ಜನಪ್ರಿಯತೆ ಮತ್ತು ನಾಯಕತ್ವದಿಂದ ವಿರಾಟ್ ಕೊಹ್ಲಿ ವ್ಯಕ್ತಿತ್ವ ಬದಲಾಯಿತು, ಆದರೆ ರೋಹಿತ್ ಶರ್ಮಾ ಬದಲಾಗಿಲ್ಲ; ಅಮಿತ್ ಮಿಶ್ರಾ
Amit Mishra on Virat Kohli: ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರ ನಾಯಕತ್ವದ ವ್ಯತ್ಯಾಸ ಕುರಿತು ಭಾರತದ ಹಿರಿಯ ಬೌಲರ್ ಅಮಿತ್ ಮಿಶ್ರಾ ಮಾತನಾಡಿದ್ದಾರೆ.

ಬ್ಯಾಟಿಂಗ್ ಸೂಪರ್ಸ್ಟಾರ್ ವಿರಾಟ್ ಕೊಹ್ಲಿ ಕುರಿತು ಹಿರಿಯ ಸ್ಪಿನ್ನರ್ ಅಮಿತ್ ಮಿಶ್ರಾ ಸ್ಫೋಟಕ ಹೇಳಿಕೆ ನೀಡಿದ್ದು, ಜನಪ್ರಿಯತೆ ಗಳಿಸಿದ ಮತ್ತು ನಾಯಕನಾದ ನಂತರ ಅವರ ವ್ಯಕ್ತಿತ್ವ ತುಂಬಾ ಬದಲಾಯಿತು ಎಂದು ಹೇಳಿದ್ದಾರೆ. ಹಲವು ವರ್ಷಗಳಲ್ಲಿ ಕೊಹ್ಲಿ ವರ್ತನೆಯಲ್ಲಿ ಆಗಿರುವ ಬದಲಾವಣೆ ಏನೆಂದು ತಿಳಿಸಿದ ಮಿಶ್ರಾ, ರೋಹಿತ್ ಶರ್ಮಾ ಮತ್ತು ವಿರಾಟ್ ನಾಯಕತ್ವದ ವ್ಯತ್ಯಾಸಗಳ ಬಗ್ಗೆ ವಿವರಿಸಿದ್ದಾರೆ.
ಟೀಮ್ ಇಂಡಿಯಾ ಹಾಗೂ ದೇಶೀಯ ಕ್ರಿಕೆಟ್ ಎರಡರಲ್ಲೂ ವಿರಾಟ್ ಅವರೊಂದಿಗೆ ಆಡಿರುವ ಮಿಶ್ರಾ, ಕೊಹ್ಲಿ ಯುವ ಕ್ರಿಕೆಟರ್ ಆಗಿದ್ದಾಗ ಹೇಗಿದ್ದ? ಈಗ ಹೇಗಾಗಿದ್ದಾರೆ ಎಂಬುದರ ದೊಡ್ಡ ವ್ಯತ್ಯಾಸವನ್ನು ತೋರಿಸಿದ್ದಾರೆ. 2024ರ ಟಿ20 ವಿಶ್ವಕಪ್ ಜಯಿಸಿದ ನಂತರ ಕೊಹ್ಲಿ ಟಿ20ಐ ಕ್ರಿಕೆಟ್ಗೆ ವಿದಾಯ ಘೋಷಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಪ್ರಸ್ತುತ ಅವರು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರೆಯಲಿದ್ದಾರೆ.
ನಾನು ವಿರಾಟ್ ಕೊಹ್ಲಿಯನ್ನು ಚಿಕ್ಕಂದಿನಿಂದಲೂ ನೋಡುತ್ತಿದ್ದೇನೆ. ಮೊದಲು ಆತನ ಮೇಲೆ ಅಪಾರ ಗೌರವ ಇತ್ತು. ಆದರೆ ಮೊದಲಿದ್ದ ಗೌರವ ಈಗಿಲ್ಲ. ಒಬ್ಬ ಕ್ರಿಕೆಟಿಗನಾಗಿ, ಅವರನ್ನು ತುಂಬಾ ಗೌರವಿಸುತ್ತೇನೆ. ಆದರೆ, ನಾನೀಗ ಮೊದಲಿನಂತೆ ಕೊಹ್ಲಿಯೊಂದಿಗೆ ಉತ್ತಮವಾದ ಸಂಬಂಧ ಹೊಂದಿಲ್ಲ. ಏಕೆಂದರೆ ಜನಪ್ರಿಯತೆ ಮತ್ತು ನಾಯಕತ್ವ ಸಿಕ್ಕ ನಂತರ ಕೊಹ್ಲಿ ವ್ಯಕ್ತಿತ್ವ ತುಂಬಾ ಬದಲಾಯಿತು. ಇದರಿಂದ ಸಾಕಷ್ಟು ಸ್ನೇಹಿತರನ್ನೂ ಕಳೆದುಕೊಂಡರು. ಈಗ ಅವರಿಗಿರುವುದು ಬೆರಳೆಣಿಕೆ ಸ್ನೇಹಿತರಷ್ಟೇ ಎಂದಿದ್ದಾರೆ.
