ಕನ್ನಡ ಸುದ್ದಿ  /  Cricket  /  Vidarbha Wins Against Karnataka In 1st Quarter Final Of Ranji Trophy 2024 Vidarbha Vs Karnataka Mayank Agarwal Jra

ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ ತಂಡಕ್ಕೆ ಸೋಲು; ಮಯಾಂಕ್‌ ಬಳಗ ಮಣಿಸಿ ಸೆಮಿಫೈನಲ್‌ ಲಗ್ಗೆ ಇಟ್ಟ ವಿದರ್ಭ

Vidarbha vs Karnataka: ರಣಜಿ ಟ್ರೋಫಿಯ ಮೊದಲನೇ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡದ ವಿರುದ್ಧ ವಿದರ್ಭ ಭರ್ಜರಿ ಜಯ ಗಳಿಸಿದೆ. 127 ರನ್‌ಗಳಿಂದ ಗೆದ್ದ ವಿದರ್ಭ ಸೆಮಿಫೈನಲ್‌ ಪ್ರವೇಶಿಸಿದೆ. ಮಯಾಂಕ್‌ ಅಗರ್ವಾಲ್‌ ನೇತೃತ್ವದ ಕರ್ನಾಟಕ ಟೂರ್ನಿಯಿಂದ ಹೊರಬಿದ್ದಿದೆ.

ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ ತಂಡಕ್ಕೆ ಸೋಲು
ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ ತಂಡಕ್ಕೆ ಸೋಲು (PTI)

ರಣಜಿ ಟ್ರೋಫಿಯ ಮೊದಲನೇ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡ ಮುಗ್ಗರಿಸಿದೆ. ವಿದರ್ಭ ವಿರುದ್ಧ (Vidarbha vs Karnataka) 127 ರನ್‌ಗಳಿಂದ ಸೋತ ಮಯಾಂಕ್‌ ಅಗರ್ವಾಲ್‌ ಬಳಗವು ಟೂರ್ನಿಯಿಂದ ಹೊರಬಿದ್ದಿದೆ. ಅತ್ತ ಭರ್ಜರಿ ಗೆಲುವಿನೊಂದಿಗೆ ಅಕ್ಷಯ್‌ ವಾಡ್ಕರ್‌ ನೇತೃತ್ವದ ವಿದರ್ಭ ತಂಡ ಸೆಮಿಫೈನಲ್‌ ಪಂದ್ಯಕ್ಕೆ ಲಗ್ಗೆ ಇಟ್ಟಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ವಿದರ್ಭ 460 ರನ್‌ಗಳ ಬೃಹತ್‌ ಮೊತ್ತ ಕಲೆ ಹಾಕಿತು. ಅಥರ್ವ ಟೈಡೆ ಶತಕ ಸಿಡಿಸಿದರೆ, ಯಶ್‌ ರಾಥೋಡ್‌ ಹಾಗೂ ಕರುಣ್‌ ನಾಯರ್‌ ಶತಕದ ಹೊಸ್ತಿಲಲ್ಲಿ ಔಟಾದರು. ವಿದರ್ಭದ ಬೃಹತ್‌ ಮೊತ್ತಕ್ಕೆ ಪ್ರತಿಯಾಗಿ ಕರ್ನಾಟಕ ತಂಡ 90.3 ಓವರ್‌ಗಳಲ್ಲಿ 286 ರನ್‌ ಗಳಿಸಲಷ್ಟೇ ಶಕ್ತವಾಯ್ತು. ಘಟಾನುಘಟಿ ಆಟಗಾರರ ವೈಫಲ್ಯದಿಂದಾಗಿ ಮಯಾಂಕ್‌ ಬಳಗವು ಮೊದಲ ಇನಿಂಗ್ಸ್‌ನಲ್ಲಿ 174 ರನ್‌ಗಳ ಭಾರಿ ಹಿನ್ನಡೆ ಅನುಭವಿಸಿತು.

ವಿದ್ವತ್‌ ಕಾವೇರಪ್ಪ 6 ವಿಕೆಟ್

ಎರಡನೇ ಇನ್ನಿಂಗ್ಸ್‌ನಲ್ಲಿ ವಿದರ್ಭ ಕೂಡಾ ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿತು. ವಿದ್ವತ್‌ ಕಾವೇರಪ್ಪ ಮಾರಕ ದಾಳಿಗೆ ನಲುಗಿದ ವಿದರ್ಭ 196 ರನ್‌ಗೆ ಗಂಟುಮೂಟೆ ಕಟ್ಟಿತು. ಕಾವೇರಪ್ಪ 6 ವಿಕೆಟ್‌ ಕಬಳಿಸಿದರೆ, ವಿಜಯ್‌ ಕುಮಾರ್‌ ವೈಶಾಖ್‌ 4 ವಿಕೆಟ್‌ ಪಡೆದರು.

