ಕೆಣಕಿದ ಆಸ್ಟ್ರೇಲಿಯಾ ಪ್ರೇಕ್ಷಕರ ಸದ್ದಡಗಿಸಿದ ವಿರಾಟ್ ಕೊಹ್ಲಿ; ಜೇಬು ಖಾಲಿಯಿದೆ ಎಂದು ತೋರಿಸಿದ್ದೇಕೆ? Video
ಕನ್ನಡ ಸುದ್ದಿ  /  ಕ್ರಿಕೆಟ್  /  ಕೆಣಕಿದ ಆಸ್ಟ್ರೇಲಿಯಾ ಪ್ರೇಕ್ಷಕರ ಸದ್ದಡಗಿಸಿದ ವಿರಾಟ್ ಕೊಹ್ಲಿ; ಜೇಬು ಖಾಲಿಯಿದೆ ಎಂದು ತೋರಿಸಿದ್ದೇಕೆ? Video

ಕೆಣಕಿದ ಆಸ್ಟ್ರೇಲಿಯಾ ಪ್ರೇಕ್ಷಕರ ಸದ್ದಡಗಿಸಿದ ವಿರಾಟ್ ಕೊಹ್ಲಿ; ಜೇಬು ಖಾಲಿಯಿದೆ ಎಂದು ತೋರಿಸಿದ್ದೇಕೆ? Video

ಸಿಡ್ನಿ ಟೆಸ್ಟ್‌ ಪಂದ್ಯದ ಸಮಯದಲ್ಲಿ ಭಾರತೀಯ ಆಟಗಾರರನ್ನು ಕೆಣಕಿದ ಆಸ್ಟ್ರೇಲಿಯಾದ ಪ್ರೇಕ್ಷಕರಿಗೆ ವಿರಾಟ್ ಕೊಹ್ಲಿ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ. ಆಸೀಸ್‌ ಆಟಗಾರರ ಕುಖ್ಯಾತ ಸ್ಯಾಂಡ್ ಪೇಪರ್ ಗೇಟ್ ಹಗರಣವನ್ನು ನೆನಪಿಸಿದ್ದಾರೆ. ಈ ವಿಡಿಯೋ ಈಗ ವೈರಲ್‌ ಆಗಿದೆ.

ಕೆಣಕಿದ ಆಸ್ಟ್ರೇಲಿಯಾ ಪ್ರೇಕ್ಷಕರ ಸದ್ದಡಗಿಸಿದ ಕೊಹ್ಲಿ; ಜೇಬು ಖಾಲಿಯಿದೆ ಎಂದು ತೋರಿಸಿದ್ದೇಕೆ?
ಕೆಣಕಿದ ಆಸ್ಟ್ರೇಲಿಯಾ ಪ್ರೇಕ್ಷಕರ ಸದ್ದಡಗಿಸಿದ ಕೊಹ್ಲಿ; ಜೇಬು ಖಾಲಿಯಿದೆ ಎಂದು ತೋರಿಸಿದ್ದೇಕೆ? (X)

