ಕಾಲ್ತುಳಿತಕ್ಕೆ ಫ್ಯಾನ್ಸ್ ಬಲಿ; ದುರಂತ ಕುರಿತು ಆರ್‌ಸಿಬಿ ಹೇಳಿದ್ದೇನು? ಮೌನ ಮುರಿದ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ
ಆರ್‌ಸಿಬಿ ತಂಡದ ವಿಜಯೋತ್ಸವ ನಡೆಯುತ್ತಿರುವಾಗ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತ ದುರಂತದ ಕುರಿತು ತಿಳಿದು ವಿರಾಟ್ ಕೊಹ್ಲಿ ಹೃದಯ ಒಡೆದಿದೆ. ಘಟನೆ ಬೆನ್ನಲ್ಲೇ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಸಂತಾಪ್ ವ್ಯಕ್ತಪಡಿಸಿದ್ದಾರೆ.

18 ವರ್ಷಗಳ ನಂತರ ಆರ್‌ಸಿಬಿ ತಂಡವು ಐಪಿಎಲ್ ಟ್ರೋಫಿ ಗೆದ್ದರೂ, ಆ ಸಂಭ್ರಮ ಹೆಚ್ಚು ಸಮಯ ಉಳಿದಿಲ್ಲ. ಬೆಂಗಳೂರಿನಲ್ಲಿ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ತಂಡದ ಗೆಲುವಿನ ಸಂಭ್ರಮಾಚರಣೆಗೆ ಬಂದ ಅಭಿಮಾನಿಗಳ ಮನೆಯಲ್ಲಿ ಸೂತಕದ ವಾತಾವರಣ ಮನೆ ಮಾಡಿದೆ. ಘಟನೆ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ಫ್ರಾಂಚೈಸ್ ಕೂಡಾ ಈ ರೀತಿಯ ಘಟನೆ ನಡೆಯಬಾರದಿತ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದೆ.
ಬೆಂಗಳೂರಿನಲ್ಲಿ ಆರ್‌ಸಿಬಿ ಅಭಿಮಾನಿಗಳಿಗೆ ವಿಶೇಷವಾಗಬೇಕಿದ್ದ ದಿನವು, ಗೊಂದಲ ಹಾಗೂ ಸಮನ್ವಯತೆಯ ಕೊರತೆಯಿಂದಾಗಿ ದುರಂತವಾಗಿ ಬದಲಾಯ್ತು. ಸಾವಿರಾರು ಅಭಿಮಾನಿಗಳು ನಗರದ ಕೇಂದ್ರಭಾಗದಲ್ಲಿ ಸೇರಿದ್ದರಿಂದ ಜನದಟ್ಟಣೆಯನ್ನು ನಿಯಂತ್ರಿಸಲು ಪೊಲೀಸ್ ಅಧಿಕಾರಿಗಳು ವಿಫಲರಾದರು. ನಡುವೆ ಲಾಠಿಚಾರ್ಜ್, ನೂಕುನುಗ್ಗಲು ಸಂಭವಿಸಿ ಕೆಲವು ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ.
ಕಾಲ್ತುಳಿತ ಘಟನೆ ನಡೆದ ಕೆಲವೇ ಗಂಟೆಗಳ ನಂತರ, ಆರ್‌ಸಿಬಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿ, ಬುಧವಾರ (ಜೂನ್ 4) ಸಂಜೆ ಬೆಂಗಳೂರಿನಲ್ಲಿ ನಡೆದ ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತು. ಆದರೆ ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆಯ ಬಗ್ಗೆ ಏನೂ ಹೇಳಿಲ್ಲ. “ಮಾಧ್ಯಮ ವರದಿಗಳ ಮೂಲಕ ಬೆಳಕಿಗೆ ಬಂದ ದುರದೃಷ್ಟಕರ ಘಟನೆಯಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಪ್ರತಿಯೊಬ್ಬರ ಸುರಕ್ಷತೆ ಮತ್ತು ಯೋಗಕ್ಷೇಮ ನಮಗೆ ತುಂಬಾ ಮುಖ್ಯ. ದುರಂತದಿಂದ ಪ್ರಾಣ ಕಳೆದುಕೊಂಡವರಿಗೆ ಆರ್‌ಸಿಬಿ ಶೋಕ ವ್ಯಕ್ತಪಡಿಸುತ್ತದೆ. ಘಟನೆಯಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ನಮ್ಮ ಸಂತಾಪ ವ್ಯಕ್ತಪಡಿಸುತ್ತದೆ. ಪರಿಸ್ಥಿತಿಯ ಬಗ್ಗೆ ತಿಳಿದ ತಕ್ಷಣ, ನಾವು ಕಾರ್ಯಕ್ರಮವನ್ನು ರದ್ದು ಮಾಡಿದ್ದೇವೆ. ಸರ್ಕಾರದ ಮಾರ್ಗದರ್ಶನ ಮತ್ತು ಸಲಹೆಯನ್ನು ಅನುಸರಿಸಿದ್ದೇವೆ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ ಎಂದು ನಮ್ಮ ಎಲ್ಲಾ ಅಭಿಮಾನಿಗಳನ್ನು ಒತ್ತಾಯಿಸುತ್ತೇವೆ” ಎಂದು ಬರೆದುಕೊಂಡಿದೆ.
ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ವಿರಾಟ್ ಕೊಹ್ಲಿ ಕೂಡಾ ಆರ್‌ಸಿಬಿ ಫ್ರಾಂಚೈಸ್ ಹಂಚಿಕೊಂಡ ಅಧಿಕೃತ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. 'ನನಗೆ ಕರುಳು ಕಿವುಚಿದಂತಾಗುತ್ತಿದೆ' ಎಂದು ಕೊಹ್ಲಿ ಕ್ಯಾಪ್ಷನ್ ಬರೆದಿದ್ದಾರೆ. "ನನಗೆ ಮಾತನಾಡಲು ಪದಗಳಿಲ್ಲ. ಘಟನೆಯಿಂದ ತುಂಬಾ ಬೇಸರವಾಗಿದೆ" ಎಂದು ಅವರು ಹೇಳಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಆರ್‌ಸಿಬಿಯ ಅಧಿಕೃತ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ಅತ್ತ ಆರ್‌ಸಿಬಿ ದಂತಕಥೆ ಎಬಿ ಡಿವಿಲಿಯರ್ಸ್ ಕೂಡ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಕಾಲ್ತುಳಿತದಲ್ಲಿ ಗಾಯಗೊಂಡವರ ಚೇತರಿಕೆಗೆ ಪ್ರಾರ್ಥಿಸುವುದಾಗಿ ಹೇಳಿಕೊಂಡಿದ್ದಾರೆ.
ಕಾಲ್ತುಳಿತದಿಂದಾಗಿ, ವಿಜಯೋತ್ಸವವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರ ಮುಂದೆ ಟ್ರೋಫಿಯನ್ನು ಪ್ರದರ್ಶಿಸುವ ಮೊದಲು ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಮತ್ತು ಕೊಹ್ಲಿ ಮಾತ್ರವೇ ಮಾತನಾಡಿದರು.
ಅಹಮದಾಬಾದ್‌ನಲ್ಲಿ ಮಂಗಳವಾರ ನಡೆದ ಐಪಿಎಲ್ 2025ರ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿದ ನಂತರ ಆರ್‌ಸಿಬಿ ತಂಡ ಮೊಟ್ಟಮೊದಲ ಪ್ರಶಸ್ತಿಯನ್ನು ಗೆದ್ದಿತ್ತು.