ಕನ್ನಡ ಸುದ್ದಿ  /  ಕ್ರಿಕೆಟ್  /  ಅಮೆರಿಕ-ಐರ್ಲೆಂಡ್ ಪಂದ್ಯ ಮಳೆಯಿಂದ ರದ್ದು; ಸೂಪರ್-8 ಪ್ರವೇಶಿಸಿ ಯುಎಸ್​ಎ ದಾಖಲೆ, ಲೀಗ್​ನಿಂದಲೇ ಪಾಕಿಸ್ತಾನ ಔಟ್

ಅಮೆರಿಕ-ಐರ್ಲೆಂಡ್ ಪಂದ್ಯ ಮಳೆಯಿಂದ ರದ್ದು; ಸೂಪರ್-8 ಪ್ರವೇಶಿಸಿ ಯುಎಸ್​ಎ ದಾಖಲೆ, ಲೀಗ್​ನಿಂದಲೇ ಪಾಕಿಸ್ತಾನ ಔಟ್

USA vs Ireland: ಐರ್ಲೆಂಡ್ ಮತ್ತು ಅಮೆರಿಕ ನಡುವಿನ ಟಿ20 ವಿಶ್ವಕಪ್ 2024 ಪಂದ್ಯ ಮಳೆಯ ಕಾರಣದಿಂದ ರದ್ದಾಯಿತು. ಇದರೊಂದಿಗೆ ಯುನೈಟೆಡ್​ ಸ್ಟೇಟ್ಸ್ ಸೂಪರ್​​-8 ಹಂತಕ್ಕೆ ಲಗ್ಗೆ ಇಟ್ಟರೆ, ಬಲಿಷ್ಠ ಪಾಕಿಸ್ತಾನ ಲೀಗ್​ನಿಂದ ಹೊರಬಿದ್ದಿತು.

ಅಮೆರಿಕ-ಐರ್ಲೆಂಡ್ ಪಂದ್ಯ ಮಳೆಯಿಂದ ರದ್ದು; ಸೂಪರ್-8 ಪ್ರವೇಶಿಸಿ ಯುಎಸ್​ಎ ದಾಖಲೆ, ಲೀಗ್​ನಿಂದಲೇ ಪಾಕಿಸ್ತಾನ ಔಟ್
ಅಮೆರಿಕ-ಐರ್ಲೆಂಡ್ ಪಂದ್ಯ ಮಳೆಯಿಂದ ರದ್ದು; ಸೂಪರ್-8 ಪ್ರವೇಶಿಸಿ ಯುಎಸ್​ಎ ದಾಖಲೆ, ಲೀಗ್​ನಿಂದಲೇ ಪಾಕಿಸ್ತಾನ ಔಟ್

2022ರಲ್ಲಿ ರನ್ನರ್​ಅಪ್​ ಆಗಿದ್ದ ಪಾಕಿಸ್ತಾನ ತಂಡದ 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ​ ತನ್ನ 2ನೇ ಟ್ರೋಫಿ ಕನಸು ಭಗ್ನಗೊಂಡಿತು. ಬಾಬರ್ ಅಜಮ್ ಪಡೆ ಪ್ರಸಕ್ತ ಟೂರ್ನಿಯಲ್ಲಿ ಲೀಗ್​​ನಿಂದಲೇ ಹೊರ ಬಿದ್ದಿದ್ದು, ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಇಂದಿನ (ಜೂನ್ 14) ಅಮೆರಿಕ ಮತ್ತು ಐರ್ಲೆಂಡ್ ನಡುವಿನ ಪಂದ್ಯವು ಅತಿಯಾದ ಮಳೆಯ ಕಾರಣದಿಂದ ಪಂದ್ಯ ರದ್ದಾಗಿದೆ. ಇದರೊಂದಿಗೆ ಪಾಕಿಸ್ತಾನದ ಜೊತೆಗೆ ಐರ್ಲೆಂಡ್ ಮತ್ತು ಕೆನಡಾ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ.

ಫ್ಲೋರಿಡಾ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ಈ ಪಂದ್ಯವು ಒಂದೂ ಎಸೆತವನ್ನೂ ಕಾಣದೆ ರದ್ದಾಯಿತು. ಒಂದು ವೇಳೆ ಮಳೆ ಬಾರದೆ ಪಂದ್ಯ ಜರುಗಿ ಅಮೆರಿಕ ಸೋತಿದ್ದರೆ, ಪಾಕಿಸ್ತಾನ ಸೂಪರ್​-8 ಪ್ರವೇಶಿಸಲು ಹೆಚ್ಚಿನ ಅವಕಾಶ ಇರುತ್ತಿತ್ತು. ಆದರೆ, ಮಳೆ ಕೊಟ್ಟ ಏಟಿಗೆ ಮೊದಲ ಬಾರಿಗೆ ಪಾಕಿಸ್ತಾನ ಹೊಡೆತ ತಿಂದಿದೆ. ಆದರೆ ಸೂಪರ್​​-8 ಲಗ್ಗೆ ಇಡುತ್ತಿದ್ದಂತಲೇ ಅಮೆರಿಕ ಐತಿಹಾಸಿಕ ದಾಖಲೆ ಬರೆಯಿತು. ಪಾಕ್ ವಿರುದ್ಧ ಫ್ಯಾನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅತ್ಯುತ್ತಮ ಬೌಲಿಂಗ್ ಮತ್ತು ಬ್ಯಾಟಿಂಗ್​ ವಿಭಾಗ ಹೊಂದಿದ್ದರೂ ಸಾಂಘಿಕ ಪ್ರದರ್ಶನ ನೀಡಲು ವಿಫಲವಾದ ಪಾಕಿಸ್ತಾನ ಕ್ರಿಕೆಟ್ ತಂಡ, ತನ್ನ ಅದೃಷ್ಟದಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿತು. ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋತು 3ನೇ ಪಂದ್ಯದಲ್ಲಿ ಗೆದ್ದಿದ್ದ ಪಾಕ್, 4ನೇ ಪಂದ್ಯದಲ್ಲೂ ಗೆಲ್ಲುವ ವಿಶ್ವಾಸ ಹೊಂದಿತ್ತು. ಪ್ರಸ್ತುತ 2 ಸೋಲು, 1 ಗೆಲುವಿನೊಂದಿಗೆ 2 ಅಂಕ ಪಡೆದಿದ್ದ ಪಾಕ್, ತನ್ನ ಕೊನೆಯ ಮ್ಯಾಚ್​​​ನಲ್ಲಿ ಜಯಿಸಿದರೂ 4 ಅಂಕ ಪಡೆಯುತ್ತಿತ್ತು.