ಮೈದಾನದಲ್ಲಿ ಅಗ್ರೆಸಿವ್ ವ್ಯಕ್ತಿತ್ವಕ್ಕೆ ಹೆಸರಾಗಿರುವ ಭಾರತ ಕ್ರಿಕೆಟ್‌ ತಂಡದ ಸ್ಟಾರ್‌ ಆಟಗಾರ ವಿರಾಟ್ ಕೊಹ್ಲಿ, ಪಂದ್ಯ ವೀಕ್ಷಿಸುವ ಪ್ರೇಕ್ಷಕರೊಂದಿಗೂ ಹಲವು ರೀತಿಯಲ್ಲಿ ಸಂವಹನ ನಡೆಸುತ್ತಾರೆ. ಕೋಟ್ಯಂತರ ಅಭಿಮಾನಿ ಬಳಗವನ್ನು ಹೊಂದಿರುವ ಕಿಂಗ್‌ ಕೊಹ್ಲಿ, ಬಾರ್ಡರ್-ಗವಾಸ್ಕರ್ ಟ್ರೋಫಿ ಸಮಯದಲ್ಲೂ, ಪ್ರೇಕ್ಷಕರೊಂದಿಗೆ ಸನ್ನೆಯಲ್ಲೇ ಮಾತನಾಡಿದ್ದಾರೆ. ಸದಾ ತಮ್ಮ ತಂಡದ ಆಟಗಾರರ ಪರ ನಿಲ್ಲುವ ವಿರಾಟ್‌, ಅವರಿಗೆ ಸ್ಫೂರ್ತಿ ತುಂಬುತ್ತಾರೆ. ಸದ್ಯ ಆಸ್ಟ್ರೇಲಿಯಾ ವಿರುದ್ಧದ ಸರಣಿ ಅಂತ್ಯವಾಗಿದ್ದು ಭಾರತ ಸರಣಿ ಸೋಲು ಕಂಡಿದೆ. ಆದರೆ, ಸಿಡ್ನಿ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಅಭಿಮಾನಿಗಳ ವರ್ತನೆಗೆ ಕೊಹ್ಲಿ ಭಿನ್ನ ರೀತಿಯಲ್ಲಿ ಟಕ್ಕರ್‌ ಕೊಟ್ಟಿದ್ದು ಈಗ ವೈರಲ್‌ ಆಗಿದೆ.

ಸಿಡ್ನಿಯಲ್ಲಿ ಆಸ್ಟ್ರೇಲಿಯಾ ತಂಡವು 162 ರನ್‌ಗಳ ಗುರಿ ಬೆನ್ನಟ್ಟುವ ಸಮಯದಲ್ಲಿ, ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಆಸೀಸ್ ಫ್ಯಾನ್ಸ್‌ ಟೀಮ್‌ ಇಂಡಿಯಾ ಆಟಗಾರರನ್ನು ಕೆಣಕಲು ಮುಂದಾದರು. ಆಗ ಕೊಹ್ಲಿ ಕೂಡಾ ತಮ್ಮದೇ ಶೈಲಿಯಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಪ್ಯಾಂಟ್‌ನ ಎರಡೂ ಜೇಬುಗಳಿಗೆ ಕೈ ಹಾಕಿ ಅದರಲ್ಲಿ ಏನೂ ಇಲ್ಲ, ಖಾಲಿಯಿದೆ ಎಂಬ ರೀತಿಯಲ್ಲಿ ಸನ್ನೆ ಮಾಡಿದರು. ಕೊಹ್ಲಿಯ ಸನ್ನೆಯು ಸ್ಯಾಂಡ್‌ ಪೇಪರ್‌ ವಿವಾದವನ್ನು ನೆನಪಿಸಿತು.

2018ರ ಆರಂಭದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಅನ್ನು ಬೆಚ್ಚಿಬೀಳಿಸಿದ ಕುಖ್ಯಾತ ಸ್ಯಾಂಡ್ ಪೇಪರ್ ಗೇಟ್ ಹಗರಣವನ್ನು ಉಲ್ಲೇಖಿಸಿ ಕೊಹ್ಲಿ ತಮ್ಮ ಜೇಬುಗಳು ಖಾಲಿ ಇರುವಂತೆ ಸನ್ನೆ ಮಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾದ ಕ್ಯಾಮರೂನ್ ಬ್ಯಾನ್ಕ್ರಾಫ್ಟ್ ಕೆಂಪು ಚೆಂಡಿನ ಆಕಾರವನ್ನು ಬದಲಾಯಿಸಲು ಸ್ಯಾಂಡ್‌ ಪೇಪರ್ ಹಚ್ಚಿದ್ದರು. ಆ ಮೂಲಕ ಆಸೀಸ್ ಬೌಲರ್‌ಗಳಿಗೆ ಸಹಾಯ ಮಾಡುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದು ಕ್ರಿಕೆಟ್‌ ಲೋಕದಲ್ಲಿ ದೊಡ್ಡ ವಿವಾದ ಸೃಷ್ಟಿಸಿತ್ತು.

