ಸುನಿಲ್ ಗವಾಸ್ಕರ್ ಪಾದ ಸ್ಪರ್ಶಿಸಿ ನಮಸ್ಕರಿಸಿದ ವಿನೋದ್ ಕಾಂಬ್ಳಿ; ವಾಂಖೆಡೆ ಸ್ಟೇಡಿಯಂನಲ್ಲಿ ಪೃಥ್ವಿ ಶಾ ಜತೆ ಮಾತು
ಇತ್ತೀಚೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ, ಮುಂಬೈನ ಐತಿಹಾಸಿಕ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 50ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗಿಯಾದರು. ಈ ವೇಳೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪಾದ ಸ್ಪರ್ಶಿಸಿ ನಮಸ್ಕರಿಸಿದ್ದಾರೆ.

ವಾಂಖೆಡೆ ಸ್ಟೇಡಿಯಂನ 50ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾಜಿ ಕ್ರಿಕೆಟಿಗರಾದ ವಿನೋದ್ ಕಾಂಬ್ಳಿ ಹಾಗೂ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಭಾಗಿಯಾಗಿದ್ದರು. ಜನವರಿ 12ರ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕಾಂಬ್ಳಿ ಅವರು ಗವಾಸ್ಕರ್ ಪಾದ ಸ್ಪರ್ಶಿಸಿ ಗೌರವಿಸಿದ್ದಾರೆ . ಕಾಲು ಮುಟ್ಟಿ ಪಾದಗಳಿಗೆ ನಮಸ್ಕರಿಸಿದ ದೃಶ್ಯ ವೈರಲ್ ಆಗಿದೆ. ಇದೇ ವೇಳೆ ಪೃಥ್ವಿ ಶಾ ಅವರನ್ನು ಭೇಟಿಯಾದ ಚಿತ್ರಗಳು ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಮೂತ್ರನಾಳದ ಸೋಂಕು (ಯುಟಿಐ) ಹಾಗೂ ಸೆಳೆತದಿಂದಾಗಿ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದ ಕಾಂಬ್ಳಿ, ಹೊಸ ವರ್ಷದ ದಿನದಂದು ಬಿಡುಗಡೆಯಾಗಿದ್ದರು. ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.
ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಬ್ಳಿ ಅವರು ಗವಾಸ್ಕರ್ ಅವರ ಪಾದ ಮುಟ್ಟಿ ನಮಸ್ಕರಿಸಿದ್ದಾರೆ. ಈ ವೇಳೆ ಕಾಂಬ್ಳಿಯ ತೋಳುಗಳನ್ನು ಬಳಸಿ ಎತ್ತಿದ ಗವಾಸ್ಕರ್, ಅವರನ್ನು ತಬ್ಬಿಕೊಂಡಿದ್ದಾರೆ.
ಈ ನಡುವೆ, ಇತ್ತೀಚೆಗೆ ತಮ್ಮ ಅಶಿಸ್ತು ಹಾಗೂ ಕಳಪೆ ಫಾರ್ಮ್‌ನಿಂದಾಗಿ ತೀವ್ರ ಟೀಕೆಗೆ ಗುರಿಯಾಗಿರುವ ಯುವ ಆಟಗಾರ ಪೃಥ್ವಿ ಅವರನ್ನು ಕೂಡಾ 52 ವರ್ಷದ ಮಾಜಿ ಆಟಗಾರ ಭೇಟಿಯಾಗಿ ಮಾತನಾಡಿಸಿದ್ದಾರೆ.
ವಾಂಖೆಡೆ ಕ್ರೀಡಾಂಗಣದಲ್ಲಿ ಮುಖ್ಯ ಕಾರ್ಯಕ್ರಮವು ಜನವರಿ 19ರಂದು ನಡೆಯಲಿದೆ. ಗವಾಸ್ಕರ್ ಮತ್ತು ಕಾಂಬ್ಳಿ ಅವರಲ್ಲದೆ, ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ ಮತ್ತು ದಿಲೀಪ್ ವೆಂಗ್‌ಸರ್ಕರ್ ಅವರಂತಹ ಇತರ ಕ್ರಿಕೆಟ್ ದಂತಕಥೆಗಳು ಕೂಡಾ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಆಯೋಜಿಸಿರುವ ಅದ್ಧೂರಿ ಕಾರ್ಯಕ್ರಮದ ಭಾಗವಾಗಲಿದ್ದಾರೆ. ಇದೇ ವೇಳೆ ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ, ಅಜಿಂಕ್ಯ ರಹಾನೆ, ಸೂರ್ಯಕುಮಾರ್ ಯಾದವ್ ಭಾಗವಹಿಸಲಿದ್ದಾರೆ.
ನನಗೆ ಸಿಕ್ಕ ಗೌರವ
ಈ ಸಂದರ್ಭದಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್, ಭಾರತೀಯ ಕ್ರಿಕೆಟ್‌ಗೆ ಸಾಕಷ್ಟು ಕೊಡುಗೆ ನೀಡಿದ ಅಪ್ರತಿಮ ಸ್ಟೇಡಿಯಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನನಗೆ ಸಿಗುವ ಅತಿ ದೊಡ್ಡ ಗೌರವವಾಗಿದೆ ಎಂದು ಹೇಳಿದರು.
ಆರಂಭದ ದಿನಗಳನ್ನು ನೆನಪಿಸಿಕೊಂಡ ವಿನೋದ್ ಕಾಂಬ್ಳಿ
ಈ ವೇಳೆ ಮಾತನಾಡಿದ ಕಾಂಬ್ಳಿ, ಇಂಗ್ಲೆಂಡ್ ವಿರುದ್ಧ ಇದೇ ಮೈದಾನದಲ್ಲಿ ಸಿಡಿಸಿದ ದ್ವಿಶತಕವನ್ನು ನೆನಪಿಸಿಕೊಂಡರು. “ನಾನು ಇಂಗ್ಲೆಂಡ್ ವಿರುದ್ಧ ಇಲ್ಲಿ ನನ್ನ ಮೊದಲ ದ್ವಿಶತಕವನ್ನು ಬಾರಿಸಿದ್ದೆ. ಆ ನಂತರ ನನ್ನ ವೃತ್ತಿಜೀವನದಲ್ಲಿ ಇನ್ನೂ ಅನೇಕ ಶತಕಗಳನ್ನು ಬಾರಿಸಿದ್ದೇನೆ,” ಎಂದು ಹೇಳಿದರು.
"ನನ್ನಂತೆ ಅಥವಾ ಸಚಿನ್ ತೆಂಡೂಲ್ಕರ್ ಅವರಂತೆ ಯಾರಾದರೂ ಭಾರತದ ಪರ ಆಡಲು ಬಯಸಿದರೆ, ನೀವು ಕಷ್ಟಪಟ್ಟು ಕೆಲಸ ಮಾಡುವುದನ್ನು ಮುಂದುವರೆಸಬೇಕು. ಪ್ರಯತ್ನವನ್ನು ಎಂದಿಗೂ ಬಿಡಬಾರದು ಎಂದು ನಾನು ಸಲಹೆ ನೀಡುತ್ತೇನೆ. ಏಕೆಂದರೆ ಸಚಿನ್ ಮತ್ತು ನಾನು ಬಾಲ್ಯದ ದಿನಗಳಿಂದಲೂ ಅದನ್ನೇ ಮಾಡಿದ್ದೇವೆ" ಎಂದು ಕಾಂಬ್ಳಿ ಹೇಳಿದರು.
