ಟಿ20 ವಿಶ್ವಕಪ್‌ಗೆ ಸೂರ್ಯ, ರಿಂಕು ಜೊತೆ ಸಿಎಸ್‌ಕೆ ಸ್ಟಾರ್ ಬೇಕೆಂದ ಮಾಜಿ ಕ್ರಿಕೆಟಿಗ; ಹಾರ್ದಿಕ್ ಪಾಂಡ್ಯ ಹೆಸರೇ ಇಲ್ಲ!
T20 World Cup 2024: ಮುಂಬರುವ ಟಿ20 ವಿಶ್ವಕಪ್ ಪಂದ್ಯಾವಳಿಗೆ ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಇರಲ್ಲ ಎಂದು ವೆಂಕಟೇಶ್ ಪ್ರಸಾದ್ ಸುಳಿವು ನೀಡಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಗೆ ಸಲಹೆಯೊಂದನ್ನು ನೀಡಿದ್ದಾರೆ.
ಪ್ರಸ್ತುತ 2024ರ ಆವೃತ್ತಿಯ ಐಪಿಎಲ್ ಪಂದ್ಯಾವಳಿ ನಡೆಯುತ್ತಿದೆ. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಭಾರತದ ಆಟಗಾರರು ನೀಡುವ ಪ್ರದರ್ಶನದ ಮೇಲೆ ಬಿಸಿಸಿಐ ಕಣ್ಣಿಟ್ಟಿದೆ. ಟೂರ್ನಿಯ ಮೊದಲ ಹಂತದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಬಂಪರ್ ಆಫರ್ ಲಭಿಸಲಿದೆ. ಮುಂದಿನ ಜೂನ್ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಗೆ ಭಾರತದ ಅಂತಿಮ 15 ಆಟಗಾರರ ತಂಡವನ್ನು ಆಯ್ಕೆ ಮಾಡಲು, ಬಿಸಿಸಿಐ ಆಯ್ಕೆ ಸಮಿತಿಯು ಐಪಿಎಲ್ ಟೂರ್ನಿಯನ್ನು ಪ್ರಮುಖ ಮಾನದಂಡವಾಗಿಸಿದೆ. ಈಗಾಗಲೇ ಪಂದ್ಯಾವಳಿಯ ಕೆಲ ಪಂದ್ಯಗಳು ಮುಗಿದ್ದಿದ್ದು, ಭಾರತ ತಂಡವು ಹೇಗಿರಬೇಕು ಎಂಬುದರ ಕುರಿತು ಕೆಲವು ತಜ್ಞರು ಹಾಗೂ ಅನುಭವಿ ಕ್ರಿಕೆಟಿಗರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಕೂಡಾ, ಇದೇ ವಿಷಯದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಚುಟುಕು ವಿಶ್ವಕಪ್ ಪಂದ್ಯಾವಳಿಗೆ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ತಂಡದಿಂದ ನಿರ್ಲಕ್ಷಿಸಬಹುದು ಎಂದು ಅವರು ಸುಳಿವು ನೀಡಿದ್ದಾರೆ.
ಈಗಾಗಲೇ ಕೆಲವೊಬ್ಬ ಆಟಗಾರರು ವಿಶ್ವಕಪ್ ತಂಡದಲ್ಲಿರುವುದು ಬಹುತೇಕ ಖಚಿತವಾಗಿದೆ. ಅಂಥವರಲ್ಲಿ ಶಿವಂ ದುಬೆ ಕೂಡಾ ಒಬ್ಬರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ 160ರ ಸ್ಟ್ರೈಕ್ ರೇಟ್‌ನಲ್ಲಿ ಈವರೆಗೆ 176 ರನ್ ಗಳಿಸಿರುವ ದುಬೆ, ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ಅರ್ಹತೆ ತೋರಿಸಿಕೊಂಡಿದ್ದಾರೆ. ದುಬೆ ಪ್ರದರ್ಶನದಿಂದ ಪ್ರಭಾವಿತರಾದ ಪ್ರಸಾದ್, ಅವರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡುವಂತೆ ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರನ್ನು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ, ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ಅವರೊಂದಿಗೆ ಆಡುವ ಬಳಗದಲ್ಲಿ ಸ್ಥಾನ ಕೊಡುವಂತೆ ಒತ್ತಾಯಿಸಿದ್ದಾರೆ.
