ಇಬ್ಬರು ಮಕ್ಕಳೊಂದಿಗೆ ಪ್ರೇಮಾನಂದ ಮಹಾರಾಜ್ ಭೇಟಿಯಾದ ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ; ವಿಡಿಯೋ ವೈರಲ್
ಸ್ಟಾರ್ ದಂಪತಿಯಾದ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಮಕ್ಕಳೊಂದಿಗೆ ಪ್ರೇಮಾನಂದ ಮಹಾರಾಜ್ ಅವರ ಆಶೀರ್ವಾದ ಪಡೆದಿದ್ದಾರೆ. ಮುಂದೆ ಇಂಗ್ಲೆಂಡ್ ವಿರುದ್ಧದ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿ ನಡೆಯಲಿದ್ದು, ಮಹತ್ವದ ಟೂರ್ನಿಗೂ ಮುನ್ನ ವಿರಾಟ್ ಆಧ್ಯಾತ್ಮಿಕ ಗುರುವಿನೊಂದಿಗೆ ಮಾತನಾಡಿದ್ದಾರೆ.
ಟೀಮ್ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ, ತಮ್ಮ ಇಬ್ಬರು ಮಕ್ಕಳೊಂದಿಗೆ ವೃಂದಾವನ ಧಾಮಕ್ಕೆ ಭೇಟಿ ನೀಡಿದ್ದಾರೆ. ಸ್ಟಾರ್ ದಂಪತಿ ಆಧ್ಯಾತ್ಮಿಕ ಗುರು ಪ್ರೇಮಾನಂದ ಜಿ ಮಹಾರಾಜ್ ಅವರನ್ನು ಭೇಟಿ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿರುಷ್ಕಾ ದಂಪತಿಯು ಪ್ರೇಮಾನಂದ್ ಅವರ ದೀರ್ಘಕಾಲದ ಶಿಷ್ಯರು. ಈ ಹಿಂದೆಯೂ ದಂಪತಿ ಇಲ್ಲಿಗೆ ಬಂದಿದ್ದರು.
ವಿರಾಟ್ ಮತ್ತು ಅನುಷ್ಕಾ ತಮ್ಮ ಮಗಳು ವಮಿಕಾ ಹಾಗೂ ಕಿರಿಯ ಮಗ ಅಕಾಯ್ ಜೊತೆಗೆ ಬಂದಿದ್ದಾರೆ. ಮೊಣಕಾಲೂರಿ ಪ್ರೇಮಾನಂದ ಅವರಿಗೆ ನಮಿಸುವುದನ್ನು ವೈರಲ್ ವಿಡಿಯೋದಲ್ಲಿ ನೋಡಬಹುದು. ಆಧ್ಯಾತ್ಮಿಕ ಗುರುವಿನ ಆಶೀರ್ವಾದವನ್ನು ಪಡೆದು ಅವರೊಂದಿಗೆ ಮಾತನಾಡುತ್ತಾರೆ. 2023ರ ಜನವರಿಯಲ್ಲಿ ವಿರಾಟ್ ಮತ್ತು ಅನುಷ್ಕಾ ದಂಪತಿ ಪ್ರೇಮಾನಂದ್ ಅವರನ್ನು ಭೇಟಿಯಾಗಿದ್ದರು. ಅದಾದ ನಂತರ ಇದು ಎರಡನೇ ಬಾರಿ ವೃಂದಾವನ ಧಾಮಕ್ಕೆ ಆಗಮಿಸಿದ್ದಾರೆ.
ಅನುಷ್ಕಾ ಶರ್ಮಾ ಅವರು ಗುರುಗಳಿಗೆ ಹೀಗೆ ಕೇಳುತ್ತಾರೆ. “ಕಳೆದ ಬಾರಿ ನಾವು ನಿಮ್ಮ ಬಳಿ ಬಂದಾಗ, ನನ್ನ ಮನಸ್ಸಿನಲ್ಲಿ ಕೆಲವು ಪ್ರಶ್ನೆಗಳು ಇದ್ದವು. ನಾನು ಏನನ್ನೋ ಕೇಳಬೇಕೆಂದು ಭಾವಿಸಿದೆ. ಆದರೆ ಅಲ್ಲಿ ಕುಳಿತಿರುವ ಪ್ರತಿಯೊಬ್ಬರೂ ನಿಮ್ಮನ್ನು ಅಂತಹದೇ ಪ್ರಶ್ನೆ ಕೇಳಿದ್ದರು. ನಾನು ನಿಮ್ಮೊಂದಿಗೆ ಮನಸ್ಸಿನಲ್ಲಿ ಮಾತನಾಡುತ್ತಿದ್ದೇನೆ ಎಂದು ತೋರುತ್ತದೆ. ಮರುದಿನ ನಾನು ಏಕಿಕ್ ವರ್ತಲಾಪ್ (ಆನ್‌ಲೈನ್‌ನಲ್ಲಿ ಪ್ರೇಮಾನಂದರ ಧರ್ಮೋಪದೇಶ ಪ್ರಸಾರ) ನೋಡುವಾಗ, ಯಾರೋ ಒಬ್ಬರು ನನ್ನ ತಲೆಯಲ್ಲಿದ್ದ ಪ್ರಶ್ನೆಯನ್ನು ಕೇಳುತ್ತಿದ್ದರು.”
