ಟಿ20 ವಿಶ್ವಕಪ್: ಇಂಗ್ಲೆಂಡ್ vs ಯುಎಸ್ಎ ಸಂಭಾವ್ಯ ತಂಡ, ಬಾರ್ಬಡೋಸ್ ಪಿಚ್‌ ಹಾಗೂ ಹವಾಮಾನ ವರದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್: ಇಂಗ್ಲೆಂಡ್ Vs ಯುಎಸ್ಎ ಸಂಭಾವ್ಯ ತಂಡ, ಬಾರ್ಬಡೋಸ್ ಪಿಚ್‌ ಹಾಗೂ ಹವಾಮಾನ ವರದಿ

ಟಿ20 ವಿಶ್ವಕಪ್: ಇಂಗ್ಲೆಂಡ್ vs ಯುಎಸ್ಎ ಸಂಭಾವ್ಯ ತಂಡ, ಬಾರ್ಬಡೋಸ್ ಪಿಚ್‌ ಹಾಗೂ ಹವಾಮಾನ ವರದಿ

ಟಿ20 ವಿಶ್ವಕಪ್ ಸೂಪರ್‌ 8 ಪಂದ್ಯದಲ್ಲಿ ಭಾನುವಾರ ಇಂಗ್ಲೆಂಡ್ ಮತ್ತು ಯುಎಸ್ಎ ತಂಡಗಳು ಎದುರಾಗುತ್ತಿವೆ. ಪಂದ್ಯದ ಪಿಚ್‌, ಹವಾಮಾನ ವರದಿ ಹಾಗೂ ಸಂಭಾವ್ಯ ಆಡುವ ಬಳಗದ ವಿವರ ಇಲ್ಲಿದೆ.

ಇಂಗ್ಲೆಂಡ್ vs ಯುಎಸ್ಎ ಸಂಭಾವ್ಯ ತಂಡ, ಪಿಚ್‌ ಹಾಗೂ ಹವಾಮಾನ ವರದಿ
ಇಂಗ್ಲೆಂಡ್ vs ಯುಎಸ್ಎ ಸಂಭಾವ್ಯ ತಂಡ, ಪಿಚ್‌ ಹಾಗೂ ಹವಾಮಾನ ವರದಿ (AFP)

ಟಿ20 ವಿಶ್ವಕಪ್ 2024ರಲ್ಲಿ ಇಂಗ್ಲೆಂಡ್ ಮತ್ತು ಯುಎಸ್‌ಎ ತಂಡಗಳು ಮೊದಲ ಪಂದ್ಯವಾಡಲು ಸಜ್ಜಾಗಿವೆ. ಪ್ರಸಕ್ತ ಆವೃತ್ತಿಯ ಪಂದ್ಯಾವಳಿಯ 47ನೇ ಪಂದ್ಯವು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಸೆಮಿಫೈನಲ್‌ ಪ್ರವೇಶಿಸುವ ಆಸೆ ಜೀವಂತವಾಗಿರಿಸಿಕೊಳ್ಳಲು ಇಂಗ್ಲೆಂಡ್‌ ತಂಡ ಈ ಪಂದ್ಯದಲ್ಲಿ ಗೆಲ್ಲೇಬೇಕಾದ ಒತ್ತಡದಲ್ಲಿದೆ. ಅತ್ತ, ಸೂಪರ್‌ 8 ಸುತ್ತಿನಲ್ಲಿ ಈಗಾಗಲೇ 2 ಪಂದ್ಯಗಳಲ್ಲಿ ಸೋತಿರುವ ಅಮೆರಿಕ, ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಮೊನಾಂಕ್ ಪಟೇಲ್ ನಾಯಕತ್ವದಲ್ಲಿ ಗುಂಪು ಹಂತದಲ್ಲಿ ಅಮೋಘ ಪ್ರದರ್ಶನ ನೀಡಿ ಸೂಪರ್‌ 8ರ ಹಂತಕ್ಕೆ ಲಗ್ಗೆ ಹಾಕಿರುವ ಯುಎಸ್‌ ತಂಡವನ್ನು ಯಾವುದೇ ಕಾರಣಕ್ಕು ಕ್ಷುಲ್ಲಕ ಎಂದು ಪರಿಗಣಿಸುವಂತಿಲ್ಲ. ಹೀಗಾಗಿ ಆಂಗ್ಲರಿಗೆ ಕಠಿಣ ಪೈಪೋಟಿ ನೀಡಲು ಯುಎಸ್‌ ಸಜ್ಜಾಗಿದೆ.

ಸೂಪರ್ 8ರ ಸುತ್ತಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಸೋತಿರುವ ಯುಎಸ್‌, ಅದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧ 18 ರನ್‌ಗಳಿಂದ ಸೋತಿತ್ತು.

