16 ಗಂಟೆ ಜರ್ನಿ, ಪ್ರಧಾನಿ ಭೇಟಿ, ವಿಜಯೋತ್ಸವ, ವಾಂಖೆಡೆಯಲ್ಲಿ ಕಾರ್ಯಕ್ರಮ, ಲಂಡನ್ಗೆ ಪ್ರಯಾಣ; ಒಂದು ದಿನದ ಕೊಹ್ಲಿ ವೇಳಾಪಟ್ಟಿ
Virat Kohli departed for London: ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಿಂದ ದೆಹಲಿಗೆ ಬಂದಿಳಿದ ವಿರಾಟ್ ಕೊಹ್ಲಿ ನಂತರ ಮುಂಬೈನಲ್ಲಿ ವಿಜಯೋತ್ಸವದ ಮೆರವಣಿಗೆ, ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಲಂಡನ್ಗೆ ಪ್ರಯಾಣಿಸಿದ್ದಾರೆ. ಎಲ್ಲವೂ ಒಂದೇ ದಿನದಲ್ಲಿ!
ಮುಂಬೈನ ಐಕಾನಿಕ್ ಕ್ರಿಕೆಟ್ ಮೈದಾನ ವಾಂಖೆಡೆಯಲ್ಲಿ ನಡೆದ ಟಿ20 ವಿಶ್ವಕಪ್ (T20 World Cup 2024) ವಿಜೇತರಿಗೆ ಅಭಿನಂದನಾ ಸಮಾರಂಭದ ಬೆನ್ನಲ್ಲೇ ವಿರಾಟ್ ಕೊಹ್ಲಿ ಲಂಡನ್ಗೆ ಪ್ರಯಾಣಿಸಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಅವರ ಒಂದು ದಿನದ ವೇಳಾಪಟ್ಟಿ ಗಮನಿಸಿದರೆ, ಎಲ್ಲರಗೂ ಅಚ್ಚರಿ ಮೂಡಿಸುತ್ತದೆ. ವೆಸ್ಟ್ ಇಂಡೀಸ್ನಿಂದ ಲಂಡನ್ಗೆ ಪ್ರಯಾಣಿಸುವ ತನಕ ಕಿಂಗ್ ಕೊಹ್ಲಿ ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದ್ದಾರೆ. ಒಂದೇ ದಿನದಲ್ಲಿ ಮೂರು ದೇಶಗಳನ್ನು ಸುತ್ತಿದ್ದಾರೆ. ಹೇಗಿತ್ತು ಜುಲೈ 4ರ ಕೊಹ್ಲಿ ದಿನಚರಿ.
ಎಲ್ಲವೂ ಒಂದೇ ದಿನದೊಳಗೆ!
ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಿಂದ 16 ಗಂಟೆಗಳ ವಿಮಾನ ಪ್ರಯಾಣದ ನಂತರ ಜುಲೈ 4ರಂದು ಮುಂಜಾನೆ ಬೆಳಿಗ್ಗೆ 6 ಗಂಟೆ ಸುಮಾರಿಗೆ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ಕ್ರಿಕೆಟಿಗರು ಬಂದಿಳಿದರು. ಅಭಿಮಾನಿಗಳಿಂದ ಅದ್ಧೂರಿ ವೆಲ್ಕಮ್ ಪಡೆದ ಕ್ರಿಕೆಟಿಗರು ತಕ್ಷಣವೇ ಐಟಿಸಿ ಮೌರ್ಯ ಹೋಟೆಲ್ನತ್ತ ಧಾವಿಸಿದರು. ಕೆಲಹೊತ್ತು ವಿಶ್ರಾಂತಿ ಪಡೆದ ರೋಹಿತ್ ಪಡೆ ಪ್ರಧಾನಿ ಮೋದಿ ಅವರನ್ನು ಭೇಟಿಯಾದರು.
