ಮಯಾಂಕ್ ಅಗರ್ವಾಲ್ 4ನೇ ಶತಕ; ನಾಗಾಲ್ಯಾಂಡ್ ಮಣಿಸಿ 6ನೇ ಜಯದೊಂದಿಗೆ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್ಗೆ ಲಗ್ಗೆ
Vijay Hazare Trophy: ವಿಜಯ್ ಹಜಾರೆ ಟ್ರೋಫಿಯಲ್ಲಿ ನಾಗಾಲ್ಯಾಂಡ್ ತಂಡವನ್ನು 9 ವಿಕೆಟ್ಗಳ ಅಂತರದಿಂದ ಮಣಿಸಿದ ಕರ್ನಾಟಕ ತಂಡ, ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ನಾಯಕ ಮಯಾಂಕ್ ಅಗರ್ವಾಲ್ (116) ಅವರ 4ನೇ ಶತಕದ ನೆರವಿನಿಂದ ಕರ್ನಾಟಕ ತಂಡ ತನ್ನ ಕೊನೆಯ ಲೀಗ್ ಪಂದ್ಯದಲ್ಲೂ ಭರ್ಜರಿ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದೆ. ಇಂದು (ಜನವರಿ 3) ಅಹ್ಮದಾಬಾದ್ನ ಗುಜರಾತ್ ಕಾಲೇಜ್ ಗ್ರೌಂಡ್ನಲ್ಲಿ ನಾಗಾಲ್ಯಾಂಡ್ ವಿರುದ್ಧ ಅಬ್ಬರಿಸಿದ ಕರ್ನಾಟಕ, 9 ವಿಕೆಟ್ಗಳ ಅಮೋಘ ಜಯ ಸಾಧಿಸಿತು. ಲೀಗ್ ಹಂತದಲ್ಲಿ ಆಡಿದ 7 ಪಂದ್ಯಗಳಲ್ಲಿ ದಾಖಲಾದ 6ನೇ ಗೆಲುವು ಇದಾಗಿದ್ದರೆ, ನಾಗಾಲ್ಯಾಂಡ್ 6ನೇ ಸೋಲಿಗೆ ಶರಣಾಯಿತು.
ಸಿ ಗುಂಪಿನಲ್ಲಿ ರೌಂಡ್-7 ಪಂದ್ಯದಲ್ಲಿ ಕರ್ನಾಟಕ ಟಾಸ್ ಜಯಿಸಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲ ಬ್ಯಾಟಿಂಗ್ ನಡೆಸಿದ ನಾಗಾಲ್ಯಾಂಡ್, 48.3 ಓವರ್ಗಳಲ್ಲಿ 206 ರನ್ಗೆ ಆಲೌಟ್ ಆಯಿತು. ಚೇತನ್ ಬಿಸ್ಟ್ 77, ಜೋನಾಥನ್ 51 ರನ್ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಲು ನೆರವಾದರು. ಕರ್ನಾಟಕ ಪರ ಶ್ರೇಯಸ್ ಗೋಪಾಲ್ 4 ವಿಕಟ್ ಕಬಳಿಸಿ ಮಿಂಚಿದರು. ಕರ್ನಾಟಕ 1 ವಿಕೆಟ್ ನಷ್ಟಕ್ಕೆ 37.5 ಓವರ್ಗಳಲ್ಲಿ ಗೆಲುವಿನ ನಗೆ ಬೀರಿತು. ಮಯಾಂಕ್ ಮತ್ತೊಂದು ಶತಕ ಸಿಡಿಸಿದರು.
ಶ್ರೇಯಸ್ ಗೋಪಾಲ್ ಅಬ್ಬರ, ನಾಗಾಲ್ಯಾಂಡ್ ತತ್ತರ
ಗೆಲುವಿನೊಂದಿಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಅಭಿಯಾನ ಮುಗಿಸುವ ಲೆಕ್ಕಾಚಾರ ಹಾಕಿದ್ದ ನಾಗಾಲ್ಯಾಂಡ್ ಕಳಪೆ ಬ್ಯಾಟಿಂಗ್ಗೆ ಬೆಲೆ ತೆತ್ತಿತ್ತು. ಸೆಡೆಝಾಲಿ ರೂಪೆರೊ 0, ನಿಶ್ಚಲ್ 1 ರನ್ಗೆ ಆರಂಭದಲ್ಲೇ ವಿಕೆಟ್ ಒಪ್ಪಿಸಿ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. 24 ರನ್ ಗಳಿಸಿ ನೆರವಾಗಲು ಯತ್ನಿಸಿದ ಹೇಮ್ ಛೆಟ್ರಿಗೆ ಗೋಪಾಲ್ ಗೇಟ್ಪಾಸ್ ಕೊಟ್ಟರು. ಯುಗಂಧರ್ ಸಿಂಗ್ ಸಹ 10 ರನ್ಗೆ ಆಟ ಮುಗಿಸಿದರು. ಆಗ ಜೊನಾಥನ್ ಮತ್ತು ಚೇತನ್ ಬಿಸ್ಟ್ ಜೊತೆಯಾಗಿ ತಲಾ ಅರ್ಧಶತಕ ಸಿಡಿಸಿ ಮೊತ್ತ ಏರಿಸಿದರು.
ಆದರೆ 73 ಎಸೆತಗಳಲ್ಲಿ 51 ರನ್ ಸಿಡಿಸಿದ್ದ ಜೊನಾಥನ್, ಅಭಿಲಾಷ್ ಶೆಟ್ಟಿ ಬೌಲಿಂಗ್ನಲ್ಲಿ ಹೊರನಡೆದರು. ನಂತರ ಜಗದೀಶನ್ ಸುಚಿತ್ 3, ಇಮ್ಲಿವಾಟಿ ಲೆಮಟೂರು 7, ತಹಮೀದ್ ರೆಹಮಾನ್ 13, ನಾಗಹೊ ಚಿಶಿ 7, ಅದ್ದು ಬೋರಾ 0 ರನ್ಗೆ ಔಟಾದರು. ಸತತ ವಿಕೆಟ್ ಪತನದ ನಡುವೆಯೂ ಅದ್ಭುತ ಪ್ರದರ್ಶನ ನೀಡಿದ ಚೇತನ್, 73 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 77 ರನ್ ಸಿಡಿಸಿ ಅಜೇಯರಾಗಿ ಉಳಿದರು. ಶ್ರೇಯಸ್ ಗೋಪಾಲ್ 9.3 ಓವರ್ಗಳಲ್ಲಿ 24 ರನ್ ಬಿಟ್ಟುಕೊಟ್ಟು 4 ವಿಕೆಟ್ ಕಿತ್ತರು. ಅಭಿಲಾಷ್ ಶೆಟ್ಟಿ 2, ವಾಸುಕಿ ಕೌಶಿಕ್, ಹಾರ್ದಿಕ್ ರಾಜ್, ವಿದ್ಯಾದರ್ ಪಾಟೀಲ್, ನಿಕಿನ್ ಜೋನ್ಸ್ ತಲಾ 1 ವಿಕೆಟ್ ಪಡೆದರು.
ಮಯಾಂಕ್ ಮತ್ತೊಂದು ಶತಕ
207 ರನ್ಗಳ ಗುರಿ ಬೆನ್ನಟ್ಟಿದ ಕರ್ನಾಟಕಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಿಕಿನ್ ಜೋನ್ಸ್ 13 ಎಸೆತಗಳನ್ನು ಎದುರಿಸಿ 1 ರನ್ ಗಳಿಸಿ ನಿರ್ಗಮಿಸಿದರು. ಆ ಬಳಿಕ ಜೊತೆಯಾದ ಮಯಾಂಕ್ ಅಗರ್ವಾಲ್ ಮತ್ತು ಅನೀಶ್ ಕೆವಿ ಅದ್ಭುತ ಪ್ರದರ್ಶನ ನೀಡಿದರು. 2ನೇ ವಿಕೆಟ್ಗೆ 198 ರನ್ ಹರಿದು ಬಂತು. ನಾಗಾಲ್ಯಾಂಡ್ ಬೌಲರ್ಗಳ ವಿರುದ್ಧ ಸವಾರಿ ನಡೆಸಿದ ಮಯಾಂಕ್, ಟೂರ್ನಿಯಲ್ಲಿ 4ನೇ ಶತಕ ಸಿಡಿಸಿ ಮಿಂಚಿದರು. ಮತ್ತೊಂದೆಡೆ ಅನೀಶ್ ಭರ್ಜರಿ ಅರ್ಧಶತಕ ಸಿಡಿಸಿ ಎದುರಾಳಿ ತಂಡದ ಗೆಲುವನ್ನು ಕಸಿದರು. ಮಯಾಂಕ್, 119 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ ಸಹಿತ 116 ರನ್ ಸಿಡಿಸಿದರೆ, ಅನೀಶ್ 95 ಬಾಲ್ಗಳಲ್ಲಿ 10 ಬೌಂಡರಿ ಸಹಿತ 82 ರನ್ ಗಳಿಸಿದರು. ಇಬ್ಬರೂ ಅಜೇಯರಾಗಿ ಉಳಿದರು.