ಪಾಕಿಸ್ತಾನದ ಅವಾಂತರಗಳು ಒಂದೊಂದಲ್ಲ; ಲಾಹೋರ್​ ಮೈದಾನದಲ್ಲಿ ಭಾರತದ ಧ್ವಜ ಹಾರಿಸಿದ ಯುವಕನಿಗೆ ಥಳಿತ-ಬಂಧನ, VIDEO
ಕನ್ನಡ ಸುದ್ದಿ  /  ಕ್ರಿಕೆಟ್  /  ಪಾಕಿಸ್ತಾನದ ಅವಾಂತರಗಳು ಒಂದೊಂದಲ್ಲ; ಲಾಹೋರ್​ ಮೈದಾನದಲ್ಲಿ ಭಾರತದ ಧ್ವಜ ಹಾರಿಸಿದ ಯುವಕನಿಗೆ ಥಳಿತ-ಬಂಧನ, Video

ಪಾಕಿಸ್ತಾನದ ಅವಾಂತರಗಳು ಒಂದೊಂದಲ್ಲ; ಲಾಹೋರ್​ ಮೈದಾನದಲ್ಲಿ ಭಾರತದ ಧ್ವಜ ಹಾರಿಸಿದ ಯುವಕನಿಗೆ ಥಳಿತ-ಬಂಧನ, VIDEO

ಲಾಹೋರ್​ ಮೈದಾನದಲ್ಲಿ ಭಾರತದ ಧ್ವಜ ಪ್ರದರ್ಶಿಸಿದ ಯುವಕನ ಮೇಲೆ ಹಲ್ಲೆ ನಡೆಸಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಪಾಕಿಸ್ತಾನದ ಅವಾಂತರಗಳು ಒಂದೊಂದಲ್ಲ; ಲಾಹೋರ್​ ಮೈದಾನದಲ್ಲಿ ಭಾರತದ ಧ್ವಜ ಹಾರಿಸಿದ ಯುವಕನಿಗೆ ಥಳಿತ-ಬಂಧನ, VIDEO
ಪಾಕಿಸ್ತಾನದ ಅವಾಂತರಗಳು ಒಂದೊಂದಲ್ಲ; ಲಾಹೋರ್​ ಮೈದಾನದಲ್ಲಿ ಭಾರತದ ಧ್ವಜ ಹಾರಿಸಿದ ಯುವಕನಿಗೆ ಥಳಿತ-ಬಂಧನ, VIDEO

1996ರ ನಂತರ ಅಂದರೆ 29 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಐಸಿಸಿ (ICC) ಟೂರ್ನಿಯೊಂದನ್ನು ಆಯೋಜಿಸಿದ ಪಾಕಿಸ್ತಾನ (Pakistan) ಮಾಡುತ್ತಿರುವ ಕಿತಾಪತಿ ಒಂದೆರಡಲ್ಲ. ಚಾಂಪಿಯನ್ಸ್ ಟ್ರೋಫಿ (Champions Trophy) ಆರಂಭಕ್ಕೂ ಮುನ್ನ ಕಾರ್ಯಕ್ರಮವೊಂದರಲ್ಲಿ ಭಾರತದ ಬಾವುಟವನ್ನು ಹಾರಿಸದೆ ದೊಡ್ಡ ವಿವಾದ ಸೃಷ್ಟಿಸಿತ್ತು. ಇದೀಗ ಲಾಹೋರ್ ಕ್ರಿಕೆಟ್ ಮೈದಾನದಲ್ಲಿ (Lahore Cricket Stadium) ಭಾರತದ ತ್ರಿವರ್ಣ ಧ್ವಜ ಪ್ರದರ್ಶಿಸಿದ್ದಕ್ಕೆ ಯುವಕನೊಬ್ಬನನ್ನು ಥಳಿಸಿ ಬಂಧಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ (Viral) ಆಗಿದ್ದು, ಚರ್ಚೆಗೂ ಗ್ರಾಸವಾಗಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಿದ್ದರೂ ಭದ್ರತಾ ಸಮಸ್ಯೆ ಕಾರಣ ಭಾರತೀಯ ಕ್ರಿಕೆಟ್ ತಂಡವನ್ನು (Indian Cricket Team) ಅಲ್ಲಿಗೆ ಕಳುಹಿಸಲಾಗಿಲ್ಲ. ರೋಹಿತ್​ ಪಡೆ ದುಬೈನಲ್ಲಿ ತನ್ನೆಲ್ಲಾ ಪಂದ್ಯ ಆಡುತ್ತಿದೆ. ಉಳಿದಂತೆ ಪಾಕ್ ಸೇರಿ 7 ತಂಡಗಳು ಲಾಹೋರ್, ಕರಾಚಿ, ರಾವಲ್ಪಿಂಡಿ ಮೈದಾನಗಳಲ್ಲಿ ಕಣಕ್ಕಿಳಿಯುತ್ತಿವೆ. ಆದರೆ ಇತ್ತೀಚೆಗೆ ಜರುಗಿದ ಪಂದ್ಯವೊಂದರಲ್ಲಿ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಯೊಬ್ಬರು ಭಾರತದ ಧ್ವಜ ಹಾರಿಸಿದ್ದಕ್ಕೆ ಆತನನ್ನು ಥಳಿಸಿದ ಭದ್ರತಾ ಸಿಬ್ಬಂದಿ ಬಂಧನ ಮಾಡಿದ್ದಾರೆ ಎಂದು ವರದಿಯಾಗಿದೆ. ಆ ಯುವಕನ ಕಾಲರ್​ ಹಿಡಿದು ಕರೆದೊಯುತ್ತಿರುವ ವಿಡಿಯೋ ವೈರಲ್ ಆಗಿದೆ.

