ್ ಪರ ಬೌಲಿಂಗ್​ ಮಾಡಿದ 5 ಬೌಲರ್​ಗಳೂ ತಲಾ ಒಂದೊಂದು ವಿಕೆಟ್​ ಉರುಳಿಸಿದರು.

ಮುಂಬೈ ಇಂಡಿಯನ್ಸ್ ತಂಡ

ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್​), ಹೇಲಿ ಮ್ಯಾಥ್ಯೂಸ್, ನಟಾಲಿ ಸೀವರ್​ (ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಕರ್, ಅಮನ್ಜೋತ್ ಕೌರ್, ಇಸ್ಸಿ ವಾಂಗ್, ಎಸ್ ಸಜನಾ, ಹುಮೈರಾ ಕಾಜಿ, ಕೀರ್ತನಾ ಬಾಲಕೃಷ್ಣನ್, ಸಾಯಿಕಾ ಇಶಾಕ್.

ಯುಪಿ ವಾರಿಯರ್ಸ್ ತಂಡ

ಅಲಿಸ್ಸಾ ಹೀಲಿ (ನಾಯಕಿ ಮತ್ತು ವಿಕೆಟ್ ಕೀಪರ್), ವೃಂದಾ ದಿನೇಶ್, ತಹ್ಲಿಯಾ ಮೆಗ್ರಾತ್, ಗ್ರೇಸ್ ಹ್ಯಾರಿಸ್, ಶ್ವೇತಾ ಸೆಹ್ರಾವತ್, ಕಿರಣ್ ನವ್​​ಗಿರೆ, ಪೂನಂ ಖೇಮ್ನಾರ್, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.

IPL_Entry_Point