ವಿನೋದ್ ಕಾಂಬ್ಳಿ ಭಾವುಕರಾದರೆ, ಸಚಿನ್ ತೆಂಡೂಲ್ಕರ್ ಕಷ್ಟಪಟ್ಟು ಕೈ ಬಿಡಿಸಿಕೊಂಡ್ರಾ? ವೈರಲ್ ವಿಡಿಯೋ ಅಸಲಿಯತ್ತೇನು?
ಕನ್ನಡ ಸುದ್ದಿ  /  ಕ್ರಿಕೆಟ್  /  ವಿನೋದ್ ಕಾಂಬ್ಳಿ ಭಾವುಕರಾದರೆ, ಸಚಿನ್ ತೆಂಡೂಲ್ಕರ್ ಕಷ್ಟಪಟ್ಟು ಕೈ ಬಿಡಿಸಿಕೊಂಡ್ರಾ? ವೈರಲ್ ವಿಡಿಯೋ ಅಸಲಿಯತ್ತೇನು?

ವಿನೋದ್ ಕಾಂಬ್ಳಿ ಭಾವುಕರಾದರೆ, ಸಚಿನ್ ತೆಂಡೂಲ್ಕರ್ ಕಷ್ಟಪಟ್ಟು ಕೈ ಬಿಡಿಸಿಕೊಂಡ್ರಾ? ವೈರಲ್ ವಿಡಿಯೋ ಅಸಲಿಯತ್ತೇನು?

ತಮ್ಮ ಬಾಲ್ಯದ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಸಚಿನ್ ತೆಂಡೂಲ್ಕರ್ ಕೈ ಹಿಡಿದ ವಿನೋದ್ ಕಾಂಬ್ಳಿ ಭಾವುಕರಾದರೆ, ತೆಂಡೂಲ್ಕರ್​ ಕಷ್ಟಪಟ್ಟು ಕೈ ಬಿಡಿಸಿಕೊಳ್ಳಲು ಯತ್ನಿಸಿದ್ರಾ? ವೈರಲ್ ವಿಡಿಯೋ ಅಸಲಿಯತ್ತೇನು? ಇಲ್ಲಿದೆ ವಿವರ.

ವಿನೋದ್ ಕಾಂಬ್ಳಿ ಭಾವುಕರಾದರೆ, ಸಚಿನ್ ತೆಂಡೂಲ್ಕರ್ ಕಷ್ಟಪಟ್ಟು ಕೈ ಬಿಡಿಸಿಕೊಂಡ್ರಾ? ವೈರಲ್ ವಿಡಿಯೋ ಅಸಲಿಯತ್ತೇನು?
ವಿನೋದ್ ಕಾಂಬ್ಳಿ ಭಾವುಕರಾದರೆ, ಸಚಿನ್ ತೆಂಡೂಲ್ಕರ್ ಕಷ್ಟಪಟ್ಟು ಕೈ ಬಿಡಿಸಿಕೊಂಡ್ರಾ? ವೈರಲ್ ವಿಡಿಯೋ ಅಸಲಿಯತ್ತೇನು?

ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ (Sachin Tendulkar) ಮತ್ತು ಅವರ ಬಾಲ್ಯದ ಸ್ನೇಹಿತ ವಿನೋದ್ ಕಾಂಬ್ಳಿ (Vinod Kambli) ಅವರು ತಮ್ಮ ಮಾರ್ಗದರ್ಶಕ, ಅಪ್ರತಿಮ ಕ್ರಿಕೆಟ್ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕ ಅನಾವರಣ ಕಾರ್ಯಕ್ರಮದಲ್ಲಿ ಹಲವು ವರ್ಷಗಳ ನಂತರ ಭೇಟಿಯಾಗಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ರೂಪಿಸಿದ ವ್ಯಕ್ತಿಗೆ ಗೌರವ ಸಲ್ಲಿಸುವ ಈ ಕಾರ್ಯಕ್ರಮಕ್ಕೆ ಇವರಿಬ್ಬರೂ ಆಗಮಿಸಿದ್ದರು.

ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಕಾಂಬ್ಳಿ ಗುರುತಿಸಲು ವಿಫಲವಾದರು. ಗೊತ್ತಾದ ಬಳಿಕ ತಮ್ಮ ಬಾಲ್ಯದ ಸ್ನೇಹಿತನ ಕೈಯನ್ನು ಗಟ್ಟಿಯಾಗಿ ಹಿಡಿದುಬಿಟ್ಟರು. ಆದರೆ ತೆಂಡೂಲ್ಕರ್ ತನ್ನ ಆಸನದಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸಿದರು. ಆದರೆ ಕಾಂಬ್ಳಿ, ತೆಂಡೂಲ್ಕರ್ ಅವರ ಕೈ ಬಿಗಿಯಾಗಿ ಹಿಡಿದುಕೊಂಡು ಬಿಡಲು ಹಿಂಜರಿಯುತ್ತಿದ್ದರು. ಈ ವೇಳೆ ಸಚಿನ್ ಕೈ ಬಿಡಿಸಿಕೊಂಡು ತನಗೆ ಮೀಸಲಿಟ್ಟ ಆಸನದಲ್ಲಿ ಕುಳಿತುಕೊಂಡರು.

