Virat Kohli: ವಿರಾಟ್ ಅತ್ಯಂತ ಕೆಟ್ಟ ದಾಖಲೆ; ಡಕೌಟ್ನಲ್ಲೂ ಸಚಿನ್ರನ್ನು ಹಿಂದಿಕ್ಕಿದ ಕೊಹ್ಲಿ
Virat Kohli: ಅಫ್ಘಾನಿಸ್ತಾನ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ (India vs Afghanistan 3rd T20I) ವಿರಾಟ್ ಕೊಹ್ಲಿ (Virat Kohli) ಗೋಲ್ಡನ್ ಡಕ್‌ಗೆ ಬಲಿಯಾದರು. ಇದು ಟಿ20ಐ ಕ್ರಿಕೆಟ್‌ನಲ್ಲಿ ಅವರು ದಾಖಲಿಸಿದ ಮೊದಲ ಗೋಲ್ಡನ್ ಡಕ್. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು (Sachin Tendulkar) ಹಿಂದಿಕ್ಕಿದ ಕೊಹ್ಲಿ, ಅನಗತ್ಯ ದಾಖಲೆಯನ್ನು ಬರೆದಿದ್ದಾರೆ.
ಒಟ್ಟಾರೆ ತನ್ನ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಕೊಹ್ಲಿ ಅವರ 35ನೇ ಡಕೌಟ್ ಇದಾಗಿದ್ದು, 34 ಬಾರಿ ಡಕೌಟ್ ಆಗಿದ್ದ ಸಚಿನ್ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಪರ ಹೆಚ್ಚು ಡಕೌಟ್ ಆದ ಆಟಗಾರ ಎಂಬ ಕೆಟ್ಟ ದಾಖಲೆಗೂ ಪಾತ್ರರಾಗಿದ್ದಾರೆ. ಆರಂಭಿಕರಿಂದ 7ನೇ ಕ್ರಮಾಂಕದವರೆಗೆ ಬ್ಯಾಟಿಂಗ್ ನಡೆಸಿದ ಆಟಗಾರರ ಪೈಕಿ ದಾಖಲಾದ ದಾಖಲೆ ಇದು.
ಆದರೆ ಮಾಜಿ ವೇಗಿ ಜಹೀರ್ ಖಾನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಅಧಿಕ ಡಕೌಟ್ ಆದ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ. 7ನೇ ಕ್ರಮಾಂಕದ ಕೆಳಗೆ ಬ್ಯಾಟ್ ಬೀಸುವ ಜಹೀರ್, ಒಟ್ಟು 44 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ವೇಗಿ ಇಶಾಂತ್ ಶರ್ಮಾ 40 ಸಲ ಸೊನ್ನೆಗೆ ವಿಕೆಟ್ ಒಪ್ಪಿಸಿದ್ದರೆ, ಅನಿಲ್ ಕುಂಬ್ಳೆ ಸಹ 35 ಬಾರಿ ಶೂನ್ಯಕ್ಕೆ ಔಟಾಗಿರುವುದು ವಿಶೇಷ. ಇವರು 7ನೇ ಕ್ರಮಾಂಕದಿಂದ ಕೆಳಗೆ ಬ್ಯಾಟ್ ಬೀಸಿದವರು.
2024ರ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ರೋಹಿತ್ ಶರ್ಮಾ ಮತ್ತು ಕೊಹ್ಲಿಯನ್ನು ಟಿ20ಐ ಸೆಟಪ್ಗೆ ಅವಕಾಶ ನೀಡಲಾಯಿತು. ಆದರೆ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಅನುಭವಿ ಆಟಗಾರ, ಎರಡನೇ ಪಂದ್ಯದಲ್ಲಿ 29 ರನ್ ಗಳಿಸಿ ಔಟಾದರು. ಈ ಸಿರೀಸ್ನಲ್ಲಿ ಮಹತ್ವದ ಪ್ರಭಾವ ಬೀರಲು ವಿಫಲರಾದರು. ಆದ್ದರಿಂದ ಅವರ ವಿಶ್ವಕಪ್ ಆಯ್ಕೆಯು ಈಗ ಐಪಿಎಲ್ನಲ್ಲಿ ನೀಡುವ ಪ್ರದರ್ಶನದ ಮೇಲೆ ಅವಲಂಬಿತವಾಗಿರುತ್ತದೆ.
