ಕ್ರಿಕೆಟ್ ಆಡುತ್ತಿದ್ದಾಗ ದಿಢೀರ್ ಹೃದಯಾಘಾತ; ಮೈದಾನದಲ್ಲೇ ಪ್ರಾಣ ಚೆಲ್ಲಿದ ಪುಣೆ ಕ್ರಿಕೆಟಿಗ -Video
ಕ್ರಿಕೆಟ್ ಮೈದಾನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ಇಮ್ರಾನ್ ಪಟೇಲ್‌ಗೆ ಮದುವೆಯಾಗಿದ್ದು, ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಅವರಲ್ಲಿ ಕಿರಿಯ ಪುತ್ರಿಗೆ ಇನ್ನೂ ಕೇವಲ ನಾಲ್ಕು ತಿಂಗಳು. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿ ಯಾವುದೇ ಅನಾರೋಗ್ಯ ಸಮಸ್ಯೆ ಇಲ್ಲದಿದ್ದರೂ ಹೃದಯ ಸ್ತಂಭನಕ್ಕೆ ಬಲಿಯಾಗಿದ್ದಾರೆ.
ಸಾವು ಯಾವಾಗ ಬೇಕಾದರೂ ಸಂಭವಿಸಬಹುದು. ಜೀವನಶೈಲಿ ಬದಲಾಗುತ್ತಿದ್ದಂತೆ ಯುವಕರು ಕೂಡಾ ದಿಢೀರ್ ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ, ಕ್ರಿಕೆಟ್ ಆಡುತ್ತಿದ್ದ ಯುವಕೊನೊಬ್ಬ ಅಚ್ಚರಿಯ ರೀತಿಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಮಹಾರಾಷ್ಟ್ರದ ಪುಣೆಯಲ್ಲಿ ಅಚ್ಚರಿಯ ಘಟನೆ ಸಂಭವಿಸಿದೆ. ಗುರುವಾರ (ನವೆಂಬರ್ 28) ನಗರದ ಗರ್ವಾರೆ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ಆಡುತ್ತಿದ್ದ 35 ವರ್ಷದ ಕ್ರಿಕೆಟಿಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪ್ರಾಣ ಕಳೆದುಕೊಂಡು ಆಟಗಾರನ ಹೆಸರು ಇಮ್ರಾನ್ ಪಟೇಲ್.
ಆರಂಭಿಕ ಆಟಗಾರನಾಗಿ ಬ್ಯಾಟಿಂಗ್ ನಡೆಸಲು ಮೈದಾನಕ್ಕೆ ಬಂದಿದ್ದ ಆಟಗಾರ, ಪಿಚ್‌ನಲ್ಲಿ ಇರುವಾಗ ದಿಢೀರನೆ ಎದೆನೋವು ಎಂದು ಹೇಳಿದ್ದಾರೆ. ಮೈದಾನದ ಅಂಪೈರ್‌ಗಳಿಗೆ ತಮಗಾಗುತ್ತಿರುವ ಎದೆ ಹಾಗೂ ತೋಳಿನ ಭಾಗದ ನೋವಿನ ವಿಷಯ ತಿಳಿಸಿ, ಮೈದಾನದಿಂದ ಹೊರಹೋಗಲು ಅನುಮತಿ ಪಡೆದರು. ಆದರೆ, ಪೆವಿಲಿಯನ್ ಕಡೆಗೆ ಹಿಂತಿರುಗುವಾಗ ಇಮ್ರಾನ್ ದಿಢೀರನೆ ಕುಸಿದು ಬಿದ್ದಿದ್ದಾರೆ.
