ಭಾರತ ಟಿ20 ವಿಶ್ವಕಪ್ ಜೆರ್ಸಿ ಬಿಡುಗಡೆ ಮಾಡಿದ ರೋಹಿತ್, ಜಡೇಜಾ, ಕುಲ್ದೀಪ್; ನಿಜವಾಯ್ತು ವೈರಲ್ ಫೋಟೋ!
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಭಾರತ ಕ್ರಿಕೆಟ್ ತಂಡದ ಟಿ20 ವಿಶ್ವಕಪ್ ಜೆರ್ಸಿಯನ್ನು ಅನಾವರಣಗೊಳಿಸಲಾಗಿದೆ. ಈ ಗ್ರಾಫಿಕ್ ವಿಡಿಯೋವನ್ನು ಅಡಿಡಾಸ್ ಪೋಸ್ಟ್ ಮಾಡಿದೆ.

ಐಸಿಸಿ ಟಿ20 ವಿಶ್ವಕಪ್ (ICC T20 World Cup 2024) ಪಂದ್ಯಾವಳಿಗೆ ಭಾರತ ತಂಡದ ಜೆರ್ಸಿ ಎನ್ನಲಾದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ, ಕೊನೆಗೂ ಭಾರತ ತಂಡದ ಅಧಿಕೃತ ಜೆರ್ಸಿ ಅನಾವರಣಗೊಳಿಸಲಾಗಿದೆ. ಮೇ 6ರ ಸೋಮವಾರ ಜೆರ್ಸಿ ಬಿಡುಗಡೆ ಮಾಡಲಾಗಿದ್ದು, ವೈರಲ್ ಫೋಟೋವನ್ನೇ ಹೋಲುವ ಜೆರ್ಸಿ ಇದಾಗಿದೆ. ಅಡಿಡಾಸ್ ಕಂಪನಿಯು ವಿಶ್ವಕಪ್ ಆಡಲಿರುವ ಟೀಮ್ ಇಂಡಿಯಾದ ಮೂವರು ಸ್ಟಾರ್ ಆಟಗಾರರಾದ ನಾಯಕ ರೋಹಿತ್ ಶರ್ಮಾ, ಕುಲ್ದೀಪ್ ಯಾದವ್ ಹಾಗೂ ರವೀಂದ್ರ ಜಡೇಜಾ ಅವರನ್ನು ಒಳಗೊಂಡಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿದೆ. ಅಲ್ಲಿಗೆ ಭಾರತ ತಂಡದ ಜರ್ಸಿ ಅಂತಿಮಗೊಂಡಂತಾಗಿದೆ.
ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ 20 ಸೆಕೆಂಡುಗಳ ವಿಡಿಯೋ ಕ್ಲಿಪ್‌ನಲ್ಲಿ, ಮೂವರು ಕ್ರಿಕೆಟಿಗರು ಭಾರತ ತಂಡದ ಜೆರ್ಸಿ ಅನಾವರಣಕ್ಕೆ ಸಾಕ್ಷಿಯಾಗಿದ್ದಾರೆ. ಧರ್ಮಶಾಲಾದ ಸುಂದರ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದೊಂದಿಗೆ ಜೆರ್ಸಿ ಅನಾವರಣಗೊಳಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.
ಅಡಿಡಾಸ್ ಕಂಪನಿಯು ವಿಡಿಯೋಗೆ ಶೀರ್ಷಿಕೆ ನೀಡಿದ್ದು, “ಒಂದು ಜೆರ್ಸಿ. ಒಂದು ರಾಷ್ಟ್ರ” ಎಂದು ಹೇಳಿದೆ. ಇದು ಟೀಮ್ ಇಂಡಿಯಾದ ನೂತನ ಟಿ20 ಜೆರ್ಸಿ ಎಂದು ಹೇಳಿದೆ.
