ಆರ್ಸಿಬಿಯೊಂದಿಗೆ 16 ವರ್ಷ ಪೂರೈಸಿದ ವಿರಾಟ್; ಚೊಚ್ಚಲ ಐಪಿಎಲ್‌ನಲ್ಲಿ ಕೊಹ್ಲಿ ಪಡೆದ ಸಂಬಳವೆಷ್ಟು, ಈಗೆಷ್ಟಿದೆ?
Virat Kohli : ಡ್ರಾಫ್ಟ್ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಮೊದಲ ಸ್ಯಾಲರಿ ಎಷ್ಟಿತ್ತು? ಈಗ ಎಷ್ಟಿದೆ? ಇಲ್ಲಿದೆ ನೋಡೋಣ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡಕ್ಕೆ ಸೇರ್ಪಡೆಗೊಂಡು ಬ್ಯಾಟಿಂಗ್ ಸೂಪರ್ಸ್ಟಾರ್ ವಿರಾಟ್ ಕೊಹ್ಲಿ 16 ವರ್ಷಗಳನ್ನು ಪೂರೈಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಈವರೆಗೆ ಆಡಿದ ಎಲ್ಲಾ 16 ಸೀಸನ್‌ಗಳಲ್ಲಿ ಒಂದೇ ಫ್ರಾಂಚೈಸಿಯನ್ನು ಪ್ರತಿನಿಧಿಸುತ್ತಿರುವ ಏಕೈಕ ಆಟಗಾರ ವಿರಾಟ್ ಕೊಹ್ಲಿ.
2008ರಲ್ಲಿ ಡ್ರಾಫ್ಟ್‌ನಲ್ಲಿದ್ದ ಭಾರತದ ಅಂಡರ್-19 ಕ್ರಿಕೆಟಿಗರ ಪೈಕಿ ವಿರಾಟ್ ಕೂಡ ಒಬ್ಬರಾಗಿದ್ದರು. ಅಂದಿನ ಡೇರ್ ಡೆವಿಲ್ಸ್ ತಂಡವು ಅಂಡರ್-19 ವಿಶ್ವಕಪ್ ವಿಜೇತ ನಾಯಕನನ್ನು ಆಯ್ಕೆ ಮಾಡುವ ನಿರ್ಧಾರ ಪಡೆಯಿತು. ಆದರೆ ಆರ್‌ಸಿಬಿ ತನ್ನ ತೆಕ್ಕೆಗೆ ಕೊಹ್ಲಿಯನ್ನು ತೆಗೆದುಕೊಂಡಿತು. ಹಾಗಾದರೆ ಡ್ರಾಫ್ಟ್ ಮೂಲಕ ಆರ್‌ಸಿಬಿ ಸೇರಿದ ಕೊಹ್ಲಿಯ ಮೊದಲ ಸ್ಯಾಲರಿ ಎಷ್ಟಿತ್ತು? ಈಗ ಎಷ್ಟಿದೆ? ಇಲ್ಲಿದೆ ನೋಡೋಣ.
ಕೊಹ್ಲಿ ಐಪಿಎಲ್ನ ಮೊದಲ ಸ್ಯಾಲರಿ 12 ಲಕ್ಷ
ಉದ್ಘಾಟನಾ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾದ ವಿರಾಟ್ ಕೊಹ್ಲಿ ಅವರ ಬೆಲೆ ಕೇಳಿದರೆ ನಿಮಗೂ ತಲೆ ತಿರುತ್ತದೆ. ಐಪಿಎಲ್ 2008ರ ಡ್ರಾಫ್ಟ್‌ನಲ್ಲಿ ವಿರಾಟ್ 12 ಲಕ್ಷ ರೂ.ಗೆ ಆರ್‌ಸಿಬಿ ಸೇರಿಕೊಂಡರು. ಈ ಮೊತ್ತವು ಮೂಲಬೆಲೆಗಿಂತ 2 ಲಕ್ಷ ಹೆಚ್ಚಿತ್ತು ಅಷ್ಟೆ. ಅಂತಹ ಆಟಗಾರ, ಒಂದು ಕಾಲದಲ್ಲಿ 17 ಕೋಟಿ ರೂಪಾಯಿ ಸಂಭಾವನೆ ಪಡೆದ ಐಪಿಎಲ್‌ನಲ್ಲಿ ಅತಿ ಹೆಚ್ಚು ವೇತನ ಪಡೆಯುವ ಆಟಗಾರನಾಗುವವರೆಗೂ ಬೆಳೆದರು.
2008ರ ನಂತರ 2009 ಮತ್ತು 2010ರಲ್ಲೂ ಅದೇ ಹಣವನ್ನು ಕೊಹ್ಲಿ ಗಳಿಸಿದರು. ಕೊಹ್ಲಿ 2008ರಲ್ಲಿ ಭಾರತಕ್ಕೆ ಪದಾರ್ಪಣೆ ಮಾಡಿದರು. ನಂತರ ವೈಟ್-ಬಾಲ್ ತಂಡದಲ್ಲಿ ನಿಯಮಿತ ಸೇವೆ ಸಲ್ಲಿಸಿದರು. ಸಿಕ್ಕ ಅವಕಾಶದಲ್ಲಿ ರನ್ ಬೇಟೆಯಾಡಿದ ಕೊಹ್ಲಿ, ಭವಿಷ್ಯದ ತಾರೆಯಾಗಿ ರೂಪುಗೊಂಡರು. ಪರಿಣಾಮ 2011ರ ಐಪಿಎಲ್ ಮೆಗಾ ಹರಾಜಿಗೂ ಮೊದಲು ಆರ್‌ಸಿಬಿ ಉಳಿಸಿಕೊಂಡ ಏಕೈಕ ಆಟಗಾರನಾಗಿದ್ದರು.
