Video: ಚೆಂಡನ್ನು ಕದಿಯಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಕೆಕೆಆರ್ ಅಭಿಮಾನಿ; ವಿಡಿಯೋ ವೈರಲ್
ಕೆಕೆಆರ್ ಅಭಿಮಾನಿಯೊಬ್ಬ ಐಪಿಎಲ್ ಪಂದ್ಯದ ಚೆಂಡನ್ನು ಚಾಣಾಕ್ಷತನದಿಂದ ಕದಿಯುವ ಪ್ರಯತ್ನಕ್ಕೆ ಕೈಹಾಕಿ ಸಿಕ್ಕಿಬಿದ್ದಿದ್ದಾನೆ. ಪೊಲೀಸ್ ಸಿಬ್ಬಂದಿ ಮತ್ತು ಅಭಿಮಾನಿಯ ನಡುವೆ ನಡೆದ ಎಳೆದಾಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕ್ರಿಕೆಟ್ ಮೈದಾನಕ್ಕೆ ತೆರಳಿ ಪಂದ್ಯ ವೀಕ್ಷಿಸುವ ಅಭಿಮಾನಿಗಳು ಆ ಪಂದ್ಯವನ್ನು ಸ್ಮರಣೀಯವಾಗಿಸಬೇಕೆಂದು ನೋಡುತ್ತಾರೆ. ಒಂದು ವೇಳೆ ಆಟಗಾರರೊಂದಿಗೆ ಫೋಟೋ, ಆಟೋಗ್ರಾಫ್ ಸಿಕ್ಕರೆ ಅದಕ್ಕಿಂತ ಖುಷಿ ಬೇರಿಲ್ಲ. ಇನ್ನು ಪಂದ್ಯದ ಚೆಂಡು ಸಿಕ್ಕಿತೆಂದರೆ, ಅದು ಜೀವನ ಪರ್ಯಂತ ಮಧುರ ನೆನಪಾಗಿ ಉಳಿಯುತ್ತದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದ ವೇಳೆ, ಅಭಿಮಾನಿಯೊಬ್ಬ ಇಂಥಾ ಪ್ರಯತ್ನಕ್ಕೆ ಕೈ ಹಾಕಿದ್ದಾನೆ. ಸ್ಟೇಡಿಯಂನ ವೀಕ್ಷಕರ ಗ್ಯಾಲರಿ ಬಳಿ ಬಂದ ಚೆಂಡನ್ನು ಅಡಗಿಸಿಟ್ಟು ತನ್ನಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಆದರೆ, ಪೊಲೀಸ್ ಸಿಬ್ಬಂದಿ ಕೈಯಲ್ಲಿ ಸಿಕ್ಕಿಬಿದ್ದು ನಿರಾಶೆ ಅನುಭವಿಸಿದ್ದಾನೆ.
ಐತಿಹಾಸಿಕ ಈಡನ್ ಗಾರ್ಡ್ಸನ್ಸ್ ಮೈದಾನದಲ್ಲಿ ನಡೆಯುತ್ತಿದ್ದ ಪಂದ್ಯವನ್ನು ಮೈದಾನದಲ್ಲೇ ವೀಕ್ಷಿಸುತ್ತಿದ್ದ ಅಭಿಮಾನಿಯೊಬ್ಬ, ಪಂದ್ಯದ ಚೆಂಡನ್ನು ತನ್ನಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ, ಚೆಂಡಿಗಾಗಿ ಹುಡುಕಾಟ ನಡೆಸಿದ ಪೊಲೀಸ್ ಸಿಬ್ಬಂದಿ, ಆತ ಪ್ಯಾಂಟ್ ಒಳಗೆ ಅಡಗಿಸಿಟ್ಟಿದ್ದ ಚೆಂಡನ್ನು ಕಸಿದುಕೊಂಡಿದ್ದಾರೆ. ಪೊಲೀಸ್ ಸಿಬ್ಬಂದಿ ಮತ್ತು ಅಭಿಮಾನಿಯ ನಡುವೆ ಏನೇನಾಯಿತು ಎಂಬುದನ್ನು ತೋರಿಸುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದೃಶ್ಯ ವೈರಲ್ ಆಗುತ್ತಿದ್ದಂತೆಯೇ, ನೆಟ್ಟಿಗರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಹಲವರು ದೃಶ್ಯವನ್ನು ತಮಾಶೆಯಾಗಿ ನೋಡಿದರೆ, ಇನ್ನೂ ಕೆಲವರು ಅಧಿಕಾರಿಗಳ ವರ್ತನೆಗೆ ಟೀಕಿಸಿದ್ದಾರೆ.
