ಕನ್ನಡ ಸುದ್ದಿ  /  Cricket  /  Video Of Ben Stokes Picks Rohit Sharma Wicket With First Ball In 8 Months At India Vs England 5th Test Ind Vs Eng Jra

Video: 8 ತಿಂಗಳ ಬಳಿಕ ಬೌಲಿಂಗ್‌ ಮಾಡಿ ಮೊದಲ ಎಸೆತದಲ್ಲೇ ರೋಹಿತ್‌ ಶರ್ಮಾ ವಿಕೆಟ್‌ ಕಿತ್ತ ಬೆನ್‌ ಸ್ಟೋಕ್ಸ್!

Ben Stokes: ಭಾರತದ ಸ್ಫೋಟಕ ಆಟಕ್ಕೆ ಕಡಿವಾಣ ಹಾಕಲು ನಿರ್ಧರಿಸಿದ ಬೆನ್ ಸ್ಟೋಕ್ಸ್‌, 8 ತಿಂಗಳ ಬಳಿಕ ಬೌಲಿಂಗ್‌ ಮಾಡಿ ತಮ್ಮ ಮೊದಲ ಎಸೆತದಲ್ಲೇ ವಿಕೆಟ್‌ ಉರುಳಿಸಿದರು. ಭಾರತದ ನಾಯಕ ರೋಹಿತ್‌ ಶರ್ಮಾ ಕ್ಲೀನ್‌ ಬೋಲ್ಡ್‌ ಆದರು. ಇದು ಆಂಗ್ಲರ ಬಳಗದಲ್ಲಿ ಅಚ್ಚರಿ ಮೂಡಿಸಿತು.

ಮೊದಲ ಎಸೆತದಲ್ಲೇ ರೋಹಿತ್‌ ಶರ್ಮಾ ವಿಕೆಟ್‌ ಕಿತ್ತ ಬೆನ್‌ ಸ್ಟೋಕ್ಸ್
ಮೊದಲ ಎಸೆತದಲ್ಲೇ ರೋಹಿತ್‌ ಶರ್ಮಾ ವಿಕೆಟ್‌ ಕಿತ್ತ ಬೆನ್‌ ಸ್ಟೋಕ್ಸ್ (AP)

ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಐದನೇ ಟೆಸ್ಟ್ (India vs England 5th Test) ಪಂದ್ಯದಲ್ಲಿ, ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (Ben Stokes) ಅಬ್ಬರಿಸಿದ್ದಾರೆ. ಸರಣಿಯುದ್ದಕ್ಕೂ ಒಂದೇ ಒಂದು ಎಸೆತ ಬೌಲಿಂಗ್‌ ಮಾಡದ ಆಂಗ್ಲರ ನಾಯಕ, ಬರೋಬ್ಬರಿ ಎಂಟು ತಿಂಗಳ ನಂತರ ಬೌಲಿಂಗ್‌ ಮಾಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮೊದಲ ಎಸೆತದಲ್ಲಿಯೇ ವಿಕೆಟ್ ಪಡೆದಿದ್ದಾರೆ. ಅದು ಕೂಡಾ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾರದ್ದು.

ಉಭಯ ತಂಡಗಳ ಟೆಸ್ಟ್‌ ಸರಣಿಯ ಅಂತಿಮ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದಲ್ಲಿ, ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿತ್ತು. ರೋಹಿತ್ ಶರ್ಮಾ ಹಾಗೂ ಶುಭ್ಮನ್‌ ಗಿಲ್‌ ತಲಾ ಶತಕ ಸಿಡಿಸಿ ಎದುರಾಳಿ ಇಂಗ್ಲೆಂಡ್‌ ತಂಡದ ಬೆವರಿಳಿಸಿದರು. ಮೊದಲ ಸೆಷನ್‌ ಉದ್ದಕ್ಕೂ ಒಂದೇ ಒಂದು ವಿಕೆಟ್‌ ಪಡೆಯಲು ಇಂಗ್ಲೆಂಡ್‌ ತಂಡದಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಲಂಚ್‌ ಅವಧಿಯ ಬಳಿಕ, ಇಂಗ್ಲೆಂಡ್‌ ನಾಯಕ ಆಟದ ತಂತ್ರವನ್ನೇ ಬದಲಾಯಿಸಿದರು. ಅಚ್ಚರಿ ಎಂಬಂತೆ ನಾಯಕನ ಆ ತಂತ್ರ ಆಂಗ್ಲರಿಗೆ ಫಲ ಕೊಟ್ಟಿತು.

ಕೊನೆಯ ಟೆಸ್ಟ್‌ನ 2ನೇ ದಿನದ ಆಟದ ಎರಡನೇ ಅವಧಿಯಲ್ಲಿ, ರೋಹಿತ್ ಶರ್ಮಾ ಮೊದಲ ಎಸೆತದಲ್ಲಿ ಸಿಂಗಲ್‌ ತೆಗೆದು 103 ರನ್ ಗಳಿಸಿದರು. ಈ ವೇಳೆ ಮುಂದಿನ ಓವರ್‌ ಬೌಲಿಂಗ್‌ ಮಾಡಲು ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಅಖಾಡಕ್ಕೆ ಇಳಿದರು. ಆವರೆಗೂ ತಮ್ಮ ಬತ್ತಳಿಕೆಯಲ್ಲಿರುವ ಎಲ್ಲಾ ಅಸ್ತ್ರಗಳನ್ನು ಪ್ರಯೋಗಿಸಿದ್ದ ಸ್ಟೋಕ್ಸ್‌, ತಂಡದ ಯಾರಿಂದಲೂ ವಿಕೆಟ್‌ ಉರುಳಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಖುದ್ದು ನಾಯಕನೇ ಅಖಾಡಕ್ಕಿಳಿದು ಬೌಲಿಂಗ್‌ ಮಾಡಲು ಮುಂದಾದರು.

