ಸೂಪರ್ ಓವರ್ನಲ್ಲಿ 'ಸೂಪರ್' ಗೆಲುವು ಸಾಧಿಸಿದ ಯುಎಸ್ಎ; ಪಾಕಿಸ್ತಾನ ಸೋಲಿಸಿ ಇತಿಹಾಸ ಸೃಷ್ಟಿಸಿದ ಅಮೆರಿಕ
USA vs Pakistan : ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಗುಂಪು ಹಂತದ 11ನೇ ಪಂದ್ಯದಲ್ಲಿ ಸೂಪರ್ ಓವರ್ನಲ್ಲಿ ಬಲಿಷ್ಠ ಪಾಕಿಸ್ತಾನ ತಂಡವನ್ನು ಮಣಿಸಿದ ಅಮೆರಿಕ ತಂಡವು ಹೊಸ ಇತಿಹಾಸ ಸೃಷ್ಟಿಸಿದೆ.
ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ 11ನೇ ಲೀಗ್ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ ತಂಡದ ಎದುರು ಪ್ರಬಲ ಪೈಪೋಟಿ ನೀಡಿದ ಯುನೈಟೆಡ್ ಸ್ಟೇಟ್ಸ್ ತಂಡವು ಸೂಪರ್ ಓವರ್ನಲ್ಲಿ ರೋಚಕ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದೆ. ವಿಶ್ವಕ್ರಿಕೆಟ್ನಲ್ಲಿ ಇದೇ ಮೊದಲ ಬಾರಿಗೆ ಅಮೆರಿಕ, ಪಾಕಿಸ್ತಾನ ತಂಡವನ್ನು ಮಣಿಸಿದೆ. ಬಾಂಗ್ಲಾದೇಶ ಸೋಲಿಸಿದ ನಂತರ ಟೆಸ್ಟ್ ಆಡುವ ಎರಡನೇ ತಂಡವನ್ನು ಮಣಿಸಿದ ಹೆಗ್ಗಳಿಕೆಗೆ ಯುಎಸ್ಎ ಪಾತ್ರವಾಗಿದೆ. ಘಟಾನುಘಟಿ ಆಟಗಾರರನ್ನೇ ಹೊಂದಿರುವ ಬಾಬರ್ ಪಡೆ, ಸೂಪರ್ ಓವರ್ನಲ್ಲಿ 5 ರನ್ಗಳ ಹೀನಾಯ ಸೋಲಿನೊಂದಿಗೆ ವಿಶ್ವಮಟ್ಟದಲ್ಲಿ ತೀವ್ರ ಮುಖಭಂಗಕ್ಕೆ ಒಳಗಾಯಿತು. ಅಲ್ಲದೆ, ಸೋಲಿನೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸಿತು. ಮತ್ತೊಂದೆಡೆ ಯುಎಸ್ಎ ಸತತ ಎರಡನೇ ಗೆಲುವು ದಾಖಲಿಸಿ ಸೂಪರ್-8 ಕನಸಿಗೆ ಹತ್ತಿರವಾಗಿದೆ.
ಡಲ್ಲಾಸ್ನ ಗ್ರ್ಯಾಂಡ್ ಫ್ರೈರಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ನ ಎ ಗುಂಪಿನ ಪಂದ್ಯದಲ್ಲಿ ಟಾಸ್ ಸೋತು ಪಾಕ್ ಮೊದಲು ಬ್ಯಾಟಿಂಗ್ ಮಾಡಿತು. ಅಮೆರಿಕ ಬೌಲರ್ಗಳ ದಾಳಿಗೆ ಬೆದರಿದ ಬಾಬರ್ ಪಡೆ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಈ ಗುರಿ ಹಿಂಬಾಲಿಸಿದ ಯುಎಸ್ಎ, ಮಾರಕ ಬೌಲಿಂಗ್ ಪಡೆಯನ್ನು ಹೊಂದಿದ್ದ ಪಾಕಿಸ್ತಾನವನ್ನು ದಿಟ್ಟವಾಗಿ ಎದುರಿಸಿತು. ಅಂತಿಮವಾಗಿ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಅಷ್ಟೇ ರನ್ ಗಳಿಸಿತು. ಪಂದ್ಯ ಆದ ಕಾರಣ ಸೂಪರ್ ಓವರ್ ನಡೆಸಲಾಯಿತು. ಈ ವೇಳೆ ಮೊದಲು ಬ್ಯಾಟಿಂಗ್ ಮಾಡಿದ ಅಮೆರಿಕ 19 ರನ್ಗಳ ಗುರಿ ನೀಡಿತು. ಆದರೆ ಪಾಕಿಸ್ತಾನ 13 ರನ್ ಗಳಿಸಲಷ್ಟೇ ಶಕ್ತವಾಯಿತು.