ನಿಷೇಧ ಶಿಕ್ಷೆ

ಹಗರಣದ ಪರಿಣಾಮವಾಗಿ ಬ್ಯಾನ್ಕ್ರಾಫ್ಟ್ ಮಾತ್ರವಲ್ಲದೆ ಆಗಿನ ನಾಯಕ ಸ್ಟೀವ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ನಿಷೇಧ ಶಿಕ್ಷೆಗೆ ಒಳಗಾದರು. ಸ್ಮಿತ್ ಮತ್ತು ವಾರ್ನರ್ ಇಬ್ಬರನ್ನೂ ಒಂದು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಿಸಲಾಯಿತು. ಅಲ್ಲದೆ ಅವರನ್ನು ನಾಯಕತ್ವದಿಂದ ತೆಗೆದುಹಾಕಲಾಯಿತು. ಕೆಲವು ವರ್ಷಗಳ ನಂತರ, ಸ್ಮಿತ್ ಮೇಲಿನ ನಾಯಕತ್ವದ ನಿಷೇಧವನ್ನು ಕ್ರಿಕೆಟ್ ಆಸ್ಟ್ರೇಲಿಯಾ ತೆಗೆದುಹಾಕಿತು.

ಆಸೀಸ್‌ ಇನ್ನಿಂಗ್ಸ್‌ನಲ್ಲಿ ಸ್ಟೀವ್ ಸ್ಮಿತ್ ಔಟಾದ ನಂತರ ಭಾರತ ತಂಡದ ಆಟಗಾರ ಕೊಹ್ಲಿ ಈ ರೀತಿ ಸನ್ನೆ ಮಾಡಿದ್ದಾರೆ. ಕೊಹ್ಲಿ ಸನ್ನೆಯ ವಿಡಿಯೋ ನೋಡಿ.

ಪ್ರೇಕ್ಷಕರ ವರ್ತನೆಗೆ ಸೊಪ್ಪು ಹಾಕದ ಕೊಹ್ಲಿ

ಆಸ್ಟ್ರೇಲಿಯಾದ ಪ್ರೇಕ್ಷಕರು ಮತ್ತು ವಿರಾಟ್ ಕೊಹ್ಲಿ ನಡುವೆ ಆಗಾಗ ಇಂಥಾ ಸನ್ನಿವೇಶಗಳು ನಡೆಯುತ್ತಿರುತ್ತವೆ. ಈ ಬಾರಿ ಸರಣಿಯಲ್ಲೂ ಅದು ಬೇರೆ ಹಂತಕ್ಕೆ ಹೋಗಿದೆ. ಮೆಲ್ಬೋರ್ನ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ ಪಂದ್ಯದ ಸಮಯದಲ್ಲಿ ಸ್ಯಾಮ್ ಕಾನ್ಸ್ಟಾಸ್ ಅವರ ಭುಜಕ್ಕೆ ತಾಗಿದ ಬಳಿಕ, ಕೊಹ್ಲಿ ಐಸಿಸಿಯಿಂದ ದಂಡದ ಬಿಸಿ ಅನುಭವಿಸಿದರು. ಆದರೂ, ಪಂದ್ಯ ಮಾತ್ರವಲ್ಲದೆ ಸರಣಿಯುದ್ದಕ್ಕೂ ಆಸೀಸ್ ಅಭಿಮಾನಿಗಳಿಂದ ನಿರಂತರವಾಗಿ ದೂಷಣೆಗೆ ಒಳಗಾಗಿದ್ದಾರೆ. ಆದರೆ, ಯಾವುದಕ್ಕೂ ಸೊಪ್ಪು ಹಾಕದ ಕೊಹ್ಲಿ ಜನಸಮೂಹ ಇನ್ನೂ ಜೋರಾಗಿ ಕೂಗುವಂತೆ ಪ್ರಚೋದನೆ ನೀಡಿದ್ದಾರೆ.

Whats_app_banner