ಅನುಷ್ಕಾಗೆ ಪ್ರೇಮಾನಂದ್ ಉತ್ತರ ಹೀಗಿತ್ತು
"ನಮಗೆ ಪ್ರೇಮಭಕ್ತಿಯನ್ನು ನೀಡುವಂತೆ ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ" ಎಂದು ಅನುಷ್ಕಾ ಕೇಳುತ್ತಾರೆ. ಅನುಷ್ಕಾ ಅವರ ಮನವಿಗೆ ಹೃದಯಸ್ಪರ್ಶಿ ಉತ್ತರ ನೀಡಿದ ಪ್ರೇಮಾನಂದ ಅವರು, "ನೀವಿಬ್ಬರೂ ತುಂಬಾ ಧೈರ್ಯಶಾಲಿಗಳು. ಜಗತ್ತಿನಲ್ಲಿ ಇವೆಲ್ಲವನ್ನೂ ಸಾಧಿಸಲು, ಭಕ್ತಿಯತ್ತ ವಾಲುವುದು ಬಹಳ ಕಷ್ಟ. ನಿಮ್ಮ ಭಕ್ತಿಗೆ ನೀವು ಖಂಡಿತವಾಗಿಯೂ ಉತ್ತರವನ್ನು ಪಡೆಯುತ್ತೀರಿ ಎಂದು ನಾನು ಭಾವಿಸುತ್ತೇನೆ," ಎಂದು ಹೇಳುತ್ತಾರೆ.
ವೈರಲ್ ವಿಡಿಯೋ
ಅನುಷ್ಕಾ ಅವರು ಪ್ರೇಮಾನಂದ ಮಹಾರಾಜ್ ಅವರೊಂದಿಗೆ ಮಾತನಾಡುತ್ತಿರುವಾಗ, ಕೊಹ್ಲಿ ತಮ್ಮ ಮಗಳು ವಮಿಕಾ ಅವರನ್ನು ಮಡಿಲಲ್ಲಿ ಕೂರಿಸಿ ಅವರೊಂದಿಗೆ ಮಾತನಾಡುವುದನ್ನು ಕಾಣಬಹುದು. ಕಿರಿಯ ಮಗ ಅಕಾಯ್‌ಅನ್ನು ಅನುಷ್ಕಾ ಅವರು ಹಿಡಿದುಕೊಂಡಿರುವುದನ್ನು ಕಾಣಬಹುದು. ಮಕ್ಕಳ ಫೋಟೊವನ್ನು ಸ್ಟಾರ್ ದಂಪತಿ ಇನ್ನೂ ಬಹಿರಂಗಪಡಿಸಿಲ್ಲ. ಮಾಡಿಲ್ಲ. ಹೀಗಾಗಿ ಫೋಟೋ ಬ್ಲರ್ ಮಾಡಲಾಗಿದೆ.
ವಿರಾಟ್ ಕೊಹ್ಲಿ ಕಳಪೆ ಫಾರ್ಮ್
ವಿರಾಟ್ ಕೊಹ್ಲಿ ಇತ್ತೀಚೆಗೆ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಆಡಿದ್ದರು. ಆಸ್ಟ್ರೇಲಿಯಾದಲ್ಲಿ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿ ಇರಲಿಲ್ಲ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಶತಕ ಗಳಿಸಿದರೂ, ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ವಿರಾಟ್ ಗಳಿಸಿದ್ದು ಕೇವಲ 190 ರನ್ ಮಾತ್ರ. ಮುಂದೆ ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲಿದ್ದು, ಅದಕ್ಕೂ ಮುನ್ನ ಮಹಾರಾಜ್ ಅವರೊಂದಿಗೆ ಮಾತನಾಡಿದ್ದಾರೆ. ಹೊಸ ಸರಣಿಗೂ ಮುನ್ನ ವಿರಾಟ್ ಆಧ್ಯಾತ್ಮಿಕ ಲೋಕದತ್ತ ಆಸಕ್ತಿ ಬೆಳೆಸಿದ್ದು, ಮುಂದಿನ ಸರಣಿಯಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ.