ರಣಜಿ ಟ್ರೋಫಿಯಲ್ಲೂ ವಿರಾಟ್ ಕೊಹ್ಲಿ ಫೇಲ್, ಒಂದಂಕಿಗೆ ಔಟಾದ ಬೆನ್ನಲ್ಲೇ ತುಂಬಿ ತುಳುಕಿದ್ದ ಮೈದಾನ ಈಗ ಖಾಲಿ ಖಾಲಿ
ದೇಶೀಯ ಕ್ರಿಕೆಟ್ ರಣಜಿ ಟ್ರೋಫಿಯಲ್ಲೂ ವಿರಾಟ್ ಕೊಹ್ಲಿ ವೈಫಲ್ಯ ಅನುಭವಿಸಿದ್ದಾರೆ. 13 ವರ್ಷಗಳ ರಣಜಿಗೆ ಮರಳಿದ ಕೊಹ್ಲಿ ಮರಳಿದ ಕೊಹ್ಲಿ ಔಟಾಗಿದ್ದಾರೆ. ವಿರಾಟ್ ವಿಕೆಟ್ ಒಪ್ಪಿಸಿದ ಬೆನ್ನಲ್ಲೇ ಅಭಿಮಾನಿಗಳು ಮೈದಾನ ತೊರೆದಿದ್ದಾರೆ.

2012ರ ನಂತರ ಇದೇ ಮೊದಲ ಬಾರಿಗೆ ದೇಶೀಯ ಕ್ರಿಕೆಟ್ನ ರಾಜ ರಣಜಿ ಟ್ರೋಫಿಗೆ ಮರಳಿದ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಮೇಲಿದ್ದ ನಿರೀಕ್ಷೆ ಅಷ್ಟಿಷ್ಟಲ್ಲ. ಕೊಹ್ಲಿ ಆಡುತ್ತಿದ್ದಾರೆ ಎಂಬ ಕಾರಣಕ್ಕೆ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನವು ತುಂಬಿ ತುಳುಕಿತ್ತು. ಕ್ರೀಡಾಂಗಣದ ಹೊರಗೆ ಕಾಲ್ತುಳಿತವೂ ಸಂಭವಿಸಿತ್ತು. ನೆಚ್ಚಿನ ಆಟಗಾರನ ಆಟವನ್ನು ಕಣ್ತುಂಬಿಕೊಳ್ಳಲು ಉತ್ಸಾಹದಿಂದ ಹಾಜರಿ ಹಾಕಿದ್ದರು. ಆದರೆ ಆಗಿದ್ದೇ ಬೇರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವೈಫಲ್ಯ ಅನುಭವಿಸಿದರೂ ದೇಶೀಯ ಕ್ರಿಕೆಟ್ನಲ್ಲಿ ಲಯಕ್ಕೆ ಮರಳುತ್ತಾರೆ ಎಂಬ ನಿರೀಕ್ಷೆ ಹುಸಿಯಾಯಿತು. ರಣಜಿಯಲ್ಲೂ ನಿರಾಸೆ ಮೂಡಿಸಿರುವ ವಿರಾಟ್ ಕೊಹ್ಲಿ, ಒಂದಂಕಿಗೆ ಔಟಾದರು. 13 ವರ್ಷಗಳ ನಂತರ ರಣಜಿ ಕಂಬ್ಯಾಕ್ ಪಂದ್ಯ ಅದ್ಭುತವಾಗಿರಲಿಲ್ಲ ಎಂಬುದು ವಿಪರ್ಯಾಸ.
15 ಎಸೆತ, 6 ರನ್, 1 ಬೌಂಡರಿ: ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ತವರು ತಂಡ ಡೆಲ್ಲಿ ಪರ ಕಣಕ್ಕಿಳಿದ ವಿರಾಟ್ ಕೊಹ್ಲಿ ಗಳಿಸಿದ್ದು 6 ರನ್ ಮಾತ್ರ. 15 ಎಸೆತ ಎದುರಿಸಿದ ಕೊಹ್ಲಿ ಭರ್ಜರಿ 1 ಬೌಂಡರಿ ಸಿಡಿಸಿ ಹೊರ ನಡೆದರು. ಹಿಮಾಂಶು ಸಾಂಗ್ವಾನ್ ಬೌಲಿಂಗ್ನಲ್ಲಿ 27 ಓವರ್ನ ನಾಲ್ಕನೇ ಎಸೆತವನ್ನು ಬೌಂಡರಿಗಟ್ಟಿದ ವಿರಾಟ್ ಮರು ಎಸೆತದಲ್ಲೇ ಕ್ಲೀನ್ ಬೋಲ್ಡ್ ಆದರು. ಚೆಂಡನ್ನು ಅಂದಾಜಿಸಲು ವಿಫಲರಾದರು. ವಿಶ್ವದ ಸೂಪರ್ಸ್ಟಾರ್ ಕ್ರಿಕೆಟಿಗನ ವಿಕೆಟ್ ಪಡೆದ ಸಾಂಗ್ವಾನ್ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಇದು ತನ್ನ ಜೀವನದ ಪಾಲಿಗೆ ಅತ್ಯುತ್ತಮ ಕ್ಷಣವೂ ಆಗಿತ್ತು. ಡೆಲ್ಲಿ 78 ರನ್ ಗಳಿಸಿದ್ದ ವೇಳೆ ಯಶ್ ಧುಲ್ ಔಟಾದಾಗ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅನುಭವಿ ಆಟಗಾರ, ತಂಡದ ಮೊತ್ತ 86 ಆಗಿದ್ದಾಗ ಹೊರ ನಡೆದು ನಿರಾಸೆ ಮೂಡಿಸಿದರು.
