ವಿರಾಟ್‌-ಅಕ್ಷರ್ ಪಟೇಲ್‌ ಇನ್,‌ ಸಂಜು-ದುಬೆ ಔಟ್;‌ ಟಿ20 ವಿಶ್ವಕಪ್‌ಗೆ ಭಾರತ ಸಂಭಾವ್ಯ ತಂಡ ಹೀಗಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್‌-ಅಕ್ಷರ್ ಪಟೇಲ್‌ ಇನ್,‌ ಸಂಜು-ದುಬೆ ಔಟ್;‌ ಟಿ20 ವಿಶ್ವಕಪ್‌ಗೆ ಭಾರತ ಸಂಭಾವ್ಯ ತಂಡ ಹೀಗಿದೆ

ವಿರಾಟ್‌-ಅಕ್ಷರ್ ಪಟೇಲ್‌ ಇನ್,‌ ಸಂಜು-ದುಬೆ ಔಟ್;‌ ಟಿ20 ವಿಶ್ವಕಪ್‌ಗೆ ಭಾರತ ಸಂಭಾವ್ಯ ತಂಡ ಹೀಗಿದೆ

ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ ರಿಷಭ್ ಪಂತ್, ಟಿ20 ವಿಶ್ವಕಪ್‌ ಪಂದ್ಯಾವಳಿಯ ಆಡುವ ಬಳಗದಲ್ಲಿ ವಿಕೆಟ್‌ ಕೀಪರ್‌ ಆಗಿ ಕಣಕ್ಕಿಳಿಯುವುದು ಖಚಿತವಾಗಿದೆ. ಉಳಿದಂತೆ ಯಶಸ್ವಿ ಜೈಸ್ವಾಲ್‌ ಸ್ಥಾನ ಇನ್ನೂ ಸ್ಪಷ್ಟವಾಗಿಲ್ಲ.

ಟಿ20 ವಿಶ್ವಕಪ್‌ಗೆ ಭಾರತ ಸಂಭಾವ್ಯ ತಂಡ ಹೀಗಿದೆ
ಟಿ20 ವಿಶ್ವಕಪ್‌ಗೆ ಭಾರತ ಸಂಭಾವ್ಯ ತಂಡ ಹೀಗಿದೆ

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು 15 ಸದಸ್ಯರ ಭಾರತ ತಂಡ ಈಗಾಗಲೇ ಅಮೆರಿಕದಲ್ಲಿದೆ. ಈ ನಡುವೆ ತಂಡದ ಆಡುವ ಬಳಗದ ಸಂಯೋಜನೆ ಹೇಗಿರಲಿದೆ ಎಂಬುದು ಸದ್ಯದ ಕುತೂಹಲ. ಶನಿವಾರ ನಡೆದ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಆಡುವ ಬಳಗದ ಕ್ರಮಾಂಕದಲ್ಲಿ ವ್ಯತ್ಯಾಸವಾಗಿತ್ತು. ಆರಂಭಿಕರಾಗಿ ರೋಹಿತ್‌ ಶರ್ಮಾ ಜೊತೆಗೆ ಸಂಜು ಸ್ಯಾಮ್ಸನ್‌ ಕಣಕ್ಕಿಳಿದರೆ, ರಿಷಬ್‌ ಪಂತ್‌ ಮೂರನೇ ಕ್ರಮಾಂಕದಲ್ಲಿ ಆಡಿದರು. ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 60 ರನ್‌ಗಳ ಸುಲಭ ಜಯ ಸಾಧಿಸಿತು. ಇದೀಗ ಐರ್ಲೆಂಡ್‌ ವಿರುದ್ಧದ ಅರಂಭಿಕ ಪಂದ್ಯ ಸೇರಿದಂತೆ ಟೂರ್ನಿಯಲ್ಲಿ ತಂಡದ ಸಂಯೋಜನೆ ಕುರಿತು ಒಂದಷ್ಟು ಸುಳಿವು ಸಿಕ್ಕಿದೆ.

ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಸಂಜು ಸ್ಯಾಮ್ಸನ್, ನ್ಯೂಯಾರ್ಕ್‌ನ ನಾಸ್ಸೌ ಕೌಂಟಿ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತದ ಪರ ಇನ್ನಿಂಗ್ಸ್ ಆರಂಭಿಸಿದರು. ಆದರೆ, ಲಯ ಕಂಡುಕೊಳ್ಳಲು ಹೆಣಗಾಡಿ ಬೇಗನೆ ಔಟಾದರು. ಆ ಬಳಿಕ 3ನೇ ಕ್ರಮಾಂಕದಲ್ಲಿ ಆಡಿದ ಪಂತ್ ಅಸಾಧಾರಣ ಪ್ರದರ್ಶನ ನೀಡಿದರು. ಕೇವಲ 32 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ ಸಹಿತ ಅರ್ಧಶತಕ ಸಿಡಿಸಿದರು. ಅದರ ಬೆನ್ನಲ್ಲೇ ಮತ್ತೊಬ್ಬರಿಗೆ ಬ್ಯಾಟಿಂಗ್‌ ಅವಕಾಶ ನೀಡುವ ಸಲುವಾಗಿ ಮೈದಾನ ತೊರೆದರು. ಹೀಗಾಗಿ, ವಿಕೆಟ್‌ ಕೀಪರ್‌ ಆಗಿ ಬಿಸಿಸಿಐ ಆಯ್ಕೆದಾರರ ನೆಚ್ಚಿನ ಆಯ್ಕೆಯಾಗಿರುವ ಪಂತ್‌ ಮುಂದಿನ ಪಂದ್ಯಗಳಲ್ಲಿ ಆಡುವುದು ಬಹುತೇಕ ಖಚಿತವಾಗಿದೆ. ಇದೇ ವೇಳೆ ಸಂಜು ಸ್ಯಾಮ್ಸನ್‌ ಆಡುವ ಬಳಗ ಸೇರಿಕೊಳ್ಳುವ ಸಾಧ್ಯತೆ ಇಲ್ಲ.

ಬಾಂಗ್ಲಾ ವಿರುದ್ಧದ ಪಂದ್ಯದ ನಂತರ ಭಾರತದ ಸಂಭಾವ್ಯ ಬ್ಯಾಟಿಂಗ್ ಲೈನ್ಅಪ್ ಕುರಿತು ಮಾತನಾಡಿದ ನಾಯಕ ರೋಹಿತ್‌, ಪಂತ್ 3ನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಬಹುದು ಎಂದು ಸುಳಿವು ನೀಡಿದ್ದಾರೆ. ಪಂತ್ ಅವರನ್ನು 3 ನೇ ಕ್ರಮಾಂಕದಲ್ಲಿ ಕಳುಹಿಸಿರುವದು ಅವರಿಗೆ ಅವಕಾಶ ನೀಡಲು ಮಾತ್ರ. ಭಾರತವು ತಂಡದ ಬ್ಯಾಟಿಂಗ್ ಸಂಯೋಜನೆಯನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ಹಿಟ್‌ಮ್ಯಾನ್‌ ಬಹಿರಂಗಪಡಿಸಿದ್ದಾರೆ.

ಅಭ್ಯಾಸ ಪಂದ್ಯದಲ್ಲಿ ಆಡದ ವಿರಾಟ್‌ ಕೊಹ್ಲಿ, ಐರ್ಲೆಂಡ್‌ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಆದರೆ ಅವರು ಆರಂಭಿಕರಾಗಿ ಕಣಕ್ಕಿಳಿಯುತ್ತಾರಾ ಎಂಬುದು ಸದ್ಯದ ಕುತೂಹಲ. ಇದು ನಿಜವಾದರೆ ಯಶಸ್ವಿ ಜೈಸ್ವಾಲ್‌ ಸ್ಥಾನ ಕಳೆದುಕೊಳ್ಳಲಿದ್ದಾರೆ. ಶಿವಂ ದುಬೆ ಬ್ಯಾಟಿಂಗ್‌ನಲ್ಲಿ ಮಿಂಚುವಲ್ಲಿ ವಿಫಲರಾಗಿದ್ದು, ಬೌಲಿಂಗ್‌ನಲ್ಲಿ ಪ್ರಮುಖ ಎರಡು ವಿಕೆಟ್‌ ಪಡೆಯುವಲ್ಲಿ ವಿಫಲರಾದರು. ಹೀಗಾಗಿ ದುಬೆ ಸ್ಥಾನವೂ ಖಚಿತವಿಲ್ಲ.