ವೈರಲ್ ವಿಡಿಯೋ ಅಸಲಿಯತ್ತೇನು?

ಆದರೆ ಸಚಿನ್ ಕೈ ಬಿಡಿಸಿಕೊಂಡದ್ದನ್ನೇ ಕೆಲವರು ಟ್ರೋಲ್ ಮಾಡಿದ್ದಾರೆ. ವಿನೋದ್ ಕಾಂಬ್ಳಿ ಭಾವುಕರಾಗಿದ್ದರೆ, ಸಚಿನ್ ಉದ್ದೇಶಪೂರ್ವಕವಾಗಿ ಕೈಬಿಡಿಸಿಕೊಂಡರು ಎಂದು ಸುದ್ದಿ ಎಬ್ಬಿಸಲಾಗಿದೆ. ಆದರೆ ಇದರ ಅಸಲಿಯತ್ತೇ ಬೇರೆ ಇದೆ. ವೇದಿಕೆಗೆ ಆಗಮಿಸಿದ ಸಚಿನ್ ಕೈ ಹಿಡಿದ ಕಾಂಬ್ಳಿ ಮಾತನಾಡುತ್ತಿದ್ದರು. ಆದರೆ, ಕಾರ್ಯಕ್ರಮ ನಿರೂಪಕರು ಮತ್ತು ಗಣ್ಯ ವ್ಯಕ್ತಿಗಳು ಕೈಬಿಡುವಂತೆ ಮನವಿ ಮಾಡಿಕೊಂಡರು. ಕಾರ್ಯಕ್ರಮಕ್ಕೆ ತಡವಾಗಬಹುದು ಎಂಬ ಕಾರಣಕ್ಕಾಗಿ ಸಚಿನ್ ಸಹ ಕೈಬಿಡಿಸಿಕೊಂಡರು. ಆದರೆ ಇದನ್ನು ಕೆಲವರು ತಿರುಚಿದ್ದಾರೆ.

ಕಾಂಬ್ಳಿ ಸಚಿನ್ ಕೈ ಹಿಡಿದ ಸಮಯದಲ್ಲಿ ಕಾರ್ಯಕ್ರಮದ ನಂತರ ಮಾತಾಡಬಹುದು. ಇಲ್ಲವಾದರೆ ತಡವಾಗುತ್ತದೆ ಎಂದು ತಿಳಿ ಹೇಳಿದ ಕಾರಣ ಸಚಿನ್ ಕೈ ಬಿಡಿಸಿಕೊಂಡರು. ಆದರೆ ಸಚಿನ್ ಕೈ ಬಿಡಿಸಿದ ತುಣುಕನ್ನೇ ವೈರಲ್ ಮಾಡಿದ್ದಾರೆ. ಕಾರ್ಯಕ್ರಮದ ನಂತರ ಸಚಿನ್ ಮತ್ತು ಕಾಂಬ್ಳಿ ಆಪ್ತವಾಗಿ ಮಾತನಾಡಿದ್ದಾರೆ. ಕಾಂಬ್ಳಿ ಅವರು ಸಚಿನ್ ಅವರ ತಲೆ ಕೈಯಿಟ್ಟು ಭಾವುಕರಾಗಿದ್ದಾರೆ. ಆತ್ಮೀಯವಾಗಿ ಅಪ್ಪಿಕೊಂಡಿದ್ದಾರೆ. ಈ ವಿಡಿಯೋ ಸಹ ವೈರಲ್ ಆಗಿದೆ. ಸಚಿನ್, ಕಾಂಬ್ಳೆ ಜೊತೆಗೆ ಪರಾಸ್ ಮಾಂಬ್ರೆ, ಪ್ರವೀಣ್ ಆಮ್ರೆ, ಬಲ್ವಿಂದರ್ ಸಿಂಗ್ ಸಂಧು, ಸಮೀರ್ ದಿಘೆ, ಸಂಜಯ್ ಬಂಗಾರ್ ಭಾಗವಹಿಸಿದ್ದರು.