ಯಾವ ಪಂದ್ಯದಲ್ಲಿ ಧ್ವಜ ಪ್ರದರ್ಶನ?

ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಫೆಬ್ರವರಿ 22ರಂದು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ (Australia vs England) ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಯುವಕನೊಬ್ಬ ಭಾರತದ ತ್ರಿವರ್ಣ ಧ್ವಜ ಹಾರಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ಧ್ವಜ ಹಾರಿಸಿದ್ದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತಕ್ಷಣವೇ ಆ ಯುವಕನಿಂದ ಧ್ವಜವನ್ನು ಕಸಿದುಕೊಂಡರು. ಅಲ್ಲದೆ, ಆತನ ಕಾಲರ್​ ಹಿಡಿದು ಮೇಲೆತ್ತಿದರು. ಬಳಿಕ ಯುವಕನ ಕಾಲರ್​ ಹಿಡಿದೇ ಅಲ್ಲಿಂದ ಎಳೆದು ಕರೆದೊಯ್ದರು. ಆದರೆ ಈ ಘಟನೆ ನಂತರ ಆ ಯುವಕನನ್ನು ಥಳಿಸಿ ಬಂಧಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಈ ವಿಡಿಯೋ ವೈರಲ್ ಆಗುತ್ತಿದೆ.

ಭಾರತದ ಧ್ವಜ ಬೀಸುತ್ತಿದ್ದ ವ್ಯಕ್ತಿಗೆ ಥಳಿತ?

ಜೀ ನ್ಯೂಸ್ ವರದಿಯ ಪ್ರಕಾರ, ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಪಂದ್ಯದ ಸಮಯದಲ್ಲಿ ಭಾರತದ ಧ್ವಜವನ್ನು ಬೀಸಿದ್ದಕ್ಕಾಗಿ ಆ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಬಂಧಿಸಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದು ಯಾವಾಗ ಸಂಭವಿಸಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಪಾಕಿಸ್ತಾನ ಮಾಡಿದ ವಿವಾದಗಳು ಒಂದೆರಡಲ್ಲ

ಉದ್ಘಾಟನಾ ಪಂದ್ಯಕ್ಕೂ ಮುನ್ನಾ ದಿನ ಕರಾಚಿ ಮೈದಾನದಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಂಡ ಎಲ್ಲಾ ದೇಶಗಳ ಧ್ವಜ ಹಾರಿಸಲಾಗಿತ್ತು. ಆದರೆ ಭಾರತದ ಧ್ವಜವೇ ಇರಲಿಲ್ಲ ಎನ್ನುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಭಾರತ ತಂಡವು ಐಸಿಸಿ ಟೂರ್ನಿಗೆ ಪಾಕಿಸ್ತಾನಕ್ಕೆ ಭಾರತ ಪ್ರವೇಶಿಸದ ಹಿನ್ನೆಲೆ ಧ್ವಜ ಹಾರಿಸಿಲ್ಲ ಎಂದು ಮೂಲವೊಂದು ತಿಳಿಸಿತ್ತು. ಇದಾದ ನಂತರ ಕ್ರೀಡಾಂಗಣದಲ್ಲಿ ಭಾರತದ ಧ್ವಜವನ್ನು ಹಾರಿಸಿ ವಿವಾದಕ್ಕೆ ತೆರೆ ಎಳೆದಿತ್ತು. ಇದಾದ ನಂತರ ಆಸ್ಟ್ರೇಲಿಯಾ-ಇಂಗ್ಲೆಂಡ್ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆಯನ್ನು ನುಡಿಸಲಾಗಿತ್ತು., ಬಳಿಕ ಪಿಸಿಬಿ, ಐಸಿಸಿ ಮೇಲೆ ಗೂಬೆ ಕೂರಿಸಿತ್ತು.

Prasanna Kumar P N

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner