Video: ಜಿನುಗುತ್ತಿದ್ದ ಕಣ್ಣೀರು ಅದುಮಿಟ್ಟ ವಿರಾಟ್‌-ಅನುಷ್ಕಾ; ಆರ್‌ಸಿಬಿ ಪ್ಲೇಆಫ್‌ ಪ್ರವೇಶಿಸುತ್ತಿದ್ದಂತೆ ವಿರುಷ್ಕಾ ಭಾವುಕ
ಕನ್ನಡ ಸುದ್ದಿ  /  ಕ್ರಿಕೆಟ್  /  Video: ಜಿನುಗುತ್ತಿದ್ದ ಕಣ್ಣೀರು ಅದುಮಿಟ್ಟ ವಿರಾಟ್‌-ಅನುಷ್ಕಾ; ಆರ್‌ಸಿಬಿ ಪ್ಲೇಆಫ್‌ ಪ್ರವೇಶಿಸುತ್ತಿದ್ದಂತೆ ವಿರುಷ್ಕಾ ಭಾವುಕ

Video: ಜಿನುಗುತ್ತಿದ್ದ ಕಣ್ಣೀರು ಅದುಮಿಟ್ಟ ವಿರಾಟ್‌-ಅನುಷ್ಕಾ; ಆರ್‌ಸಿಬಿ ಪ್ಲೇಆಫ್‌ ಪ್ರವೇಶಿಸುತ್ತಿದ್ದಂತೆ ವಿರುಷ್ಕಾ ಭಾವುಕ

ಸಿಎಸ್‌ಕೆ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಆರ್‌ಸಿಬಿ ತಂಡವು ಐಪಿಎಲ್ 2024ರ ಪ್ಲೇಆಫ್ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಅಮೋಘ ಗೆಲುವಿನ ನಂತರ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಹೃದಯಸ್ಪರ್ಶಿ ಕ್ಷಣವನ್ನು ಹಂಚಿಕೊಂಡಿದ್ದಾರೆ. ಈ ದೃಶ್ಯಗಳು ವೈರಲ್‌ ಆಗಿವೆ.

ಆರ್‌ಸಿಬಿ ಪ್ಲೇಆಫ್‌ ಪ್ರವೇಶಿಸುತ್ತಿದ್ದಂತೆ ವಿರುಷ್ಕಾ ಭಾವುಕ
ಆರ್‌ಸಿಬಿ ಪ್ಲೇಆಫ್‌ ಪ್ರವೇಶಿಸುತ್ತಿದ್ದಂತೆ ವಿರುಷ್ಕಾ ಭಾವುಕ

ಆರ್‌ಸಿಬಿ ಅಂದ್ರೆ ಒಂದು ತಂಡ ಮಾತ್ರವಲ್ಲ, ಅದು ಒಂದು ಎಮೇಷನ್‌. ನಿಷ್ಟಾವಂತ ಅಭಿಮಾನಿಗಳಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಮ್ಮ ಹೃದಯದ ತಂಡವಾಗಿದೆ. ಇನ್ನು ಈ ತಂಡದ ಆಟಗಾರರಿಗೂ ಅಷ್ಟೇ. ಅಭಿಮಾನಿಗಳ ಅತೀವ ನಂಬಿಕ, ಪ್ರೀತಿ, ತಂಡದ ಆಟಗಾರರಿಗಿಂತಲೂ ಹೆಚ್ಚಿನ ಭರವಸೆ ಹಾಗೂ ವಿಶ್ವಾಸ ಈ ತಂಡವನ್ನು ಇಂದು ಉನ್ನತ ಹಂತಕ್ಕೆ ಕರೆದುಕೊಂಡು ಬಂದಿದೆ. ಮೇ 18ರ ಶನಿವಾರ ನಡೆದ ಐಪಿಎಲ್ 2024 ಲೀಗ್ ಪಂದ್ಯದಲ್ಲಿ, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 27 ರನ್‌ಗಳ ಭರ್ಜರಿ ಜಯ ಸಾಧಿಸಿತು. ಆ ಮೂಲಕ ನಾಲ್ಕನೇ ಮತ್ತು ಅಂತಿಮ ತಂಡವಾಗಿ ಪ್ಲೇಆಫ್ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಗೆಲುವಿನ ಬಳಿಕ ಆರ್‌ಸಿಬಿ ಆಟಗಾರರ ಭಾವನೆಗಳ ಕಟ್ಟೆಒಡೆಯಿತು. ಮೈದಾನದಲ್ಲಿ ಸಂಭ್ರಮಿಸಿ ನಲಿದ ಆಟಗಾರರು ಫ್ಯಾನ್ಸ್‌ ಎದುರಿಗೆ ಭಾವುಕರಾದರು.

