ಭಾರತದಲ್ಲಿ ನಿರ್ಮಾಣ ಹಂತದಲ್ಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂಗಳಿವು; ಕರ್ನಾಟಕದ ಎರಡು ಕ್ರೀಡಾಂಗಳೂ ಸೇರಿವೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತದಲ್ಲಿ ನಿರ್ಮಾಣ ಹಂತದಲ್ಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂಗಳಿವು; ಕರ್ನಾಟಕದ ಎರಡು ಕ್ರೀಡಾಂಗಳೂ ಸೇರಿವೆ

ಭಾರತದಲ್ಲಿ ನಿರ್ಮಾಣ ಹಂತದಲ್ಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂಗಳಿವು; ಕರ್ನಾಟಕದ ಎರಡು ಕ್ರೀಡಾಂಗಳೂ ಸೇರಿವೆ

ಭಾರತದಲ್ಲಿ ಹಲವು ಹೊಸ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂಗಳು ನಿರ್ಮಾಣವಾಗುತ್ತಿವೆ. ಕೆಲವೇ ತಿಂಗಳು ಅಥವಾ ವರ್ಷಗಳಲ್ಲಿ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ವೀಕ್ಷಿಸಬಹುದು. ಅಂತಹ ಸ್ಟೇಡಿಯಂಗಳಲ್ಲಿ ಪ್ರಮುಖ ಕೆಲವು ಕ್ರೀಡಾಂಗಣಗಳ ಮಾಹಿತಿ ಇಲ್ಲಿದೆ. ಇದರಲ್ಲಿ ಕರ್ನಾಟಕದ ಎರಡು ಸ್ಟೇಡಿಯಂ ಕೂಡಾ ಸೇರಿದೆ.

ಭಾರತದಲ್ಲಿ ನಿರ್ಮಾಣ ಹಂತದಲ್ಲಿವೆ ಹಲವು ಕ್ರಿಕೆಟ್‌ ಸ್ಟೇಡಿಯಂಗಳು; ಕರ್ನಾಟಕದಲ್ಲೇ ಎರಡು
ಭಾರತದಲ್ಲಿ ನಿರ್ಮಾಣ ಹಂತದಲ್ಲಿವೆ ಹಲವು ಕ್ರಿಕೆಟ್‌ ಸ್ಟೇಡಿಯಂಗಳು; ಕರ್ನಾಟಕದಲ್ಲೇ ಎರಡು (Meta AI, Social Media)

ವಿಶ್ವದಲ್ಲೇ ಅತಿ ಹೆಚ್ಚು ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂಗಳನ್ನು ಹೊಂದಿರುವ ದೇಶ ಭಾರತ. ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್‌ ಕ್ರೀಡಾಂಗಣವನ್ನು ಹೊಂದಿರುವ ಹಿರಿಮೆ ಕೂಡಾ ಭಾರತದ್ದು. ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರೀಡೆಯ ಆಯೋಜನೆಗೆ ಭಾರಿ ಮಹತ್ವ ನೀಡಲಾಗುತ್ತಿದೆ. ಅದರಂತೆಯೇ ಭಾರತದಲ್ಲಿ ಹಲವು ಹೊಸ ಹೊಸ ಕ್ರೀಡಾಂಗಣಗಳು ತಲೆ ಎತ್ತುತ್ತಲೇ ಇವೆ. ಈಗಾಗಲೇ 24ಕ್ಕೂ ಹೆಚ್ಚು ಕ್ರಿಕೆಟ್‌ ಮೈದಾನಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುತ್ತಿವೆ. ಅಂತಾರಾಷ್ಟ್ರೀಯ ದರ್ಜೆಯ ಇನ್ನೂ ಹಲವು ಸ್ಟೇಡಿಯಂಗಳಿವೆ.

