ಕನ್ನಡ ಸುದ್ದಿ  /  ಕ್ರಿಕೆಟ್  /  ಗನ್ ಫೈರಿಂಗ್, ಹಗ್ಗ ಜಗ್ಗಾಟ, ರನ್ನಿಂಗ್‌ ವಿತ್ ರಾಕ್ಸ್; ಟಿ20 ವಿಶ್ವಕ​ಪ್‌ಗೆ​ ಆರ್ಮಿ ಸ್ಟೈಲ್‌​ನಲ್ಲಿ ಪಾಕ್ ಕ್ರಿಕೆಟಿಗರ ಅಭ್ಯಾಸ, Video

ಗನ್ ಫೈರಿಂಗ್, ಹಗ್ಗ ಜಗ್ಗಾಟ, ರನ್ನಿಂಗ್‌ ವಿತ್ ರಾಕ್ಸ್; ಟಿ20 ವಿಶ್ವಕ​ಪ್‌ಗೆ​ ಆರ್ಮಿ ಸ್ಟೈಲ್‌​ನಲ್ಲಿ ಪಾಕ್ ಕ್ರಿಕೆಟಿಗರ ಅಭ್ಯಾಸ, VIDEO

ಮುಂಬರುವ ಟಿ20 ವಿಶ್ವಕಪ್‌ಗೆ ಪಾಕ್‌ ಕ್ರಿಕೆಟ್‌ ತಂಡದ ಆಟಗಾರರು ಭರ್ಜರಿ ಸಿದ್ಧತೆ ಆರಂಭಿಸಿದ್ದಾರೆ. ಸೇನಾ ಪಡೆ ನಡೆಸುವಂಥಾ ರೀತಿಯ ತಾಲೀಮುಗಳಲ್ಲಿ ಆಟಗಾರರು ಭಾಗಿಯಾಗಿದ್ದು, ಈ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿವೆ.

ಟಿ20 ವಿಶ್ವಕ​ಪ್‌ಗೆ​ ಆರ್ಮಿ ಸ್ಟೈಲ್‌​ನಲ್ಲಿ ಪಾಕ್ ಕ್ರಿಕೆಟಿಗರ ಅಭ್ಯಾಸ
ಟಿ20 ವಿಶ್ವಕ​ಪ್‌ಗೆ​ ಆರ್ಮಿ ಸ್ಟೈಲ್‌​ನಲ್ಲಿ ಪಾಕ್ ಕ್ರಿಕೆಟಿಗರ ಅಭ್ಯಾಸ (X)

ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು, 2024ರ ಐಸಿಸಿ ಟಿ20 ವಿಶ್ವಕಪ್‌ಗೆ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಹಾಗಂತಾ ಮೈದಾನಕ್ಕಿಳಿದು ಆಟವಾಡಿ ಅಭ್ಯಾಸ ನಡೆಸುತ್ತಿಲ್ಲ. ಫಿಟ್‌ನೆಸ್‌ಗಾಗಿ ತಂಡವು ಮಿಲಿಟರಿ ಶೈಲಿಯಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದೆ. ಕಾಕುಲ್‌ನಲ್ಲಿರುವ ಅಬೋಟಾಬಾದ್‌ನ ಆರ್ಮಿ ಸ್ಕೂಲ್ ಆಫ್ ಫಿಸಿಕಲ್ ಟ್ರೈನಿಂಗ್‌ನಲ್ಲಿ (ASPT) ಫಿಟ್‌ನೆಸ್ ಶಿಬಿರದಲ್ಲಿ ಆಟಗಾರರು ಭಾಗವಹಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇಲ್ಲಿಗೆ 29 ಆಟಗಾರರನ್ನು ಕರೆಸಿದ್ದು, ಭಿನ್ನ ರೀತಿಯಲ್ಲಿ ಆಟಗಾರರನ್ನು ವಿಶ್ವಕಪ್‌ಗೆ ಸಿದ್ಧಪಡಿಸುತ್ತಿದೆ. ಪಿಸಿಬಿ ಆಯೋಜಿಸಿರುವ ಅಸಾಂಪ್ರದಾಯಿಕಕ ತರಬೇತಿ ವಿಧಾನಕ್ಕೆ ಪಾಕಿಸ್ತಾನ ಪ್ರಜೆಗಳಿಂದಲೇ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

ಟ್ರೆಂಡಿಂಗ್​ ಸುದ್ದಿ

ಪಾಕ್‌ ತಂಡದ ಆಟಗಾರರು ಸೇನಾ ಪಡೆ ನಡೆಸುವಂಥಾ ರೀತಿಯ ತಾಲೀಮುಗಳಲ್ಲಿ ನಿರತರಾಗಿರುವ ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿವೆ. ಆಟಗಾರರಾದ ನಸೀಮ್ ಷಾ, ಇಫ್ತಿಕರ್‌ ಅಹ್ಮದ್‌, ಬಾಬರ್‌ ಅಜಾಮ್‌, ರಿಜ್ವಾನ್‌, ಅಜಾಮ್‌ ಖಾನ್ ಸೇರಿದಂತೆ ಹಲವು ಆಟಗಾರರು ಕಾಣಿಸಿಕೊಂಡಿದ್ದಾರೆ. ಭಾರದ ಕಲ್ಲುಗಳನ್ನು ಹೊತ್ತು ಸಾಗುವುದು, ಹಗ್ಗ ಜಗ್ಗಾಟ, ಅಡೆತಡೆಗಳನ್ನು ತೆರವುಗೊಳಿಸುವುದು, ಸ್ಕೇಲಿಂಗ್‌ ನೆಟ್ಸ್‌ ಸೇರಿದಂತೆ ಭಿನ್ನ ಕಸರತ್ತುಗಳಲ್ಲಿ ಆಟಗಾರರು ಪಾಲ್ಗೊಂಡಿದ್ದಾರೆ.

