Vinod Kambli: ವಿನೋದ್ ಕಾಂಬ್ಳಿ ನನ್ನ ಮಗನಿದ್ದಂತೆ, ಎಲ್ಲಾ ರೀತಿಯ ನೆರವು ನೀಡಲು ಸಿದ್ಧ; ಸುನಿಲ್ ಗವಾಸ್ಕರ್
Sunil Gavaskar: ತೀವ್ರ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವ ವಿನೋದ್ ಕಾಂಬ್ಳಿ ಅವರ ಚೇತರಿಕೆಗೆ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರು ಸದಾ ನಿಲ್ಲಲಿದ್ದಾರೆ. ಕಾಂಬ್ಳಿ ನನಗೆ ಮಗನಿದ್ದಂತೆ ಎಂದು ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.
ಹಲವು ಆರೋಗ್ಯ ಸಮಸ್ಯೆಗಳು ಮತ್ತು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರಿಗೆ ನೆರವಿಗೆ ಧಾವಿಸಲು ಸಿದ್ಧರಿರುವುದಾಗಿ ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಖಚಿತಪಡಿಸಿದ್ದಾರೆ. ಮಾಜಿ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಕೈಹಿಡಿದು ಭಾವುಕರಾದ ವಿಡಿಯೋ ವೈರಲ್ ಬಳಿಕ ಕಾಂಬ್ಳಿ ಆರೋಗ್ಯದ ಕುರಿತ ಕಳವಳಗಳು ಮತ್ತಷ್ಟು ಹೆಚ್ಚಾಗಿವೆ. ಹರಿದಾಡುತ್ತಿರುವ ವಿಡಿಯೋಗಳಲ್ಲಿ ಕಾಂಬ್ಳಿ, ಸಚಿನ್ ಕೈ ಹಿಡಿದು ಬಿಡಲು ನಿರಾಕರಿಸುತ್ತಿರುವುದನ್ನು ಕಾಣಬಹುದು.
1983ರ ವಿಶ್ವಕಪ್ ವಿಜೇತ ಭಾರತದ ಮೊದಲ ತಂಡವು ವಿನೋದ್ ಕಾಂಬ್ಳಿ ಅವರನ್ನು ನೋಡಿಕೊಳ್ಳಲಿದೆ. ಮತ್ತೆ ತಮ್ಮ ಕಾಲ ಮೇಲೆ ನಿಲ್ಲಲು ಸಹಾಯ ಮಾಡಲಿದೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಕಾಂಬ್ಳಿ ಅವರನ್ನು ತಮ್ಮ 'ಮಗ' ಎಂದು ಗವಾಸ್ಕರ್ ಉಲ್ಲೇಖಿಸಿದ್ದಾರೆ. ತೀವ್ರ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವ ಕಾಂಬ್ಳಿ ಅವರ ಚೇತರಿಕೆಗೆ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರು ಸದಾ ನಿಲ್ಲಲಿದ್ದಾರೆ. ಕಾಂಬ್ಳಿ ನನಗೆ ಮಗನಿದ್ದಂತೆ. ನಮ್ಮ ತಂಡವು ಕಿರಿಯ ಆಟಗಾರರ ನೆರವಿಗೆ ನಿಲ್ಲಲಿದೆ. ನನಗೆ ಅವರೆಲ್ಲಾ ಮಕ್ಕಳು, ಮೊಮ್ಮಕ್ಕಳಿದ್ದಂತೆ ಎಂದು ಹೇಳಿದ್ದಾರೆ.
ಎಲ್ಲಾ ರೀತಿಯ ನೆರವು ನೀಡಲಿದ್ದೇವೆ ಎಂದು ಗವಾಸ್ಕರ್
ಸಹಾಯ ಎಂದು ಹೇಳಲು ನಾನು ಇಷ್ಟಪಡುವುದಿಲ್ಲ. ಆದರೆ, ಅವರ ನೆರವಿಗೆ ನಿಲ್ಲುತ್ತೇವೆ ಎಂದು ಬಯಸುತ್ತೇವೆ. ಅವರು ಸಹಜ ಸ್ಥಿತಿಗೆ ಮರಳಲು ಬೇಕಾದ ಎಲ್ಲಾ ರೀತಿಯ ನೆರವು ನೀಡಲಿದ್ದೇವೆ. ಸಂಕಷ್ಟಕ್ಕೆ ಸಿಲುಕಿರುವ ಕ್ರಿಕೆಟಿಗರ ನೆರವಿಗೆ ನಾವು ಸದಾ ನಿಲ್ಲುತ್ತೇವೆ ಎಂದು ಪ್ರಸ್ತುತ ಅಡಿಲೇಡ್ನಲ್ಲಿರುವ ಗವಾಸ್ಕರ್ ಸ್ಪೋರ್ಟ್ಸ್ ಟುಡೇಗೆ ತಿಳಿಸಿದ್ದಾರೆ. ಕಾಂಬ್ಳಿ ಅವರ ಆರೋಗ್ಯಕ್ಕೆ ಸಂಬಂಧಿಸಿ ಕಪಿಲ್ ದೇವ್ ತಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಮತ್ತು ಸಹಾಯ ಮಾಡುವ ಭರವಸೆ ನೀಡಿದ್ದಾರೆ ಎಂದು ಭಾರತದ ಮಾಜಿ ವೇಗಿ ಬಲ್ವಿಂದರ್ ಸಿಂಗ್ ಬಹಿರಂಗಪಡಿಸಿದ ಕೆಲವು ದಿನಗಳ ನಂತರ ಗವಾಸ್ಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಬ್ಳಿ ಅವರು ಪುನರ್ವಸತಿಗೆ ಹೋಗಿ, ಕುಡಿತದ ಚಟವನ್ನು ಬಿಟ್ಟರೆ ನಾವು ಅವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಸಿದ್ಧವಾಗಿದ್ದೇವೆ ಎಂದು ನನಗೆ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಸಂಧು ತಿಳಿಸಿದ್ದರು. ಪುನರ್ವಸತಿಗೆ ಹೋದರಷ್ಟೇ ನಾವು ಚಿಕಿತ್ಸೆ ಎಷ್ಟು ಸಮಯದವರೆಗೆ ಇರುತ್ತದೆ ಎಂಬುದನ್ನು ಲೆಕ್ಕಿಸದೆ ನಾವು ಬಿಲ್ ಪಾವತಿಸಲು ಸಿದ್ಧರಿದ್ದೇವೆ ಎಂದು ಸಂಧು ಹೇಳಿದ್ದರು. ಸಚಿನ್ ತೆಂಡೂಲ್ಕರ್ ಬಾಲ್ಯದ ಸ್ನೇಹಿತ ಕಾಂಬ್ಳಿ, ಇಂಗ್ಲೆಂಡ್ ಮತ್ತು ಜಿಂಬಾಬ್ವೆ ವಿರುದ್ಧ ದ್ವಿಶತಕ ಗಳಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅದ್ಭುತ ಆರಂಭ ಪಡೆದ ಹೊರತಾಗಿಯೂ ಕುಡಿತದ ಕಾರಣ ಅವರ ವೃತ್ತಿಜೀವನ ಕೇವಲ 17 ಟೆಸ್ಟ್ಗಳಿಗೆ ಅಂತ್ಯವಾಯಿತು.