ಭಾರತದಲ್ಲಿ ಹೆಚ್ಚು ಅಂತಾರಾಷ್ಟ್ರೀಯ ಸ್ಟೇಡಿಯಂಗಳಿದ್ದರೂ, ಕೆಲವು ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಕ್ರೀಡಾಂಗಣಗಳಿಲ್ಲ. ಹೀಗಾಗಿ ಅಭಿಮಾನಿಗಳು ಪಂದ್ಯ ವೀಕ್ಷಿಸಲು ದೂರದ ನಗರಗಳಿಗೆ ಹೋಗಬೇಕಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ಕ್ರಿಕೆಟ್‌ ಅಸೋಸಿಯೇಷನ್‌ಗಳು ಹೊಸ ಕ್ರೀಡಾಂಗಣಗಳನ್ನು ನಿರ್ಮಿಸುತ್ತಿವೆ. ಭಾರತದಾದ್ಯಂತ ಇನ್ನೂ ಹಲವು ಕ್ರೀಡಾಂಗಣಗಳ ನಿರ್ಮಾಣಕ್ಕೆ ಬೇಡಿಕೆ ಹಾಗೂ ಪ್ರಸ್ತಾವನೆ ಇದೆ. ಇದರ ನಡುವೆ ಕೆಲವೊಂದು ಕ್ರೀಡಾಂಗಣಗಳು ನಿರ್ಮಾಣ ಹಂತದಲ್ಲಿವೆ. ಅಂತಹ ಸ್ಟೇಡಿಯಂಗಳು ಯಾವುವು ಎಂಬುದನ್ನು ನೋಡೋಣ.

ವಾರಣಾಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಉತ್ತರ ಪ್ರದೇಶ

ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕ್ರಿಕೆಟ್ ಸ್ಟೇಡಿಯಂ, 2025ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿ, ಸ್ಟೇಡಿಯಂ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ವಿಶ್ವದಲ್ಲೇ ಈ ಸ್ಟೇಡಿಯಂ ತುಂಬಾ ವಿಶೇಷ ವಿನ್ಯಾಸ ಹೊಂದಿರಲಿದೆ. ಸ್ಟೇಡಿಯಂ ವಾಸ್ತುಶಿಲ್ಪದ ವಿನ್ಯಾಸವು ಶಿವನಿಂದ ಸ್ಫೂರ್ತಿ ಪಡೆದಿದೆ. ಐತಿಹಾಸಿಕ ವಾರಣಾಸಿಯಲ್ಲಿ ಕ್ರೀಡಾಂಗಣ ನಿರ್ಮಾಣವಾಗುತ್ತಿರುವುದರಿಂದ ತ್ರಿಶೂಲದ ಆಕಾರದ ಫ್ಲಡ್‌ಲೈಟ್‌, ಅರ್ಧಚಂದ್ರಾಕಾರದ ಛಾವಣಿ, ಡಮರುಗ ಆಕಾರದ ಮಾಧ್ಯಮ ಕೇಂದ್ರ ಇರಲಿದೆ. 30,000 ಪ್ರೇಕ್ಷಕರ ಸಾಮರ್ಥ್ಯದ ಈ ಮೈದಾನ ಉದ್ಘಾಟನೆಯಾದರೆ, ಉತ್ತರ ಪ್ರದೇಶದ ನಾಲ್ಕನೇ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಎನಿಸಲಿದೆ.

ರಾಜ್‌ಗಿರ್ ಅಂತಾರಾಷ್ಟ್ರೀಯ ಕ್ರೀಡಾಂಗಣ, ಬಿಹಾರ

ಬಿಹಾರದ ರಾಜ್‌ಗಿರ್‌ನಲ್ಲಿ ಸುಂದರ ಕ್ರಿಕೆಟ್ ಸ್ಟೇಡಿಯಂ ಮತ್ತು ಕ್ರೀಡಾ ಸಂಕೀರ್ಣ ನಿರ್ಮಾಣ ಹಂತದಲ್ಲಿದೆ. ಇದು ಬಿಹಾರ ಕ್ರಿಕೆಟ್ ತಂಡದ ತವರು ಮೈದಾನವಾಗಲಿದೆ. ಕ್ರೀಡಾಂಗಣದ ಒಟ್ಟು ಆಸನ ಸಾಮರ್ಥ್ಯ 45,000. ಇದು ಬಿಹಾರದ ಅತಿದೊಡ್ಡ ಕ್ರೀಡಾಂಗಣವಾಗಲಿದ್ದು, ಸುಸಜ್ಜಿತ ವ್ಯವಸ್ಥೆ ಹೊಂದಿರಲಿದೆ. ಕ್ರಿಕೆಟ್‌ ಜೊತೆಗೆ ಕ್ರೀಡಾ ಸಂಕೀರ್ಣವಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದನ್ನು ಫುಟ್‌ಬಾಲ್‌ ಸೇರಿದಂತೆ ಇತರ ಕ್ರೀಡೆಗಳಿಗೂ ಬಳಸಬಹುದು. 2018ರಲ್ಲಿ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಕ್ರೀಡಾಂಗಣ ನಿರ್ಮಾಣದ ಘೋಷಣೆ ಮಾಡಿದ್ದರು. ಅದರಂತೆ ಅಕ್ಟೋಬರ್ 12ರಂದು ಸ್ಟೇಡಿಯಂಗೆ ಅಡಿಪಾಯ ಹಾಕಲಾಯ್ತು. ಒಟ್ಟು 633 ಕೋಟಿ ರೂ ವೆಚ್ಚದಲ್ಲಿ 90 ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣವಾಗಲಿದೆ.

ನಾಥದ್ವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಉದಯಪುರ, ರಾಜಸ್ಥಾನ

ನಾಥದ್ವಾರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಬಹುತೇಕ ಪೂರ್ಣಗೊಂಡಿದೆ. ಮೀರಜ್ ಗ್ರೂಪ್ ಈ ವಿಶ್ವ ದರ್ಜೆಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುತ್ತಿದೆ. ವಿಶೇಷವೆಂದರೆ, ಈ ಕ್ರೀಡಾಂಗಣದಲ್ಲಿ ಪಂಚತಾರಾ ಹೋಟೆಲ್ ಕೂಡಾ ಇರಲಿದೆ. ಫೈವ್‌ಸ್ಟಾರ್‌ ಹೋಟೆಲ್‌ ಜೊತೆಗಿರುವ ಭಾರತದ ಮೊದಲ ಸ್ಟೇಡಿಯಂ ಇದಾಗಲಿದೆ. ಸ್ಟೇಡಿಯಂ 30,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿರಲಿದೆ.

ನರಸಿಂಗ್‌ಗಢ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಅಗರ್ತಲಾ, ತ್ರಿಪುರ

ಇದು ತ್ರಿಪುರಾದಲ್ಲಿ ನಿರ್ಮಾಣ ಹಂತದಲ್ಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ. ಈ ಕ್ರೀಡಾಂಗಣವು ಗುವಾಹಾಟಿಯ ನಂತರ ಈಶಾನ್ಯ ಭಾರತದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆತಿಥ್ಯ ವಹಿಸಬಲ್ಲ ಎರಡನೇ ಅತಿದೊಡ್ಡ ಕ್ರೀಡಾಂಗಣವಾಗಿದೆ. ಕ್ರೀಡಾಂಗಣವು ನಿರ್ಮಾಣವಾದರೆ ತ್ರಿಪುರಾದ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಆಗಲಿದೆ. ತ್ರಿಪುರಾ ಕ್ರಿಕೆಟ್ ಅಸೋಸಿಯೇಷನ್ ​​(TCA) ಕ್ರೀಡಾಂಗಣವನ್ನು ನಿರ್ವಹಿಸುತ್ತಿದ್ದು, ಕ್ರೀಡಾಂಗಣದ ಒಟ್ಟು ಸಾಮರ್ಥ್ಯ 25,000 ಆಸನಗಳು. 2025ರ ಐಪಿಎಲ್‌ ಆರಂಭಕ್ಕೂ ಮುನ್ನ ಕ್ರೀಡಾಂಗಣ ನಿರ್ಮಾಣ ಪೂರ್ಣಗೊಂಡರೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಎರಡನೇ ತವರು ಮೈದಾನವಾಗಲಿದೆ. ಏಕೆಂದರೆ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದ ನವೀಕರಣ ಕಾಮಗಾರಿ ಈ ವರ್ಷ ನಡೆಯಲಿದೆ.