ಆಟಗಾರರ ತರಬೇತಿ ಶಿಬಿರವು ಕ್ರಿಕೆಟ್‌ಗೆ ಬೇಕಾದ ಅಭ್ಯಾಸಕ್ಕಿಂತ ಭಿನ್ನವಾಗಿದ್ದು, ಅಸಾಂಪ್ರದಾಯಿಕ ವಿಧಾನದ ತರಬೇತಿಯಿಂದಾಗಿ ಜಾಗತಿಕವಾಗಿ ಟೀಕೆಗಳಿಗೂ ಕಾರಣವಾಗಿದೆ. ಆಟಗಾರರು ಸೇನಾಪಡೆಯ ಸೈನಿಕರಂತೆ ಗನ್‌ ಹಿಡಿದುಕೊಂಡು ಗುಂಡು ಹಾರಿಸುವುದು, ಟಗ್-ಆಫ್-ವಾರ್, ರನ್ನಿಂಗ್‌ ವಿದ್‌ ರಾಕ್ಸ್ ಸೇರಿದಂತೆ ಹಲವು ಕಠಿಣ ಚಟುವಟಿಕೆಗಳನ್ನು ನಡೆಸಿದ್ದಾರೆ. ಹೀಗಾಗಿ ಅಸಾಂಪ್ರದಾಯಿಕ ವಿಧಾನದ ತರಬೇತಿ ಶಿಬಿರರು ಕ್ರಿಕೆಟ್ ಲೋಕದ ಹಲವರು ಅಚ್ಚರಿ ಪಡುವಂತೆ ಮಾಡಿದೆ.

ಗನ್‌ಫೈರಿಂಗ್‌ ಬೇಕಿತ್ತಾ?

ಫಿಟ್‌ನೆಸ್‌ಗೆ ನೆರವಾಗುವ ಚಟುವಟಿಕೆಗಳು ಕ್ರಿಕೆಟಿಗರ ಅಭ್ಯಾಸದಲ್ಲಿ ಇರುವುದು ವಿಶೇಷವೇನಲ್ಲ. ಆದರೆ, ತರಬೇತಿ ಕಾರ್ಯಕ್ರಮದಲ್ಲಿ ಗನ್ ಫೈರಿಂಗ್ ಸೇರ್ಪಡೆ ಮಾಡಿರುವುದು ವಿವಾದಾಸ್ಪದವಾಗಿದೆ. ಈ ಕುರಿತು ಪಾಕ್‌ ಕ್ರಿಕೆಟ್‌ ಅಭಿಮಾನಿಗಳಿಂದಲೇ ಅಪಸ್ವರ ಕೇಳಿಬಂದಿದೆ. ಇಂಥಾ ತರಬೇತಿಯಿಂದ ಆಟಗಾರರ ಕ್ರಿಕೆಟ್ ಕೌಶಲಗಳ ಸುಧಾರಣೆ ಹೇಗೆ ಸಾಧ್ಯ? ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸುವುದು ಹೇಗೆ ಎಂಬುದಾಗಿ ನೆಟ್ಟಿಗರು ಪ್ರಶ್ನೆ ಕೇಳುತ್ತಿದ್ದಾರೆ.

ಕೆಲವೊಂದು ಅಸಾಂಪ್ರದಾಯಿಕ ತರಬೇತಿ ವಿಧಾನಗಳು ಆಟಗಾರರ ಮಾನಸಿಕ ಆರೋಗ್ಯ ಸೇರಿದಂತೆ ತಂಡದೊಳಗೆ ಉತ್ತಮ ಬಾಂಧವ್ಯ ನಿರ್ಮಾಣಕ್ಕೆ ಸಹಕಾರಿ ಎಂದು ಕೆಲವು ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಹಗ್ಗಜಗ್ಗಾಟ, ಕಲ್ಲುಗಳನ್ನು ಹಿಡಿದು ಓಡುವಂಥ ಚಟುವಟಿಕೆಗಳು ದೈಹಿಕ ಸಾಮರ್ಥ್ಯ ಹೆಚ್ಚಿಸುವ ಗುರಿಯೊಂದಿಗೆ ಮಾಡಿಸಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಇವು ಮಾನಸಿಕ ಸ್ಥೈರ್ಯ ಹೆಚ್ಚಿಸುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಸಾಂಪ್ರದಾಯಿಕ ತರಬೇತಿ ವಿಧಾನವನ್ನು ಆಯ್ಕೆ ಮಾಡುವ ಬದಲು, ಅಸಾಂಪ್ರದಾಯಿಕ ವಿಧಾನಗಳ ಮೇಲೆ ಹೆಚ್ಚು ಗಮನಹರಿಸುವುದರಿಂದ ತಂಡವು ಮೈದಾನದಲ್ಲಿ ಎದುರಿಸಲಿರುವ ತಾಂತ್ರಿಕ ಸವಾಲುಗಳಿಗೆ ಸಮಸ್ಯೆಯಾಗಬಹುದು ಇನ್ನೂ ಕೆಲವರು ಹೇಳಿಕೊಂಡಿದ್ದಾರೆ.

IPL_Entry_Point