ಜೋಸ್ ಬಟ್ಲರ್ ನೇತೃತ್ವದಲ್ಲಿ ಇಂಗ್ಲೆಂಡ್‌ ತಂಡವು ಮಿಶ್ರ ಫಲಿತಾಂಶ ಎದುರಿಸಿದೆ. ಸೂಪರ್‌ 8 ಹಂತದ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಆದರೆ, ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳಿಂದ ಮುಗ್ಗರಿಸಿತು. ಹೀಗಾಗಿ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಸಿಲುಕಿದೆ.

ಬಾರ್ಬಡೋಸ್ ಹವಾಮಾನ ವರದಿ

ವೆಸ್ಟ್ ಇಂಡೀಸ್‌ನ ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್ ನಗರದಲ್ಲಿ ಯುಎಸ್‌ಎ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ನಡೆಯುತ್ತದೆ. ವರದಿಗಳ ಪ್ರಕಾರ ಜೂನ್ 23ರ ಭಾನುವಾರ ನಗರದ ತಾಪಮಾನವು ಹಗಲಿನ ವೇಳೆ 31 ಡಿಗ್ರಿ ಸೆಲ್ಸಿಯಸ್ ಮತ್ತು ರಾತ್ರಿ ವೇಳೆ 27 ಡಿಗ್ರಿ ಸೆಲ್ಸಿಯಸ್ ಇರಲಿದೆ. ಭಾರತದಲ್ಲಿ ರಾತ್ರಿ ಪಂದ್ಯ ಪ್ರಸಾರವಾದರೂ, ಅಮೆರಿಕದಲ್ಲಿ ಅದು ಬೆಳಗ್ಗಿನ ಸಮಯ. ನಗರದಲ್ಲಿ ಮಳೆಯಾಗುವ ಸಾಧ್ಯತೆ ಶೇ.55ರಷ್ಟು ಇದೆ.

ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂ ಪಿಚ್ ವರದಿ

ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ಈವರೆಗೆ 49 ಟಿ20 ಪಂದ್ಯಗಳು ನಡೆದಿವೆ. ಇವುಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳು 31 ಪಂದ್ಯಗಳಲ್ಲಿ ಗೆದ್ದರೆ, ಚೇಸಿಂಗ್ ಮಾಡಿದ ತಂಡಗಳು 15 ಪಂದ್ಯಗಳಲ್ಲಿ ಮಾತ್ರ ಗೆದ್ದಿವೆ. ಕ್ರೀಡಾಂಗಣದಲ್ಲಿ ಮೊದಲ ಇನ್ನಿಂಗ್ಸ್ ಸರಾಸರಿ ಮೊತ್ತ 139 ರನ್. 2ನೇ ಇನ್ನಿಂಗ್ಸ್ ಸರಾಸರಿ 125 ರನ್‌. ಇದೇ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ಗರಿಷ್ಠ 224 ರನ್‌ ಕಲೆ ಹಾಕಿದೆ. ಹೀಗಾಗಿ ಮೈದಾನವು ಬ್ಯಾಟರ್‌ಗಳಿಗೆ ನೆರವಾಗುತ್ತದೆ. ಈ ಪಿಚ್ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಸಮನಾಗಿ ನೆರವಾಗುತ್ತದೆ. ಬೌಲಿಂಗ್ ಮಾಡುವಾಗ ವೇಗಿಗಳು ಉತ್ತಮ ಬೌನ್ಸ್ ಮತ್ತು ವೇಗ ಪಡೆಯಲು ನೆರವಾಗುತ್ತದೆ. ಪಂದ್ಯ ಮುಂದುವರೆದಂತೆ ಸ್ಪಿನ್ನರ್‌ಗಳು ಕೂಡಾ ಮೇಲುಗೈ ಸಾಧಿಸಬಹುದು.

ಯುಎಸ್‌ಎ ಸಂಭಾವ್ಯ ತಂಡ

ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ನಾಯಕ ಮತ್ತು ವಿಕೆಟ್‌ ಕೀಪರ್), ಆಂಡ್ರೀಸ್ ಗೌಸ್, ಆರನ್ ಜೋನ್ಸ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ನಿತೀಶ್ ಕುಮಾರ್, ಅಲಿ ಖಾನ್, ಸೌರಭ್ ನೇತ್ರವಲ್ಕರ್, ನೋಸ್ತುಶ್ ಕೆಂಜಿಗೆ, ಜಸ್ದೀಪ್ ಸಿಂಗ್.

ಇಂಗ್ಲೆಂಡ್ ಸಂಭಾವ್ಯ ತಂಡ

ಫಿಲ್ ಸಾಲ್ಟ್, ಜಾನಿ ಬೈರ್‌ಸ್ಟೋ, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟನ್, ಸ್ಯಾಮ್ ಕರಾನ್, ಜೋಸ್ ಬಟ್ಲರ್ (ನಾಯಕ‌ ಮತ್ತು ವಿಕೆಟ್‌ ಕೀಪರ್) ಜೋಫ್ರಾ ಆರ್ಚರ್, ಆದಿಲ್ ರಶೀದ್, ಕ್ರಿಸ್ ಜೋರ್ಡಾನ್, ಮಾರ್ಕ್ ವುಡ್.

Whats_app_banner