ಎಕ್ಲೊಸ್ಟನ್, ಹ್ಯಾರಿಸ್ ಮಿಂಚು, ಯುಪಿ ವಾರಿಯರ್ಸ್ಗೆ ಸತತ 2ನೇ ಗೆಲುವು; ಗುಜರಾತ್ ಜೈಂಟ್ಸ್ಗೆ ಹ್ಯಾಟ್ರಿಕ್ ಸೋಲು
UP Warriorz vs Gujarat Giants Highlights: ಡಬ್ಲ್ಯುಪಿಎಲ್ನ 8ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ವಾರಿಯರ್ಸ್ 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ (WPL 2024) ಆರಂಭಿಕ ಎರಡು ಸೋಲುಗಳಿಂದ ಪುಟಿದೆದ್ದ ಯುಪಿ ವಾರಿಯರ್ಸ್ ಇದೀಗ ಬ್ಯಾಕ್ ಟು ಬ್ಯಾಕ್ ಗೆಲುವು ದಾಖಲಿಸಿದೆ. ತನ್ನ ನಾಲ್ಕನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿ ಸತತ ಎರಡನೇ ಜಯದ ನಗೆ ಬೀರಿತು. ಅಲ್ಲದೆ, ಅಂಕಪಟ್ಟಿಯಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ನೆಗೆದಿದೆ. ಆದರೆ, ಗುಜರಾತ್ ಜೈಂಟ್ಸ್ ಹ್ಯಾಟ್ರಿಕ್ ಸೋಲು ಅನುಭವಿಸಿದೆ.
ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದ ಗುಜರಾತ್
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಲೀಗ್ನ 8ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್, ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ಗೆ 40 ರನ್ಗಳು ಹರಿದುಬಂದವು. ಆದರೆ, ನಾಯಕಿ ಬೆತ್ ಮೂನಿ 16, ಲಾರಾ ವೊಲ್ವಾರ್ಡ್ಟ್ 28 ರನ್ ಗಳಿಸಿ ಔಟಾದರು.
ಬಳಿಕ ಕಣಕ್ಕಿಳಿದ ಹರ್ಲೀನ್ ಡಿಯೋಲ್ 24 ಎಸೆತಗಳಲ್ಲಿ 18 ರನ್ ಗಳಿಸಿ ನೀರಸ ಪ್ರದರ್ಶನ ನೀಡಿದರೆ, ಫೀಬಿ ಲಿಚ್‌ಫೀಲ್ಡ್ ಮತ್ತು ಆ್ಯಶ್ಲೆ ಗಾರ್ಡ್ನರ್ ಜೋಡಿ ಅರ್ಧಶತಕದ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಲಿಚ್‌ಫೀಲ್ಡ್ 26 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 35 ರನ್ ಗಳಿಸಿ ರನೌಟ್ ಆದರು. ಗಾರ್ಡ್ನರ್ 17 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ನೆರವಿನಿಂದ 30 ರನ್ ಬಾರಿಸಿದರು.
ದಯಾಲನ್ ಹೇಮಲತಾ 2, ಕ್ಯಾಥರಿನ್ ಬ್ರೈಸ್ 5 ರನ್ ಕಲೆ ಹಾಕಿ ಅಜೇಯರಾಗಿ ಉಳಿದರು. ಅಂತಿಮವಾಗಿ ಗುಜರಾತ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು. ಯುಪಿ ವಾರಿಯರ್ಸ್ ಪರ ಸೋಫಿ ಎಕ್ಲೊಸ್ಟನ್ 3 ವಿಕೆಟ್ ಪಡೆದರೆ, ರಾಜೇಶ್ವರಿ ಗಾಯಕ್ವಾಡ್ 1 ವಿಕೆಟ್ ಪಡೆದು ಮಿಂಚಿದರು.
ಹ್ಯಾರಿಸ್ ಅರ್ಧಶತಕ
ಇನ್ನು 143 ರನ್ಗಳ ಸಾಧಾರಣ ಗುರಿಯನ್ನು ಹಿಂಬಾಲಿಸಿದ ಯುಪಿ ಕೂಡ ಉತ್ತಮ ಆರಂಭ ಪಡೆಯಿತು. ಅಲೀಸಾ ಹೀಲಿ 33, ಕಿರಣ್ ನವ್ಗಿರೆ 12 ರನ್, ಚಾಮರಿ ಅಟ್ಟಪಟ್ಟು 17 ರನ್ ಗಳಿಸಿದರು. ಆದರೆ, ಅಗ್ರ ಕ್ರಮಾಂಕದ ಮೂವರಿಂದ ಪರಿಣಾಮಕಾರಿ ಇನ್ನಿಂಗ್ಸ್ ಬರಲಿಲ್ಲ. ಈ ಹಂತದಲ್ಲಿ ಸ್ಫೋಟಕ ಆಟವಾಡಿದ ಗ್ರೇಸ್ ಹ್ಯಾರಿಸ್ ಅಜೇಯ ಅರ್ಧಶತಕ ಬಾರಿಸಿ ತಂಡಕ್ಕೆ ಎರಡನೇ ಗೆಲುವು ತಂದುಕೊಟ್ಟರು.
ಐದನೇ ವಿಕೆಟ್ಗೆ ದೀಪ್ತಿ ಶರ್ಮಾ ಜೊತೆಗೂಡಿ ಅರ್ಧಶತಕದ ಪಾಲುದಾರಿಕೆ ನೀಡಿದ ಗ್ರೇಸ್ ಹ್ಯಾರಿಸ್, 33 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 60 ರನ್ ಚಚ್ಚಿದರು. 181.82ರ ಸ್ಟ್ರೈಕ್ರೇಟ್ ಹೊಂದಿದ್ದರು. ಇನ್ನು ದೀಪ್ತಿ ಶರ್ಮಾ 14 ಎಸೆತಗಳಲ್ಲಿ 3 ಬೌಂಡರಿ ಸಹಿತ 17 ರನ್ ಕಲೆ ಹಾಕಿದರು. ಅಂತಿಮವಾಗಿ 15.4 ಓವರ್ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ಯುಪಿ ವಾರಿಯರ್ಸ್ ಆಡುವ 11 ಬಳಗ
ಅಲಿಸ್ಸಾ ಹೀಲಿ (ವಿಕೆಟ್ ಕೀಪರ್, ನಾಯಕಿ), ಕಿರಣ್ ನವಗಿರೆ, ಚಾಮರಿ ಅಟ್ಟಪಟ್ಟು, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಶ್ವೇತಾ ಸೆಹ್ರಾವತ್, ಪೂನಮ್ ಖೇಮ್ನಾರ್, ಸೈಮಾ ಠಾಕೋರ್, ಸೋಫಿ ಎಕ್ಲೊಸ್ಟನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.
ಗುಜರಾತ್ ಜೈಂಟ್ಸ್ ಆಡುವ 11 ಬಳಗ
ಹರ್ಲೀನ್ ಡಿಯೋಲ್, ಬೆತ್ ಮೂನಿ (ನಾಯಕಿ & ವಿಕೆಟ್ ಕೀಪರ್), ಲಾರಾ ವೊಲ್ವಾರ್ಡ್ಟ್, ಫೋಬೆ ಲಿಚ್‌ಫೀಲ್ಡ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಕ್ಯಾಥರಿನ್ ಬ್ರೈಸ್, ಸ್ನೇಹ ರಾಣಾ, ತನುಜಾ ಕನ್ವರ್, ಮನ್ನತ್ ಕಶ್ಯಪ್, ಮೇಘನಾ ಸಿಂಗ್.