ಔಟಾಗಿ ಹೋಗ್ತಿದ್ದ ವಿರಾಟ್ ಕೊಹ್ಲಿ ಕೆಣಕಿದ್ರು; ಮಿತಿ ಮೀರಿದ ಆಸ್ಟ್ರೇಲಿಯಾ ಕ್ರಿಕೆಟ್ ಫ್ಯಾನ್ಸ್ ಹಾವಳಿ, ವಿಡಿಯೋ
Virat Kohli: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯವು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದ ಎರಡನೇ ದಿನದಂದು ಆಸೀಸ್ ಅಭಿಮಾನಿಗಳ ಹಾವಳಿ ಮಿತಿ ಮೀರಿತು. ಔಟಾಗಿ ಹೋಗುತ್ತಿದ್ದ ವಿರಾಟ್ ಕೊಹ್ಲಿಯನ್ನು ಕೆಣಕಿದ್ದಾರೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 4ನೇ ಅಥವಾ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ 2ನೇ ದಿನವೂ ಟೀಮ್ ಇಂಡಿಯಾ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಸುದ್ದಿಯಲ್ಲಿದ್ದಾರೆ. ಮೊದಲ ದಿನದಂದು ಆಸೀಸ್ನ ಯುವ ಆಟಗಾರ ಸ್ಯಾಮ್ ಕಾನ್ಸ್ಟಾಸ್ಗೆ ಡಿಕ್ಕಿ ಹೊಡೆದು ಕೆಣಕುವ ಮೂಲಕ ವ್ಯಾಪಕ ಟೀಕೆಗೆ ಒಳಗಾಗಿ ದಂಡದ ಶಿಕ್ಷೆಗೆ ಗುರಿಯಾಗಿದ್ದ ವಿರಾಟ್ ಕೊಹ್ಲಿ ಅವರು 2ನೇ ದಿನವೂ ತನ್ನದಲ್ಲದ ತಪ್ಪಿಗೂ ತಾಳ್ಮೆ ಕಳೆದುಕೊಂಡು ಸುದ್ದಿಯಾಗಿದ್ದಾರೆ. ಇದಕ್ಕೆ ಕಾರಣ ಆಸ್ಟ್ರೇಲಿಯಾ ಕ್ರಿಕೆಟ್ ಅಭಿಮಾನಿಗಳ ಮಿತಿ ಮೀರಿದ ಹಾವಳಿ.
ಬಾರ್ಡರ್ ಗವಾಸ್ಕರ್ ಟ್ರೋಫಿಯು ಒಂದಿಲ್ಲೊಂದು ವಿಚಾರಕ್ಕೆ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೆಚ್ಚಾಗಿ ವಿರಾಟ್ ಕೊಹ್ಲಿ ಏನೇ ಮಾಡಿದರೂ ಅದು ವಿವಾದ ಅಥವಾ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ದಂಡದ ಬರೆ ಬಿದ್ದ ಬಳಿಕ ಸೈಲೆಂಟ್ ಆಗಿದ್ದ ವಿರಾಟ್ ಕೊಹ್ಲಿಯನ್ನು ಆಸೀಸ್ ಕ್ರಿಕೆಟ್ ಫ್ಯಾನ್ಸ್ ಕೆಣಕಿ ತಾಳ್ಮೆ ಪರೀಕ್ಷಿಸಿದ್ದಾರೆ. ಹೌದು, ಟೀಮ್ ಇಂಡಿಯಾ ಬ್ಯಾಟಿಂಗ್ ನಡೆಸುವಾಗ ವಿರಾಟ್ ಕೊಹ್ಲಿ ಔಟಾಗಿ ಡ್ರೆಸ್ಸಿಂಗ್ ರೂಮ್ಗೆ ಹೋಗುತ್ತಿದ್ದಾಗ ಆಸೀಸ್ ಅಭಿಯಾನಿಗಳು ಕೆರಳಿಸುವಂತೆ ಕೂಗಿದ್ದಾರೆ. ಇದು ಕೊಹ್ಲಿಗೆ ಕೋಪ ತರಿಸಿತು.