ಡಬಲ್ ಸೂಪರ್ನಲ್ಲಿ ಭಾರತಕ್ಕೆ ಗೆಲುವು
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ, 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡ ಭಾರತ 212 ರನ್ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ದಿಟ್ಟ ಹೋರಾಟ ನಡೆಸಿ ಪಂದ್ಯವನ್ನು ಟೈಗೊಳಿಸಿತು. ಹಾಗಾಗಿ ಸೂಪರ್ ಓವರ್ ಮೊರೆ ಹೋಗಬೇಕಾಯಿತು. ಅಚ್ಚರಿ ಅಂದರೆ ಮೊದಲ ಸೂಪರ್ ಕೂಡ ಟೈನಲ್ಲಿ ಅಂತ್ಯ ಕಂಡಿತು. ಹಾಗಾಗಿ ಎರಡನೇ ಸೂಪರ್ ನಡೆಸಲಾಯಿತು.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ 1 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. ಆದರೆ ಇದಕ್ಕೆ ಪ್ರತಿಯಾಗಿ ಅಫ್ಘನ್ ಕೇವಲ 1 ರನ್ ಗಳಿಸಿ ಆಲೌಟ್ ಆಯ್ತು. ಹೀಗಾಗಿ ಭಾರತ 10 ರನ್‌ಗಳಿಂದ ಗೆದ್ದು, ಸರಣಿಯನ್ನು 3-0ರಿಂದ ಸರಣಿ ಕ್ಲೀನ್‌ಸ್ವೀಪ್ ಮಾಡಿಕೊಂಡಿತು. ರೋಹಿತ್ ಈ ಪಂದ್ಯದಲ್ಲಿ ಒನ್ಮ್ಯಾನ್ ಶೋ ಪ್ರದರ್ಶನ ನೀಡಿ ಗಮನ ಸೆಳೆದರು.
ಹಿಟ್‌ಮ್ಯಾನ್ ಆಕರ್ಷಕ ಶತಕ
ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಡಕೌಟ್ ಆಗಿದ್ದ ಹಿಟ್‌ಮ್ಯಾನ್ ಈ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದರು. ಮೇಲಿಂದ ಮೇಲೆ ಬೌಂಡರಿ ಸಿಕ್ಸರ್‌ಗಳ ಸುರಿಮಳೆ ಸಿಡಿಸಿ ಶತಕದೊಂದಿಗೆ ಹಲವು ದಾಖಲೆ ನಿರ್ಮಿಸಿದರು. ಈ ಸ್ವರೂಪದಲ್ಲಿ 5 ಶತಕಗಳೊಂದಿಗೆ ಅಧಿಕ ಸೆಂಚುರಿ ಸಿಡಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದರು. ಕೇವಲ 69 ಎಸೆತಗಳನ್ನು ಎದುರಿಸಿದ ಹಿಟ್‌ಮ್ಯಾನ್ 11 ಬೌಂಡರಿ ಹಾಗೂ 8 ಸ್ಫೋಟಕ ಸಿಕ್ಸರ್ ನೆರವಿನಿಂದ ಬರೋಬ್ಬರಿ 121 ರನ್ ಕಲೆ ಹಾಕಿದರು. ಟಿ20 ಸ್ವರೂಪದಲ್ಲಿ ಇದು ಅವರ ಅತಿ ಹೆಚ್ಚು ಸ್ಕೋರ್.
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in