ಇದನ್ನೂ ಓದಿ | IND vs ENG: 48ನೇ ಶತಕ ಸಿಡಿಸಿದ ರೋಹಿತ್‌ ಶರ್ಮಾ; ರಾಹುಲ್‌ ದ್ರಾವಿಡ್‌ ವಿಶ್ವದಾಖಲೆ ಸರಿಗಟ್ಟಿದ ಹಿಟ್‌ಮ್ಯಾನ್‌

ಕಳೆದ ವರ್ಷದ ಜೂನ್‌ ತಿಂಗಳಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಆಶಸ್ ಟೆಸ್ಟ್‌ನಲ್ಲಿ ಆಲ್‌ರೌಂಡರ್ ಕೊನೆಯ ಬಾರಿಗೆ ಬೌಲಿಂಗ್ ಮಾಡಿದ್ದರು.‌ ಆ ಬಳಿಕ ಮೊಣಕಾಲಿನ ಗಾಯದಿಂದಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾದರು. ಹೀಗಾಗಿ ಅವರು ಬೌಲಿಂಗ್‌ ಮಾಡುತ್ತಿರಲಿಲ್ಲ. ಪ್ರಸಕ್ತ ಸರಣಿಯಲ್ಲೂ ಅವರು ಈವರೆಗೆ ಬೌಲಿಂಗ್‌ ಮಾಡಿರಲಿಲ್ಲ. ಆದರೆ, ಭಾರತದ ಅಮೋಘ ಆಟಕ್ಕೆ ಕಡಿವಾಣ ಹಾಕಲು ನಿರ್ಧರಿಸಿದ ಸ್ಟೋಕ್ಸ್‌ ಕೆಂಪು ಚೆಂಡನ್ನು ಕೈಗೆತ್ತಿಕೊಂಡರು. ಅದರಂತೆಯೇ ದಿನದ ಎರಡನೇ ಸೆಷನ್‌ನಲ್ಲಿ ಭಾರತದ ಇನ್ನಿಂಗ್ಸ್‌ನ 62ನೇ ಓವರ್‌ ಎಸೆಯಲು ಬಂದ ಸ್ಟೋಕ್ಸ್‌, ತಮ್ಮ ಮೊದಲ ಎಸೆತದಲ್ಲೇ ವಿಕೆಟ್‌ ಉರುಳಿಸಿದರು. ಭಾರತದ ನಾಯಕ ರೋಹಿತ್‌ ಶರ್ಮಾ ಕ್ಲೀನ್‌ ಬೋಲ್ಡ್‌ ಆದರು. ಅವರ ಮಾಂತ್ರಿಕ ಔಟ್‌ಸ್ವಿಂಗರ್‌ ಎಸೆತವು ಆಫ್‌ ಸ್ಟಂಪ್ಸ್‌ ಬೇಲ್ಸ್‌ ಹಾರಿಸಿತು.

ಬೆನ್‌ ಸ್ಟೋಕ್ಸ್‌ ವಿಡಿಯೋ

ಸ್ಟೋಕ್ಸ್‌ ಒಬ್ಬ ಹುಟ್ಟು ಸ್ಪರ್ಧಾತ್ಮಕ ಆಟಗಾರ. ಆತ ಒಬ್ಬ ಪೈಟರ್‌ ಎಂದೇ ದಿಗ್ಗಜರು ಉದ್ಘಾರವೆಳೆಯುವುದನ್ನು ಕೇಳಿರುತ್ತೇವೆ. ಅದು ಈ ಆಟದಲ್ಲೂ ಸಾಬೀತಾಗಿದೆ. ತಂಡಕ್ಕೆ ಮುನ್ನಡೆ ತಂದುಕೊಡಲು ನಾಯಕನೇ ಬರಬೇಕಾಯ್ತು. ಸೋಕ್ಸ್‌ ವಿಕೆಟ್‌ ಪಡೆಯುತ್ತಿದ್ದಂತೆಯೇ ತಂಡದ ಸಹ ಆಟಗಾರರು ಅಚ್ಚರಿಯಿಂದ ನೋಡುತ್ತಿದ್ದರು. ಕಾಮೆಂಟರಿಯಲ್ಲಿದ್ದ ದಿಗ್ಗಜ ಕ್ರಿಕೆಟಿಗರು ಸ್ಟೋಕ್ಸ್‌ ಮಾರಕ ದಾಳಿಯನ್ನು ಹಾಡಿ ಹೊಗಳಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ರೋಹಿತ್ ವಿಕೆಟ್‌ ಪಡೆದ ಸ್ಟೋಕ್ಸ್, ಇನ್ನು ಎರಡು ವಿಕೆಟ್‌ ಪಡೆದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 200 ಟೆಸ್ಟ್ ವಿಕೆಟ್‌ ಪಡೆದ ಸಾಧನೆ ಮಾಡಲಿದ್ದಾರೆ.

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point