ಟಿ20 ವಿಶ್ವಕಪ್‌ಗೆ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಇಲ್ಲದ ಭಾರತ ತಂಡವನ್ನು ನೋಡುವುದೇ ಕಷ್ಟ ಕಷ್ಟ!
Virat Kohli and Rohit Sharma : ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯ ನಡುವೆಯೇ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆಯ ಬಗ್ಗೆ ಚರ್ಚೆ ನಡೆಯುತ್ತಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ನಿರತವಾಗಿದೆ. ಒಂದೂವರೆ ಕಾಲ ತಿಂಗಳ ಕೆಂಪು ಚೆಂಡಿನ ಆಟದ್ದೇ ಸದ್ದು ಇರುತ್ತದೆ. ನಂತರ ಐಪಿಎಲ್ ಮೇಳ. ಆ ಬಳಿಕ ಕ್ರಿಕೆಟ್ ಜಾತ್ರೆ ಟಿ20 ವಿಶ್ವಕಪ್. ಭಾರತದಲ್ಲಿ ಟೆಸ್ಟ್ ಮಾಯೆ ಆವರಿಸಿಕೊಂಡಿದ್ದರೂ ಕ್ರಿಕೆಟ್ ಪ್ರೇಮಿಗಳು ಕಾಯುತ್ತಿರುವುದು ಮಾತ್ರ ಐಪಿಎಲ್ಗೆ ಎಂಬುದು ವಿಶೇಷ. ಅದೇ ಗುಂಗು ಮತ್ತು ನಶೆಯಲ್ಲಿ ತೇಲುತ್ತಿದ್ದಾರೆ. ಮತ್ತೊಂದೆಡೆ ಯುವ ಆಟಗಾರರು ಸಹ ಇದೇ ಕನವರಿಕೆಯಲ್ಲಿದ್ದಾರೆ. ಅದಕ್ಕೆ ಕಾರಣ ಇದೆ.
ಬಿಸಿಸಿಐ, ಸೆಲೆಕ್ಟರ್ಸ್ ಮತ್ತು ಇತ್ತೀಚೆಗೆ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಇದೇ ಕಾರಣಕ್ಕಾಗಿ ಯುವ ಆಟಗಾರರು ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡಿ ವಿಶ್ವಕಪ್ ಟಿಕೆಟ್ ಪಡೆಯಲು ಕಾತರದಿಂದ ಕಾಯುತ್ತಿದ್ದಾರೆ. ಇದರ ನಡುವೆ ದೊಡ್ಡ ಚರ್ಚೆ ನಡೆಯುತ್ತಿರುವುದು ಏನೆಂದರೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಟಿ20 ಭವಿಷ್ಯದ ಬಗೆಗಿನ ಪ್ರಶ್ನೆಗಳು ಕುರಿತು.
ಆಯ್ಕೆ ಮಾಡಬೇಕಾ? ಬೇಡವೇ?
ಹೌದು, ಟಿ20 ವಿಶ್ವಕಪ್‌ಗೆ ರೋಹಿತ್-ಕೊಹ್ಲಿ ಬೇಕು ಬೇಡಗಳ ಬಗ್ಗೆ ದೊಡ್ಡ ಚರ್ಚೆಯ ಅಲೆ ಎದ್ದಿದೆ. ಪರ ವಿರೋಧಗಳು ನಡೆಯುತ್ತಿವೆ. ಕೆಲವರು ಯುವಕರಿಗೆ ಅವಕಾಶ ಸಿಗಲಿ ಎನ್ನುತ್ತಿದ್ದರೆ, ಹಲವರು ಹಿರಿಯರು ತಂಡಕ್ಕೆ ಬೇಕು ಎನ್ನುತ್ತಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನಿಸುತ್ತಿದ್ದಾರೆ. ಆದರೆ ಬಿಸಿಸಿಐ ಮತ್ತು ಆಯ್ಕೆದಾರರು ಗೊಂದಲಕ್ಕೆ ಸಿಲುಕಿದ್ದು, ಐಪಿಎಲ್ ಪ್ರದರ್ಶನವೇ ಟಿ20 ವಿಶ್ವಕಪ್ ಆಯ್ಕೆಗೆ ಮಾನದಂಡ ಎಂದು ಹೇಳಿ ಕೈ ತೊಳೆದುಕೊಂಡಿದ್ದಾರೆ. ಈ ಅನುಭವಿಗಳು ವೈಫಲ್ಯ ಅನುಭವಿಸಿದರೆ ಕಿಕ್ ಔಟ್ ಪಕ್ಕಾ.
2022ರ ಟಿ20 ವಿಶ್ವಕಪ್ ಸೆಮಿಫೈನಲ್ ಬಳಿಕ ಅಂದರೆ 14 ತಿಂಗಳ ನಂತರ ಚುಟುಕು ಕ್ರಿಕೆಟ್‌ಗೆ ಮರಳಿದ ಈ ಜೋಡಿ, ಅಫ್ಘಾನಿಸ್ತಾನ ವಿರುದ್ಧ ಅಬ್ಬರಿಸಿ ಈಗಲೂ ಟಿ20 ಸ್ಪೆಷಲಿಸ್ಟ್ಗಳೇ ಎಂಬುದನ್ನು ಮತ್ತೆ ತೋರಿಸಿದೆ. ಅಫ್ಘನ್ ಚುಟುಕು ಸರಣಿಗೆ ಆಯ್ಕೆಯಾದ ನಂತರ ಅವರ ಚುಟುಕು ವಿಶ್ವಕಪ್ ಭವಿಷ್ಯದ ಬಗ್ಗೆ ಚರ್ಚೆಗಳು ದೊಡ್ಡ ಮಟ್ಟದಲ್ಲಿ ಪ್ರತಿಧ್ವನಿಸಿದವು. ಚರ್ಚೆಗಳು ನೂರು ನಡೆದರೂ ಅನುಭವಿಗಳ ಉಪಸ್ಥಿತಿ ತಂಡಕ್ಕೆ ಹೆಚ್ಚು ಲಾಭ ತಂದುಕೊಡುತ್ತದೆ ಎನ್ನುವುದು ನೂರಕ್ಕೆ ನೂರು ಸತ್ಯದ ಮಾತು. ಅದಕ್ಕಿದೆ ಹಲವು ಕಾರಣಗಳು.
ಅನುಭವಿಗಳು ತಂಡದಲ್ಲಿರಬೇಕು
ಭಾರತ ತಂಡದಲ್ಲಿ ಯುವಕರು ಪ್ರತಿಭಾವಂತರೇ ಇರಬಹುದು. ವಿಭಿನ್ನ ಕೌಶಲ ಹೊಂದಿರಬಹುದು. ಯುವ ರಕ್ತದಲ್ಲಿ ಬಳಿ ಎಷ್ಟೇ ಸಾಮರ್ಥ್ಯ ಇದ್ದರೂ ಅನುಭವಿಗಳು ಇದ್ದಾರೆ ಎಂಬ ಮದ್ದು ಅದೆಲ್ಲದಕ್ಕೂ ಬೂಸ್ಟ್ ನೀಡುತ್ತದೆ. ಅನುಭವಿಗಳ ಜ್ಞಾನ ಭಂಡಾರ ತಂಡದ ಬೆಳವಣಿಗೆಗೆ ಅತ್ಯಗತ್ಯವಾಗಿ ಬೇಕಿದೆ. ಅವರ ಸಲಹೆ, ಸೂಚನೆ ಮತ್ತು ಮಾರ್ಗದರ್ಶನ ತಂಡವು ಉತ್ತಮ ಹಾದಿಯಲ್ಲಿ ಸಾಗಲು ನೆರವಾಗುತ್ತದೆ. ಯುವಕರು ಅವರಿಂದ ಸಾಕಷ್ಟು ಕಲಿಯಲು ಸಾಧ್ಯವಾಗುತ್ತದೆ. ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಸಹಾಯವಾಗುತ್ತದೆ.
ಟ್ರೋಫಿ ಗೆಲ್ಲಲು ಅರ್ಹರು
ಹೌದು, ರೋಹಿತ್ ಮತ್ತು ಕೊಹ್ಲಿ ಇಬ್ಬರು ಟ್ರೋಫಿ ಗೆಲ್ಲಲು ಅರ್ಹರು. ದಶಕಕ್ಕೂ ಹೆಚ್ಚು ಕಾಲ ಭಾರತ ತಂಡಕ್ಕೆ ಸೇವೆ ಮಾಡುತ್ತಿರುವ ಕೊಹ್ಲಿ-ರೋಹಿತ್ ಅನನ್ಯ ಕೊಡುಗೆ ನೀಡುತ್ತಿದ್ದು, ಅವರು ನಿವೃತ್ತಿಯ ಅಂಚಿಗೆ ಬಂದಿದ್ದಾರೆ. ಹಾಗಾಗಿ ಅವರು ಐಸಿಸಿ ಟ್ರೋಫಿಯೊಂದಿಗೆ ನಿವೃತ್ತಿ ಘೋಷಿಸಲು ಅವರ ವೃತ್ತಿಜೀವನವೂ ಸಾರ್ಥಕವಾಗಲಿದೆ. ಆದರೆ ಈ ಜೋಡಿ 2013ರಿಂದ ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲ. ಭಾರತ ತಂಡವನ್ನು ಫೈನಲ್ ಮತ್ತು ಸೆಮಿಫೈನಲ್ವರೆಗೂ ಕೊಂಡೊಯ್ಯುವ ಇವರು, ಟ್ರೋಫಿಗೆ ಮುತ್ತಿಕ್ಕಲು ಮಾತ್ರ ಸಾಧ್ಯವಾಗುತ್ತಿಲ್ಲ ಎಂಬುದು ಬೇಸರದ ಸಂಗತಿ. ಆದರೀಗ ಸುವರ್ಣಾವಕಾಶ ಅವರ ಮುಂದಿದೆ.
