ಐಪಿಎಲ್ ಇತಿಹಾಸದ ಅತ್ಯುತ್ತಮ ಕ್ಯಾಚ್; ಮಾರು ದೂರ ಹಾರಿ ಒಂದೇ ಕೈಯಲ್ಲಿ ಅತ್ಯದ್ಭುತ ಕ್ಯಾಚ್ ಹಿಡಿದ ರವಿ ಬಿಷ್ಣೋಯ್, Video
Ravi Bishnoi: ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರವಿ ಬಿಷ್ಣೋಯ್ ಹಿಡಿದ ಸದ್ಭುತ ಕ್ಯಾಚ್ ವಿಡಿಯೋ ಎಲ್ಲಡೆ ವೈರಲ್ ಆಗಿದೆ. ತಮ್ಮದೇ ಎಸೆತದಲ್ಲಿ ಕೇನ್ ವಿಲಿಯಮ್ಸನ್ ವಿಕೆಟ್ ಪಡೆಯುವ ಮೂಲಕ ಬಿಷ್ಣೋಯ್ ಪಂದ್ಯಕ್ಕೆ ತಿರುವು ನೀಡಿದ್ದಾರೆ.
ಏಪ್ರಿಲ್ 7ರ ಭಾನುವಾರ ಲಕ್ನೋದಲ್ಲಿ ನಡೆದ ಐಪಿಎಲ್ 2024ರ ಪಂದ್ಯದಲ್ಲಿ ಆತಿಥೆಯ ಲಕ್ನೋ ಸೂಪರ್ ಜೈಂಟ್ಸ್ ತಂಡವು ಗುಜರಾತ್ ಟೈಟಾನ್ಸ್ (LSG vs GT) ತಂಡವನ್ನು 33 ರನ್‌ಗಳಿಂದ ಮಣಿಸಿತು. ಆ ಮೂಲಕ ಕೆಎಲ್ ರಾಹುಲ್ ಪಡೆ ಪ್ರಸಕ್ತ ಆವೃತ್ತಿಯಲ್ಲಿ ಸತತ ಮೂರನೇ ಗೆಲುವನ್ನು ಒಲಿಸಿಕೊಂಡಿತು. ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ಯುವ ಬೌಲರ್ ರವಿ ಬಿಷ್ಣೋಯ್ (Ravi Bishnoi), 8 ರನ್ ಬಿಟ್ಟುಕೊಟ್ಟು 1 ವಿಕೆಟ್ ಕಬಳಿಸಿದರು. ತಮ್ಮದೇ ಎಸೆತದಲ್ಲಿ ಅತ್ಯದ್ಭುತ ಕ್ಯಾಚ್ ಹಿಡಿಯುವ ಮೂಲಕ ಅನುಭವಿ ಆಟಗಾರ ಕೇನ್ ವಿಲಿಯಮ್ಸನ್ ವಿಕೆಟ್ ಕಬಳಿಸಿದರು. ಡೈವಿಂಗ್ ಮಾಡಿ ಒಂದೇ ಕೈಯಲ್ಲಿ ಕ್ಯಾಚ್ ಹಿಡಿಯುವ ಮೂಲಕ, ತಮ್ಮ ಫೀಲ್ಡಿಂಗ್ ಕೌಶಲ್ಯದಿಂದ ಎಲ್ಲರ ಗಮನ ಸೆಳೆದಿದ್ದಾರೆ.
ಪಂದ್ಯದಲ್ಲಿ ರವಿ ಬಿಷ್ಣೋಯ್ ಹಿಡಿದ ಕ್ಯಾಚ್ ಭಾರಿ ಆಕರ್ಷಣೆಯಾಯ್ತು. 23ರ ಹರೆಯದ ಯುವ ಸ್ಪಿನ್ನರ್, ಅನುಭವಿ ಕಿವೀಸ್ ಆಟಗಾರ ಕೇನ್ ವಿಲಿಯಮ್ಸನ್ ಮೈದಾನಕ್ಕೆ ಬರುತ್ತಿದ್ದಂತೆ ಅವರ ವಿಕೆಟ್ ಪಡೆದರು. ರವಿ ಎಸೆದ ಫುಲ್ ಲೆಂತ್ ಎಸೆತವನ್ನು, ಕೇನ್ ಗಾಳಿಯಲ್ಲಿ ಹೊಡೆದರು. ನಾನ್‌ಸ್ಟ್ರೈಕ್‌ನತ್ತ ಚೆಂಡು ಗಾಳಿಯಲ್ಲಿ ಹಾರಿ ಬರುತ್ತಿದ್ದಂತೆಯೇ ತಮ್ಮ ಬಲಕ್ಕೆ ಚಂಗನೆ ಹಾರಿದ ರವಿ, ಬಲಗೈಯನ್ನು ಚಾಚಿ ಒಂದೇ ಕೈಯಲ್ಲಿ ಡೈವಿಂಗ್ ಕ್ಯಾಚ್ ಪೂರ್ಣಗೊಳಿಸಿದನು. ಆಗ ತಾನೆ ಪಿಚ್‌ಗೆ ಬಂದಿದ್ದ ವಿಲಿಯಮ್ಸನ್ ಐದು ಎಸೆತಗಳಲ್ಲಿ ಒಂದು ರನ್ ಗಳಿಸಿ ನಿರ್ಗಮಿಸಿದರು.