ಬಿಡುವಿಲ್ಲದ ವೇಳಾಪಟ್ಟಿಯಂತೆಯೇ ಮೋದಿ ಅವರೊಂದಿಗೆ ಕೆಲ ಸಮಯ ಕಳೆದ ಟೀಮ್ ಇಂಡಿಯಾ ಆಟಗಾರರು ಬಳಿಕ ಮುಂಬೈಗೆ ಪ್ರಯಾಣಿಸಿದರು. ಅಲ್ಲಿಂದ ಟೀಮ್ ಬಸ್ ಪರೇಡ್‌ನಲ್ಲಿ ಸೇರಿಕೊಂಡರು. ಸುಮಾರು 9 ಕಿಲೋಮೀಟರ್ ರೋಡ್ಶೋ ನಡೆಯಿತು. ವಿಶ್ವಕಪ್ ವಿಜೇತ ಭಾರತ ತಂಡ ಮುಂಬೈನ ಮರೀನ್ ಡ್ರೈವ್ನಿಂದ ವಾಂಖೆಡೆ ಸ್ಟೇಡಿಯಂವರೆಗೂ ತೆರೆದ ಬಸ್ನಲ್ಲಿ ಮೆರವಣಿಗೆ ನಡೆಯಿತು. ಲಕ್ಷಾಂತರ ಅಭಿಮಾನಿಗಳು ಈ ವಿಜಯೋತ್ಸವಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆಯಲ್ಲಿ ಅಭಿಮಾನಿಗಳಿಗೆ ಟ್ರೋಫಿಯನ್ನು ಪ್ರದರ್ಶಿಸಿದ ಕ್ರಿಕೆಟಿಗರು ಸಂಜೆ ವಾಂಖೆಡೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇಲ್ಲಿ ಆಟಗಾರರಿಗೆ 125 ಕೋಟಿಯ ಚೆಕ್ ವಿತರಣೆ, ಟ್ರೋಫಿಯೊಂದಿಗೆ ಸಂಭ್ರಮ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಸೇರಿ ಹಲವರು ಭಾವುಕ ಮಾತುಗಳನ್ನಾಡಿದರು. ಅಲ್ಲದೆ, ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ವಿಶೇಷ ಧನ್ಯವಾದ ಸಲ್ಲಿಸಿದರು. ಈ ವೇಳೆ ಡ್ಯಾನ್ಸ್ ಮಾಡಿ ಅಭಿಮಾನಿಗಳನ್ನು ರಂಜಿಸಿದರು.
ಬಾರ್ಬಡೋಸ್ನಿಂದ ಮುಂಬೈನಲ್ಲಿ ನಡೆದ ಸಮಾರಂಭದವರೆಗೂ ಭಾರತೀಯ ತಂಡದ ಭಾಗವಾಗಿದ್ದ ವಿರಾಟ್ ಕೊಹ್ಲಿ, ತಕ್ಷಣವೇ ಲಂಡನ್ಗೆ ಪ್ರಯಾಣ ಬೆಳೆಸಿದರು. ಪ್ರಸ್ತುತು ಪತ್ನಿ ಅನುಷ್ಕಾ ಶರ್ಮಾ, ಮಕ್ಕಳಾದ ವಮಿಕಾ ಮತ್ತು ಅಕಾಯ್ ಲಂಡನ್ನಲ್ಲೇ ಇದ್ದಾರೆ. ಅನುಷ್ಕಾ ಶರ್ಮಾ ಯುಎಸ್ಎನಲ್ಲಿ ಭಾರತದ ಪಂದ್ಯಗಳಿಗೆ ಹಾಜರಿ ಹಾಕಿದ್ದರು. ಆದರೆ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಭಾರತದ ಪಂದ್ಯಗಳಿಗೆ ಅವರು ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಇದೀಗ ಕಳೆದೊಂದು ತಿಂಗಳಿಂದ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದ ಕೊಹ್ಲಿ, ಯುಕೆಗೆ ಪ್ರಯಾಣ ಬೆಳೆಸಿದ್ದಾರೆ.
ಟಿ20 ವಿಶ್ವಕಪ್ನ ಆರಂಭಿಕ ಏಳು ಪಂದ್ಯಗಳಲ್ಲಿ 75 ರನ್ ಗಳಿಸಿದ್ದ ಕೊಹ್ಲಿ, ಫೈನಲ್‌ನಲ್ಲಿ 59 ಎಸೆತಗಳಲ್ಲಿ 76 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಗೆಲುವಿನ ನಂತರ ಕೊಹ್ಲಿ, ಅನುಷ್ಕಾ ಶರ್ಮಾಗೆ ವಿಡಿಯೋ ಕರೆ ಮಾಡಿದ್ದರು. ಅನುಷ್ಕಾ ಶರ್ಮಾ ಭೇಟಿಯಾದ ನಂತರ ನಾನು ತಾಳ್ಮೆಯನ್ನು ಹೆಚ್ಚು ಕಲಿತೆ. ಆಕೆ ಕಲಿಸಿದ ಶಾಂತತೆಯು ಹೋರಾಡಲು ನನಗೆ ಸ್ಫೂರ್ತಿ ನೀಡಿದೆ ಎಂದು ಕೊಹ್ಲಿ ಈ ಹಿಂದೆ ಸಂದರ್ಶನವೊಂದರಲ್ಲಿ ಅನುಷ್ಕಾ ಕುರಿತು ಹೇಳಿದ್ದರು.