ಗೋಲ್ಡನ್ ಡಕ್ನಿಂದ ಪಾರಾದರೂ ಮಿಂಚಲಿಲ್ಲ ವಿರಾಟ್ ಕೊಹ್ಲಿ; ಅಲ್ಪ ಮೊತ್ತಕ್ಕೆ ವಿಕೆಟ್ ಕೈ ಚೆಲ್ಲಿದ ಅನುಭವಿ ಆಟಗಾರ, ಮತ್ತೆ ಟೀಕೆ
Virat Kohli: ಸಿಡ್ನಿ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ನಿಂದ ಪಾರಾದರೂ ಮಿಂಚುವಲ್ಲಿ ವಿಫಲರಾದರು. ಕೇವಲ 17 ರನ್ ಗಳಿಸಿ ಔಟಾದರು. ಇದರೊಂದಿಗೆ ಮತ್ತೆ ಟೀಕೆಗಳನ್ನು ಎದುರಿಸುವಂತಾಗಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ ನಾಟಕೀಯ ರೀತಿಯಲ್ಲಿ ಪ್ರಾರಂಭವಾಯಿತು. ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಆರಂಭಿಸಿದೆ. ಆರಂಭಿಕ ಎರಡು ವಿಕೆಟ್ಗಳ ನಂತರ ಕಣಕ್ಕಿಳಿದ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ನಿಂದ ಪಾರಾದರೂ ಆ ಅವಕಾಶದ ಲಾಭ ಪಡೆದು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ವಿಫಲರಾಗಿದ್ದಾರೆ. ಸತತ ನಾಲ್ಕನೇ ಪಂದ್ಯದಲ್ಲಿ ಕಳಪೆಯಾಟವನ್ನು ಮುಂದುವರೆಸಿದರು. ಕೇವಲ 17 ರನ್ ಗಳಿಸಿ ಔಟಾಗಿದ್ದಾರೆ. ಇದರೊಂದಿಗೆ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.
ರೋಹಿತ್ ಶರ್ಮಾ ಬದಲಿಗೆ ಜಸ್ಪ್ರೀತ್ ಬುಮ್ರಾ ನಾಯಕತ್ವ ವಹಿಸಿಕೊಂಡ ಕ್ಷಣದಿಂದ ಮೊದಲ ದಿನದಾಟ ನಾಟಕೀಯ ಘಟನೆಗಳಿಂದ ಪ್ರಾರಂಭವಾಯಿತು. ನಾಯಕತ್ವ ಬದಲಾವಣೆ ಜೊತೆಗೆ ಬ್ಯಾಟಿಂಗ್ನಲ್ಲಿ ಆರಂಭಿಕ ಆಘಾತಕ್ಕೂ ಒಳಗಾಯಿತು. ಕಳೆದ ಪಂದ್ಯದಲ್ಲಿ ಸತತ ಅರ್ಧಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್, 10 ರನ್ ಗಳಿಸಿ ನಿರಾಸೆ ಮೂಡಿಸಿದರು. ಇವರ ಬೆನ್ನಲ್ಲೇ ಕೆಎಲ್ ರಾಹುಲ್ 4 ರನ್ಗಳಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಶುಭ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಆಸರೆಯಾಗುವ ಭರವಸೆ ನೀಡಿದರು. ಮೂರನೇ ವಿಕೆಟ್ಗೆ 40 ರನ್ಗಳ ಪಾಲುದಾರಿಕೆ ನೀಡಿದರು. ಆದರೆ ಇಬ್ಬರು ತಂಡದ ಕೈಹಿಡಿದಿಲ್ಲ.
