ಕನ್ನಡ ಸುದ್ದಿ  /  ಕ್ರಿಕೆಟ್  /  ಮೊದಲ ಅಂತಾರಾಷ್ಟ್ರೀಯ ಪಂದ್ಯವಾಡಿದ್ದು ಇಂಗ್ಲೆಂಡ್‌-ಆಸ್ಟ್ರೇಲಿಯಾ ಅಲ್ಲ; 180 ವರ್ಷಗಳ ಹಿಂದೆಯೇ ಆಡಿತ್ತು ಯುಎಸ್‌-ಕೆನಡಾ

ಮೊದಲ ಅಂತಾರಾಷ್ಟ್ರೀಯ ಪಂದ್ಯವಾಡಿದ್ದು ಇಂಗ್ಲೆಂಡ್‌-ಆಸ್ಟ್ರೇಲಿಯಾ ಅಲ್ಲ; 180 ವರ್ಷಗಳ ಹಿಂದೆಯೇ ಆಡಿತ್ತು ಯುಎಸ್‌-ಕೆನಡಾ

ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೊದಲ ಪಂದ್ಯವಾಡಿದ್ದ ಅತ್ಯಂತ ಹಳೆಯ ತಂಡಗಳೆರಡು ಈ ಬಾರಿಯ ಐಸಿಸಿ ಟಿ20 ವಿಶ್ವಕಪ್‌ 2024ರ ಪಂದ್ಯಾವಳಿ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿದಿವೆ. ಆಧುನಿಕ ಕ್ರಿಕೆಟ್‌ ಲೋಕದಲ್ಲಿ ಅಬ್ಬರಿಸುತ್ತಿರುವ ತಂಡಗಳ ನಡುವೆ ಈ ಎರಡು ತಂಡಗಳು ಚುಟುಕು ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಲು ಸಜ್ಜಾಗಿವೆ.

180 ವರ್ಷಗಳ ಹಿಂದೆಯೇ ಕ್ರಿಕೆಟ್‌ ಆಡಿತ್ತು ಯುಎಸ್‌-ಕೆನಡಾ
180 ವರ್ಷಗಳ ಹಿಂದೆಯೇ ಕ್ರಿಕೆಟ್‌ ಆಡಿತ್ತು ಯುಎಸ್‌-ಕೆನಡಾ (AP)

ಕ್ರಿಕೆಟ್ ಎಂದಾಗ‌ ಮೊದಲು ನೆನಪಾಗುವುದೇ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ಪಾಕಿಸ್ತಾನದಂಥ ರಾಷ್ಟ್ರಗಳು. ಹಲವು ದಶಕಗಳಿಂದ ಈ ದೇಶಗಳು ಕ್ರಿಕೆಟ್‌ ಲೋಕವನ್ನು ಆಳುತ್ತಿವೆ. ಈ ಬಲಿಷ್ಠ ತಂಡಗಳ ನಡುವೆ ಯುಎಸ್‌ಎ, ಕೆನಡಾದಂಥ ದೇಶಗಳು ಕ್ರಿಕೆಟ್‌ ಲೋಕದಲ್ಲಿ ಸದ್ದು ಮಾಡಿಲ್ಲ. ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಬಲಿಷ್ಠ ರಾಷ್ಟ್ರಗಳಾಗಿದ್ದರೂ, ಕ್ರೀಡೆ ವಿಚಾರವಾಗಿ ಇವು ಬೇಸ್‌ಬಾಲ್‌, ಬಾಸ್ಕೆಟ್‌ಬಾಲ್‌ನಂಥ ಕ್ರೀಡೆಗಳಲ್ಲಿ ವ್ಯಾಪಕವಾಗಿ ಗುರುತಿಸಿಕೊಂಡಿದೆ. ಇದೀಗ 2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಈ ಎರಡು ತಂಡಗಳೇ ಉದ್ಘಾಟನಾ ಪಂದ್ಯಗಳನ್ನಾಡುತ್ತಿವೆ.

ಟ್ರೆಂಡಿಂಗ್​ ಸುದ್ದಿ

ಐಸಿಸಿ ಟಿ20 ವಿಶ್ವಕಪ್‌ 2024ರ ಪಂದ್ಯಾವಳಿಗೆ ಯುಎಸ್‌ಎ ಸಹ ಆತಿಥೇಯ ದೇಶವಾಗಿದೆ. ಹತ್ತು ಹಲವು ಸವಾಲುಗಳನ್ನು ಹೊತ್ತುಕೊಂಡು ಅಮೆರಿಕದಲ್ಲಿ ಮಹತ್ವದ ಕ್ರಿಕೆಟ್‌ ಪಂದ್ಯಾವಳಿಯನ್ನು ಆಯೋಜಿಸುವ ನಿರ್ಧಾರಕ್ಕೆ ಐಸಿಸಿ ಬಂದಿದೆ. ಅಚ್ಚರಿಯೆಂದರೆ, ಈ ಎರಡು ತಂಡಗಳು ಇದೇ ಮೊದಲ ಬಾರಿ ಅಥವಾ ಇತ್ತೀಚೆಗಷ್ಟೇ ಆಡುತ್ತಿರುವುದಲ್ಲ. ಬರೋಬ್ಬರಿ 180 ವರ್ಷಗಳ ಹಿಂದೆ, ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯವನ್ನಾಡಿದ ಹೆಗ್ಗಳಿಕೆ ಯುಎಸ್‌ಎ ಹಾಗೂ ಕೆನಡಾದ್ದು.