ಹೀಗಾದರೆ ಕೊಹ್ಲಿ ಟೆಸ್ಟ್ನಿಂದ ಹೊರಕ್ಕೆ ಖಚಿತ?
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ವಿರಾಟ್ ಕೊಹ್ಲಿ ಖದರ್ ತೋರುತ್ತಿಲ್ಲ. ದಿನದಿಂದ ದಿನಕ್ಕೆ ಅವರ ಬ್ಯಾಟಿಂಗ್ ಸರಾಸರಿಯಲ್ಲಿ ಇಳಿಮುಖವಾಗಿ ಹೋಗುತ್ತಿದೆ. ಕಳೆದ ಆಸೀಸ್ ಸರಣಿಯಲ್ಲಿ ಆಡಿದ 5 ಪಂದ್ಯಗಳಲ್ಲಿ ಒಂದು ಶತಕ ಸಹಿತ ಗಳಿಸಿದ್ದು ಕೇವಲ 190 ರನ್. ಇದರಿಂದ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಅಲ್ಲದೆ, ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಸೋಲಿಗೂ ಕಾರಣವಾಗಿತ್ತು. ಹೀಗಾಗಿ ಕೆರಳಿ ಕೆಂಡವಾಗಿದ್ದ ಬಿಸಿಸಿಐ, ಕಳಪೆ ಪ್ರದರ್ಶನ ನೀಡಿದ್ದ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿತ್ತು. ಇದೇ ವೇಳೆ ಎಲ್ಲಾ ಆಟಗಾರರು ಕಡ್ಡಾಯವಾಗಿ ರಣಜಿ ಆಡಬೇಕು ಎಂದು ಷರತ್ತು ಹಾಕಿತ್ತು. ಆದ್ದರಿಂದ ರಾಷ್ಟ್ರೀಯ ತಂಡದಲ್ಲಿ ಆಡುತ್ತಿರುವ ಎಲ್ಲರೂ ರಣಜಿಯಲ್ಲಿ ಕಣಕ್ಕಿಳಿದಿದ್ದಾರೆ. ಆದರೆ ಕೊಹ್ಲಿ ಸೇರಿ ಶೇ 90ರಷ್ಟು ಮಂದಿ ಇಲ್ಲೂ ವೈಫಲ್ಯ ಅನುಭವಿಸಿದ್ದಾರೆ. ಕೊಹ್ಲಿ ಕಳಪೆ ಪ್ರದರ್ಶನ ಮುಂದುವರೆದರೆ, ಟೆಸ್ಟ್ನಿಂದ ಹೊರಬೀಳುವುದು ಖಚಿತ.
ಸಂಕಷ್ಟದಲ್ಲಿದ್ದ ತಂಡಕ್ಕೆ ಆಯುಷ್ ಬದೋನಿ ಆಸರೆ
ಮೊದಲು ಬ್ಯಾಟಿಂಗ್ ಮಾಡಿದ ರೈಲ್ವೇಸ್ 241 ರನ್ ಗಳಿಗೆ ಕುಸಿಯಿತು. ಉಪೇಂದ್ರ ಯಾದವ್ 95 ರನ್ ಗಳಿಸಿ ತಂಡಕ್ಕೆ ನೆರವಾದರು. ಡೆಲ್ಲಿ ಪರ ನವದೀಪ್ ಸೈನಿ ಮತ್ತು ಸುಮಿತ್ ಮತೂರ್ ತಲಾ 3 ವಿಕೆಟ್ ಕಬಳಿಸಿ ತಮನ ಸೆಳೆದರು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಡೆಲ್ಲಿ 97 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಈ ಹಂತದಲ್ಲಿ ಜೊತೆಯಾದ ನಾಯಕ ಆಯುಷ್ ಬದೋನಿ ಮತ್ತು ಸುಮಿತ್ ಮತೂರ್ ಶತಕದ ಜೊತೆಯಾಟವಾಡಿದರು. ಪ್ರಸ್ತುತ ಬದೋನಿ ಅರ್ಧಶತಕ (80) ಸಿಡಿಸಿದ್ದರೆ, ಸುಮಿತ್ ಅರ್ಧಶತಕದ (40) ಗಡಿಯಲ್ಲಿದ್ದಾರೆ. (ಸುದ್ದಿ ಪಬ್ಲಿಷ್ ಆಗುವ ಅಪ್ಡೇಟ್ ಸ್ಕೋರ್ ಇದು- 208/4 (51). 6 ರನ್ ಗಳಿಸಿ ವಿರಾಟ್ ಕೊಹ್ಲಿ ಔಟಾದ ಬೆನ್ನಲ್ಲೇ ಅಭಿಮಾನಿಗಳು ಮೈದಾನ ತೊರೆದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
