Virat Kohli: ಚರಿತ್ರೆ ಸೃಷ್ಟಿಸಲು ವಿರಾಟ್ ಕೊಹ್ಲಿ ಸಜ್ಜು; ಒಂದೆರಡಲ್ಲ, 7 ವಿಶ್ವದಾಖಲೆ ಮೇಲೆ ಕಣ್ಣು
Virat Kohli Records: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬರೋಬ್ಬರಿ 7 ವಿಶ್ವ ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಅವು ಯಾವುವು?

ನವದೆಹಲಿ, ಫೆ 18: ಫೆಬ್ರವರಿ 19ರ ಬುಧವಾರದಿಂದ ಶುರುವಾಗುವ ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಟೂರ್ನಿಯಲ್ಲಿ ಭಾರತ ತನ್ನ ಅಭಿಯಾನವನ್ನು ಗುರುವಾರ (ಫೆಬ್ರವರಿ 20) ಬಾಂಗ್ಲಾದೇಶ ವಿರುದ್ಧ ಪ್ರಾರಂಭಿಸಲಿದೆ. ಭಾರತ ತಂಡವು ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಆದರೆ, ಎಲ್ಲರ ಕಣ್ಣು ನೆಟ್ಟಿರೋದು ವಿರಾಟ್ ಕೊಹ್ಲಿ ಪ್ರದರ್ಶನದ ಮೇಲೆ. ಏಕೆಂದರೆ ಐಸಿಸಿ ಟೂರ್ನಿಗಳಲ್ಲಿ ತನ್ನ ಬ್ಯಾಟ್ ಸದ್ದು ಹೆಚ್ಚು ಮಾಡುವುದೇ ಅದಕ್ಕೆ ಕಾರಣ. ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊಹ್ಲಿ ಕಣ್ಣಿಟ್ಟಿರೋದು ಒಂದಲ್ಲ, ಎರಡಲ್ಲ, 7 ದಾಖಲೆಗಳ ಮೇಲೆ. ಸಚಿನ್ ತೆಂಡೂಲ್ಕರ್ ಮತ್ತು ಕ್ರಿಸ್ ಗೇಲ್ ಅವರ ದಾಖಲೆಗಳೂ ಅಪಾಯಕ್ಕೆ ಸಿಲುಕಿದೆ.
ವೇಗದ 14 ಸಾವಿರ ರನ್
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗವಾಗಿ 14,000 ರನ್ ಪೂರೈಸಿದ ವಿಶ್ವದಾಖಲೆ ತಮ್ಮ ಹೆಸರಿಗೆ ಬರೆದುಕೊಳ್ಳಲು ಕೊಹ್ಲಿಗೆ 37 ರನ್ಗಳ ಅಗತ್ಯವಿದೆ. 297 ಏಕದಿನ ಪಂದ್ಯಗಳ 285 ಇನ್ನಿಂಗ್ಸ್ಗಳಲ್ಲಿ 13,963 ರನ್ ಗಳಿಸಿದ್ದಾರೆ. ಪ್ರಸ್ತುತ ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದು, 350 ಇನ್ನಿಂಗ್ಸ್ಗಳಲ್ಲಿ 14 ಸಾವಿರ ರನ್ ಪೂರೈಸಿದ್ದರು.
