ಸ್ಯಾಮ್ ಕಾನ್ಸ್ಟಾಸ್ ಕೆಣಕಿ ಕೆಟ್ಟ ವಿರಾಟ್ ಕೊಹ್ಲಿ; ಯುವ ಆಟಗಾರನೊಂದಿಗೆ ದಿಗ್ಗಜನ ನಡೆಗೆ ವ್ಯಾಪಕ ಟೀಕೆ -Video
ಕನ್ನಡ ಸುದ್ದಿ  /  ಕ್ರಿಕೆಟ್  /  ಸ್ಯಾಮ್ ಕಾನ್ಸ್ಟಾಸ್ ಕೆಣಕಿ ಕೆಟ್ಟ ವಿರಾಟ್ ಕೊಹ್ಲಿ; ಯುವ ಆಟಗಾರನೊಂದಿಗೆ ದಿಗ್ಗಜನ ನಡೆಗೆ ವ್ಯಾಪಕ ಟೀಕೆ -Video

ಸ್ಯಾಮ್ ಕಾನ್ಸ್ಟಾಸ್ ಕೆಣಕಿ ಕೆಟ್ಟ ವಿರಾಟ್ ಕೊಹ್ಲಿ; ಯುವ ಆಟಗಾರನೊಂದಿಗೆ ದಿಗ್ಗಜನ ನಡೆಗೆ ವ್ಯಾಪಕ ಟೀಕೆ -Video

ಮೆಲ್ಬೋರ್ನ್‌ನ ಎಂಸಿಜಿಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಂದು, ಯುವ ಆಟಗಾರ ಸ್ಯಾಮ್ ಕಾನ್ಸ್ಟಾಸ್ ಅವರನ್ನು ವಿರಾಟ್ ಕೊಹ್ಲಿ ಕೆಣಕಿದ್ದಾರೆ. ಕೊಹ್ಲಿ ನಡೆಗೆ ಹಿರಿಯ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಯಾಮ್ ಕಾನ್ಸ್ಟಾಸ್ ಕೆಣಕಿ ಕೆಟ್ಟ ವಿರಾಟ್ ಕೊಹ್ಲಿ; ದಿಗ್ಗಜನ ನಡೆಗೆ ವ್ಯಾಪಕ ಟೀಕೆ
ಸ್ಯಾಮ್ ಕಾನ್ಸ್ಟಾಸ್ ಕೆಣಕಿ ಕೆಟ್ಟ ವಿರಾಟ್ ಕೊಹ್ಲಿ; ದಿಗ್ಗಜನ ನಡೆಗೆ ವ್ಯಾಪಕ ಟೀಕೆ (AP)

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ಸೆಷನ್‌ನಲ್ಲೇ, ಯುವ ಆಟಗಾರ ಸ್ಯಾಮ್ ಕಾನ್ಸ್ಟಾಸ್ (Sam Konstas) ತಮ್ಮ ಪದಾರ್ಪಣೆ ಪಂದ್ಯವನ್ನು ಸ್ಮರಣೀಯವಾಗಿಸಿದ್ದಾರೆ. ಭಾರತದ ಬಿಗಿ ಬೌಲಿಂಗ್‌ ದಾಳಿಯನ್ನು ನಿರ್ಭೀತಿಯಿಂದ ಎದುರಿಸಿ ಆಕರ್ಷಕ ಅರ್ಧಶತಕ ಸಿಡಿಸಿದರು. ಅದರಲ್ಲೂ ವಿಶ್ವದ ಶ್ರೇಷ್ಠ ಬೌಲರ್‌ ಜಸ್ಪ್ರೀತ್‌ ಬುಮ್ರಾ ಅವರನ್ನು ಕಾನ್ಸ್ಟಾಸ್ ಎದುರಿಸಿದ ರೀತಿಗೆ ಕ್ರಿಕೆಟ್‌ ದಿಗ್ಗಜರು ಮೆಚ್ಚಿದ್ದಾರೆ. ಕೇವಲ 52 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ 19ರ ಹರೆಯದ ಆಟಗಾರ, ಕೊನೆಗೆ 60(65) ರನ್‌ ಗಳಿಸಿ ಔಟಾದರು. ಈ ನಡುವೆ ಆಸೀಸ್‌ ಯುವ ಆಟಗಾರನನ್ನು ಸ್ಲೆಡ್ಜ್‌ ಮಾಡಲು ಹೋಗಿ ಭಾರತೀಯ ಆಟಗಾರರೇ ಕೈಸುಟ್ಟುಕೊಂಡರು.