ಪಂದ್ಯವು ಯೂಟ್ಯೂಬ್ ಮೂಲಕ ನೇರಪ್ರಸಾರವಾಗುತ್ತಿತ್ತು. ಹೀಗಾಗಿ ಮೈದಾನದ ಎಲ್ಲ ವಿದ್ಯಮಾನಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಡೆದು ಸಾಗುತ್ತಿದ್ದಾಗ ಇಮ್ರಾನ್ ಕುಸಿದು ಬಿದ್ದಿದ್ದಾರೆ. ಆಗ ಮೈದಾನದಲ್ಲಿದ್ದ ಇತರ ಆಟಗಾರರು ಅವರತ್ತ ಭಯದಿಂದ ಧಾವಿಸಿದ್ದಾರೆ. ತಕ್ಷಣವೇ ಆಟಗಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅಷ್ಟರಲ್ಲೇ ಇಮ್ರಾನ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮೂವರು ಹೆಣ್ಣುಮಕ್ಕಳನ್ನು ಅಗಲಿದ ತಂದೆ
ಇಮ್ರಾನ್‌ಗೆ ಮದುವೆಯಾಗಿದ್ದು, ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಅವರಲ್ಲಿ ಕಿರಿಯ ಪುತ್ರಿಗೆ ಇನ್ನೂ ಕೇವಲ ನಾಲ್ಕು ತಿಂಗಳು. ಪುಣೆಯಲ್ಲಿ ಪಟೇಲ್ ಹೆಸರಾಂತ ವ್ಯಕ್ತಿ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಅವರು ಕ್ರಿಕೆಟ್ ತಂಡದ ಮಾಲೀಕರೂ ಆಗಿದ್ದರು. ಅಲ್ಲದೆ ಜ್ಯೂಸ್ ಅಂಗಡಿಯನ್ನೂ ನಡೆಸುತ್ತಿದ್ದರು.
ಆರೋಗ್ಯವಾಗಿದ್ದ ಇಮ್ರಾನ್ ಅವರ ದಿಢೀರ್ ಸಾವು, ಹಲವರಿಗೆ ಆಶ್ಚರ್ಯ ತಂದಿದೆ. ಅವರು ತುಂಬಾ ಆರೋಗ್ಯವಾಗಿದ್ದರು. ದೈಹಿಕವಾಗಿ ಸದೃಢರಾಗಿದ್ದರು. ಆದರೂ ಹೃದಯ ಸ್ತಂಭನದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಆಲ್ ರೌಂಡರ್ ಆಗಿದ್ದ ಇಮ್ರಾನ್ ಪಂದ್ಯದುದ್ದಕ್ಕೂ ಕ್ರಿಯಾಶೀಲರಾಗಿರಬೇಕಾದ ಆಟಗಾರ. ಅವರ ಸಾವು ಇತರ ಆಟಗಾರರು ಹಾಗೂ ಸಂಬಂಧಿಕರಿಗೆ ದಿಗ್ಭ್ರಮೆಗೊಳಿಸಿದೆ.
ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ
“ಅವರಿಗೆ ಯಾವುದೇ ವೈದ್ಯಕೀಯ ಸಮಸ್ಯೆ ಇರಲಿಲ್ಲ. ಉತ್ತಮ ದೈಹಿಕ ಸ್ಥಿತಿಯಲ್ಲಿದ್ದರು. ಅವರ ಆಟವನ್ನು ನೋಡಿದ್ದ ನಮಗೆಲ್ಲರಿಗೂ ಈ ಸಾವಿನಿಂದ ಆಘಾತವಾಗಿದೆ” ಎಂದು ಪಂದ್ಯದಲ್ಲಿ ಆಡುತ್ತಿದ್ದ ಮತ್ತೊಬ್ಬ ಕ್ರಿಕೆಟಿಗ ನಸೀರ್ ಖಾನ್ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಟ್ರೋಲ್ಗಳ ಬಗ್ಗೆ ಮೌನ ಮುರಿದ ಪೃಥ್ವಿ ಶಾ; ಹರಾಜಾಗದೆ ಇರುವುದು ನಾಚಿಕೆಗೇಡಿನ ಸಂಗತಿ ಎಂದ ಮೊಹಮ್ಮದ್ ಕೈಫ್