ಅಂತಾರಾಷ್ಟ್ರೀಯ ಕ್ರಿಕೆಟ್‌ ಇತಿಹಾಸ

ಕ್ರಿಕೆಟ್‌ನ ಅತ್ಯಂತ ಹಳೆಯ ತಂಡಗಳೆರಡು ಈ ಬಾರಿಯ ಟಿ20 ವಿಶ್ವಕಪ್‌ ಪಂದ್ಯಾವಳಿಯ ಉದ್ಘಾಟನಾ ಪಂದ್ಯ ಆಡುತ್ತಿರುವುದು ವಿಶೇಷ. ಜಗತ್ತಿಗೆ ಗೊತ್ತಿರುವಂತೆ 1877ರಲ್ಲಿ ಕ್ರಿಕೆಟ್‌ ಜನಕರಾದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ತಂಡಗಳ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯಿತು. ಆ ಪಂದ್ಯಕ್ಕೂ ಮುಂಚೆಯೇ, ಯುಎಸ್‌ಎ ಮತ್ತು ಕೆನಡಾ ತಂಡಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯವನ್ನು ಆಡಿತ್ತು. 1844ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಮೂರು ದಿನಗಳ ಕ್ರಿಕೆಟ್‌ ಪಂದ್ಯದಲ್ಲಿ ಕೆನಡಾ 23 ರನ್‌ಗಳಿಂದ ಗೆದ್ದಿತ್ತು. ಇದೀಗ 180 ವರ್ಷಗಳ ನಂತರ ಇದೇ ಎರಡು ತಂಡಗಳು ಡಲ್ಲಾಸ್‌ನಲ್ಲಿ ಆರಂಭವಾಗುತ್ತಿರುವ ಟಿ20 ವಿಶ್ವಕಪ್ 2024 ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಉಭಯ ತಂಡಗಳಿಗೂ ಇದು ಮೊದಲ ಟಿ20 ವಿಶ್ವಕಪ್.

ಅಮೆರಿಕದಲ್ಲಿ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿ ಕ್ರಿಕೆಟ್ ಆರಂಭವಾಯಿತು. ಆದರೆ, ಅದು ನಿರೀಕ್ಷೆಯಂತೆ ಮುಂದುವರೆಯಲಿಲ್ಲ. ಬೇಸ್‌ಬಾಲ್‌ನಂಥ ಆಟಗಳು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕ್ರಿಕೆಟ್‌ ಜನಪ್ರಿಯತೆಯನ್ನು ಕಡಿಮೆ ಮಾಡಿತು. ಬರುಬರುತ್ತಾ ಸಪ್ತಸಾಗರದಾಚೆ ಕ್ರಿಕೆಟ್‌ ಅನ್ನೋ ಕ್ರೀಡೆಯೇ ಅಪರೂಪವಾಯ್ತು. ದೇಶದ ಮೂಲ ನಿವಾಸಿಗಳು ಕ್ರಿಕೆಟ್‌ ಆಡುವ ಆಸಕ್ತಿಯೇ ತೋರಲಿಲ್ಲ. ಇದೀಗ ಭಾರತೀಯರು ಸೇರಿದಂತೆ ಹಲವು ವಿದೇಶಿಗರೇ ಯುಎಸ್‌ಎ ತಂಡದಲ್ಲಿ ಆಡುತ್ತಿದ್ದಾರೆ.

ಗತವೈಭವ ಮರುಕಳಿಸುತ್ತಾ?

ಈ ಬಾರಿಯ ಟಿ20 ವಿಶ್ವಕಪ್‌ ಪಂದ್ಯಾವಳಿಯನ್ನುಅಮೆರಿಕದಲ್ಲಿ ಆಯೋಜಿಸಲು ಐಸಿಸಿ ಭಾರಿ ಶ್ರಮ ಹಾಕಿದೆ. ವೆಸ್ಟ್‌ ಇಂಡೀಸ್‌ ಜೊತೆಗೆ ವಿಶ್ವದ ದೊಡ್ಡಣ್ಣನ ಮಡಿಲಿನಲ್ಲಿ ಪಂದ್ಯಾವಳಿಯ ಆಯೋಜನೆಗೆ ಒಂದಷ್ಟು ಸವಾಲುಗಳು ಕ್ರಿಕೆಟ್‌ ಮಂಡಳಿ ಮೇಲಿತ್ತು. ಈ ಎಲ್ಲಾ ಸವಾಲುಗಳನ್ನು ಎದುರಿಸಿ ಸಪ್ತಸಾಗರದಾಚೆ ಕ್ರಿಕೆಟ್‌ ಕಲರವ ಆರಂಭವಾಗಿದೆ.

ಅಮೆರಿಕದ ಡಲ್ಲಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ಆರಂಭವಾದ ಮೊದಲ ಪಂದ್ಯದಲ್ಲಿ ಟಾಸ್‌ ಗೆದ್ದ ಆತಿಥೇಯ ಯುಎಸ್‌ಎ ತಂಡದ ನಾಯಕ ಮೊನಾಂಕ್‌ ಪಟೇಲ್ ಬೌಲಿಂಗ್‌ ಆಯ್ಕೆ ಮಾಡಿಕೊಂಡರು. ಇತ್ತೀಚೆಗೆ ಬಲಿಷ್ಠ ಬಾಂಗ್ಲಾದೇಶ ವಿರುದ್ಧದ ಸರಣಿ ವಶಪಡಿಸಿಕೊಂಡಿದ್ದ ಯುಎಸ್‌ಎ, ತನ್ನದೇ ತವರಿನಲ್ಲಿ ಅಮೋಘ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