54 ವರ್ಷದ ಮಾಜಿ ಆಟಗಾರನ ಸಲಹೆಯ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರಿಗೆ ಭಾರತದ ಆಡುವ ಬಳಗದಲ್ಲಿ ಸ್ಥಾನವಿಲ್ಲ ಎಂದು ತಿಳಿಯುತ್ತದೆ. ಏಕೆಂದರೆ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಇರುವುದು ಖಚಿತವಾಗಿರುವುದರಿಂದ, ತಂಡದ ಮ್ಯಾನೇಜ್ಮೆಂಟ್ ಈಗ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಸ್ಥಾನದ ಬಗ್ಗೆ ಮಾತ್ರ ಯೋಚಿಸುತ್ತಿದೆ ಎಂದು ಕನ್ನಡಿಗ ಹೇಳಿದ್ದಾರೆ.
ಇದನ್ನೂ ಓದಿ | ಪಂದ್ಯದ ಮೊದಲ ಎಸೆತದಲ್ಲೇ ಔಟಾಗಿ ಕಳಪೆ ದಾಖಲೆಗೆ ಕಾರಣರಾದ ಫಿಲ್ ಸಾಲ್ಟ್; ಸಿಎಸ್‌ಕೆ ಪರ ತುಷಾರ್ ದೇಶಪಾಂಡೆ ರೆಕಾರ್ಡ್
“ಸ್ಪಿನ್ನರ್‌ಗಳ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ಸಾಮರ್ಥ್ಯವಿರುವ ಶಿವಂ ದುಬೆ, ಅತ್ಯುತ್ತಮ ಟಿ20 ಬ್ಯಾಟರ್ ಆಗಿರುವ ಸೂರ್ಯ ಮತ್ತು ಅಸಾಧಾರಣ ಫಿನಿಶಿಂಗ್ ಸಾಮರ್ಥ್ಯಕ್ಕಾಗಿ ರಿಂಕು ಸಿಂಗ್ ಆಯ್ಕೆಯಾಗಬೇಕು. ಟಿ20 ವಿಶ್ವಕಪ್ ಆಡುವ ಬಳಗದಲ್ಲಿ ಈ ಮೂವರಿಗೆ ಸ್ಥಾನ ನೀಡಿದರೆ ಅದು ಉತ್ತಮವಾಗಿರುತ್ತದೆ. ವಿರಾಟ್ ಮತ್ತು ರೋಹಿತ್ ಅವರೊಂದಿಗೆ, ಒಬ್ಬ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಸ್ಥಾನವಷ್ಟೇ ತುಂಬಬೇಕಿದೆ” ಎಂದು ವೆಂಕಿ ಟ್ವೀಟ್ ಮಾಡಿದ್ದಾರೆ.
ಏಪ್ರಿಲ್ ಕೊನೆಯ ವಾರದಲ್ಲಿ ತಂಡ ಪ್ರಕಟ
ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಏಪ್ರಿಲ್ ಕೊನೆಯ ವಾರದಲ್ಲಿ ಬಿಸಿಸಿಐ ಭಾರತದ ತಂಡವನ್ನು ಪ್ರಕಟಿಸುವ ಸಾಧ್ಯತೆಯಿದೆ. ಐಸಿಸಿ ನಿಗದಿಪಡಿಸಿರುವಂತೆ, ವಿಶ್ವಕಪ್‌ಗೆ ತಂಡಗಳ ಪಟ್ಟಿಯನ್ನು ಸಲ್ಲಿಸಲು ಮೇ 1 ಕೊನೆಯ ದಿನಾಂಕವಾಗಿದೆ.