ಅತ್ಯುತ್ತಮ ಪ್ರದರ್ಶನ ನೀಡಿದ ಅಮೆರಿಕ
ಈ ಗುರಿ ಬೆನ್ನಟ್ಟಿದ ಅಮೆರಿಕ ಉತ್ತಮ ಆರಂಭ ಪಡೆದುಕೊಂಡಿತು. ಪಾಕ್ ಬೌಲರ್ಗಳ ಎದುರು ದಿಟ್ಟ ಹೋರಾಟ ನಡೆಸಿತು. ತಂಡದ ಮೊತ್ತ 35 ರನ್ ಆಗಿದ್ದಾಗ 12 ರನ್ ಗಳಿಸಿದ್ದ ಸ್ಟೀವನ್ ಟೇಲರ್, ನಸೀಮ್ ಶಾ ಬೌಲಿಂಗ್ನಲ್ಲಿ ಹೊರಬಿದ್ದರು. ಆ ಬಳಿಕ ಜೊತೆಯಾದ ಮೋನಾಂಕ್ ಪಟೇಲ್-ಆಂಡ್ರೀಸ್ ಗೌಸ್, ಬೌಲರ್ಸ್ಗೆ ಬೆಂಡೆತ್ತಿದರು. ನಿಧಾನಗತಿಯ ಪಿಚ್ನಲ್ಲಿ ಚಾಣಾಕ್ಷತೆ ಮತ್ತು ನಿರ್ಭಿತವಾಗಿ ರನ್ ಗಳಿಸಿ ಗಮನ ಸೆಳೆದರು. 10 ಓವರ್ಗಳಲ್ಲಿ 76 ರನ್ ಕಲೆಹಾಕಿದರು.
ಉಳಿದ 10 ಓವರ್ಗಳಲ್ಲಿ ಅಮೆರಿಕ ಗೆಲುವಿಗೆ 84 ಬೇಕಿತ್ತು. ಅವರ ಕೈಯಲ್ಲಿ 9 ವಿಕೆಟ್ಗಳಿದ್ದವು. ಯಾವುದೇ ಹಂತದಲ್ಲೂ ಆತಂಕಕ್ಕೆ ಒಳಗಾಗದೆ ಪಾಕಿಸ್ತಾನ ಬೌಲರ್ಗಳಿಗೆ ಪ್ರತಿರೋಧ ತೋರಿದರು. ಎಚ್ಚರಿಕೆಯ ಆಟವಾಡಿದ ಈ ಜೋಡಿ 2ನೇ ವಿಕೆಟ್ಗೆ 68 ರನ್ಗಳ ಪಾಲುದಾರಿಕೆ ಒದಗಿಸಿತು. ಮೋನಾಂಕ್ ಭರ್ಜರಿ ಅರ್ಧಶತಕ (50) ಸಿಡಿಸಿ ಪಾಕ್ಗೆ ಸೋಲಿನ ಭೀತಿ ಹೆಚ್ಚಿಸಿದರು. ಇದರ ಬೆನ್ನಲ್ಲೇ ಗೌಸ್ (35), ಮೋನಾಂಕ್ ಔಟಾದರು. ಈ ವೇಳೆ ಯುಎಸ್ಗೆ 35 ಎಸೆತಗಳಲ್ಲಿ 48 ರನ್ ಬೇಕಿತ್ತು.
ಸತತ ವಿಕೆಟ್ ಕಳೆದುಕೊಂಡ ನಂತರ ಕೊಂಚ ಎದೆಗುಂದಿದ ಅಮೆರಿಕ, ನಿಧಾನಗತಿಯ ಆಟಕ್ಕೆ ಒತ್ತು ಕೊಟ್ಟಿತು. ಅಂತಿಮ ಹಂತದಲ್ಲಿ ಸೂಪರ್ ಕಂಬ್ಯಾಕ್ ಮಾಡಿದ ಪಾಕ್ ಬೌಲರ್ಗಳಿಗೆ ಎದುರು ಕಳೆದ ಪಂದ್ಯದಲ್ಲಿ 10 ಸಿಕ್ಸರ್ ಚಚ್ಚಿದ್ದ ಆರೋನ್ ಜೊನ್ಸ್ ಮತ್ತು ನಿತೀಶ್ ಕುಮಾರ್ ಪ್ರತಿರೋಧ ತೋರಿದರು. ಕೊನೆಯ ಓವರ್ನಲ್ಲಿ 15 ರನ್ ಬೇಕಿತ್ತು. ಆದರೆ, ಈ ಓವರ್ ಎಸೆದ ಹ್ಯಾರಿಸ್ ರೌಫ್ ಬೌಲಿಂಗ್ ಅಮೆರಿಕ 14 ರನ್ ಗಳಿಸಿ ಸೂಪರ್ ಓವರ್ಗೆ ತಂದು ನಿಲ್ಲಿಸಿತು. ಕೊನೆಯ ಬಾಲ್ಗೆ 5 ರನ್ ಬೇಕಿದ್ದಾಗ ನಿತೀಶ್ ಕುಮಾರ್ ಬೌಂಡರಿ ಸಿಡಿಸಿದರು.