ಕೊಹ್ಲಿಯ ತಾಳ್ಮೆ ಪರೀಕ್ಷೆ ಮಾಡಿದ ಅಭಿಮಾನಿ
ತಂಡದ ಮೊತ್ತ 51ಕ್ಕೆ 2 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್ಗೆ ಬಂದ ವಿರಾಟ್ ಕೊಹ್ಲಿ ಅವರು ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಜೊತೆಗೂಡಿ 3ನೇ ವಿಕೆಟ್ಗೆ 102 ರನ್ಗಳ ಪಾಲುದಾರಿಕೆ ಒದಗಿಸಿದರು. ಆ ಮೂಲಕ ಆರಂಭಿಕ ಆಘಾತದಿಂದ ಕುಗ್ಗಿದ್ದ ತಂಡಕ್ಕೆ ಚೇತರಿಕೆ ನೀಡಿದರು. ಆದರೆ 82 ರನ್ ಬಾರಿಸಿದ್ದ ಜೈಸ್ವಾಲ್ ಔಟಾದ 1 ರನ್ ಅಂತರದಲ್ಲೇ ಕೊಹ್ಲಿ ಕೂಡ ವಿಕೆಟ್ ಒಪ್ಪಿಸಿದರು. 36 ರನ್ ಬಾರಿಸಿದ್ದ ವಿರಾಟ್ ಅವರು ಸ್ಕಾಟ್ ಬೋಲ್ಯಾಂಡ್ ಬೌಲಿಂಗ್ನಲ್ಲಿ ಕ್ಲೀನ್ ಬೋಲ್ಡ್ ಆದರು. ಹೀಗೆ ಔಟಾಗಿ ಡ್ರೆಸ್ಸಿಂಗ್ ರೂಮ್ಗೆ ಹೋಗುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬರು ಕೆರಳಿಸುವಂತೆ ಕೂಗಿದರು.
ಇನ್ನೇನು ಡ್ರೆಸ್ಸಿಂಗ್ ರೂಮ್ ಕಡೆಗೆ ಹೊಗಬೇಕು ಎನ್ನುವಷ್ಟರಲ್ಲಿ ಅಭಿಮಾನಿಯ ಮಾತಿಗೆ ಕೋಪಗೊಂಡ ವಿರಾಟ್ ಕೊಹ್ಲಿ ಮತ್ತೆ ವಾಪಸ್ ಬಂದರು. ಕೋಪದಿಂದ ಅವರತ್ತ ದಿಟ್ಟಿಸಿ ನೋಡಿದ ಕೊಹ್ಲಿಯನ್ನು ಮೈದಾನದ ಸಿಬ್ಬಂದಿ ಸಮಾಧಾನಪಡಿಸಿ ಮತ್ತೆ ಡ್ರೆಸ್ಸಿಂಗ್ ರೂಮ್ಗೆ ಕಳುಹಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮೊದಲ ಇನ್ನಿಂಗ್ಸ್ನಲ್ಲಿ ಆಸೀಸ್, 474 ರನ್ ಗಳಿಸಿದ್ದರೆ, ಟೀಮ್ ಇಂಡಿಯಾ ಎರಡನೇ ದಿನದಾಟದ ಅಂತ್ಯಕ್ಕೆ 164 ರನ್ ಗಳಿಸಿದೆ. 3ನೇ ದಿನದಂದು ಭಾರತದ ಹೇಗೆ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ಫಾಲೋ ಆನ್ನಿಂದ ಪಾರಾಗಲು 100 ರನ್ ಬೇಕು
ಆಸ್ಟ್ರೇಲಿಯಾದ 474 ರನ್ಗಳಿಗೆ ಪ್ರತ್ಯುತ್ತರವಾಗಿ ಇನ್ನಿಂಗ್ಸ್ ಶುರು ಮಾಡಿದ ಭಾರತ ತಂಡ ಉತ್ತಮ ಆರಂಭ ಪಡೆಯಲಿಲ್ಲ. ರೋಹಿತ್ ಶರ್ಮಾ ಆರಂಭಿಕ ಸ್ಥಾನದಲ್ಲಿ ಬ್ಯಾಟ್ ಬೀಸಿದರೂ ರನ್ ಗಳಿಸಲಿಲ್ಲ. ರೋಹಿತ್ 3 ರನ್ ಗಳಿಸಿದರೆ, ಚಹಾ ವಿರಾಮಕ್ಕೂ ಮುನ್ನ ಕೆಎಲ್ ರಾಹುಲ್ 24 ರನ್ ಗಳಿಸಿ ಹೊರ ನಡೆದರು. ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿ 102 ರನ್ಗಳ ಜೊತೆಯಾಟದ ನೆರವಿನಿಂದ ಭಾರತ ಸಂಕಷ್ಟದಿಂದ ಪಾರಾಯಿತು. ಯಶಸ್ವಿ 82 ರನ್ ಗಳಿಸಿ ಔಟಾದರೆ, ವಿರಾಟ್ 86 ಎಸೆತಗಳನ್ನು ಎದುರಿಸಿ ಮೂರು ಬೌಂಡರಿಗಳ ಸಹಾಯದಿಂದ 36 ರನ್ ಗಳಿಸಿದರು. ಭಾರತದ ಸ್ಕೋರ್ 2 ವಿಕೆಟ್ಗೆ 153 ಆಗಿತ್ತು. ದಿನದಂತ್ಯಕ್ಕೆ 164 ರನ್ ಆಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿದೆ. ಫಾಲೋ-ಆನ್ ತಪ್ಪಿಸಲು ಭಾರತ ಇನ್ನೂ 100 ರನ್ ಗಳಿಸಬೇಕಾಗಿದೆ.