ತಮ್ಮ ಇನ್ನಿಂಗ್ಸ್‌ ಆರಂಭದಲ್ಲಿಯೇ ಕಾನ್ಸ್ಟಾಸ್ ಕೆಲವೊಂದು ಸೊಗಸಾದ ಹೊಡೆತಕ್ಕೆ ಕೈ ಹಾಕಿದರು. ಟಿ20 ಶೈಲಿಯಲ್ಲಿ‌ ಬ್ಯಾಟ್ ಬೀಸಿದ ಅವರು, ಬುಮ್ರಾ ಎಸೆತಗಳನ್ನು ಸರಾಗವಾಗ ಬೌಂಡರಿಗಟ್ಟಿದರು. ಒಂದು ಹಂತದಲ್ಲಿ ಯುವ ಆಟಗಾರನಿಗೆ ಹೇಗೆ ಬೌಲಿಂಗ್‌ ಮಾಡಬೇಕು ಎಂದು ಬುಮ್ರಾ ಖುದ್ದು ಯೋಚಿಸುವಂತೆ ಮಾಡಿದರು. ಈ ನಡುವೆ, ಕಾನ್ಸ್ಟಾಸ್ ಅವರ ವಿಕೆಟ್‌ ಪಡೆಯುವುದು ಭಾರತಕ್ಕೆ ಅನಿವಾರ್ಯವಾಯ್ತು. ಆಗ ವಿರಾಟ್ ಕೊಹ್ಲಿ ಮೈಂಡ್‌ ಗೇಮ್‌ ಶುರು ಮಾಡಿ, ಯುವ ಆಟಗಾರನನ್ನು ಕೆಣಕುವ ಪ್ರಯತ್ನ ಮಾಡಿದರು. ಪಿಚ್‌ ಬಳಿ 19 ವರ್ಷದ ಬ್ಯಾಟರ್ ನಡೆದು ಬರುತ್ತಿದ್ದಾಗ, ವೇಗವಾಗಿ ನಡೆದು ಬಂದ ಕೊಹ್ಲಿ, ಕಾನ್ಸ್ಟಾಸ್‌ ಭುಜಕ್ಕೆ ಡಿಕ್ಕಿ ಹೊಡೆದು ತಳ್ಳಿದಂತೆ ಕಾಣಿಸಿತು.

ಈ ವೇಳೆ ಕೊಹ್ಲಿ ಮತ್ತು ಕಾನ್ಸ್ಟಾಸ್ ನಡುವೆ ಲಘು ವಾಗ್ವಾದ ನಡೆಯಿತು. ಆ ಸಮಯದಲ್ಲಿ ಇತರ ಆಟಗಾರರು ಮತ್ತು ಅಂಪೈರ್‌ ಮಧ್ಯಪ್ರವೇಶಿಸಿದರು. ಆಸೀಸ್‌ ಯುವ ಕ್ರಿಕೆಟಿಗನನ್ನು ಕೆಣಕಲು ವಿರಾಟ್‌ ನಡೆದುಕೊಂಡ ರೀತಿ ಪ್ರಬುದ್ಧ ನಡೆಯಂತೆ ಕಾಣಿಸಲಿಲ್ಲ. ಅದರಂತೆಯೇ, ವಿರಾಟ್‌ ನಡೆಯಿಂದ ಆಸ್ಟ್ರೇಲಿಯಾದ ಹೊಸ ಓಪನರ್‌ ಮನಸ್ಥಿತಿ ಹಾಗೂ ಆಟದ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರಲಿಲ್ಲ. ವಿರಾಟ್‌ ಕೆಣಕಿದ ನಂತರವೂ ಅಬ್ಬರಿಸಿದ ಬ್ಯಾಟರ್ ಪದಾರ್ಪಣೆ ಟೆಸ್ಟ್ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದರು. 92.31ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅವರು, 6 ಬೌಂಡರಿ ಹಾಗೂ 2 ಸಿಕ್ಸರ್‌ ಸಿಡಿಸಿದರು.

ಆಗಿದ್ದೇನು?

