Virat Kohli: ಅದ್ಭುತ ಸರಣಿ ಗೆಲುವು; ಸಿರೀಸ್ ಜಯಿಸಿದ ನಂತರ ಯುವಕರ ಸಾಧನೆ ಕೊಂಡಾಡಿದ ವಿರಾಟ್ ಕೊಹ್ಲಿ
Virat Kohli : ಇಂಗ್ಲೆಂಡ್ ವಿರುದ್ಧ ಸರಣಿ ಜಯಿಸಿದ್ದಕ್ಕೆ ಸಂತಸ ವಿರಾಟ್ ಕೊಹ್ಲಿ ವ್ಯಕ್ತಪಡಿಸಿದ್ದಾರೆ. ತಂಡದ ಯಶಸ್ಸು ಮತ್ತು ಯುವ ಆಟಗಾರರ ಸಾಧನೆಯನ್ನು ಕೊಂಡಾಡಿದ್ದಾರೆ.
ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ (India vs England 4th Test) ಭರ್ಜರಿ ಗೆಲುವು ದಾಖಲಿಸಿತು. ಎರಡೂ ಇನ್ನಿಂಗ್ಸ್ಗಳಲ್ಲಿ ಅದ್ಭುತ ಪ್ರದರ್ಶನ ತೋರಿದ ಧ್ರುವ್ ಜುರೆಲ್, ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡರು. ಪ್ರವಾಸಿಗರನ್ನು ಮಣಿಸುವುದರ ಜೊತೆಗೆ 3-1ರಲ್ಲಿ ಸರಣಿಯನ್ನೂ ಆತಿಥೇಯರು ವಶಪಡಿಸಿಕೊಂಡಿದ್ದಾರೆ. ತವರು ನೆಲದಲ್ಲಿ ಸತತ 17ನೇ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ.
ನಾಲ್ಕನೇ ಪಂದ್ಯವನ್ನು ಐದು ವಿಕೆಟ್‌ಗಳಿಂದ ಗೆದ್ದ ಭಾರತ ತಂಡದ ಸಾಧನೆಗೆ ಯುವ ಆಟಗಾರರ ಕೊಡುಗೆ ದೊಡ್ಡದು. ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್, ರಜತ್ ಪಾಟೀದಾರ್, ಆಕಾಶ್ ದೀಪ್ ಸೇರಿದಂತೆ ಪ್ರಮುಖ ಯುವ ಆಟಗಾರರು ತಂಡದಲ್ಲಿದ್ದಾರೆ. ಕೆಲವರು ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು ಇದೇ ಸರಣಿಯಲ್ಲಿ. ಭಾರತ ಸರಣಿ ಗೆದ್ದ ಬೆನ್ನಲ್ಲೇ ಹಾಲಿ ಮತ್ತು ಮಾಜಿ ಕ್ರಿಕೆಟರ್ಗಳಿಂದ ಪ್ರಶಂಸೆಯ ಸುರಿಮಳೆ ಹರಿದುಬರುತ್ತಿದೆ.
ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ, ವೇಗದ ಬೌಲರ್ ಮೊಹಮ್ಮದ್ ಶಮಿ ಈ ಸರಣಿಯಿಂದ ಹೊರಗುಳಿದಿದ್ದರು. ಕೆಎಲ್ ರಾಹುಲ್ ಮೊದಲ ಪಂದ್ಯದ ಬಳಿಕ ಗಾಯಗೊಂಡು ಉಳಿದ ಪಂದ್ಯಗಳಿಗೆ ಅಲಭ್ಯರಾದರು. ಜಡೇಜಾ ಸಹ ಒಂದು ಪಂದ್ಯಕ್ಕಿರಲಿಲ್ಲ. ಜಸ್ಪ್ರೀತ್ ಬುಮ್ರಾ-ಸಿರಾಜ್ಗೆ ತಲಾ ಒಂದು ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದರು. ಆದರೆ ರೋಹಿತ್ ನಾಯಕನಾಗಿ, ಹಿರಿಯ ಆಟಗಾರನಾಗಿ ತಂಡವನ್ನು ಅಚ್ಚಕಟ್ಟಾಗಿ ನಿಭಾಯಿಸಿ ತಂಡಕ್ಕೆ ಸರಣಿ ಗೆಲುವು ತಂದುಕೊಟ್ಟರು.
ಸಂತಸ ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ
ಬ್ರಿಟಿಷರನ್ನು ಸೆದೆಬಡಿದ ಯಂಗ್ ಇಂಡಿಯಾ, ಕೊನೆ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇದೀಗ ಸರಣಿ ಜಯಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ವಿರಾಟ್ ಕೊಹ್ಲಿ ವ್ಯಕ್ತಪಡಿಸಿದ್ದಾರೆ. ತಂಡದ ಯಶಸ್ಸು ಮತ್ತು ಯುವ ಆಟಗಾರರ ಸಾಧನೆಯನ್ನು ಕೊಂಡಾಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ಇಡೀ ಸರಣಿಯಿಂದ ಹಿಂದೆ ಸರಿದಿದ್ದ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಉತ್ಸಾಹಭರಿತ ಪ್ರದರ್ಶನಕ್ಕೆ ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿ ಗೆಲುವಿನ ನಂತರ ಸಂಭ್ರಮಿಸಿದ್ದಾರೆ.
ಭಾರತದ ಗೆಲುವಿನ ನಂತರ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಕಿಂಗ್ ಕೊಹ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಹೌದು, ನಮ್ಮ ಯುವ ತಂಡದಿಂದ ಅದ್ಭುತ ಸರಣಿ ಗೆಲುವು. ದೃಢತೆ, ಸ್ಥಿತಿಸ್ಥಾಪಕತ್ವ ತೋರಿಸಿದ್ದಾರೆ ಎಂದು ಕೊಹ್ಲಿ ಟ್ವಿಟರ್ನಲ್ಲಿ (ಎಕ್ಸ್) ಪೋಸ್ಟ್ ಮಾಡಿದ್ದಾರೆ. ಕೊಹ್ಲಿಯಷ್ಟೇ ಅಲ್ಲ, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಸೇರಿ ಹಾಲಿ ಮತ್ತು ಮಾಜಿಗಳು ಯುವ ಭಾರತ ತಂಡವನ್ನು ಗುಣಗಾನ ಮಾಡಿದ್ದಾರೆ.
ಇತ್ತೀಚೆಗೆ ತಂದೆಯಾದ ವಿರಾಟ್ ಕೊಹ್ಲಿ
ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಕಾರಣ ವಿರಾಟ್ ಕೊಹ್ಲಿ ಸರಣಿಯಿಂದ ಹಿಂದೆ ಸರಿದರು. ಫೆಬ್ರವರಿ 15ರಂದು ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದರು. ಈ ಖುಷಿ ವಿಚಾರವನ್ನು ಫೆಬ್ರವರಿ 20ರಂದು ಮಗು ಹುಟ್ಟಿರುವ ಬಗ್ಗೆ ಕೊಹ್ಲಿ, ಅನುಷ್ಕಾ ಮಗನಿಗೆ ಜನ್ಮನೀಡಿದ ಮಾಹಿತಿ ಹಂಚಿಕೊಂಡಿದ್ದರು. ಅಲ್ಲದೆ, ಅಕಾಯ್ ಎಂದು ಹೆಸರಿಟ್ಟಿರುವ ಕುರಿತು ಕುರಿತು ಸಹ ಬಹಿರಂಗಪಡಿಸಿದ್ದರು.
ಮೊದಲ ನಾಲ್ಕು ಪಂದ್ಯಗಳ ಫಲಿತಾಂಶ
ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 28 ರನ್ಗಳ ಅಂತರದಿಂದ ಜಯಿಸಿದ ಇಂಗ್ಲೆಂಡ್ ಉಳಿದ ಮೂರು ಪಂದ್ಯಗಳಲ್ಲಿ ಮಕಾಡೆ ಮಲಗಿದೆ. ವಿಶಾಖಪಟ್ಟಣದ ಟೆಸ್ಟ್‌ನಲ್ಲಿ 106 ರನ್ಗಳ ಅಂತರ ಮತ್ತು ರಾಜ್ಕೋಟ್ ಪಂದ್ಯದಲ್ಲಿ ಭಾರತ 434 ರನ್ಗಳ ಅಂತರದಿಂದ ಗೆಲುವು ಸಾಧಿಸಿತ್ತು. ಈಗ ನಾಲ್ಕನೇ ಟೆಸ್ಟ್‌ನಲ್ಲಿ ಐದು ವಿಕೆಟ್ಗಳ ಜಯ ಸಾಧಿಸಿತು. ಇನ್ನು ಕೊನೆಯ ಟೆಸ್ಟ್ ಪಂದ್ಯ ಮಾರ್ಚ್ 7ರಂದು ಧರ್ಮಶಾಲಾದಲ್ಲಿ ನಡೆಯಲಿದೆ.