ದುರದೃಷ್ಟಕರ ರನೌಟ್ ಬಳಿಕ ಮೆಟ್ಟಿಲ ಮೇಲೆ ತಲೆತಗ್ಗಿಸಿ ಕುಳಿತ ರಾಹುಲ್ ತ್ರಿಪಾಠಿ; ಪಶ್ಚಾತ್ತಾಪದಿಂದ ನೋಡಿದ ಸಮದ್ -Video
Rahul Tripathi: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧದ ಕ್ವಾಲಿಫೈಯರ್ ಕದನದಲ್ಲಿ ಎಸ್‌ಆರ್‌ಎಚ್ ಬ್ಯಾಟರ್ ರಾಹುಲ್ ತ್ರಿಪಾಠಿ ರನ್‌ಔಟ್ ಆದರು. ಆ ಬಳಿಕ ಡಕೌಟ್ ಬಳಿ ಅವರು ತಲೆತಗ್ಗಿಸಿ ಅಸಹಾಯಕರಾಗಿ ಕುಳಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟರ್ ರಾಹುಲ್ ತ್ರಿಪಾಠಿ ದುರದೃಷ್ಟಕರ ರೀತಿಯಲ್ಲಿ ರನೌಟ್ ಆದರು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ತಂಡದ ಮತ್ತೋರ್ವ ಬ್ಯಾಟರ್ ಅಬ್ದುಲ್ ಸಮದ್ ಅವರೊಂದಿಗೆ ರನ್ ಓಡುವಾಗ ಆದ ಗೊಂದಲದಿಂದ ರಾಹುಲ್ ವಿಕೆಟ್ ಕೈಚೆಲ್ಲಿದರು. ಕೆಕೆಆರ್ ವಿರುದ್ಧದ ಮಹತ್ದವ ಪಂದ್ಯದಲ್ಲಿ ಎಸ್‌ಆರ್‌ಎಚ್ ತಂಡದ ಎಲ್ಲಾ ಬ್ಯಾಟರ್‌ಗಳು ವಿಫಲರಾದರು. ಆಗ ತಂಡದ ಇನ್ನಿಂಗ್ಸ್ ಮುನ್ನಡೆಸಿದ ತ್ರಿಪಾಠಿ ಆಕರ್ಷಕ ಅರ್ಧಶತಕ ಗಳಿಸಿ ಆಡುತ್ತಿದ್ದರು. ಆದರೆ, ರನೌಟ್ ಆಗಿ ನಿರಾಶೆ ಅನುಭವಿಸಿದರು.
ಮೈದಾನಲ್ಲಿ ನಾನ್‌ಸ್ಟ್ರೈಕ್‌ನಲ್ಲಿ ಬ್ಯಾಟ್ ಬೀಸುತ್ತಿದ್ದ ಅಬ್ದುಲ್ ಸಮದ್, ತ್ರಿಪಾಠಿ ವಿಕೆಟ್ ಪತನವಾಗಲು ನಾನೆ ಕಾರಣ ಎಂದು ಪಶ್ಚಾತ್ತಾಪದಿಂದ ನೋಡುತ್ತಾ ನಿಂತರು. ಪಂದ್ಯದಲ್ಲಿ ಎಲ್ಲಾ ಬ್ಯಾಟರ್‌ಗಳು ವಿಫಲರಾದಾಗ, ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದ್ದು ತ್ರಿಪಾಠಿ ಮಾತ್ರ. ಆ ವಿಕೆಟ್ ಎಷ್ಟು ಮುಖ್ಯವಾಗಿತ್ತು ಎಂಬುದು ಇಬ್ಬರಿಗೂ ತಿಳಿದಿತ್ತು.
ತ್ರಿಪಾಠಿ ಹೊಡೆದ ಚೆಂಡನ್ನು ಹಿಡಿದು ವೇಗವಾಗಿ ಕೀಪರ್ ಕಡೆಗೆ ಆಂಡ್ರೆ ರಸೆಲ್ ಎಸೆದರು. ಆಗ ಸಮದ್ ಹಾಗೂ ತ್ರಿಪಾಠಿ ನಡುವೆ ರನ್ ಓಡುವಲ್ಲಿ ಗೊಂದಲವಾಯ್ತು. ತ್ರಿಪಾಠಿ ಪಿಚ್ ಮಧ್ಯದಲ್ಲಿಯೇ ನಿಂತರು. ಸಮದ್ ನಾನ್ ಸ್ಟ್ರೈಕರ್ ಬಳಿ ಕ್ರೀಸ್‌ಗೆ ಬಂದರು. ಅಷ್ಟರಲ್ಲೇ ವಿಕೆಟ್ ಕೀಪರ್ ಭೇಲ್ಸ್ ಹಾರಿಸಿದ್ದರು.