10ನೇ ಓವರ್ ನಂತರ ಈ ಘಟನೆ ಸಂಭವಿಸಿದೆ. ಮೊಹಮ್ಮದ್ ಸಿರಾಜ್ ಅವರ ಕೊನೆಯ ಎಸೆತದಲ್ಲಿ ಒಂದು ರನ್ ಗಳಿಸಿದ ನಂತರ, ಕಾನ್ಸ್ಟಾಸ್ ತಮ್ಮ ಕೈಗವಸುಗಳನ್ನು ತೆಗೆದು ಕ್ರೀಸ್‌ನ ಇನ್ನೊಂದು ಬದಿಯಲ್ಲಿರುವ ತಮ್ಮ ಜೊತೆಗಾರ ಉಸ್ಮಾನ್ ಖವಾಜಾ ಕಡೆಗೆ ನಡೆಯುತ್ತಿದರು. ಕೊಹ್ಲಿ ಚೆಂಡನ್ನು ಎತ್ತಿಕೊಂಡು ಉದ್ದೇಶಪೂರ್ವಕವಾಗಿ ಕಾನ್ಸ್ಟಾಸ್ ಕಡೆಗೆ ಚಲಿಸುತ್ತಿರುವುದು ವಿಡಿಯೋದಲ್ಲಿ ಕಾಣಿಸಿದೆ. ಆಗ ಇಬ್ಬರೂ ಪರಸ್ಪರ ಡಿಕ್ಕಿ ಹೊಡೆದಿದ್ದಾರೆ. ಕೊಹ್ಲಿ ಹಿಂದಕ್ಕೆ ತಿರುಗಿ ಕಾನ್ಸ್ಟಾಸ್‌ಗೆ ಏನೋ ಹೇಳಿದ್ದಾರೆ. ಅದಕ್ಕೆ ಬ್ಯಾಟರ್‌ ಕೂಡಾ ಪ್ರತಿಕ್ರಿಯಿಸಿದ್ದಾರೆ.

ಇಲ್ಲಿದೆ ವಿಡಿಯೋ

ಕೊಹ್ಲಿ ಬಗ್ಗೆ ಪಾಂಟಿಂಗ್, ವಾನ್ ಅಸಮಾಧಾನ

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಇದು ಕೊಹ್ಲಿಯ ತಪ್ಪು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದಿದ್ದಾರೆ. “ವಿರಾಟ್ ಯಾವ ಕಡೆ ನಡೆಯುತ್ತಿದ್ದಾರೆ ಎಂಬುದನ್ನು ನೋಡಿ. ವಿರಾಟ್ ತಮ್ಮ ಬಲಕ್ಕೆ ನಡೆದು ಆ ಮುಖಾಮುಖಿಗೆ ಪ್ರಚೋದಿಸಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಯಾವುದೇ ಸಂದೇಹವಿಲ್ಲ,” ಎಂದು ಅವರು ಹೇಳಿದ್ದಾರೆ.

ಮ್ಯಾಚ್ ರೆಫರಿ ಖಂಡಿತವಾಗಿಯೂ ಅದನ್ನು ಪರಿಶೀಲಿಸುತ್ತಾರೆ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಹೇಳಿದ್ದಾರೆ. “ಕಾನ್ಸ್ಟಾಸ್ ತನ್ನ ದಾರಿಯಲ್ಲಿಯೇ ಹೋಗುತ್ತಿದ್ದ. ಆದರೆ ವಿರಾಟ್ ಕಡೆ ನೋಡಿ. ಅವರೇ ದಿಕ್ಕನ್ನು ಬದಲಾಯಿಸಿದ್ದಾರೆ. ವಿರಾಟ್ ಸಾರ್ವಕಾಲಿಕ ಶ್ರೇಷ್ಠ ಆಟಗಾರ. ಅವರು ತುಂಬಾ ಅನುಭವ ಹೊಂದಿದ್ದಾರೆ. ಅವರೇ ಹಿಂತಿರುಗಿ ನೋಡಿ, ನಾನೇಕೆ ಹೀಗೆ ಮಾಡಿದೆ? ಎಂದು ಕೇಳಬೇಕು” ಎಂದು ವಾನ್ ವೀಕ್ಷಕವಿವರಣೆಯಲ್ಲಿ ಹೇಳಿದ್ದಾರೆ.

Whats_app_banner