ಭಾರತ ತಂಡದ ಹೊಸ ಜೆರ್ಸಿಯ ಭುಜಗಳ ಭಾಗವು ಕೇಸರಿ ಬಣ್ಣದಲ್ಲಿದೆ. ಅದರ ಮೇಲೆ ಮೂರು ಬಿಳಿ ಪಟ್ಟೆಗಳು ಕೂಡ ಇವೆ. ಎದುರು ಭಾಗದಲ್ಲಿ ಡ್ರೀಮ್ 11 ಲೋಗೋ ಇದ್ದು, ಬಿಸಿಸಿಐ ಲಾಂಛನ ಎದೆ ಭಾಗದಲ್ಲಿದೆ. ಅದರ ಮೇಲೆ ಒಂದು ನಕ್ಷತ್ರವಿದೆ. ಇದು 2007ರಲ್ಲಿ ಎಂಎಸ್ ಧೋನಿ ನೇತೃತ್ವದಲ್ಲಿ ಭಾರತ ತಂಡವು ಟಿ20 ವಿಶ್ವಕಪ್ ಟ್ರೋಫಿ ಗೆದ್ದಿರುವುದನ್ನು ಸೂಚಿಸುತ್ತದೆ.
ಇದನ್ನೂ ಓದಿ | RCB vs CSK: ರೋಹಿತ್ ಶರ್ಮಾ ಎಂಐ ತೊರೆದು ಈ ತಂಡದ ಪರ ಆಡ್ಬೇಕು; ಎಚ್‌ಟಿ ಸಮೀಕ್ಷೆಯಲ್ಲಿ ಫ್ಯಾನ್ಸ್ ಹೀಗಂದ್ರು
2011ರಲ್ಲಿ ಭಾರತದಲ್ಲಿ ನಡೆದ ಏಕದಿನನ ವಿಶ್ವಕಪ್ ಬಳಿಕ, ಭಾರತವು ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿ ಗೆಲ್ಲುವ ಗುರಿ ಹೊಂದಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಗೆಲ್ಲಲು ವಿಫಲವಾಗಿರುವ ಭಾರತ ಈ ಬಾರಿ ಐಸಿಸಿ ಟ್ರೋಫಿ ಗೆದ್ದೇ ಗೆಲ್ಲುವ ಶಪಥ ಹಾಕಿಕೊಂಡಿದೆ.
ಭಾರತ ಕ್ರಿಕೆಟ್ ತಂಡವು ಜೂನ್ 5ರಂದು ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಐರ್ಲೆಂಡ್ ವಿರುದ್ಧ ಮೊದಲ ಪಂದ್ಯ ಆಡಲಿದೆ. ಆ ಬಳಿಕ ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಭಾರತದೊಂದಿಗೆ 'ಎ' ಗುಂಪಿನಲ್ಲಿ ಕೆನಡಾ ಮತ್ತು ಯುಎಸ್ಎ ಕೂಡಾ ಸ್ಥಾನ ಪಡೆದಿದೆ.
ಟಿ20 ವಿಶ್ವಕಪ್‌ಗೆ ಭಾರತ ತಂಡ
ಐಸಿಸಿ ಟೂರ್ನಿಯಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ರಿಷಭ್ ಪಂತ್ ಹಾಗೂ ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದು, ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಕೈಬಿಡಲಾಗಿದೆ. ಆಲ್‌ರೌಂಡರ್‌ಗಳಾಗಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಆಯ್ಕೆಯಾಗಿದ್ದಾರೆ. ಕುಲ್ದೀಪ್ ಯಾದವ್, ಯಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ತಂಡದಲ್ಲಿದ್ದಾರೆ.
ಟಿ20 ವಿಶ್ವಕಪ್‌ಗೆ ಸಂಬಂಧಿಸಿದ ಇನ್ನಿತರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ವೈರಲ್ ಆಯ್ತು ಟೀಮ್ ಇಂಡಿಯಾ ಟಿ20 ವಿಶ್ವಕಪ್ ಜೆರ್ಸಿ ಎನ್ನಲಾದ ಫೋಟೋ; ಬಕ್ವಾಸ್ ಎಂದು ನೆಟ್ಟಿಗರು ಟ್ರೋಲ್