ರವಿ ಬಿಷ್ಣೋಯ್ ಹಿಡಿದ ಕ್ಯಾಚ್, ಐಪಿಎಲ್ ಇತಿಹಾಸದಲ್ಲೇ ಅತ್ಯುತ್ತಮ ಕ್ಯಾಚ್‌ಗಳಲ್ಲಿ ಒಂದು ಎಂದು ಹಿರಿಯ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಪ್ರಸಕ್ತ ಆವೃತ್ತಿಯಲ್ಲಿ ಹಿಡಿದ ಬೆಸ್ಟ್ ಕ್ಯಾಚ್‌ಗಳಲ್ಲಿ ಈ ಕ್ಯಾಚ್ ಕೂಡಾ ಸೇರುತ್ತದೆ. ರವಿ ಬಿಷ್ಣೋಯ್ ಈ ಕ್ಯಾಚ್ ಹಿಡಿಯುತ್ತಿದ್ದಂತೆಯೇ, ಸೋಷಿಯಲ್ ಮೀಡಿಯಾದಲ್ಲೂ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ | ಟಿ20 ಕ್ರಿಕೆಟ್‌ನ ಅತ್ಯಂತ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್; ಟೀಮ್ ಇಂಡಿಯಾ ಮೀರಿಸಿ ಸಿಎಸ್‌ಕೆ ಹಿಂದಿಕ್ಕಿದ ಎಂಐ
ರವಿ ಬಿಷ್ಣೋಯ್ ಹಿಡಿದ ಅದ್ಭುತ ಕ್ಯಾಚ್ ವಿಡಿಯೋ ಇಲ್ಲಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆದ ಲಕ್ನೋ 163 ರನ್ ಗಳಿಸಿತು. 164 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಗುಜರಾತ್, ಕೇವಲ 18.5 ಓವರ್‌ಗಳಲ್ಲಿ 130 ರನ್‌ಗಳಿಗೆ ಆಲೌಟ್ ಆಯಿತು. ಲಕ್ನೋ ಪರ ಯಶ್ ಠಾಕೂರ್ 5 ವಿಕೆಟ್ ಕಬಳಿಸಿ ಪಂದ್ಯಶರೇಷ್ಠ ಪ್ರಶಸ್ತಿ ಪಡೆದರು. ಕೃನಾಲ್ ಪಾಂಡ್ಯ 3 ವಿಕೆಟ್ ಪಡೆದು ಮಿಂಚಿದರು. ಯಶ್ ಠಾಕೂರ್ 3.5 ಓವರ್‌ಗಳಲ್ಲಿ 30 ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆದರೆ, ಕೃನಾಲ್ 4 ಓವರ್ಗೆ 11 ರನ್ ನೀಡಿ 3 ವಿಕೆಟ್ ಕಬಳಿಸಿದರು.
ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮಾತ್ರವೇ ಸೋತಿದ್ದ ಎಲ್ಎಸ್ಜಿ, ಆ ಬಳಿಕ ನಡೆದ ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಇದರಲ್ಲಿ ಆರ್‌ಸಿಬಿ ವಿರುದ್ಧದ ಗೆಲುವು ಕೂಡಾ ಸೇರಿದೆ. ಇದೀಗ ಭರ್ಜರಿ 6 ಅಂಕಗಳೊಂದಿಗೆ ಕೆಎಲ್ ರಾಹುಲ್ ನೇತೃತ್ವದ ತಂಡವು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಮತ್ತೊಂದೆಡೆ ಶುಭ್ಮನ್ ಗಿಲ್ ನನಾಯಕತ್ವದ ಗುಜರಾತ್ ತಂಡವು ಎರಡು ಗೆಲುವು ಹಾಗೂ 3 ಪಂದ್ಯಗಳಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.
ಇದನ್ನೂ ಓದಿ | ಐದು ವಿಕೆಟ್ ಕಿತ್ತ ಯಶ್ ಠಾಕೂರ್; ಗುಜರಾತ್ ಟೈಟಾನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲುವು
ಐಪಿಎಲ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