ಅನಿಲ್ ಅಗರ್ವಾಲ್ ಸ್ಟೇಡಿಯಂ ಜೈಪುರ, ರಾಜಸ್ಥಾನ

ರಾಜಸ್ಥಾನದ ಜೈಪುರದ ಚೋನ್ಪ್ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಹಂತದಲ್ಲಿದೆ. ಬರೋಬ್ಬರಿ 75,000 ಪ್ರೇಕ್ಷಕರ ಸಾಮರ್ಥ್ಯದೊಂದಿಗೆ, ಇದು ವಿಶ್ವದ ಮೂರನೇ ಹಾಗೂ ಭಾರತದ ಎರಡನೇ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಆಗಲಿದೆ. ಈ ಕ್ರೀಡಾಂಗಣಕ್ಕೆ ವೇದಾಂತ ರಿಸೋರ್ಸಸ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಅನಿಲ್ ಅಗರ್ವಾಲ್ ಅವರ ಹೆಸರನ್ನು ಇಡಲಾಗಿದೆ. ಕ್ರೀಡಾಂಗಣ ಕೆಲಸವು ಹಂತ ಹಂತವಾಗಿ ನಡೆಯಲಿದ್ದು, ಮೊದಲ ಹಂತದಲ್ಲಿ 40,000 ಆಸನಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕ್ರೀಡಾಂಗಣದಲ್ಲಿ ಸುಮಾರು 4,000 ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ.

ತುಮಕೂರು ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ

ತುಮಕೂರಿನಲ್ಲಿ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣಕ್ಕೆ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡಿಪಾಯ ಹಾಕಿದ್ದರು. ಸೋರೆಕುಂಟೆ ಬಳಿ 41 ಎಕರೆ ಜಾಗದಲ್ಲಿ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದೆ. 150 ಕೋಟಿ ರೂ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯವನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ನಿರೀಕ್ಷೆಯಿದೆ. ಇದು ಪೂರ್ಣಗೊಂಡರೆ, ಬೆಂಗಳೂರು ನಗರದಲ್ಲಿರುವ ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪರ್ಯಾಯವಾಗಲಿದೆ. ಇದೇ ವೇಳೆ ಮೈಸೂರು ಸಮೀಪ ಮತ್ತೊಂದು ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೂ ಕರ್ನಾಟಕ ಸರ್ಕಾರ ಪ್ರಸ್ತಾಪಿಸಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಮಡಿಕೇರಿ

ದಶಕಗಳ ಬೇಡಿಕೆಯ ನಂತರ ಕರ್ನಾಟಕದ ಕಾಶ್ಮೀರ, ಕೊಡಗು ಜಿಲ್ಲೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವ ಅವಕಾಶ ಸಿಕ್ಕಿದೆ. ಕೊಡಗು ಜಿಲ್ಲೆಯ ಪ್ರಕೃತಿ ರಮಣೀಯ ಮಡಿಕೇರಿಯಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣ ಕಾರ್ಯ ಆರಂಭವಾಗಿದೆ. ಮಡಿಕೇರಿ ತಾಲೂಕಿನ ಪಾಲೆಮಾಡು ಗ್ರಾಮದ ಬಳಿ ಕೆಲಸ ಆರಂಭವಾಗಿದೆ. ಕೊಡಗು ಜಿಲ್ಲಾಡಳಿತವು ಕ್ರೀಡಾಂಗಣ ನಿರ್ಮಾಣಕ್ಕೆ 12 ಎಕರೆ ಜಾಗವನ್ನು ಮೀಸಲಿಟ್ಟಿದ್ದು, ಯೋಜನೆಗೆ ಸುಮಾರು 50 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಮೈದಾನದ ವಿನ್ಯಾಸವು ಹಿಮಾಚಲ ಪ್ರದೇಶದ ಸುಂದರ ಧರ್ಮಶಾಲಾ ಕ್ರಿಕೆಟ್ ಕ್ರೀಡಾಂಗಣದ ಮಾದರಿಯಲ್ಲಿ ಇರಲಿದೆ. ಆದರೆ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕಿಂತ ತುಸು ದೊಡ್ಡದಾಗಿರುತ್ತದೆ.

Whats_app_banner