ಟ್ರೆಂಡಿಂಗ್​ ಸುದ್ದಿ

ಆದರೆ ಅಮೆರಿಕ ಸತತ ಎರಡು ಜಯ ಸಾಧಿಸಿ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಸೋತಿತ್ತು. ಆದರೆ ಪಾಕ್ ತಂಡವನ್ನು ಮಣಿಸಿ ಐತಿಹಾಸಿಕ ಸಾಧನೆ ಮಾಡಿತ್ತು. ಆದರೀಗ ಪಾಕಿಸ್ತಾನವನ್ನು ಸೂಪರ್​-8 ರೇಸ್​ನಿಂದ ಹೊರದಬ್ಬಿದ ಯುಎಸ್​​ಎ, ಮತ್ತೊಮ್ಮೆ ಐತಿಹಾಸಿಕ ದಾಖಲೆ ಬರೆಯಿತು. ಅಮೆರಿಕ ಆಡಿದ 4 ಪಂದ್ಯಗಳಲ್ಲಿ 2 ಗೆಲುವು, 1 ಸೋಲು, 1 ರದ್ದಾಗಿದ್ದು, 5 ಅಂಕ ಪಡೆದಿದೆ. ಆದರೆ, ಪಾಕ್ ತನ್ನ ಮುಂದಿನ ಪಂದ್ಯ ಗೆದ್ದರೂ 4 ಅಂಕ ಪಡೆಯಲಷ್ಟೆ ಸಾಧ್ಯ.

ಯಾವ್ಯಾವ ತಂಡಗಳು ಸೂಪರ್​-8ಕ್ಕೆ ಪ್ರವೇಶಿಸಿವೆ?

ಲೀಗ್ ಮುಕ್ತಾಯದ ಹಂತ ತಲುಪಿದ್ದು, ಒಟ್ಟು 6 ತಂಡಗಳು ಸೂಪರ್​-8ಕ್ಕೆ ಲಗ್ಗೆ ಇಟ್ಟಿವೆ. ಇನ್ನೆರಡು ಸ್ಥಾನಕ್ಕೆ ಬಾಂಗ್ಲಾದೇಶ-ಇಂಗ್ಲೆಂಡ್ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ. ಎ ಗುಂಪಿಯನಲ್ಲಿ ಭಾರತ ಮತ್ತು ಅಮೆರಿಕ, ಬಿ ಗುಂಪಿನಲ್ಲಿ ಆಸ್ಟ್ರೇಲಿಯಾ ಅರ್ಹತೆ ಪಡೆದಿದೆ. ಮತ್ತೊಂದು ಸ್ಥಾನಕ್ಕೆ ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಸಿ ಗುಂಪಿಯನಲ್ಲಿ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್​​ ತಂಡಗಳು ಅರ್ಹತೆ ಪಡೆದಿವೆ. ಡಿ ಗುಂಪಿನಲ್ಲಿ ಸೌತ್ ಆಫ್ರಿಕಾ ಸೂಪರ್​​-8ಕ್ಕೆ ಎಂಟ್ರಿಕೊಟ್ಟಿದ್ದು, ಬಾಂಗ್ಲಾ ಎರಡನೇ ತಂಡವಾಗಿ ಅವಕಾಶ ನಿರೀಕ್ಷೆ ಇದೆ.

ಕಳೆದ ವರ್ಷ 2023ರ ಏಕದಿನ ವಿಶ್ವಕಪ್​​ನಲ್ಲೂ ಸೆಮಿಫೈನಲ್ ಪ್ರವೇಶಿಸಲು ವಿಫಲವಾದ ಪಾಕಿಸ್ತಾನ ತಂಡ, ಈ ಬಾರಿ ಸೂಪರ್​-8 ಪ್ರವೇಶಿಸಲು ಸಾಧ್ಯವಾಗಲಿಲ್ಲ. 2009ರಲ್ಲಿ ಚಾಂಪಿಯನ್ ಆಗಿದ್ದ ಪಾಕ್ 2022ರಲ್ಲಿ ಫೈನಲ್ ತಲುಪಿತ್ತು. 2007ರ ಟಿ20 ವಿಶ್ವಕಪ್​ನಲ್ಲೂ ರನ್ನರ್​​ಅಪ್ ಆಗಿತ್ತು. ಇದೇ ಮೊದಲ ಬಾರಿಗೆ ಗುಂಪು ಹಂತದಿಂದ ಹೊರಬಿದ್ದಿರಲಿಲ್ಲ ಪಾಕಿಸ್ತಾನ. ತಂಡದ ಕಳಪೆ ಪ್ರದರ್ಶನದ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