ಅದ್ಭುತ ಫಾರ್ಮ್ನಲ್ಲಿದ್ದಾರೆ
ಕಳೆದೊಂದು ವರ್ಷದಿಂದ ರೋ-ಕೊ ಬ್ಯಾಟಿಂಗ್ನಲ್ಲಿ ಅತ್ಯಂತ ಯಶಸ್ಸು ಕಂಡಿದ್ದಾರೆ. ದೇಶ-ವಿದೇಶಗಳಲ್ಲಿ ದಾಖಲೆಗಳ ಮಾರಣ ಹೋಮ ನಡೆಸುತ್ತಿದ್ದಾರೆ. 2022ರ ಏಷ್ಯಾಕಪ್, ಟಿ20 ವಿಶ್ವಕಪ್ನಿಂದ 2023ರಲ್ಲಿ ನಡೆದ ಏಕದಿನ ವಿಶ್ವಕಪ್ವರೆಗೂ ಅಮೋಘ ಫಾರ್ಮ್ನಲ್ಲಿದ್ದಾರೆ. ವಿಶೇಷ ಅಂದರೆ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಅತ್ಯದ್ಭುತ ಪ್ರದರ್ಶನ ನೀಡುತ್ತಿರುವ ಈ ಜೋಡಿ, ಟಿ20 ವಿಶ್ವಕಪ್ ಟೂರ್ನಿಯಲ್ಲೂ ಅದೇ ಪ್ರದರ್ಶನ ನೀಡುವ ತವಕದಲ್ಲಿದೆ.
ಪಿಚ್‌ಗಳ ಬಗ್ಗೆ ಪರಿಚಯ
ಹಿರಿಯ ಆಟಗಾರರು ತಂಡದಲ್ಲಿ ಏಕಿರಬೇಕು ಎನ್ನುವುದಕ್ಕೆ ಪ್ರಮುಖ ಇದೇ ನೋಡಿ. ಪಿಚ್ ಬಗ್ಗೆ ಪರಿಚಯ. ಹೌದು, ಯುವ ಆಟಗಾರರಿಗೆ ವಿದೇಶಿ ಪಿಚ್‌ಗಳ ಬಗ್ಗೆ ಯಾವುದೇ ಪರಿಚಯ ಇರುವುದಿಲ್ಲ. ಸ್ಪಿನ್, ಪೇಸ್ ಬೌಲಿಂಗ್ನಲ್ಲಿ ಯಾವ ರೀತಿ ಚೆಂಡು ತಿರುತ್ತದೆ? ಹೇಗೆ ಸ್ವಿಂಗ್ ಆಗುತ್ತದೆ? ಯಾರಿಗೆ ಹೆಚ್ಚು ನೆರೆವಾಗುತ್ತದೆ? ಅಂತಹ ಪಿಚ್ಗಳಲ್ಲಿ ಹೇಗೆಲ್ಲಾ ಆಡಬೇಕು ಎನ್ನುವುದರ ಬಗ್ಗೆ ಹಿರಿಯ ಆಟಗಾರರಿಗೆ ಅನುಭವ ಇದೆ. ಈ ಎಲ್ಲದರ ಬಗ್ಗೆ ಯುವ ಆಟಗಾರರಿಗೆ ನೆರವಾಗಲಿದ್ದಾರೆ.
ಐಪಿಎಲ್ ಪ್ರದರ್ಶನವೇ ಮಾನದಂಡ ಎಂದು ಹೇಳಿರುವ ಕಾರಣ ಅನುಭವಿಗಳು ಮತ್ತು ಅನಾನುಭವಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಟಿ20 ವಿಶ್ವಕಪ್ ಟೂರ್ನಿಗೆ ಯಾರೆಲ್ಲಾ ಆಯ್ಕೆಯಾಗುತ್ತಾರೆ. ಐಪಿಎಲ್ನಲ್ಲಿ ಸರಿಯಾದ ಪ್ರದರ್ಶನ ನೀಡದಿದ್ದರೂ ಹಿರಿಯ ಆಟಗಾರರಿಗೆ ಆಡುವ ಅವಕಾಶ ಸಿಗುತ್ತಾ? ಇಲ್ಲವೇ ಎಂಬುದನ್ನು ಕಾದುನೋಡಬೇಕು.