ಏಕದಿನ ಸರಣಿಗೂ ಮುನ್ನ ಭಾರತ ತಂಡದಲ್ಲಿ ಹಠಾತ್ ಬದಲಾವಣೆ; ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಅಬ್ಬರಿಸಿದ ಆಟಗಾರ ಸೇರ್ಪಡೆ
ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ 14 ವಿಕೆಟ್ ಕಬಳಿಸಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ವರುಣ್ ಚಕ್ರವರ್ತಿ ಅವರನ್ನು ಇದೀಗ ಏಕದಿನ ಸರಣಿಗೆ ಭಾರತ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ.

ನವದೆಹಲಿ (ಫೆ 4): ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ 14 ವಿಕೆಟ್ ಉರುಳಿಸುವ ಮೂಲಕ ಅದ್ಭುತ ಪ್ರದರ್ಶನದ ತೋರಿ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರನ್ನು ಇದೀಗ ಮೂರು ಪಂದ್ಯಗಳ ಏಕದಿನ ಸರಣಿಗೂ ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಆರಂಭಕ್ಕೆ ಎರಡು ದಿನಗಳು ಬಾಕಿ ಇರುವಾಗ ಇಂದು (ಫೆ 4) ಭಾರತದ ತಂಡಕ್ಕೆ ಆಯ್ಕೆಗೊಳಿಸಿ ಬಿಸಿಸಿಐ ಅಧಿಕೃತವಾಗಿ ಆದೇಶ ಹೊರಡಿಸಿದೆ.
ವರುಣ್ ಚಕ್ರವರ್ತಿ ಇದೇ ಮೊದಲ ಬಾರಿಗೆ ಏಕದಿನ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಆದರೆ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ 14 ವಿಕೆಟ್ ಕಬಳಿಸಿದ ಅವರ ಪ್ರದರ್ಶನ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ 18 ವಿಕೆಟ್ ಕಬಳಿಸಿದ್ದರಿಂದ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ವಿಸಿಎ ಕ್ರೀಡಾಂಗಣದಲ್ಲಿ ತಂಡದ ತರಬೇತಿ ಅವಧಿಯಲ್ಲಿ ನಾಗ್ಪುರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ಚಕ್ರವರ್ತಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಅವಕಾಶ ಪಡೆಯುತ್ತಾರಾ ಎಂಬ ಪ್ರಶ್ನೆ ಹುಟ್ಟು ಹಾಕಿದೆ.
‘ಪುರುಷರ ಆಯ್ಕೆ ಸಮಿತಿಯು ಮುಂಬರುವ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ವರುಣ್ ಚಕ್ರವರ್ತಿಯನ್ನು ಭಾರತ ತಂಡಕ್ಕೆ ಸೇರಿಸಿದೆ. ವರುಣ್ ನಾಗ್ಪುರದಲ್ಲಿ ಏಕದಿನ ತಂಡವನ್ನು ಸೇರಿಕೊಂಡಿದ್ದಾರೆ’ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವರುಣ್ ಸೇರ್ಪಡೆಯೊಂದಿಗೆ ಭಾರತ ತಂಡ ಸ್ಪಿನ್ನರ್ಗಳ ಬಲವನ್ನು ಹೆಚ್ಚಿಸಿಕೊಂಡಿದೆ. ಇದರೊಂದಿಗೆ ಮೂವರು ಆಲ್ರೌಂಡರ್ಗಳು ಸೇರಿ ಐವರು ಸ್ಪಿನ್ನರ್ಗಳು ತಂಡದಲ್ಲಿ ಸ್ಥಾನ ಪಡೆದಂತಾಗಿದೆ. ವರುಣ್ ಜೊತೆಗೆ ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ತಂಡದಲ್ಲಿದ್ದಾರೆ. ಆದರೆ ಯಾರಿಗೆ ಅವಕಾಶ ಸಿಗುತ್ತದೆ ಎನ್ನುವುದು ಸದ್ಯದ ಕುತೂಹಲ. ಐವರು ಸ್ಪಿನ್ನರ್ಗಳನ್ನು ತಂಡಕ್ಕೆ ಆಯ್ಕೆ ಮಾಡಿರುವುದರ ಮರ್ಮವಾದರೂ ಏನು? ಎಂಬುದು ಕ್ರಿಕೆಟ್ ತಜ್ಞರ ಪ್ರಶ್ನೆ.
ವರುಣ್ಗೆ ಅವಕಾಶ ಖಚಿತ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ ಯಾವುದೇ ಏಕದಿನ ಪಂದ್ಯಗಳನ್ನು ಆಡಿಲ್ಲವಾದರೂ ಇಂಗ್ಲೆಂಡ್ ವಿರುದ್ಧ ನೀಡಿದ ಪ್ರದರ್ಶನವನ್ನು ಪರಿಗಣಿಸಿ ಮತ್ತೆ ಆಂಗ್ಲರಿಗೆ ಕಂಟಕವಾಗಲೆಂದು ವರುಣ್ಗೆ ಅವಕಾಶ ನೀಡುವ ನಿರೀಕ್ಷೆ ಇದೆ. ಚಾಂಪಿಯನ್ಸ್ ಟ್ರೋಫಿಗೂ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಬೇಕು ಎನ್ನುವ ಕೂಗು ಎದ್ದಿದೆ. ಒಂದು ವೇಳೆ ಬುಮ್ರ ಅಲಭ್ಯರಾದರೆ ವರುಣ್ರನ್ನೇ ಆಯ್ಕೆ ಮಾಡಬಹುದು ಹೇಳಲಾಗುತ್ತಿದೆ. ಆದರೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.
33ರ ಹರೆಯದ ವರುಣ್, ತಮಿಳುನಾಡು ಪರ 23 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ, 21.15 ಸರಾಸರಿಯಲ್ಲಿ 59 ವಿಕೆಟ್ಗಳನ್ನು ಪಡೆದಿದ್ದಾರೆ. 3 ಬಾರಿ ಐದು ವಿಕೆಟ್ಗಳ ಗೊಂಚಲು ಪಡೆದಿದ್ದಾರೆ. ಅವುಗಳಲ್ಲಿ ಒಂದು ವಡೋದರಾದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧದ ತಂಡದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತೆಗೆದುಕೊಳ್ಳಲಾಗಿದೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತದ ಪರಿಷ್ಕೃತ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.
