ವಿಡಿಯೋ ಕಾಲ್ ಮೂಲಕ ಸ್ಮೃತಿ ಮಂಧಾನ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸಿದ ವಿರಾಟ್ ಕೊಹ್ಲಿ; ಸೂಪರ್ವುಮೆನ್ ಎಂದ ಕಿಂಗ್
Virat Kohli: ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿ ಗೆದ್ದ ನಂತರ ವಿಡಿಯೋ ಕಾಲ್ ಮೂಲಕ ವಿರಾಟ್ ಕೊಹ್ಲಿ ಅವರು ಸ್ಮೃತಿ ಮಂಧಾನ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ವುಮೆನ್ಸ್ ಪ್ರೀಮಿಯರ್ ಲೀಗ್ (WPL 2024 Final) ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ರೋಚಕ ಗೆಲುವು ದಾಖಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ 8 ವಿಕೆಟ್ಗಳಿಂದ ಗೆದ್ದ ಆರ್ಸಿಬಿ ಮಹಿಳಾ ತಂಡಕ್ಕೆ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ (Virat Kohli) ಅಭಿನಂದನೆ ಸಲ್ಲಿಸಿದ್ದಾರೆ.
ಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್, ಆರ್ಸಿಬಿ ಸ್ಪಿನ್ನರ್ಗಳಾದ ಶ್ರೇಯಾಂಕಾ ಪಾಟೀಲ್ (12/4), ಸೋಫಿ ಮೊಲಿನೆಕ್ಸ್ (20/3), ಆಶಾ ಶೋಭನಾ (14/2) ಅವರ ದಾಳಿಗೆ ತತ್ತರಿಸಿತು. ಉತ್ತಮ ಆರಂಭದ ನಡುವೆಯೂ 18.3 ಓವರ್ಗಳಲ್ಲಿ 113 ರನ್ಗಳಿಗೆ ಕುಸಿತ ಕಂಡಿತು. 44 ರನ್ ಗಳಿಸಿದ ಶಫಾಲಿ ವರ್ಮಾ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ.
114 ರನ್ಗಳ ಅಲ್ಪಮೊತ್ತವನ್ನು ಬೆನ್ನಟ್ಟಿದ ಆರ್ಸಿಬಿ, ಒತ್ತಡಕ್ಕೆ ಒಳಗಾಗದೆ ನಿಧಾನವಾಗಿ ರನ್ ಕಲೆ ಹಾಕಿತು. 2ನೇ ಬ್ಯಾಟಿಂಗ್ ನಡೆಸಲು ಕಷ್ಟವಾದ ಪಿಚ್ನಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿತು. ಸ್ಮೃತಿ ಮಂಧಾನ 31 ಮತ್ತು ಎಲ್ಲಿಸ್ ಪೆರ್ರಿ ಅಜೇಯ 35 ರನ್ ಗಳಿಸಿ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆ ಮೂಲಕ ಈವರೆಗೂ ಪುರುಷರ ಕೈಯಲ್ಲಿ ಆಗದಿರುವುದು ಹೆಣ್ಮಕ್ಕಳು ಸಾಧಿಸಿ ತೋರಿಸಿದರು.
ವಿಡಿಯೋ ಕಾಲ್ನಲ್ಲಿ ಸ್ಮೃತಿ ಜೊತೆ ಮಾತು
ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಚಾಂಪಿಯನ್ ತಂಡದ ಫೋಟೋ ಪೋಸ್ಟ್ ಮಾಡಿರುವ ವಿರಾಟ್ ಕೊಹ್ಲಿ ಸೂಪರ್ವುಮೆನ್ ಎಂದು ಬರೆದಿದ್ದಾರೆ. ಅಲ್ಲದೆ, ಗೆಲುವು ಸಾಧಿಸಿದ ಬೆನ್ನಲ್ಲೇ ನಾಯಕಿ ಸ್ಮೃತಿ ಮಂಧಾನಗೆ ಆರ್ಸಿಬಿ ಪುರುಷರ ತಂಡದ ಬ್ಯಾಟಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಅವರು ವಿಡಿಯೋ ಕಾಲ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಇದರ ಫೋಟೋವನ್ನು ಆರ್ಸಿಬಿ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ.
ಇತಿಹಾಸ ಪುಟಕ್ಕೆ ಸೇರಲಿದೆ ಮಾರ್ಚ್ 17
ಚೊಚ್ಚಲ ಟ್ರೋಫಿಯನ್ನು ಗೆಲ್ಲುವ ಮೂಲಕ 16 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯಗೊಂಡಿದೆ. ಕಪ್ ಯಾವಾಗ, ಕಪ್ ಯಾವಾಗ ಎಂದು ಕೇಳುತ್ತಿದ್ದವರ ಪ್ರಶ್ನೆಗೆ ಅಭಿಮಾನಿಗಳು ತಲೆ ಎತ್ತಿ ಉತ್ತರಿಸುವ ದಿನ ಬಂದೇ ಬಿಟ್ಟಿದೆ. 2008ರಲ್ಲಿ ಆರ್ಸಿಬಿ ಫ್ರಾಂಚೈಸಿ ಹುಟ್ಟಿದಾಗಿನಿಂದಲೂ ಗೆದ್ದ ಮೊಟ್ಟ ಮೊದಲ ಟ್ರೋಫಿ ಇದಾಗಿದೆ. ಹಾಗಾಗಿ ಫ್ರಾಂಚೈಸಿ ಮತ್ತು ಅಭಿಮಾನಿಗಳ ಪಾಲಿಗೆ ಮಾರ್ಚ್ 17 ಐತಿಹಾಸಿಕ ದಿನವಾಗಿದೆ.
ಪುರುಷರ ತಂಡ 3 ಬಾರಿ ಫೈನಲ್ಗೆ, ಆದರೆ ಕಪ್ ಗೆದ್ದಿಲ್ಲ
ಆರ್ಸಿಬಿ ಪುರುಷರ ತಂಡವು ಐಪಿಎಲ್ನಲ್ಲಿ 16 ವರ್ಷಗಳಿಂದ ಕಪ್ ಗೆದ್ದಿಲ್ಲ. 16 ಆವೃತ್ತಿಗಳಲ್ಲಿ 3 ಬಾರಿ ಫೈನಲ್ಗೇರಿದರೂ ಕೋಟ್ಯಂತರ ಅಭಿಮಾನಿಗಳ ಕನಸು ಈಡೇರಿಸಲು ಸಾಧ್ಯವಾಗಿರಲಿಲ್ಲ. 2009, 2011 ಮತ್ತು 2016ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ಗೇರಿತ್ತು. ಆದರೆ ರನ್ನರ್ಅಪ್ಗೆ ತೃಪ್ತಿಯಾಗಿತ್ತು. ಆದರೆ ಆರ್ಸಿಬಿ ಮಹಿಳೆಯರ ತಂಡ 2ನೇ ಆವೃತ್ತಿಯಲ್ಲೇ ಕಿರೀಟಕ್ಕೆ ಮುತ್ತಿಕ್ಕಿದೆ.
ಮಾರ್ಚ್ 22ರಿಂದ ಐಪಿಎಲ್ ಆರಂಭ
ಡಬ್ಲ್ಯುಪಿಎಲ್ ಮುಕ್ತಾಯಗೊಂಡಿದೆ. ಈಗ ಐಪಿಎಲ್ ಆರಂಭಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮಾರ್ಚ್ 22ರಿಂದ ಐಪಿಎಲ್ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಚೆನ್ನೈ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆರಂಭಿಕ ಪಂದ್ಯ ನಡೆಯಲಿದೆ.