ಇದನ್ನೂ ಓದಿ | WPL 2024: ಆರ್‌ಸಿಬಿ vs ಗುಜರಾತ್‌ ಜೈಂಟ್ಸ್‌ ಮುಖಾಮುಖಿ ದಾಖಲೆ; ಲೈವ್‌ ಸ್ಟ್ರೀಮಿಂಗ್‌ ವಿವರ

371 ರನ್‌ಗಳ ಬೃಹತ್‌ ಗುರಿ ಪಡೆದ ಕರ್ನಾಟಕ, ಗೆಲುವು ಸಾಧಿಸುವ ಎಲ್ಲಾ ಅವಕಾಶ ಹೊಂದಿತ್ತು. ಆದರೆ, ಆರಂಭದಲ್ಲಿ ತಂಡದ ರನ್‌ ಗಳಿಸಿದ ವೇಗ ಮತ್ತೆ ಬರಲಿಲ್ಲ. ನಾಯಕ ಮಯಾಂಕ್‌ ಅಗರ್ವಾಲ್‌ 70 ರನ್‌ ಗಳಿಸಿದರೆ, ರವಿಕುಮಾರ್‌ ಸಮರ್ಥ್‌ 40 ರನ್‌ ಪೇರಿಸಿದರು. ಇವರಿಬ್ಬರೂ ಮೊದಲ ವಿಕೆಟ್‌ಗೆ 101 ರನ್‌ಗಳ ಜೊತೆಯಾಟವಾಡಿದರು. ಆ ಬಳಿಕ ತಂಡವು ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ಅನೀಶ 40 ರನ್‌ ಗಳಿಸಿ ಕೆಲಕಾಲ ತಂಡಕ್ಕೆ ಭರವಸೆ ಮೂಡಿಸಿದರು. ಮಧ್ಯಮ ಹಾಗೂ ಕೆಳ ಕ್ರಮಾಂಕದ ಬ್ಯಾಟರ್‌ಗಳಿಂದ ಪ್ರತಿರೋಧ ಸಾಧ್ಯವಾಗಲಿಲ್ಲ. ಅಂತಿಮವಾಗಿ ತಂಡವು 62.4 ಓವರ್‌ಗಳಲ್ಲಿ 243 ರನ್‌ ಗಳಿಸಿ ಆಲೌಟ್‌ ಆಯ್ತು.

ಇದನ್ನೂ ಓದಿ | WPL 2024: ಆರ್‌ಸಿಬಿ vs ಗುಜರಾತ್‌ ಜೈಂಟ್ಸ್‌ ಮುಖಾಮುಖಿ ದಾಖಲೆ; ಲೈವ್‌ ಸ್ಟ್ರೀಮಿಂಗ್‌ ವಿವರ

ಕರ್ನಾಟಕ ವಿರುದ್ಧ ಗೆದ್ದ ವಿದರ್ಭ ತಂಡವು ಮಧ್ಯ ಪ್ರದೇಶ ವಿರುದ್ಧ ಸೆಮಿಫೈನಲ್‌ ಪಂದ್ಯ ಆಡಲಿದೆ. ಸೆಮಿ ಕದನವು ಮಾರ್ಚ್‌ 02ರಿಂದ ಆರಂಭವಾಗಲಿದೆ.

ಇದನ್ನೂ ಓದಿ | ರನ್​ಚೇಸ್​ನಲ್ಲಿ ಅರ್ಧಶತಕ, ನಾಯಕನಾಗಿ ಮತ್ತೊಂದು ದಾಖಲೆ; ಪಟೌಡಿ, ಗಂಗೂಲಿ ಎಲೈಟ್ ಕ್ಲಬ್ ಸೇರಿದ ರೋಹಿತ್ ಶರ್ಮಾ

ವಿದರ್ಭ ತಂಡ: ಧ್ರುವ್ ಶೋರೆ, ಅಥರ್ವ ತೈಡೆ, ಕರುಣ್ ನಾಯರ್, ಅಕ್ಷಯ್ ವಾಡ್ಕರ್ (ನಾಯಕ ಮತ್ತು ವಿಕೆಟ್‌ ಕೀಪರ್), ಮೋಹಿತ್ ಕಾಳೆ, ಯಶ್ ರಾಥೋಡ್, ಆದಿತ್ಯ ಸರ್ವತೆ, ಯಶ್ ಠಾಕೂರ್, ಹರ್ಷ್ ದುಬೆ, ಉಮೇಶ್ ಯಾದವ್, ಆದಿತ್ಯ ಠಾಕರೆ.

ಕರ್ನಾಟಕ ತಂಡ: ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್ (ನಾಯಕ), ನಿಕಿನ್ ಜೋಸ್, ಹಾರ್ದಿಕ್ ರಾಜ್, ಮನೀಶ್ ಪಾಂಡೆ, ಶ್ರೀನಿವಾಸ್ ಶರತ್ (ವಿಕೆಟ್‌ ಕೀಪರ್), ಅನೀಶ್ ಕೆವಿ, ಧೀರಜ್ ಗೌಡ್, ವಿಜಯ್ ಕುಮಾರ್ ವೈಶಾಕ್, ವಾಸುಕಿ ಕೌಶಿಕ್, ವಿಧ್ವತ್ ಕಾವೇರಪ್ಪ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point