ಗೋಲ್ಡನ್ ಡಕ್ನಿಂದ ಪಾರಾದ ವಿರಾಟ್ ಕೊಹ್ಲಿ
ತಂಡದ ಮೊತ್ತ 17 ರನ್ ಆಗಿದ್ದಾಗ ಕ್ರೀಸ್ಗೆ ಬಂದ ವಿರಾಟ್ ಕೊಹ್ಲಿ, ತಾನು ಎದುರಿಸಿದ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ಗೆ ಬಲಿಯಾಗಿದ್ದರು. ಅದೃಷ್ಟವಶಾತ್ ಸ್ಲಿಪ್ನಲ್ಲಿ ಸ್ಟೀವ್ ಸ್ಮಿತ್ ಕ್ಯಾಚ್ ಹಿಡಿದಿದ್ದ ವೇಳೆ ಚೆಂಡು ನೆಲಕ್ಕೆ ತಾಗಿಸಿದ್ದರು. ಹೀಗಾಗಿ, ಗೋಲ್ಡನ್ ಡಕ್ನಿಂದ ವಿರಾಟ್ ಕೊಹ್ಲಿ ಪಾರಾದರು. ಇದರ ಲಾಭ ಪಡೆಯುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ನಿರೀಕ್ಷೆ ಹುಸಿ ಮಾಡಿದರು. ಶುಭ್ಮನ್ ಗಿಲ್ 20 ರನ್ ಸಿಡಿಸಿ ಊಟದ ವಿರಾಮಕ್ಕೂ ಮುನ್ನವೇ ಔಟಾದರೆ, ವಿರಾಮದ ಬಳಿಕ ವಿರಾಟ್ ಕೊಹ್ಲಿ 69 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದರು. ಅವರಿಂದ ಯಾವುದೇ ಬೌಂಡರಿ ಬಂದಿಲ್ಲ. ಕೊಹ್ಲಿ ಔಟಾದ ವೇಳೆ ಭಾರತ 72ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
8ನೇ ಓವರ್‌ನ 5ನೇ ಎಸೆತದಲ್ಲಿ ಗೋಲ್ಡನ್ ಅವಕಾಶ ಪಡೆದಿದ್ದರು. 4ನೇ ಕ್ರಮಾಂಕದಲ್ಲಿ ಸ್ಕಾಟ್ ಬೋಲ್ಯಾಂಡ್ರ ಓವರ್‌ನ ಐದನೇ ಎಸೆತವನ್ನು ವಿರಾಟ್ ಎದುರಿಸಿದರು. ಕೊಹ್ಲಿ ಮೊದಲ ಎಸೆತದಲ್ಲಿಯೇ ಬ್ಯಾಟ್ ಮಾಡಿದರು. ಆ ಚೆಂಡು ಎಡ್ಜ್ ಪಡೆದು 2ನೇ ಸ್ಲಿಪ್ ಕಡೆಗೆ ಹೋಯಿತು. ಚೆಂಡು ತುಂಬಾ ಕೆಳಗೆ ಹೋದ ಕಾರಣ ಸ್ಮಿತ್ ಅದನ್ನು ಹಿಡಿಯಲು ಕಷ್ಟಪಟ್ಟರು. ಅವರು ಬಹುತೇಕ ನೆಲವನ್ನು ಮುಟ್ಟಿ ಚೆಂಡನ್ನು ಗಾಳಿಯಲ್ಲಿ ಎಸೆದರು. ಆಗ ಪಕ್ಕದಲ್ಲಿದ್ದ ಫೀಲ್ಡರ್ ಕ್ಯಾಚ್ ತೆಗೆದುಕೊಂಡರು. ಆದರೆ, ಥರ್ಡ್ ಅಂಪೈರ್ ನಿರ್ಧಾರ ನಾಟೌಟ್ ಆಯಿತು. 17 ರನ್ ಗಳಿಸಿದ್ದಾಗ ಕೊಹ್ಲಿ ಅವರು ಬೋಲ್ಯಾಂಡ್ ಬೌಲಿಂಗ್ನಲ್ಲೇ ವೆಬ್ಸ್ಟರ್ಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು.
ಕ್ಯಾಚ್ ಬಗ್ಗೆ ಚರ್ಚೆ
ವಿರಾಟ್ ಕೊಹ್ಲಿ ಮೈದಾನಕ್ಕೆ ಬಂದ ತಕ್ಷಣ, ಭಾರತೀಯ ಬೆಂಬಲಿಗರು ಅವರಿಗೆ ಜೈಕಾರ ಹಾಕುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ಆದರೆ, ಆಸ್ಟ್ರೇಲಿಯಾದ ಅಭಿಮಾನಿಗಳು ವಿರಾಟ್ ಕೊಹ್ಲಿ ವಿರುದ್ಧ ತೀವ್ರವಾಗಿ ಕೂಗಿದರು. ನಾಟೌಟ್ ನೀಡಿದ್ದನ್ನು ಭಾರತೀಯ ಅಭಿಮಾನಿಗಳು ಸಂಭ್ರಮಿಸಿದರೆ, ಆಸೀಸ್ ಅಭಿಮಾನಿಗಳು ಅಸಮಾಧಾನ ಹೊರ ಹಾಕಿ, ಅದು ಔಟ್ ಎಂದು ಕೂಗಿದ್ದಾರೆ. ಮತ್ತೊಂದೆಡೆ ಈ ಔಟ್ ಬಗ್ಗೆ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆ ಆರಂಭಗೊಂಡಿದೆ.
ಬಿಜಿಟಿ ಸರಣಿಯಲ್ಲಿ ಕೊಹ್ಲಿ ಪ್ರದರ್ಶನ
ಪ್ರಸ್ತುತ ಸರಣಿಯಲ್ಲಿ ವಿರಾಟ್ ಕೊಹ್ಲಿ ಆರಂಭಿಕ ಪಂದ್ಯದಲ್ಲಿ ಶತಕ ಸಿಡಿಸಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಸದ್ದು ಮಾಡಲಿಲ್ಲ. 11, 7, 3, 36, 5, 17 ಈ ಸ್ಕೋರ್ ಶತಕದ ನಂತರ ಬಂದಿರುವುದು. ಒಂದು ಪಂದ್ಯದಲ್ಲೂ ಮಿಂಚದ ಅವರು ಇದೀಗ ಮತ್ತೆ ಔಟ್ ಆಗುವ ಮೂಲಕ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಇದೀಗ ಕೊಹ್ಲಿಯನ್ನು ಟೆಸ್ಟ್ ತಂಡದಿಂದ ಕೈಬಿಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.