ವಿಡಿಯೋ ಇಲ್ಲಿದೆ
ಕೆಕೆಆರ್ ಆಟಗಾರ ರಿಂಕು ಸಿಂಗ್ ಹೆಸರಿರುವ ಜೆರ್ಸಿ ಧರಿಸಿದ್ದ ಅಭಿಮಾನಿ, ಚೆಂಡನ್ನು ತನ್ನಲ್ಲೇ ಇಟ್ಟುಕೊಂಡಿದ್ದಾನೆ. ಪಂದ್ಯದ ನಡೆಯುತ್ತಿರುವುದರ ನಡುವೆ, ಚೆಂಡನ್ನು ಕೇಳಿದ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಆರಂಭದಲ್ಲಿ ಚೆಂಡನ್ನು ಪೊಲೀಸರಿಂದ ಮರೆಮಾಚಲು ಪ್ರಯತ್ನಿಸುತ್ತಾನೆ. ಆದರೆ ಪೊಲೀಸರು ಕಟುವಾಗಿ ನಡೆದುಕೊಂಡ ನಂತರ, ಬೇರೆ ದಾರಿಯಿಲ್ಲದೆ ಪ್ಯಾಂಟ್ ಒಳಗೆ ಅಡಗಿಸಿಟ್ಟ ಚೆಂಡನ್ನು ಸಿಬ್ಬಂದಿ ಕೈಗಿಡುತ್ತಾನೆ. ಚೆಂಡು ಸಿಕ್ಕಿದ ಕೂಡಲೇ ಮೈದಾನಕ್ಕೆ ಚೆಂಡನ್ನು ಎಸೆದ ಸಿಬ್ಬಂದಿ, ಅಭಿಮಾನಿಯನ್ನು ಮುಂದಕ್ಕೆ ತಳ್ಳಿದ್ದಾರೆ.
ಇದನ್ನೂ ಓದಿ | ಮಳೆಯಿಂದಾಗಿ ಕೆಕೆಆರ್ vs ಗುಜರಾತ್ ಪಂದ್ಯ ರದ್ದು; ಜಿಟಿ ಟೂರ್ನಿಯಿಂದ ಔಟ್, ಕ್ವಾಲಿಫೈಯರ್‌ಗೆ ಲಗ್ಗೆ ಇಟ್ಟ ಕೋಲ್ಕತ್ತಾ
ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಈ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಬಗೆಬಗೆಯ ಕಾಮೆಂಟ್ ಕೂಡಾ ಬಂದಿದೆ. “ಅಭಿಮಾನಿಯು ಈ ಪಂದ್ಯವನ್ನು ಸ್ಮರಣೀಯವಾಗಿಸಲು ಬಯಸಿದ್ದ. ಆದರೆ ಪೊಲೀಸರು ಆತನ ಕನಸನ್ನು ನುಚ್ಚುನೂರಾಗಿಸಿದ್ದಾರೆ” ಎಂದು ವ್ಯಕ್ತಿಯೊಬ್ಬರು ಬರೆದಿದ್ದಾರೆ. "ಭದ್ರತಾ ಸಿಬ್ಬಂದಿ ಅಸಭ್ಯ ವರ್ತನೆ ತೋರಿದ್ದಾರೆ," ಎಂದು ಇನ್ನೊಬ್ಬರು ಹೇಳಿದ್ದಾರೆ.
“ಆತನನ್ನು ತಳ್ಳಬೇಡಿ. ಮೈದಾನಕ್ಕೆ ಬಂದು ನೋಡುವ ಪಂದ್ಯವನ್ನು ಸ್ಮರಣೀಯವಾಗಿಸಲು ಆತ ಪ್ರಯತ್ನಿಸಿದ್ದಾನೆ. ಭದ್ರತಾ ಸಿಬ್ಬಂದಿ ಅವನ ಮೇಲೆ ಏಕೆ ಇಷ್ಟು ಕಠಿಣವಾಗಿ ವರ್ತಿಸಿದ್ದಾರೆ?” ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ಐಪಿಎಲ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಐಪಿಎಲ್ ತೊರೆದು ತವರಿಗೆ ಮರಳಿದ ವಿಲ್ ಜ್ಯಾಕ್ಸ್, ಬಟ್ಲರ್; ಪ್ಲೇಆಫ್ಗೂ ಮುನ್ನ ಆರ್ಸಿಬಿ-ರಾಜಸ್ಥಾನಕ್ಕೆ ಭಾರಿ ಹೊಡೆತ