ಸಚಿನ್-ಕಾಂಬ್ಳಿ 664 ರನ್​ಗಳ ಜೊತೆಯಾಟ

ಅಚ್ರೇಕರ್ ಅವರ ವಿದ್ಯಾರ್ಥಿಗಳಾದ ಸಚಿನ್ ಮತ್ತು ಕಾಂಬ್ಳಿ ತಮ್ಮ ಶಾಲಾ ಕ್ರಿಕೆಟ್ ದಿನಗಳಲ್ಲಿ ವಿಶ್ವ ದಾಖಲೆಯ 664 ರನ್​​ಗಳ ಜೊತೆಯಾಟವಾಡುವ ಮೂಲಕ ತಮ್ಮ ಅಸಾಧಾರಣ ಬ್ಯಾಟಿಂಗ್ ಪರಾಕ್ರಮವನ್ನು ಪ್ರದರ್ಶಿಸಿ ಸುದ್ದಿಯಾಗಿದ್ದರು. ಸಚಿನ್ ವಿಶ್ವಶ್ರೇಷ್ಠ ಕ್ರಿಕೆಟಿಗನಿಗಾಗಿ ಬೆಳೆದರೆ, ಕಾಂಬ್ಳಿ ಕುಡಿತದ ಚಟಕ್ಕೆ ಬಿದ್ದು ವೃತ್ತಿಜೀವನ ಹಾಳು ಮಾಡಿಕೊಂಡರು. 2017ರಲ್ಲಿ ತನ್ನ ಗೆಳೆಯ ಕಾಂಬ್ಳಿಗಾಗಿ, ಸಚಿನ್ ನೆರವು ನೀಡಿದ್ದರು. ಕೋಚಿಂಗ್ ಕೆಲಸಕ್ಕೂ ಸೇರಿಸಿದ್ದರು. ಆದರೆ ನಂಬಿಕೆ ಉಳಿಸಿಕೊಳ್ಳಲಿಲ್ಲ.

ಸಚಿನ್ ಮೊದಲು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರೆ, ಮೂರೂವರೆ ವರ್ಷಗಳ ನಂತರ ಕಾಂಬ್ಳಿ ಡೆಬ್ಯೂ ಮಾಡಿದರು. ಕಾಂಬ್ಳಿ ತಮ್ಮ ಮೊದಲ 2 ಟೆಸ್ಟ್​​ಗಳಲ್ಲಿ ಸತತ 2 ದ್ವಿಶತಕಗಳೊಂದಿಗೆ ಅದ್ಭುತ ಭರವಸೆ ಮೂಡಿಸಿದ್ದರು. ಆದರೆ ಕುಡಿತದ ದಾಸನಾಗಿ ಅವರ ವೃತ್ತಿಜೀವನವು ಕುಸಿಯಿತು. ಭರವಸೆಯ ಆರಂಭದ ಹೊರತಾಗಿಯೂ ಕಾಂಬ್ಳಿ ಕೇವಲ 17 ಟೆಸ್ಟ್ ಮತ್ತು 104 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2000 ರಲ್ಲಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸಿದರು. ಆದರೆ ಸಚಿನ್ ಶಿಸ್ತು ಪಾಲಿಸುತ್ತಾ ವಿಶ್ವಶ್ರೇಷ್ಠ ಆಟಗಾರನಾಗಿ ಬೆಳೆದರು.​

ಮೈದಾನದ ಹೊರಗೆ, ಕಾಂಬ್ಳಿ ಆರ್ಥಿಕ ಸಮಸ್ಯೆ ಸೇರಿದಂತೆ ಸವಾಲಿನ ಸಮಯಗಳನ್ನು ಎದುರಿಸಿದ್ದಾರೆ. ಮಾಜಿ ಕ್ರಿಕೆಟಿಗ 2022ರಲ್ಲಿ ತಮ್ಮ ಕುಟುಂಬ ಪೋಷಿಸಲು ಬಿಸಿಸಿಐನಿಂದ ಬರುವ ಪಿಂಚಣಿಯನ್ನು ಮಾತ್ರ ಅವಲಂಬಿಸಿರುವುದಾಗಿ ಬಹಿರಂಗಪಡಿಸಿದ್ದರು. ಕಾಂಬ್ಳಿ ಅವರಿಗೆ ಅನಾರೋಗ್ಯ ತೀವ್ರವಾಗಿ ಬಾಧಿಸುತ್ತಿದೆ. ಆದಾಗ್ಯೂ, ಅನಾರೋಗ್ಯದ ಸ್ಥಿತಿಯ ಊಹಾಪೋಹಗಳನ್ನು ಕಾಂಬ್ಳಿ ನಿರಾಕರಿಸಿದ್ದಾರೆ.

Whats_app_banner