ಬಂದೇ ಬಿಡ್ತು ಐತಿಹಾಸಿಕ ದಿನ; ವಿಶ್ವದಾಖಲೆಯ 50ನೇ ಶತಕದೊಂದಿಗೆ ಸಚಿನ್ ಹಿಂದಿಕ್ಕಿದ ವಿರಾಟ್
Virat Kohli Century: ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಲವು ವಿಶ್ವದಾಖಲೆ ನಿರ್ಮಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕ ಸಿಡಿಸಿ ಅವರು, ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ದಾಖಲೆ ಬ್ರೇಕ್ ಮಾಡಿದ್ದಾರೆ.
ಕೊನೆಗೂ ಕೋಟಿ ಕೋಟಿ ಅಭಿಮಾನಿಗಳು ಕಾಯುತ್ತಿದ್ದ ಆ ದಿನ ಬಂದೇ ಬಿಟ್ಟಿದೆ. ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ವಿಶ್ವದಾಖಲೆಯ 50ನೇ ಶತಕ ಸಿಡಿದಿದೆ. ಅದರೊಂದಿಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಶತಕಗಳ ದಾಖಲೆಯನ್ನು ಕಿಂಗ್ ಕೊಹ್ಲಿ ಮುರಿದಿದ್ದಾರೆ. ಇದೀಗ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ವರ್ಲ್ಡ್ ರೆಕಾರ್ಡ್ ಕೊಹ್ಲಿ ಹೆಸರಿಗೆ ವರ್ಗಾವಣೆಯಾಗಿದೆ.
ವಿಶೇಷವೆಂದರೆ, ಸಚಿನ್ ತೆಂಡೂಲ್ಕರ್ ಅವರ ತವರು ಮುಂಬೈನ ವಾಂಖೆಡೆ ಮೈದಾನದಲ್ಲೇ ವಿರಾಟ್ ವಿಶ್ವದಾಖಲೆ ಮಾಡಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ವಿಶ್ವಕಪ್ 2023ರ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.
ಟೂರ್ನಿಯಲ್ಲಿ ವಿರಾಟ್ ಅಮೋಘ ಫಾರ್ಮ್‌ನಲ್ಲಿದ್ದಾರೆ. ಹತ್ತನೇ ಪಂದ್ಯ ಆಡುತ್ತಿರುವ ಕಿಂಗ್, 8 ಪಂದ್ಯಗಳಲ್ಲಿ 50ಕ್ಕೂ ಅಧಿಕ ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಇಂದಿನ ಶತಕವೂ ಸೇರಿ ಒಟ್ಟು ಮೂರು ಶತಕಗಳಿವೆ. ಆ ಮೂಲಕ ಪ್ರಸಕ್ತ ವಿಶ್ವಕಪ್‌ನಲ್ಲಿ ಹೆಚ್ಚು ರನ್ ಕಲೆಹಾಕಿರುವ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಅತಿ ಹೆಚ್ಚು ಏಕದಿನ ಶತಕ ಸಿಡಿಸಿದ ಆಟಗಾರರು
- ವಿರಾಟ್ ಕೊಹ್ಲಿ -50
- ಸಚಿನ್ ತೆಂಡೂಲ್ಕರ್ -49
- ರೋಹಿತ್ ಶರ್ಮಾ -31
- ರಿಕಿ ಪಾಂಟಿಂಗ್ -30
- ಸನತ್ ಜಯಸೂರ್ಯ -28
ಶತಕದೊಂದಿಗೆ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಜಂಟಿಯಾಗಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಅವರು ಒಟ್ಟು 5 ಶತಕಗಳನ್ನು ಸಿಡಿಸಿದ್ದು, ಇದರಲ್ಲಿ ಮೂರು ಸೆಂಚುರಿ ಪ್ರಸಕ್ತ ಆವೃತ್ತಿಯಲ್ಲೇ ಬಂದಿವೆ.
ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕಗಳು
- ರೋಹಿತ್ ಶರ್ಮಾ -7
- ಸಚಿನ್ ತೆಂಡೂಲ್ಕರ್ -6
- ಡೇವಿಡ್ ವಾರ್ನರ್ -6
- ರಿಕಿ ಪಾಂಟಿಂಗ್ -5
- ಕುಮಾರ್ ಸಂಗಕ್ಕಾರ -5
- ವಿರಾಟ್ ಕೊಹ್ಲಿ -5
ಇದಕ್ಕೂ ಮುನ್ನ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದರು. ಇದೇ ಮೊದಲ ಬಾರಿಗೆ ವಿಶ್ವಕಪ್ ನಾಕೌಟ್ ಹಂತದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಕಿಂಗ್, ಹಲವು ರೆಕಾರ್ಡ್ಸ್ ನಿರ್ಮಿಸಿದರು.
ಅರ್ಧಶತಕಕ್ಕೂ ಮುನ್ನವೇ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ, ಆಸ್ಟ್ರೇಲಿಯಾ ದಿಗ್ಗಜ ಆಟಗಾರ ರಿಕಿ ಪಾಂಟಿಂಗ್ ದಾಖಲೆಯನ್ನು ಕೊಹ್ಲಿ ಬ್ರೇಕ್ ಮಾಡಿದರು. ಇದೀಗ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಸಚಿನ್ ಹಾಗೂ ಸಂಗಕ್ಕಾರ ಮೊದಲೆರಡು ಸ್ಥಾನಗಳಲ್ಲಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್
- ಸಚಿನ್ ತೆಂಡೂಲ್ಕರ್ -18426
- ಕುಮಾರ್ ಸಂಗಕ್ಕಾರ -14234
- ವಿರಾಟ್ ಕೊಹ್ಲಿ -13705*
- ರಿಕಿ ಪಾಂಟಿಂಗ್ -13704
- ಸನತ್ ಜಯಸೂರ್ಯ -13430
ಪ್ರಸಕ್ತ ಆವೃತ್ತಿಯಲ್ಲಿ ಕೊಹ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇಂದು ಕಿವೀಸ್ ವಿರುದ್ಧ ಅರ್ಧಶತಕ ಸಿಡಿಸಿದ ಅವರು, ಟೂರ್ನಿಯಲ್ಲಿ ಈವರೆಗೆ ಆಡಿದ 10 ಪಂದ್ಯಗಳಲ್ಲಿ ಇದು 8ನೇ ಬಾರಿ 50 ರನ್‌ಗಳ ಗಡಿ ದಾಟಿದ್ದಾರೆ. ಇದರಲ್ಲಿ ಮೂರು ಶತಕಗಳು ಸೇರಿವೆ.
ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಹೆಚ್ಚು ಬಾರಿ 50ಕ್ಕೂ ಹೆಚ್ಚು ಸ್ಕೋರ್‌ಗಳು
- ವಿರಾಟ್ ಕೊಹ್ಲಿ (2023) -8
- ಸಚಿನ್ ತೆಂಡೂಲ್ಕರ್ (2003) -7
- ಶಕೀಬ್ ಅಲ್ ಹಸನ್ (2019) -7
- ರೋಹಿತ್ ಶರ್ಮಾ (2019) -6
- ಡೇವಿಡ್ ವಾರ್ನರ್ (2019) -6
ಇದೇ ವೇಳೆ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನೂ ಕೊಹ್ಲಿ ಮಾಡಿದ್ದಾರೆ. ಇಂದು 80 ರನ್ ಗಳಿಸುವುದರೊಂದಿಗೆ ಈ ರೆಕಾರ್ಡ್ ಮಾಡಿದ್ದಾರೆ.
ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್
- ವಿರಾಟ್ ಕೊಹ್ಲಿ (2023) -674*
- ಸಚಿನ್ ತೆಂಡೂಲ್ಕರ್ (2003) -673
- ಮ್ಯಾಥ್ಯೂ ಹೇಡನ್ (2007) -659
- ರೋಹಿತ್ ಶರ್ಮಾ (2019) -648
- ಡೇವಿಡ್ ವಾರ್ನರ್ (2019) -647