14000 ರನ್ಗಳ ಕ್ಲಬ್
ಇದೇ ವೇಳೆ ಏಕದಿನದಲ್ಲಿ 14 ಸಾವಿರ ರನ್ ಪೂರೈಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಬಹುದು. ಸಚಿನ್ ನಂತರ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ್ ಸಂಗಕ್ಕಾರ 14,000 ರನ್ ಗಡಿ ದಾಟಿದ ಎರಡನೇ ಆಟಗಾರ ಎನಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 3ನೇ ಆಟಗಾರನಾಗುವ ಅವಕಾಶವೂ ಕೊಹ್ಲಿ ಮುಂದಿದೆ. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಲು 103 ರನ್ಗಳ ಅಗತ್ಯ ಇದೆ. ಕೊಹ್ಲಿ ಭಾರತ ಪರ 545 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 27,381 ರನ್ ಗಳಿಸಿದ್ದಾರೆ. ಪಾಂಟಿಂಗ್ ತಮ್ಮ ಕರಿಯರ್ನಲ್ಲಿ ಆಸ್ಟ್ರೇಲಿಯಾ ಪರ 560 ಪಂದ್ಯಗಳಲ್ಲಿ 27,483 ರನ್ ಗಳಿಸಿದ್ದಾರೆ. ಸಚಿನ್ (34,357) ಮತ್ತು ಸಂಗಕ್ಕಾರ (28,016) ಮೊದಲ ಎರಡು ಸ್ಥಾನದಲ್ಲಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್
36ರ ಹರೆಯದ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 2ನೇ ಆಟಗಾರ ಎನಿಸಿಕೊಳ್ಳಲು 271 ರನ್ ಮಾತ್ರ ಬೇಕಿದೆ. 404 ಏಕದಿನ ಪಂದ್ಯಗಳಲ್ಲಿ 14,234 ರನ್ ಗಳಿಸಿರುವ ಸಂಗಕ್ಕಾರ ಅವರನ್ನು ಕೊಹ್ಲಿ ಹಿಂದಿಕ್ಕಲು 271 ರನ್ ಗಳಿಸುವುದು ಅಗತ್ಯ. ಸಚಿನ್ (18,426) ಏಕದಿನಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ.
ಅತಿ ಹೆಚ್ಚು ಕ್ಯಾಚ್
ಫೀಲ್ಡರ್ ಆಗಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ 2ನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಲು ಕೊಹ್ಲಿಗೆ 3 ಕ್ಯಾಚ್ಗಳು ಬೇಕಿವೆ. ಕೊಹ್ಲಿ ಪ್ರಸ್ತುತ 154 ಕ್ಯಾಚ್ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. ಮೊಹಮ್ಮದ್ ಅಜರುದ್ದೀನ್ (156) ಅವರನ್ನು ಹಿಂದಿಕ್ಕಲು ಮೂರು ಕ್ಯಾಚ್ಗಳು ಮತ್ತು ರಿಕಿ ಪಾಂಟಿಂಗ್ (160) ಅವರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಲು 7 ಕ್ಯಾಚ್ಗಳು ಬೇಕಿವೆ. ಈ ಪಟ್ಟಿಯಲ್ಲಿ ಮಹೇಲಾ ಜಯವರ್ಧನೆ 218 ಕ್ಯಾಚ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ಗೇಲ್ ದಾಖಲೆ ಮೇಲೆ ಕಣ್ಣು
ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ 13 ಪಂದ್ಯಗಳಲ್ಲಿ 88.16ರ ಸರಾಸರಿಯಲ್ಲಿ 529 ರನ್ ಗಳಿಸಿರುವ ವಿರಾಟ್, ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದಾರೆ. ನಂಬರ್ 1 ಸ್ಥಾನಕ್ಕೇರಲು ಕೊಹ್ಲಿಗೆ 262 ರನ್ಗಳ ಅಗತ್ಯವಿದೆ. ಮೊದಲ ಸ್ಥಾನದಲ್ಲಿರುವ ಕ್ರಿಸ್ ಗೇಲ್, 17 ಪಂದ್ಯಗಳಲ್ಲಿ 761 ರನ್ ಗಳಿಸಿದ್ದಾರೆ.
ಅತಿ ಹೆಚ್ಚು ಅರ್ಧಶತಕ
ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ದಾಖಲೆಯನ್ನೂ ತನ್ನ ಹೆಸರಿಗೆ ಬರೆದುಕೊಳ್ಳಲು ಕೊಹ್ಲಿ ಸಜ್ಜಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಪರ 5 ಅರ್ಧಶತಕ ಬಾರಿಸಿರುವ ಅವರು, ಇನ್ನೆರಡು ಅರ್ಧಶತಕ ಸಿಡಿಸಿದರೆ ರಾಹುಲ್ ದ್ರಾವಿಡ್ ಅವರ ವಿಶ್ವದಾಖಲೆ ಮುರಿಯುತ್ತಾರೆ. ದ್ರಾವಿಡ್ 19 ಪಂದ್ಯಗಳಲ್ಲಿ 6 ಅರ್ಧಶತಕ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ.