ಇದೇ ವೇಳೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ಹೊಗಳಿದ್ದಾರೆ. ರೋಹಿತ್ ಬಗ್ಗೆ ನಿಮಗೊಂದು ವಿಷಯ ಹೇಳಲು ಬಯಸುತ್ತೇನೆ. ನಾನು ರೋಹಿತ್ ಶರ್ಮಾ ಅವರನ್ನು ಮೊದಲು ಭೇಟಿಯಾದಾಗ ಹೇಗಿದ್ದರೋ, ಈಗಲೂ ಹಾಗೆಯೇ ಇದ್ದಾರೆ. ಆದರೆ ರೋಹಿತ್ಗೆ ನಾಯಕತ್ವ, ಯಶಸ್ಸು ಮತ್ತು ಖ್ಯಾತಿ ಸಿಕ್ಕರೂ ತನ್ನ ವ್ಯಕ್ತಿತ್ವ ಬದಲಿಸಿಕೊಂಡಿಲ್ಲ. ಆದರೆ ಕೊಹ್ಲಿ ತನ್ನ ವರ್ತನೆಯಲ್ಲಿ ಬದಲಾವಣೆ ಮಾಡಿಕೊಂಡು ಸ್ನೇಹಿತರ ಬಳಗವನ್ನೇ ಕಳೆದುಕೊಂಡರು ಎಂದು ಶುಭಂಕರ್ ಮಿಶ್ರಾ ಅವರ ಪಾಡ್ಕ್ಯಾಸ್ಟ್ನಲ್ಲಿ ತಿಳಿಸಿದ್ದಾರೆ.
ವಿರಾಟ್-ಗಂಭೀರ್ ಜಗಳದ ಬಗ್ಗೆ ಮಿಶ್ರಾ ಮಾತು
ವಿರಾಟ್ ಮತ್ತು ಗಂಭೀರ್ ನಡುವಿನ ವೈರತ್ವ ಕೊನೆಗೊಳಿಸಿದ್ದು ಯಾರು ಎಂಬ ಪ್ರಶ್ನೆಗೆ ಅಮಿತ್ ಮಿಶ್ರಾ ಇದೇ ವೇಳೆ ಉತ್ತರಿಸಿದ್ದಾರೆ. 2024ರ ಐಪಿಎಲ್ನಲ್ಲಿ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯದ ವೇಳೆ ಗಂಭೀರ್ ಖುದ್ದಾಗಿ ಕೊಹ್ಲಿ ಬಳಿ ತೆರಳಿ ಅಪ್ಪಿಕೊಳ್ಳುವ ಮೂಲಕ ಜಗಳ ಮತ್ತು ಮನಸ್ತಾಪಗಳಿಗೆ ಅಂತ್ಯ ಹಾಡಿದರು ಎಂದು ಮಿಶ್ರಾ ಹೇಳಿದ್ದಾರೆ. ಆದರೆ, ಈ ನಡೆ ವಿರಾಟ್ ಕಡೆಯಿಂದ ಬಂದದ್ದಲ್ಲ.ಗಂಭೀರ್ ಕೊಹ್ಲಿಯನ್ನು ಮಾತನಾಡಿಸಿ ಹೇಗಿದ್ದೀಯಾ, ಮಕ್ಕಳು ಹೇಗಿದ್ದಾರೆ ಎಂದೆಲ್ಲಾ ಕೇಳಿದ್ದರು. ಆ ಮೂಲಕ ಇಬ್ಬರ ನಡುವೆ ಮುನಿಸಿದೆ ತೆರೆ ಎಳೆದರು ಎಂದು ಮಿಶ್ರಾ ಹೇಳಿದ್ದಾರೆ.