ಆಗ ವಿರಾಟ್ ಸಂಭಾವನೆ ಭಾರಿ ಹೆಚ್ಚಳವಾಯಿತು. ಕೊಹ್ಲಿ 8.28 ಕೋಟಿ ರೂಪಾಯಿ ವೇತನ ಪಡೆದರು. 2012ರಲ್ಲಿ ಏಕದಿನ ಉಪನಾಯಕನಾಗಿ ನೇಮಕಗೊಂಡ ವಿರಾಟ್, ಅದೇ ವರ್ಷ ಆರ್‌ಸಿಬಿ ನಾಯಕನಾಗಿಯೂ ಬಡ್ತಿ ಪಡೆದರು. 2013ರಲ್ಲಿ ಆರ್‌ಸಿಬಿ ಪೂರ್ಣ ಸಮಯದ ನಾಯಕರಾಗಿ ಅಧಿಕಾರ ವಹಿಸಿಕೊಂಡ ಕೊಹ್ಲಿ, 2014ರ ಐಪಿಎಲ್ಗೂ ಮುನ್ನ ಮತ್ತೆ ವೇತನ ಹೆಚ್ಚಿಸಿಕೊಂಡರು. ಅಂದು 12.5 ಕೋಟಿ ಪಡೆದರು.
2017ರಲ್ಲಿ ಭಾರತದ ಮೂರು ಫಾರ್ಮೆಟ್ ನಾಯಕನಾದ ಬಳಿಕ 2018 ರ ಮೆಗಾ-ಹರಾಜಿಗೂ ಮುನ್ನ ಆರ್‌ಸಿಬಿ, ಕೊಹ್ಲಿ ಅವರನ್ನು 17 ಕೋಟಿಗೆ ಉಳಿಸಿಕೊಂಡಿತು. ಇದರೊಂದಿಗೆ ವಿರಾಟ್ ಅತ್ಯಧಿಕ ವೇತನ ಪಡೆದ ಆಟಗಾರ ಎನಿಸಿಕೊಂಡರು. ಈ ವೇತನದ ಒಪ್ಪಂದ ಐಪಿಎಲ್ 2021 ರವರೆಗೆ ಇತ್ತು. ಐಪಿಎಲ್ 2021ರ ನಂತರ ವಿರಾಟ್ ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿದರು. ಐಪಿಎಲ್ 2022ರ ಮೆಗಾ-ಹರಾಜಿನ ಮೊದಲು ಅವರನ್ನು 15 ಕೋಟಿ ರೂ.ಗೆ ಉಳಿಸಿಕೊಳ್ಳಲಾಯಿತು. ಅನೇಕ ಆಟಗಾರರು ಈಗ ವಿರಾಟ್‌ಗಿಂತ ಹೆಚ್ಚು ಗಳಿಸುತ್ತಿದ್ದಾರೆ.
ವರ್ಷ | ತಂಡ | ಸಂಬಳ |
---|---|---|
2023 | ರಾಯಲ್ ಚಾಲೆಂಜರ್ಸ್ ಬೆಂಗಳೂರು | ₹ 150,000,000 |
2022 | ರಾಯಲ್ ಚಾಲೆಂಜರ್ಸ್ ಬೆಂಗಳೂರು | ₹ 150,000,000 |
2021 | ರಾಯಲ್ ಚಾಲೆಂಜರ್ಸ್ ಬೆಂಗಳೂರು | ₹ 170,000,000 |
2020 | ರಾಯಲ್ ಚಾಲೆಂಜರ್ಸ್ ಬೆಂಗಳೂರು | ₹ 170,000,000 |
2019 | ರಾಯಲ್ ಚಾಲೆಂಜರ್ಸ್ ಬೆಂಗಳೂರು | ₹ 170,000,000 |
2018 | ರಾಯಲ್ ಚಾಲೆಂಜರ್ಸ್ ಬೆಂಗಳೂರು | ₹ 170,000,000 |
2017 | ರಾಯಲ್ ಚಾಲೆಂಜರ್ಸ್ ಬೆಂಗಳೂರು | ₹ 125,000,000 |
2016 | ರಾಯಲ್ ಚಾಲೆಂಜರ್ಸ್ ಬೆಂಗಳೂರು | ₹ 125,000,000 |
2015 | ರಾಯಲ್ ಚಾಲೆಂಜರ್ಸ್ ಬೆಂಗಳೂರು | ₹ 125,000,000 |
2014 | ರಾಯಲ್ ಚಾಲೆಂಜರ್ಸ್ ಬೆಂಗಳೂರು | ₹ 125,000,000 |
2013 | ರಾಯಲ್ ಚಾಲೆಂಜರ್ಸ್ ಬೆಂಗಳೂರು | ₹ 82,800,000 |
2012 | ರಾಯಲ್ ಚಾಲೆಂಜರ್ಸ್ ಬೆಂಗಳೂರು | ₹ 82,800,000 |
2011 | ರಾಯಲ್ ಚಾಲೆಂಜರ್ಸ್ ಬೆಂಗಳೂರು | ₹ 82,800,000 |
2010 | ರಾಯಲ್ ಚಾಲೆಂಜರ್ಸ್ ಬೆಂಗಳೂರು | ₹ 1,200,000 |
2009 | ರಾಯಲ್ ಚಾಲೆಂಜರ್ಸ್ ಬೆಂಗಳೂರು | ₹ 1,200,000 |
2008 | ರಾಯಲ್ ಚಾಲೆಂಜರ್ಸ್ ಬೆಂಗಳೂರು | ₹ 1,200,000 |
ಒಟ್ಟು | ₹ 1,732,000,000 |