ಇದನ್ನೂ ಓದಿ | ಐಪಿಎಲ್ 2024 ಲೀಗ್ ಹಂತ ಅಂತ್ಯ; ಆರೆಂಜ್, ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಯಾರಿದ್ದಾರೆ? ವಿರಾಟ್ ಹಿಂದಿಕ್ಕೋದು ಕಷ್ಟ ಕಷ್ಟ
ಸಂವಹನದ ಕೊರತೆಯ ಕಾರಣದಿಂದಾಗಿ ಆದ ರನೌಟ್‌ನಿಂದಾಗಿ, ತ್ರಿಪಾಠಿ ಅಸಹಾಯಕರಾಗಿ ಮೈದಾನ ತೊರೆದರು. ಡಕೌಟ್‌ನತ್ತ ಸಪ್ಪೆ ಮೋರೆ ಹಾಕಿಕೊಂಡು ಹೋದ ಅವರು, ನರೇಂದ್ರ ಮೋದಿ ಕ್ರೀಡಾಂಗಣದ ಮೆಟ್ಟಿಲ ಮೇಲೆ ತಲೆ ತಗ್ಗಿಸಿ ಕುಳಿತರು. ಈ ಹೃದಯ ವಿದ್ರಾವಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ಇಲ್ಲಿದೆ.
ಈ ವೇಳೆ ವೀಕ್ಷಕ ವಿವರಣೆಯಲ್ಲಿದ್ದ ಸುನಿಲ್ ಗವಾಸ್ಕರ್ ಅವರು, ಸಮದ್ ಕುರಿತು ಅಸಮಾಧಾನ ಹೊರಹಾಕಿದರು. “ಇದು ಸಂಪೂರ್ಣವಾಗಿ ಸಮದ್ ಅವರ ತಪ್ಪು. ತ್ರಿಪಾಠಿ ಸರಿಯಾಗಿ ಬ್ಯಾಕಪ್ ಮಾಡುತ್ತಿದ್ದರು. ಅನಗತ್ಯ ವಿಕೆಟ್ ಇದು,” ಎಂದು ಹೇಳಿದರು.
ಐಪಿಎಲ್ ಫೈನಲ್ ಪ್ರವೇಶಿಸಿದ ಕೆಕೆಆರ್
ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಎಸ್‌ಆರ್‌ಎಚ್ ವಿಫಲವಾಯ್ತು. ಪರಿಣಾಮ ಪಂದ್ಯ ಗೆದ್ದ ಕೆಕೆಆರ್ ಐಪಿಎಲ್ 2024ರ ಫೈನಲ್‌ಗೆ ಲಗ್ಗೆ ಹಾಕಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಎಸ್‌ಆರ್‌ಎಚ್, 19.3 ಓವರ್‌ಗಳಲ್ಲಿ ಕೇವಲ 159 ರನ್ ಗಳಿಸಿತು. ಸಾಧಾರಣ ಗುರಿ ಬೆನ್ನಟ್ಟಿದ ಕೋಲ್ಕತ್ತಾ, 13.4 ಓವರ್‌ಗಳಲ್ಲಿ 2 ವಿಕೆಟ್ ಮಾತ್ರ ಕಳೆದುಕೊಂಡು 164 ರನ್ ಗಳಿಸಿ ಗೆದ್ದು ಬೀಗಿತು. ಪಂದ್ಯದಲ್ಲಿ ಅಬ್ಬರಿಸಿದ ವೆಂಕಟೇಶ್ ಅಯ್ಯರ್, ಕೇವಲ 28 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 51 ರನ್ ಗಳಿಸಿದರು. ಇದೇ ವೇಳೆ ನಾಯಕ ಶ್ರೇಯಸ್ ಅಯ್ಯರ್ ಕೂಡಾ 24 ಎಸೆತಗಳಲ್ಲಿ 5 ಫೋರ್ ಹಾಗೂ 4 ಸಿಕ್ಸರ್ ಸಿಡಿಸುವ ಮೂಲಕ 58 ರನ್ ಗಳಿಸಿದರು. ಅಲ್ಲದೆ ಬಲುಬೇಗನೆ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದನ್ನೂ ಓದಿ | ಅಯ್ಯರ್ ಜೋಡಿ ಆರ್ಭಟ; ಸನ್‌ರೈಸರ್ಸ್ ಸದೆಬಡೆದು ನಾಲ್ಕನೇ ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ ಕೆಕೆಆರ್
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