ಅಮೆರಿಕ ಬೌಲಿಂಗ್ಗೆ ತತ್ತರಿಸಿದ ಪಾಕಿಸ್ತಾನ
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ಪವರ್ಪ್ಲೇ ಮುಗಿಯುವುದರೊಳಗೆ ಮೂರು ವಿಕೆಟ್ ಕಳೆದುಕೊಂಡಿತು. ಯುಎಸ್ಎ ಬೌಲರ್ಗಳ ದಾಳಿಗೆ ಆಘಾತಕಾರಿ ಕುಸಿತ ಕಂಡಿತು. ಮೊಹಮ್ಮದ್ ರಿಜ್ವಾನ್ (9), ಉಸ್ಮಾನ್ ಖಾನ್ (3), ಫಕಾರ್ ಜಮಾನ್ (11) ಬೇಗನೇ ಔಟಾದರು. ಆಗ ತಂಡದ ಮೊತ್ತ 26/3. ತದನಂತರ ಒಂದಾದ ನಾಯಕ ಬಾಬರ್ ಅಜಮ್ ಮತ್ತು ಶಾದಾಬ್ ಖಾನ್ ತಂಡಕ್ಕೆ ಆಸರೆಯಾದರು. 4ನೇ ವಿಕೆಟ್ಗೆ 48 ಎಸೆತಗಳಲ್ಲಿ 72 ರನ್ಗಳ ಜೊತೆವಾಟವಾಡಿದರು.
ಇಬ್ಬರ ಸೊಗಸಾಟದ ನೆರವಿನಿಂದ ಪಾಕ್, ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಿಂದ ಹೊರಬಂತು. ಅದರಲ್ಲೂ ಶಾದಾಬ್ ಖಾನ್ ಬಿರುಸಿನ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು. ಉತ್ತಮವಾಗಿ ಸಾಗುತ್ತಿದ್ದ ವೇಳೆ ಮತ್ತೊಮ್ಮೆ ದಾಳಿಗಿಳಿದ ನೋಸ್ತುಶ್ ಕೆಂಜಿಗೆ, 25 ಎಸೆತಗಳಲ್ಲಿ 40 ರನ್ ಸಿಡಿಸಿದ್ದ ಶಾದಾಬ್ಗೆ ಡಗೌಟ್ ದಾರಿ ತೋರಿಸಿದರು. ಇವರ ಬೆನ್ನಲ್ಲೇ ಅಜಮ್ ಖಾನ್ ಡಕೌಟ್ಗೆ ಬಲಿಯಾದರೆ, ಜವಾಬ್ದಾರಿಯುತವಾಗಿ ಬ್ಯಾಟ್ ಬೀಸುತ್ತಿದ್ದ ಬಾಬರ್ ಅರ್ಧಶತಕದಂಚಿನಲ್ಲಿ ಔಟಾದರು.
ಬಾಬರ್ 43 ಎಸೆತಗಳಲ್ಲಿ 44 ರನ್ ಗಳಿಸಿದರೆ, ಕೊನೆಯಲ್ಲಿ ಇಫ್ತಿಕಾರ್ ಅಹ್ಮದ್ 18, ಶಾಹೀನ್ ಶಾ ಅಫ್ರಿದಿ 23 ರನ್ಗಳ ಕಾಣಿಕೆ ನೀಡಿದರು. ಹ್ಯಾರಿಸ್ ರೌಫ್ 3 ರನ್ ಸಿಡಿಸಿದರು. ಅಮೆರಿಕ ಪರ ನೋಸ್ತುಶ್ ಕೆಂಜಿಗೆ 3 ವಿಕೆಟ್ ಕಿತ್ತು ಮಿಂಚಿದರೆ, ನೇತ್ರಾವಲ್ಕರ್ 2 ವಿಕೆಟ್ ಉರುಳಿಸಿದರು. ಅಲಿ ಖಾನ್ ಮತ್ತು ಜಸ್ದೀಪ್ ಸಿಂಗ್ ತಲಾ ಒಬ್ಬರನ್ನು ಔಟ್ ಮಾಡಿದರು. ಅಂತಿಮವಾಗಿ ಪಾಕಿಸ್ತಾನ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಕಲೆ ಹಾಕಿತು.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