ಹಾರ್ದಿಕ್ ಪಾಂಡ್ಯ ಫಾರ್ಮ್‌ಗೆ ಮರಳಿದ್ದು ತಂಡದ ವಿಶ್ವಾಸ ಹೆಚ್ಚಿಸಿದೆ. 23 ಎಸೆತಗಳಲ್ಲಿ ಅವರು ಅಜೇಯ 40 ರನ್ ಗಳಿಸಿದರು. ಅತ್ತ ಸೂರ್ಯಕುಮಾರ್‌ ಯಾದವ್‌ ಕೂಡಾ ಅಬ್ಬರಿಸಿದ್ದು, ತಮ್ಮ ಸ್ಥಾನ ಖಚಿತಪಡಿಸಿದ್ದಾರೆ.

ಚಹಾಲ್‌ ಔಟ್, ಅಕ್ಷರ್‌ ಪಟೇಲ್‌ಗೆ ಸ್ಥಾನ

ಸ್ಪಿನ್ನರ್‌ಗಳ ಪೈಕಿ ರವೀಂದ್ರ ಜಡೇಜಾ ಆಲ್‌ರೌಂಡರ್‌ ಸ್ಥಾನ ಖಚಿತವಾಗಿ ಪಡೆಯಲಿದ್ದಾರೆ. ಬಾಂಗ್ಲಾ ವಿರುದ್ಧ ಸ್ಪಿನ್ನರ್‌ಗಳ ಪೈಕಿ ಅಕ್ಷರ್‌ ಪಟೇಲ್‌ ಮಾತ್ರ ವಿಕೆಟ್‌ ಕಬಳಿಸಿದ್ದಾರೆ. ಉಳಿದಂತೆ ಜಡೇಜಾ ಹಾಗೂ ಕುಲ್ದೀಪ್‌ ವಿಕೆಟ್‌ ಪಡೆದಿಲ್ಲ. ಹೀಗಾಗಿ ದುಬೆ ಹೊರಗಿಟ್ಟು ಮೂರನೇ ಆಲ್‌ರೌಂಡರ್‌ ಆಗಿ ಅಕ್ಷರ್‌ ಪಟೇಲ್‌ ಕಣಕ್ಕಿಳಿಸಿದರೂ ಅಚ್ಚರಿಯಿಲ್ಲ. ಉಳಿದಂತೆ ಯುಜ್ವೇಂದ್ರ ಚಹಾಲ್‌ ಆಡುವ ಸಾಧ್ಯತೆ ಇಲ್ಲ.

ಹೊಸ ಚೆಂಡಿನೊಂದಿಗೆ ಅರ್ಷದೀಪ್ ಸಿಂಗ್ ಉತ್ತಮ ಬೌಲಿಂಗ್‌ ಮಾಡಿದ್ದಾರೆ. ಆದರೆ, ಇಬ್ಬರು ಪ್ರಮುಖ ವೇಗಿಗಳಾದ ಜಸ್ಪ್ರೀತ್‌ ಬುಮ್ರಾ ಹಾಗೂ ಮೊಹಮ್ಮದ್‌ ಸಿರಾಜ್‌ ನಡುವೆ ಇವರಿಗೆ ಸ್ಥಾನ ಸಿಗುವುದು ಅನುಮಾನ.

ಭಾರತದ ಸಂಭಾವ್ಯ ಆಡುವ ಬಳಗ

ರೋಹಿತ್‌ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್‌ ಕೀಪರ್‌), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

Whats_app_banner