ಆರ್‌ಸಿಬಿ ತಂಡದೊಂದಿಗೆ ಎಲ್ಲಾ 17 ಆವೃತ್ತಿಗಳಲ್ಲಿಯೂ ಆಡಿದ ಏಕೈಕ ಆಟಗಾರನೆಂದರೆ ವಿರಾಟ್‌ ಕೊಹ್ಲಿ. ಐಪಿಎಲ್‌ನಲ್ಲಿ ಒಂದೇ ತಂಡದ ಪರ ಆಡಿದ ಆಟಗಾರನಿದ್ದರೆ ಅದು ಕಿಂಗ್‌ ಮಾತ್ರ. ವಿರಾಟ್‌ ಪಾಲಿಗೆ ಸಿಎಸ್‌ಕೆ ವಿರುದ್ಧದ ಗೆಲುವು ತುಂಬಾ ಮಹತ್ವದ್ದು. ಹೀಗಾಗಿ ಪಂದ್ಯದ ಫಲಿತಾಂಶದ ಬಳಿಕ ಆರ್‌ಸಿಬಿ ಮಾಜಿ ನಾಯಕ ಭಾವುಕರಾಗಿದ್ದಾರೆ.

ಪ್ರಸಕ್ತ ಋತುವಿನುದ್ದಕ್ಕೂ ವಿರಾಟ್ ಕೊಹ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಅದರೊಂದಿಗೆ ಆರೆಂಜ್‌ ಕ್ಯಾಪ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸಿಎಸ್‌ಕೆ ವಿರುದ್ಧವೂ ಬ್ಯಾಟಿಂಗ್‌ನಲ್ಲಿ ಮಹತ್ವದ ಕೊಡುಗೆ ನೀಡಿದರು. 47 ರನ್ ಗಳಿಸಿ ಅರ್ಧಶತಕದ ಅಂಚಿನಲ್ಲಿ ಔಟಾದರು. ಮೈದಾನದಲ್ಲಿ ವಿರಾಟ್ ಉಪಸ್ಥಿತಿ ನಿರ್ಣಾಯಕವಾಗಿತ್ತು. ಡೇರಿಲ್ ಮಿಚೆಲ್ ಕ್ಯಾಚ್ ಪಡೆಯುವುದು ಮಾತ್ರವಲ್ಲದೆ ಫೀಲ್ಡಿಂಗ್‌ ವೇಳೆ ಪಾದರಸದಂತೆ ಚಂಚಲವಾಗಿ ಓಡಾಡುತ್ತಾ ಆಟದ ಜೋಶ್‌ ಉಳಿಸಿಕೊಂಡರು.

ಇದನ್ನೂ ಓದಿ | Video: ನಿದ್ದೆಗೆಟ್ಟು ಸಂಭ್ರಮಾಚರಣೆಯಲ್ಲಿ ಮುಳುಗಿದ ಆರ್‌ಸಿಬಿ ಫ್ಯಾನ್ಸ್; ಇದು ಗ್ರೇಟೆಸ್ಟ್‌ ಕಂಬ್ಯಾಕ್ ಎಂದು ಹರ್ಷೋದ್ಘಾರ

ಕೊನೆಯ ಓವರ್‌ ಎಸೆದ ಯಶ್‌ ದಯಾಳ್, ಆರ್‌ಸಿಬಿ ಅಭಿಮಾನಿಗಳ ಜಯಘೋಷಗಳನ್ನು ಇಮ್ಮಡಿಗೊಳಿಸಿದರು. ರವೀಂದ್ರ ಜಡೇಜಾ ಬ್ಯಾಟ್‌ ಬೀಸಲು ಅವಕಾಶ ನೀಡದ ದಯಾಳ್‌, ಸಿಎಸ್‌ಕೆ ತಂಡವನ್ನು ಕಟ್ಟಿಹಾಕಿದರು. ಗೆಲುವಿನೊಂದಿಗೆ ಆರ್‌ಸಿಬಿ ಪ್ಲೇಆಫ್ ಸ್ಥಾನ ಭದ್ರವಾಗುತ್ತಿದ್ದಂತೆ, ಕೊಹ್ಲಿ ಭರ್ಜರಿ ಸಂಭ್ರಮಾಚರಣೆ ಶುರುಮಾಡಿದರು. ಈ ವೇಳೆ ಭಾವನೆಗಳನ್ನು ನಿಯಂತ್ರಿಸಲು ಅವರಿಂದ ಸಾಧ್ಯವಾಗಲಿಲ್ಲ. ಅವರ ಮುಖ ಕೆಂಪಗಾಗಿತ್ತು. ಅತ್ತ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ವಿರಾಟ್‌ ಪತ್ನಿ ಅನುಷ್ಕಾ ಶರ್ಮಾ ಕಣ್ಣಂಚಲ್ಲೂ ನೀರು ಜಿನುಗುತ್ತಿತ್ತು. ಆರ್‌ಸಿಬಿ ತಂಡ ಹಾಗೂ ಗೆಲುವು ಅವರಿಗೆ ಎಷ್ಟು ಮುಖ್ಯ ಎಂಬುದನ್ನು ಅವರ ಭಾವನೆಗಳೇ ಹೇಳುತ್ತಿತ್ತು.

ವಿರಾಟ್‌ ಹಾಗೂ ಅನುಷ್ಕಾ ಭಾವುಕ

ವಿರಾಟ್‌ ಹಾಗೂ ಅನುಷ್ಕಾ ಅವರ ಮುಖಭಾವದ ಹೃದಯಸ್ಪರ್ಶಿ ಕ್ಷಣವನ್ನು ಕ್ಯಾಮರಾಗಳು ಸೆರೆಹಿಡಿದಿವೆ. ಸೋಷಿಯಲ್‌ ಮೀಡಿಯಾದಲ್ಲಿ ಈ ದೃಶ್ಯಗಳು ವೈರಲ್‌ ಆಗಿವೆ.

ಸಿಎಸ್‌ಕೆ ತಂಡವನ್ನು ಕೇವಲ 191 ರನ್‌ಗಳಿಗೆ ಕಟ್ಟಿಹಾಕಿದ ಆರ್‌ಸಿಬಿ, 27 ರನ್‌ಗಳಿಂದ ಗೆದ್ದು ಪ್ಲೇಆಫ್‌ ಟಿಕೆಟ್‌ ಪಡೆಯಿತು. ಇದರೊಂದಿಗೆ ಸಿಎಸ್‌ಕೆ ತಂಡವನ್ನು ಮನೆಗೆ ಕಳುಹಿಸಿತು. ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 5 ವಿಕೆಟ್ ನಷ್ಟಕ್ಕೆ ಭರ್ಜರಿ 218 ರನ್ ಗಳಿಸಿತು. ಈ ಗೆಲುವಿನೊಂದಿಗೆ ತಂಡವು 9ನೇ ಬಾರಿಗೆ ಪ್ಲೇಆಫ್ ಪ್ರವೇಶಿಸಿದಂತಾಗಿದೆ.

ಇದನ್ನೂ ಓದಿ | IPL 2024: ಆರ್‌ಸಿಬಿ ಮುಂದಿನ ಪಂದ್ಯ ಯಾವಾಗ, ಯಾರ ವಿರುದ್ಧ? ಅಹಮದಾಬಾದ್‌ಗೆ ರಾಯಲ್‌ ಚಾಲೆಂಜರ್ಸ್‌ ಪಯಣ

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner